ಮಂಗಳೂರು(ಡಿ.೧೫, ಕುಲಾಲ್ ವರ್ಲ್ಡ್ ಡಾಟ್ ಕಾಮ್ ವಿಶೇಷ): ಕಲೆಗಳು ಹಲವಾರು, ಕಲಿಯುವವರು ಹಲವರು. ಕಲೆಗಾರಿಕೆ ದೇವರು ಕೊಟ್ಟ ವರ. ಅದು ಎಲ್ಲರಿಗೂ ಒಲಿದು ಬರುವುದಿಲ್ಲ. ಅಂತಹ ಕಲೆಯನ್ನು ಯಾವುದೇ ವಿಶೇಷ ತರಬೇತಿ ಪಡೆಯದೇ ಮೈಗೂಡಿಸಿಕೊಂಡಿರುವ ಉದಯೋನ್ಮುಖ ಕಲೆಗಾರರಲ್ಲಿ ಕಲ್ಲಮುಂಡ್ಕೂರಿನ ಸ್ವಾತಿ ಕುಲಾಲ್ ಒಬ್ಬರು.
ಒಮ್ಮೆ ಕಲೆಯ ಮೋಡಿಗೊಳಗಾದರೆ ಅದರಿಂದ ಹೊರಬರುವುದು ಕಷ್ಟ. ಪ್ರತಿ ಕ್ಷಣವೂ ಇನ್ನೊಂದು, ಹೊಸತೊಂದು ಕಲಿಯುವ ಹಂಬಲ ಉಂಟಾಗುತ್ತದೆ. ಹೀಗೆ ವಿಭಿನ್ನ ಕಲಾಕೃತಿಗಳನ್ನು ರಚಿಸಿ ಖುಷಿ ಪಡುವ ಸ್ವಾತಿಗೆ ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಎಲ್ಲಿಲ್ಲದ ಆಸಕ್ತಿ. ಕಲ್ಪನೆಯಲ್ಲಿ ಮೂಡಿದ ಚಿತ್ರಣಕ್ಕೆ ಕುಂಚದಲ್ಲಿ ಚೆಂದದ ರೂಪಕೊಟ್ಟು ಮನಸೂರೆಗೊಳಿಸುವ ಚಿತ್ರಗಳನ್ನು ಬಿಡಿಸುವ ಸ್ವಾತಿ ಅವರು ಮೂಡುಬಿದಿರೆ ಸಮೀಪದ ಕಲ್ಲಮುಂಡ್ಕೂರಿನ ಸೀತಾರಾಮ ಮೂಲ್ಯ ಮತ್ತು ಪದ್ಮಾವತಿ ದಂಪತಿಯ ಪುತ್ರಿ. ಓದಿದ್ದು ಬಿಎಸ್ಸಿ ನರ್ಸಿಂಗ್. ಪ್ರಸ್ತುತ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದರೂ ಛಲ ಬಿಡದ ಪ್ರಯತ್ನದಿಂದ ತಮ್ಮ ಬಿಡುವಿನ ವೇಳೆ ಚಿತ್ತಾಕರ್ಷಕ ಕಲಾಕೃತಿಗಳನ್ನು ರಚಿಸುತ್ತಾ ತನ್ನೊಳಗಿನ ಭವಿಷ್ಯದ ಕಲಾವಿದೆಯನ್ನು ಬಾನಂಚಿನಲ್ಲಿ ನಿರೀಕ್ಷಿಸುತ್ತಿದ್ದಾರೆ.
ಶಾಲಾ ಕಾಲೇಜು ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಸ್ವಾತಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಚಿಕ್ಕಂದಿನಿಂದಲೂ ಇವರದ್ದು ಕ್ರಿಯಾಶೀಲ ಮನಸ್ಸು. ಕಲೆಯ ಬಗೆಗೆ ವಿಶೇಷ ಒಲವು. ಚಿಕ್ಕಪುಟ್ಟ ವಸ್ತು ಕಂಡರೂ ಅದಕ್ಕೆ ಕಲೆಯ ಆಯಾಮ ನೀಡುವುದು ಹೇಗೆ ಎಂದೇ ಅವರ ಮನಸ್ಸು ಯೋಚಿಸುತ್ತಿತ್ತು. ಚಿಕ್ಕದೊಂದು ಚಾಕ್ ಪೀಸ್ ಕಂಡರೂ ನೆಲದ ಮೇಲೆ ಏನಾದರೊಂದು ಗೀಚಿ ಅದಕ್ಕೊಂದು ಕಲೆಯ ರೂಪ ನೀಡುವ ಸೃಜನಶೀಲತೆ ಅವರಲ್ಲಿತ್ತು. ವಿಶೇಷವೆಂದರೆ ಸ್ವಾತಿ ಅವರು ಈ ಕಲೆಯನ್ನು ಸ್ವಯಂ ರೂಢಿಸಿಕೊಂಡವರು. ಇದಕ್ಕಾಗಿ ಅವರು ಯಾವ ವಿಶೇಷ ತರಬೇತಿಯನ್ನು ಪಡೆದಿಲ್ಲ.
ಕಿನ್ನಿಗೋಳಿಯ ಮೂರುಕಾವೇರಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಯುತ್ತಿದ್ದ ವೇಳೆಯೇ ಶಾಲೆಯ ಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ ಶಿಕ್ಷಕರಿಂದ ಮೆಚ್ಚುಗೆ ಗಳಿಸಿದ್ದ ಸ್ವಾತಿ ಅವರು ತನ್ನ ವರ್ಣ ಬದುಕಿನ ಬಾಗಿಲನ್ನು ತೆರೆದಿದ್ದು ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ. ಅಂತರ್ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಮಕ್ಕಳ ಹಬ್ಬ ವಿಲೇಜ್ ಪೇಂಟಿಂಗ್ ನಲ್ಲಿ ಸ್ವಾತಿ ಅವರಿಗೆ ಬೆಳ್ಳಿ ಪದಕ ಲಭಿಸಿತ್ತು. ಅಲ್ಲಿಂದ ಆರಂಭವಾದ ಅವರ ಚಿತ್ರ ಪಯಣದಲ್ಲಿ ಪ್ರಬುದ್ಧತೆಯ ಮೆಟ್ಟಿಲುಗಳನ್ನೇರುತ್ತಲೇ ಇದ್ದಾರೆ.
ಶಾಲಾ ಕಾಲೇಜು ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಸ್ವಾತಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಶಾಲಾ ಅಧ್ಯಾಪಕರು ಮತ್ತು ಪೋಷಕರ ಪ್ರೇರಣೆಯಿಂದ ಪೆನ್ಸಿಲ್, ವಾಟರ್ ಕಲರ್ , ಆಯಿಲ್ ಕಲರ್, ಅಕ್ರಲಿಕ್ , ಡೈಫೇಸಲ್ ಮುಂತಾದ ಕಲಾ ಪ್ರಕಾರಗಳನ್ನು ಇವರು ಸ್ವಯಂ ಕರಗತ ಮಾಡಿಕೊಂಡರು.

ಪ್ರಥಮ ಪಿಯುಸಿ ಕಲಿಯುತ್ತಿದ್ದ ಸಂದರ್ಭ ಬಾಗಲಕೋಟೆಯಲ್ಲಿ ಪಿಯು ಬೋರ್ಡ್ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಸ್ವಾತಿ ಅವರು ಪ್ರಮಾಣಪತ್ರವನ್ನು ಪಡೆದಿದ್ದಾರೆ.
ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ನರ್ಸಿಂಗ್ ಓದುವ ವೇಳೆ ಕಾಲೇಜು ಉಪನ್ಯಾಸಕ ಧೀರೇಂದ್ರ ಜೈನ್ ಅವರ ಮಾರ್ಗದರ್ಶನ ದಲ್ಲಿ ರಾಷ್ಟ್ರೀಯ ಸೇವಾ ಯೋಜನೆ(NSS)ಯ ಯುವ ಫೆಸ್ಟಿವಲ್ ನ ರಾಜ್ಯ ಮತ್ತು ರಾಷ್ಟ್ರಮಟ್ಟದ ಡ್ರಾಯಿಂಗ್, ಪೇಂಟಿಂಗ್, ಕ್ಲೇ ಮಾಡೆಲಿಂಗ್, ಕೊಲಾಸ್ ಮತ್ತು ರಂಗೋಲಿ ಸ್ಪರ್ಧೆಗಳಲ್ಲಿ ಹಲವಾರು ಬಾರಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ. ಭವಿಷ್ಯದಲ್ಲಿ ಯಾವುದೇ ಉನ್ನತ ವೃತ್ತಿ ಲಭಿಸಿದರೂ ಚಿತ್ರಕಲೆಯ ನನ್ನ ಹವ್ಯಾಸವನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡು ಕಲಾಕೃತಿ ನಿರ್ಮಾಣದಲ್ಲಿ ಸಿಗುವ ತೃಪ್ತಿ-ಸಂತಸವನ್ನು ಶಾಶ್ವತವಾಗಿ ಉಳಿಸಿಕೊಂಡಿರುತ್ತೇನೆ ಎಂಬ ಸ್ವಾತಿ ಅವರ ಮಾತನ್ನು ಮೆಚ್ಚಲೇಬೇಕು.
ಬರಹ: ದಿನೇಶ್ ಬಿ.ಐ
ಮಾಹಿತಿ : ಹೇಮಂತ್ ಕುಮಾರ್ ಕಿನ್ನಿಗೋಳಿ













