ಬ್ರಹ್ಮಾವರ(ಕುಲಾಲ ವರ್ಲ್ಡ್ ಡಾಟ್ ಕಾಮ್): ಇತ್ತೀಚೆಗೆ ನಿಧನರಾದ ಖ್ಯಾತ ಭಜನಾ ತರಬೇತುದಾರ ಹಾಗೂ ಉಡುಪಿ ಜಿಲ್ಲಾ ಭಜನಾ ಪರಿಷತ್ನ ಮಾಜಿ ಅಧ್ಯಕ್ಷರಾದ ನಡೂರು ಗ್ರಾಮದ ಪ್ರಕಾಶ್ ಕುಲಾಲ್ ಅವರ ಕುಟುಂಬಕ್ಕೆ ‘ನಮಸ್ತೆ ಭಾರತ್ ಟ್ರಸ್ಟ್ (ರಿ) ಮಂದಾರ್ತಿ’ ವತಿಯಿಂದ ಭಾರಿ ಮೊತ್ತದ ಆರ್ಥಿಕ ನೆರವು ನೀಡಲಾಯಿತು.
ಹೃದಯಾಘಾತದಿಂದ ಅಕಾಲಿಕ ನಿಧನ ಹೊಂದಿದ ಪ್ರಕಾಶ್ ಕುಲಾಲ್ ಅವರ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿದ ಟ್ರಸ್ಟ್ನ ಅಧ್ಯಕ್ಷ ಪ್ರಮೋದ್ ಮಂದಾರ್ತಿ ಅವರ ನೇತೃತ್ವದಲ್ಲಿ ಬೃಹತ್ ಧನ ಸಂಗ್ರಹ ಅಭಿಯಾನ ನಡೆಸಲಾಗಿತ್ತು. ಈ ಅಭಿಯಾನದ ಮೂಲಕ ಸಂಗ್ರಹವಾದ ಒಟ್ಟು 30 ಲಕ್ಷ ರೂಪಾಯಿ ಮೊತ್ತದ ಚೆಕ್ ಅನ್ನು ಅವರ ಪತ್ನಿ ದೀಪಾ ಅವರಿಗೆ ಹಸ್ತಾಂತರಿಸುವ ಮೂಲಕ ಟ್ರಸ್ಟ್ ಮಾನವೀಯತೆ ಮೆರೆದಿದೆ. ಕುಟುಂಬದ ಸಂಕಷ್ಟದ ಸಮಯದಲ್ಲಿ ಸಮಾಜದ ನೆರವಿನೊಂದಿಗೆ ಇಷ್ಟು ದೊಡ್ಡ ಮೊತ್ತವನ್ನು ಕ್ರೋಢೀಕರಿಸಿ ಹಸ್ತಾಂತರಿಸಿದ ಟ್ರಸ್ಟ್ನ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.


