ಸುಳ್ಯ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಬಹುಮುಖ ಪ್ರತಿಭೆ, ಭರತನಾಟ್ಯ ಹಾಗೂ ಯಕ್ಷಗಾನ ಕಲಾವಿದೆ ನವ್ಯಶ್ರೀ ಕೆ. ಕುಲಾಲ್ ಅವರಿಗೆ ಪ್ರತಿಷ್ಠಿತ ‘ಕಲಾ ಸೌರಭ 2026’ ಗೌರವ ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಯಿತು.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುತ್ತಾರಿನವರಾದ ಇವರು, ಕೃಷ್ಣ ಕುಲಾಲ್ ಮತ್ತು ಚಂದ್ರಕಲಾ ದಂಪತಿಗಳ ಪುತ್ರಿ. ಪ್ರಸ್ತುತ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಕಿದೂರ್ ಗ್ರಾಮದ ಕಾಮಾರ್ತೆಯಲ್ಲಿ ವಾಸವಾಗಿದ್ದಾರೆ. ಬಾಲ್ಯದಿಂದಲೇ ಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಇವರು, ಪೋಷಕರ ಪ್ರೋತ್ಸಾಹದಿಂದ ಶಾಸ್ತ್ರೀಯ ನೃತ್ಯವನ್ನು ಅಭ್ಯಾಸ ಮಾಡಿ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ನೃತ್ಯ ಮಾತ್ರವಲ್ಲದೆ ಯಕ್ಷಗಾನ ಹಾಗೂ ಸಂಗೀತ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ನವ್ಯಶ್ರೀ, ಕೇವಲ ಕಲಾವಿದೆಯಾಗಿ ಸೀಮಿತವಾಗದೆ ತಾನು ಕಲಿತ ಕಲೆಯನ್ನು ಇತರ ಆಸಕ್ತರಿಗೂ ಉಚಿತವಾಗಿ ಕಲಿಸಿಕೊಡುವ ಮೂಲಕ ಕಲಾ ಸೇವೆಯಲ್ಲಿ ತೊಡಗಿದ್ದಾರೆ. ಓದಿನಲ್ಲೂ ಮುಂದಿರುವ ಇವರು ಪ್ರಸ್ತುತ ಫಾರ್ಮಸಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ (Master in Pharmacy) ವ್ಯಾಸಂಗ ಮಾಡುತ್ತಿದ್ದಾರೆ.
ಇವರ ಕಲಾ ಪ್ರತಿಭೆ ಮತ್ತು ಸಮಾಜ ಸೇವೆಯನ್ನು ಗುರುತಿಸಿ ಈಗಾಗಲೇ ‘ಭರವಸೆಯ ಬೆಳಕು’ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ಸಂಸ್ಥೆಯ ವಿವಿಧ 30ಕ್ಕೂ ಅಧಿಕ ವೇದಿಕೆಗಳಲ್ಲಿ ಕಲಾ ಪ್ರದರ್ಶನ ನೀಡಿರುವ ಇವರ ಸಾಧನೆಯನ್ನು ಪರಿಗಣಿಸಿ, ಕಾಸರಗೋಡು ಗಡಿನಾಡ ಸಾಂಸ್ಕೃತಿಕ ಕಲಾವೇದಿಕೆ ವತಿಯಿಂದ ನಾಡಿನ ಗಣ್ಯರ ಉಪಸ್ಥಿತಿಯಲ್ಲಿ ಈ ಬಾರಿಯ ಪ್ರತಿಷ್ಠಿತ ‘ಕಲಾ ಸೌರಭ 2026’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.



