ಸುಳ್ಯ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಸ್ವಂತ ಪರಿಶ್ರಮ ಹಾಗೂ ಕಲಾ ತಪಸ್ಸಿನ ಮೂಲಕ ನೃತ್ಯ ಕ್ಷೇತ್ರದಲ್ಲಿ ವಿಶೇಷ ಗುರುತಿಸಿಕೊಳ್ಳುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ನಿವಾಸಿ ದೀಕ್ಷಾ ರಾಧಾಕೃಷ್ಣ ಕುಲಾಲ್ ಅವರಿಗೆ ಪ್ರತಿಷ್ಠಿತ ‘ಕಲಾ ಸೌರಭ 2026’ ಗೌರವ ಪುರಸ್ಕಾರವನ್ನು ನೀಡಿ ಸನ್ಮಾನಿಸಲಾಯಿತು.
ರಾಧಾಕೃಷ್ಣ ಕುಲಾಲ್ ಮತ್ತು ಸರಸ್ವತಿ ದಂಪತಿಯ ಪುತ್ರಿಯಾಗಿರುವ ದೀಕ್ಷಾ ಅವರು ಬಾಲ್ಯದಿಂದಲೇ ಕಲಾ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಯಾವುದೇ ಗುರುವಿನ ಮಾರ್ಗದರ್ಶನವಿಲ್ಲದೆ, ಸ್ವಂತ ಪರಿಶ್ರಮದಿಂದ ನೃತ್ಯವನ್ನು ಅಭ್ಯಾಸ ಮಾಡಿ ವೇದಿಕೆಗಳಲ್ಲಿ ಪ್ರಸ್ತುತಪಡಿಸುತ್ತಿರುವುದು ಇವರ ಸಾಧನೆಯ ವಿಶೇಷತೆಯಾಗಿದೆ. ಓದಿನ ಜೊತೆಗೆ ಕ್ರೀಡೆ ಹಾಗೂ ಕಲಾ ವೇದಿಕೆಗಳಲ್ಲಿ ಮಿಂಚುತ್ತಿರುವ ಇವರು, ಪ್ರಸ್ತುತ ಬ್ಯುಟೀಶಿಯನ್ ಕೋರ್ಸ್ ಅಭ್ಯಾಸ ಮಾಡುತ್ತಿದ್ದಾರೆ.
ಕೇವಲ ವೈಯಕ್ತಿಕ ಸಾಧನೆಗೆ ಸೀಮಿತವಾಗದೆ, ತಾವು ಕಲಿತ ನೃತ್ಯ ಕಲೆಯನ್ನು ಹಲವಾರು ಆಸಕ್ತ ಕಲಾವಿದರಿಗೆ ಉಚಿತವಾಗಿ ಕಲಿಸಿ ಅವರಿಗೆ ವೇದಿಕೆ ಕಲ್ಪಿಸಿಕೊಡುವ ಮೂಲಕ ದೀಕ್ಷಾ ಸಮಾಜಕ್ಕೆ ಮಾದರಿಯಾಗಿದ್ದಾರೆ. ಈಗಾಗಲೇ ಸುಮಾರು 50ಕ್ಕೂ ಅಧಿಕ ವೇದಿಕೆಗಳಲ್ಲಿ ಕಲಾ ಪ್ರದರ್ಶನ ನೀಡಿರುವ ಇವರ ಪ್ರತಿಭೆಯನ್ನು ಗುರುತಿಸಿ ‘ಕರ್ನಾಟಕ ಕಲಾಶ್ರೀ 2023’ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.
ದೀಕ್ಷಾ ಅವರ ಅಪ್ರತಿಮ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಕಾಸರಗೋಡು ಗಡಿನಾಡ ಸಾಂಸ್ಕೃತಿಕ ಕಲಾವೇದಿಕೆ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಈ ಬಾರಿಯ ‘ಕಲಾ ಸೌರಭ 2026’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


