ಜೋಯಿಡಾ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಗ್ರಾಮೀಣ ಭಾಗದ ಯುವತಿಯರು ಮನಸ್ಸುಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ಜೋಯಿಡಾ ತಾಲೂಕಿನ ಅಸು ಗ್ರಾಮದ ಯುವತಿ ದೀಕ್ಷಿತಾ ಬಬನ್ ಕುಂಬಾರ ಸಾಬೀತುಪಡಿಸಿದ್ದಾರೆ. ಇವರು ಭಾರತೀಯ ಗಡಿ ಭದ್ರತಾ ಪಡೆಗೆ (BSF) ಆಯ್ಕೆಯಾಗುವ ಮೂಲಕ ಇಡೀ ತಾಲೂಕೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಜೋಯಿಡಾ ತಾಲೂಕಿನ ಅಸು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಸು ಗ್ರಾಮದ ನಿವಾಸಿಯಾಗಿರುವ ದೀಕ್ಷಿತಾ, ಭಾರತೀಯ ಭದ್ರತಾ ಪಡೆಗೆ ಆಯ್ಕೆಯಾದ ತಾಲೂಕಿನ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಈ ಐತಿಹಾಸಿಕ ಸಾಧನೆಯಿಂದ ಅಸು ಗ್ರಾಮ ಸೇರಿದಂತೆ ಇಡೀ ತಾಲೂಕಿನಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದೆ.
ದೀಕ್ಷಿತಾ ಕುಂಬಾರ ಅವರಿಗೆ ಬಾಲ್ಯದಿಂದಲೇ ದೇಶ ಸೇವೆ ಮಾಡಬೇಕೆಂಬ ಬಲವಾದ ಹಂಬಲವಿತ್ತು. ತಮ್ಮ ಶೈಕ್ಷಣಿಕ ಅಧ್ಯಯನದ ಜೊತೆಗೆ ದೈಹಿಕ ಫಿಟ್ನೆಸ್ ಮತ್ತು ಮಾನಸಿಕ ಸದೃಢತೆಯನ್ನು ಹೆಚ್ಚಿಸಿಕೊಳ್ಳಲು ಅವರು ನಿರಂತರವಾಗಿ ಶ್ರಮಿಸಿದ್ದರು. ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ದೀಕ್ಷಿತಾ, ಎಂತಹ ಕಠಿಣ ಸವಾಲುಗಳ ನಡುವೆಯೂ ತಮ್ಮ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ದೀಕ್ಷಿತಾ ಅವರ ಸಾಧನೆ ಇತರ ಯುವತಿಯರಿಗೂ ಮಾದರಿಯಾಗಿದೆ.

