ಮನೆಯ ಅಂಗಳದಲ್ಲಿ ಮಣ್ಣಿನ ಮಡಕೆ, ಹೂಜಿ, ಚಿಕ್ಕ ಚಿಕ್ಕ ಗಾತ್ರದ ಮಣ್ಣಿನ ಉತ್ಪನ್ನಗಳು.. ಇನ್ನೊಂದು ಕಡೆ ತಯಾರಿಕೆ ಮಾಡುವ ನಾನಾ ಪರಿಕರಗಳು… ಸುಮಾರು ನಾಲ್ಕು ದಶಕಗಳಿಂದ ಕುಂಬಾರಿಕೆ ವೃತ್ತಿಯಲ್ಲಿದ್ದ ಕುಟುಂಬ. ಇಂದು ಮಣ್ಣಿನ ಉತ್ಪನ್ನ ತಯಾರಿಕೆಗೆ ಶುದ್ಧ ಮಣ್ಣು, ಕಟ್ಟಿಗೆ, ಹುಲ್ಲು ದುಬಾರಿಯಿಂದಾಗಿ ಉತ್ಪಾದನೆ ನಡೆಯುತ್ತಿಲ್ಲ..
ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮ ಕೊರಗಕಟ್ಟೆ ರಾಮಣ್ಣ ಮೂಲ್ಯ (70) ಇವರು ತಯಾರಿಸಿದ ಮಣ್ಣಿನ ಉತ್ಪನ್ನಗಳಿಗೆ ಕೊರಗಕಟ್ಟೆ, ಅಜ್ಜಿಬೆಟ್ಟು, ಇರ್ವತ್ತೂರು, ವಾಮದಪದವು ಹೀಗೆ ನಾನಾ ಕಡೆಗಳಿಂದ ಬಹು ಬೇಡಿಕೆಯಿತ್ತು. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಡಕೆ, ಹೂಜಿ, ಇತರ ಮಣ್ಣಿನ ಉತ್ಪನ್ನಗಳನ್ನು ತಯಾರಿಸಿ ಸ್ಥಳೀಯ ಅಂಗಡಿಗಳಿಗೆ ಪೂರೈಕೆ ಮಾಡುತ್ತಿದ್ದರು. ಅಲ್ಲದೇ ಪ್ರತಿ ಗುರುವಾರ ನಡೆಯುತ್ತಿದ್ದ ಇಲ್ಲಿನ ಪದವು ಸಂತೆಯಲ್ಲಿ ಮಣ್ಣಿನ ಉತ್ಪನ್ನಗಳ ಮಾರಾಟ ಮಾಡುತ್ತಿದ್ದರು. ಮಣ್ಣು, ಕಟ್ಟಿಗೆ, ಹುಲ್ಲು ದುಬಾರಿಯಿಂದಾಗಿ ಕಳೆದ ಏಳು ತಿಂಗಳಿನಿಂದ ಮಣ್ಣಿನ ಉತ್ಪನ್ನ ತಯಾರಿಕೆಯನ್ನು ನಿಲ್ಲಿಸಲಾಗಿದೆ ಎನ್ನುತ್ತಾರೆ ರಾಮಣ್ಣ ಮೂಲ್ಯ.

ಮಣ್ಣಿನ ಉತ್ಪನ್ನ ತಯಾರಿಕೆಗೆ ಬೇಕು ಯೋಗ್ಯ ಮಣ್ಣು:
ಉತ್ಪನ್ನ ತಯಾರಿಕೆಗೆ ಶುದ್ಧ ಮಣ್ಣು ಅಗತ್ಯವಾಗಿದೆ. ಪ್ರಾರಂಭದಲ್ಲಿ ಉತ್ಪನ್ನ ತಯಾರಿಕೆ ಮನೆಯ ಸಮೀಪದ ತಾರಬರಿಯಿಂದ ಆರು ಅಡಿ ಅಳದ ಮಣ್ಣು ಯೋಗ್ಯವಾಗಿದ್ದರಿಂದ ಉತ್ಪನ್ನ ತಯಾರಿಕೆಗೆ ಮಣ್ಣು ದೊರೆಯುತ್ತಿತ್ತು. ಹೀಗಾಗಿ ಮೊದಲು ಸುಲಭವಾಗಿ ಸಿಗುತ್ತಿದ್ದ ಮಣ್ಣು ಈಗ ದೂರದ ಊರಿನಿಂದ ತಂದು ಉತ್ಪನ್ನ ತಯಾರಿಕೆ ಮಾಡುವುದು ಸಹ ಕಷ್ಟ ಸಾಧ್ಯ ಎನ್ನುತ್ತಾರೆ ರಾಮಣ್ಣ ಮೂಲ್ಯ ಅವರ ಪುತ್ರ ಯಾದವ್ ಕುಲಾಲ್.
12 ವಯಸ್ಸಿನಿಂದಲೇ ಕುಂಬಾರಿಕೆ :
ರಾಮಣ್ಣ ಮೂಲ್ಯ 12ನೇ ವಯಸ್ಸಿನಲ್ಲೇ ಸಂಬಂಧಿ ಕುಞಣ್ಣ ಮೂಲ್ಯ ಅವರ ಬಳಿ ಕುಂಬಾರಿಕೆ ವೃತ್ತಿ ಕಲಿತವರು. ಮನೆಯ ಎಲ್ಲ ಕುಟುಂಬದ ಸದಸ್ಯರು ಸೇರಿಕೊಂಡು ಮಣ್ಣಿನ ಉತ್ಪನ್ನ ತಯಾರಿಕೆ ಮಾಡುತ್ತಿದ್ದರು. ಈ ಮೂಲಕ ವೃತ್ತಿ ಕಲಿಕೆಗೆ ಸಾಧ್ಯವಾಯಿತು ಎನ್ನುತ್ತಾರೆ ರಾಮಣ್ಣ ಮೂಲ್ಯ.
ದೂರದ ಗ್ರಾಮದಲ್ಲಿ ವ್ಯಾಪಾರ:
ದೊಡ್ಡ ಗಾತ್ರದ ಮಡಕೆಗೆ ರೂ.100, ಹಣತೆ ರೂ.2 ರಿಂದ 3, ದೂಪದ ಬಟ್ಟಲು ರೂ.40, ನೀರು ಸಂಗ್ರಹ ಹೂಜಿ 150, ಸಣ್ಣ ಗಾತ್ರದ ಮಡಕೆ ರೂ.30 ಹೀಗೆ ಮಣ್ಣಿನ ಉತ್ಪನ್ನಗಳನ್ನು ಮಾರುಕಟ್ಟೆಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮಾರಾಟವಾಗುತ್ತಿತ್ತು. ಮನೆಯಿಂದ ನಮ್ಮದೇ ಆಟೋ ರಿಕ್ಷಾ ವಾಹನದ ಮೂಲಕ ಉತ್ಪನ್ನಗಳನ್ನು ಸಾಗಿಸಿ, ದೂರದ ಗ್ರಾಮದಲ್ಲಿ ವ್ಯಾಪಾರ ಮಾಡುತ್ತಿದ್ದೆವು ಎನ್ನುತ್ತಾರೆ ಯಾದವ್ ಕುಲಾಲ್.
ಸುಮಾರು ನಾಲ್ಕು ದಶಕಗಳ ಕಾಲ ಕುಂಬಾರಿಕೆ ವೃತ್ತಿಯಲ್ಲಿದ್ದೆ. ಇತ್ತೀಚೆಗೆ ಕೈ ನೋವಿನ ಸಮಸ್ಯೆ ಇರುವುದರಿಂದ ಮಣ್ಣಿನ ಉತ್ಪನ್ನ ತಯಾರಿಕೆ ಮಾಡುವುದನ್ನು ನಿಲ್ಲಿಸಿದ್ದೇನೆ. ತಯಾರಿಕೆಗೆ ಬೇಕಾದ ಶುದ್ಧ ಮಣ್ಣು, ಹುಲ್ಲು, ಕಟ್ಟಿಗೆ ದುಬಾರಿಯಾಗಿದೆ. ಕಳೆದ ಏಳು ತಿಂಗಳಿನಿಂದ ಮಣ್ಣಿನ ಉತ್ಪನ್ನ ಮಾರಾಟ ಮಾತ್ರ ಮಾಡುತ್ತಿದ್ದೇನೆ. –ರಾಮಣ್ಣ ಮೂಲ್ಯ, ಕೊರಗಕಟ್ಟೆ
ಮಣ್ಣಿನ ಉತ್ಪನ್ನಗಳು ಉತ್ತಮ ಅನ್ನುವ ಮನೋಭಾವ ಇಂದು ಸಹ ಜನರಲ್ಲಿದೆ. ದೊಡ್ಡ ಗಾತ್ರದ ಮಡಕೆ,ಹಣತೆ, ದೂಪದ ಬಟ್ಟಲು,ನೀರು ಸಂಗ್ರಹ ಹೂಜಿ, ಸಣ್ಣ ಗಾತ್ರದ ಮಡಕೆ ಇತ್ಯಾದಿಗಳನ್ನು ಗ್ರಾಮೀಣ ಭಾಗದಲ್ಲಿ ಈಗಲೂ ಬಳಕೆಯಲ್ಲಿದೆ. – ಪ್ರವೀಣ್ ಗಟ್ಟಿ ಬಸ್ತಿಕೋಡಿ
ವರದಿ : ಪುನೀತ್ ಸಿದ್ದಕಟ್ಟೆ ( ಸುದ್ದಿ ಕೃಪೆ : ವಿಜಯ ಕರ್ನಾಟಕ)

