ಪ್ಲಾಸ್ಟಿಕ್, ಸ್ಟೀಲಿನ ಆಗಮನದಿಂದ ಖದರ್ ಕಳೆದುಕೊಂಡಿರುವ ಮಡಕೆ ತಯಾರಿಸುವ ಕುಂಬಾರಿಕೆಯ ನಿಜವಾದ ಜೀವನ ಚಿತ್ರವೇನು ಎನ್ನುವುದನ್ನು ಹುಡುಕುತ್ತ ಹೋಗಿದ್ದು ಧಾರವಾಡ ಜಿಲ್ಲೆಯ ಮುಗದ ಎಂಬ ಗ್ರಾಮಕ್ಕೆ. ಇಂದಿಗೂ ಮುಗದದ ಕುಂಬಾರಿಕೆಯ ಭಾಗವೇ ಆದ ಸಮೃದ್ಧ ಜೀವನಾನುಭವದ ಎಪ್ಪತ್ತೈದರ ವೃದ್ಧ ಬಸವ್ವನನ್ನು ಮಾತಾಡಿಸಿದೆ. ಎಲೆ ಅಡಕೆಯ ಸಂಚಿ ಬಿಚ್ಚಿದಂತೆ ತನ್ನ ಜೀವನದ ಕಥೆಯನ್ನು ಬಿಚ್ಚಿದಳು..
‘ಐದಿಪ್ಪತ್ತು (ನೂರು) ರೂಪಾಯಿ ತೆರ (ವಧುದಕ್ಷಿಣೆ) ಕೊಟ್ಟರು ಅಂತಾ ನಮ ತಂದಿ ನನ್ನ ಮದ್ವಿ ಮಾಡಿದ್ರು. ಮದ್ವಿ ಆದ ನಾಕ ವರ್ಷಕ್ಕೆ ದೊಡ್ಡಾಕಿ ಆದೆ…’ ಎನ್ನುವ ಬಸವ್ವನನ್ನು ನಂತರ ಕಿತ್ತೂರಿಗೆ ಗಂಡನ ಮನೆಗೆ ಕಳಿಸಿಕೊಟ್ಟರು. ದುಡಿಯುವ ಮನಸ್ಸೇ ಇಲ್ಲದ ವಿಚಿತ್ರ ಸ್ವಭಾವದ ಪತಿ ಗುರುಸಿದ್ಧಪ್ಪ ಸುಮ್ಮನೆ ಮನೆ ಮೂಲೆ ಹಿಡಿದು ಅಥವಾ ಯಾರದ್ದಾದರೂ ಮನೆಯ ಕಟ್ಟೆ ಮೇಲೆ ಹೋಗಿ ಕುಳಿತುಬಿಡುತ್ತಿದ್ದ. ನಿನ್ನ ತಲಿಗೆ ಹಾಕುವ ಕೊಬ್ಬರಿ ಎಣ್ಣಿಗೆ ಬೇಕಾಗುವಷ್ಟನ್ನೂ ನಿನ್ನ ಗಂಡಾ ದುಡಿಯಂಗಿಲ್ಲ ಎಂದು ಸಂಸಾರದ ಜವಾಬ್ದಾರಿ ಹೊತ್ತ ಗಂಡನ ತಮ್ಮ ಚುಚ್ಚಿ ಮಾತಾಡುತ್ತಿದ್ದ. ಬಾಲ್ಯದಿಂದಲೂ ತವರುಮನೆಯಲ್ಲಿ ತಂದೆಗೆ ಸಹಾಯ ಮಾಡುತ್ತ ಕುಂಬಾರಿಕೆಯ ಹಲವು ಕೆಲಸ ಕಲಿತಿದ್ದ ಸ್ವಾಭಿಮಾನಿ ಬಸವ್ವ ತಾನೇ ಮಡಕೆ ತಯಾರಿಸಲಾರಂಭಿಸಿದಳು.
ತಯಾರಿಸಿದ ಮಡಕೆಯನ್ನು ಕಿತ್ತೂರಿನ ಸುತ್ತಮುತ್ತಲ ಹಳ್ಳಿಗಳಲ್ಲಿ ಮಾರಿ ಬರುತ್ತಿದ್ದಳು. ಮನೆ ಜಗುಲಿಯ ಮೇಲೆ ತಟ್ಟಿ ಕಟ್ಟಿ ಒಲೆ ಹೂಡಿ ಬೇರೆ ಅಡುಗೆ ಮಾಡಿ ಸಂಸಾರ ನಡೆಸಿದಳು. ಹುಟ್ಟಿದ ನಾಲ್ಕು ಮಕ್ಕಳಿಗೆ ಇದ್ದುದರಲ್ಲೇ ಹಂಚಿ ಹಾಕಿ ಬೆಳೆಸಿದರು. ಬಡತನದ ಜಂಜಡದಲ್ಲಿ ಮಕ್ಕಳಿಗೆ ಶಾಲೆಗೆ ಕಳಿಸುವುದಂತೂ ಸಾಧ್ಯವಿಲ್ಲ. ಕುಲಕಸುಬಾದ ಕುಂಬಾರಿಕೆಯನ್ನಾದರೂ ಚೆನ್ನಾಗಿ ಕಲಿತು ಬಾಳ್ವೆ ಮಾಡಲಿ ಎಂಬ ಹಂಬಲದಿಂದ ಗಂಡು ಮಕ್ಕಳಿಬ್ಬರನ್ನು ತವರು ಮನೆಗೆ ತಂದು ಬಿಟ್ಟರು. ಕಿತ್ತೂರಿನಲ್ಲಿ ಜೀವನ ನಿರ್ವಹಣೆ ಕಷ್ಟವೆನಿಸಿದಾಗ ಕಲ್ಲೂರಿನ ಗುಡಿಯ ಕಟ್ಟೆಯ ಮೇಲೆ ಐದು ವರ್ಷ ವಾಸ ಮಾಡಿದರು. ‘ದಿನದಾಗ ಬಿದ್ದಾಗಲೂ (ಒಂಭತ್ತು ತಿಂಗಳ ಬಸಿರಿದ್ದಾಗಲೂ) ನಾ ಮಾಡಿದ ಮಡಕಿ ಹೊತ್ತಗೊಂಡ ಊರೂರು ತಿರಗತಿದ್ನಿ. ರೈತರು. ಮಡಕಿ ತಗೊಂಡು ಕಾಳ ಕೊಡತಿದ್ರು, ಭತ್ತಾ ಜ್ವಾಳ ಕೊಡತಿದ್ರು. ತಿರುಗಿ ಮನಿಗೆ ತರೂ ಮುಂದ ಅವನ್ನೆಲ್ಲ ಹೊತ್ಗೊಂಡ ಬರತಿದ್ನಿ. ಅವನ್ನ ತಂದು ಹಸನು ಮಾಡಿ ಹಿಟ್ಟು ಬೀಸಿ ರೊಟ್ಟಿ ಮಾಡಿ ಹೊಟ್ಟಿ ತುಂಬಿಸಿಕೊಳತಿದ್ವಿ’ ಎನ್ನುವ ಬಸವ್ವನ ಕುಟುಂಬ ಎಷ್ಟೋ ದಿನ ಅರೆಹೊಟ್ಟೆ ತಿಂದೇ ಕಳೆಯಬೇಕಾಗುತ್ತಿತ್ತು. ಬಸವ್ವ ಆ ಗಡಿಗೆಗಳನ್ನು ಅಥವಾ ಧಾನ್ಯಗಳನ್ನು ಹೊತ್ತು ಅದೆಷ್ಟು ಸಾವಿರ ಕಿಲೋ ಮೀಟರು ತಿರುಗಿದ್ದಾರೆಯೋ ಆ ದೇವರಿಗಷ್ಟೇ ಗೊತ್ತಿರಬೇಕು!.
ಸರ್ಕಾರದ ಯೋಜನೆಯೊಂದರಲ್ಲಿ ಎರಡು ಗುಂಟೆ ಜಾಗ ಸಿಕ್ಕಿದಾಗ ಐದುನೂರು ರೂಪಾಯಿ ಹೊಂದಿಸಲು ಸಾಧ್ಯವಾಗದೇ ಕೂಲಿ ಕೆಲಸ ಮಾಡಿದರು. ಕೊನೆಗೆ ಜಾಗ ಸಿಕ್ಕು ಮಣ್ಣಿನ ಮನೆ ಹಂಚಿನ ಸೂರು ಕಟ್ಟಿಕೊಂಡಾಗ ಸ್ವರ್ಗ ಕೈಗೆಟುಕಿದಷ್ಟೇ ಸಮಾಧಾನ ಸಿಕ್ಕಿತ್ತು. ಮಗ ಶೇಕಪ್ಪ ಖಾನಾಪುರಕ್ಕೆ ಹೋಗಿ ತರಬೇತಿಯನ್ನು ಪಡೆದುಕೊಂಡು ಬಂದ. ಗಂಡುಮಕ್ಕಳಿಬ್ಬರು ವೃತ್ತಿಯ ಹೊಣೆ ಹೊತ್ತಾಗಲೂ ಬಸಮ್ಮ ಕೆಲಸದಿಂದ ವಿಮುಖರಾಗಲಿಲ್ಲ. ಜಾತ್ರೆಗಳಲ್ಲಿ, ಧಾರವಾಡದ ಮಾರುಕಟ್ಟೆಯಲ್ಲಿ, ಹಲವು ಹಳ್ಳಿಗಳಲ್ಲಿ ಗಡಿಗೆ ಮಾರಿ ಬಂದ ಹಣ ಉಳಿಸಿ ಹೆಣ್ಣು ಮಕ್ಕಳಿಗೆ ಮದುವೆ ಮಾಡಿದರು.
ಹೀಗಿರುತ್ತದೆ ಕುಂಬಾರಿಕೆ:
ವರುಷದಲ್ಲೊಮ್ಮೆ ಕೆರೆ ಹೂಳಿನಲ್ಲಿ ಮೇಲ್ಮಣ್ಣನ್ನು ಹೊರತುಪಡಿಸಿ ಐದಡಿ ಆಳದ ತಗ್ಗು ತೆಗೆದು ಅಲ್ಲಿಂದ ಮಣ್ಣನ್ನು ಗಾಡಿಯಲ್ಲೋ, ಟ್ರಾಕ್ಟರ್ನಲ್ಲೋ ಹೇರಿಸಿಕೊಂಡು ಬರುತ್ತಾರೆ. ಅದರಲ್ಲಿರುವ ಹರಳುಗಳನ್ನೆಲ್ಲ ತೆಗೆದು ಕುಟ್ಟಿ ಎರಡಡಿ ಆಳದ ತಗ್ಗಿನಲ್ಲಿ ಹಾಕಿ ಕಲಸುತ್ತಾರೆ. ನಂತರ ಅದನ್ನು ತೆಗೆದು ಕಾಲಿನಲ್ಲಿ ತುಳಿಯುತ್ತಾರೆ. ಬೇರಿಂಗ್ ಮೇಲೆ ತಿರುಗುವ ತಿಗರಿಯ ಮೇಲೆ ಮಣ್ಣ ಮುದ್ದೆಯನ್ನಿಟ್ಟು ಚಾಕಚಕ್ಯತೆಯಿಂದ ತಿರುಗಿಸುತ್ತ ಬೇಕಾದ ಆಕಾರ ಕೊಡುತ್ತಾರೆ. ಅದನ್ನು ತೆಗೆದು ಒಂದೆಡೆ ಜೋಡಿಸಿಟ್ಟು ಒಂದು ವಾರ ಗಾಳಿಗೆ ಒಣಗಿದ ಮೇಲೆ ಭಟ್ಟಿಯಲ್ಲಿ ಹಾಕಿ ಒಂದು ದಿನ ಬೆಳಗಿನಿಂದ ರಾತ್ರಿಯವರೆಗೆ ಸುಡುತ್ತಾರೆ. ಆಗ ಖಣ್ ಖಣ್ ಸಪ್ಪಳದ ಕುಂಡಗಳು, ಹೂದಾನಿಗಳು, ನೀರು ತುಂಬುವ ಗಡಿಗೆಗಳು, ಹೂಜಿ ಸಿದ್ಧವಾಗುತ್ತವೆ. ಮಗ ಶೇಕಪ್ಪನವರು ಕಟ್ಟಿಗೆಯಲ್ಲಿ ಗರಗರನೇ ತಿಗರಿ ತಿರುಗಿಸಿ ಕುಂಡಗಳನ್ನು ತಯಾರು ಮಾಡಿದರೆ ಕುಂಡಗಳಿಗೆ ತಳ ಹಚ್ಚುವ ಕೆಲಸ ಬಸಮ್ಮನದ್ದು. ಸೊಸೆ ಯಶೋದಾ ಅತ್ತೆಯೊಂದಿಗೆ ಕೈಗೂಡಿಸುತ್ತಾರೆ.
ಹಿಂದೆ ಅದೇ ಊರಿನಲ್ಲಿ ಇಪ್ಪತ್ತು ಕುಟುಂಬದವರು ಕುಂಬಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿದ್ದರು, ಆರೋಗ್ಯಕರ ಸ್ಪರ್ಧೆ ಇತ್ತು. ಮುಗದದ ಕುಂಡಗಳು ಇಡೀ ರಾಜ್ಯದಲ್ಲಿಯೇ ಪ್ರಸಿದ್ಧವಾಗಿದ್ದವು, ಮುಂಬೈ, ಪುಣಾ, ಅಲಹಾಬಾದ್.. ಹೀಗೆ ಹಲವು ನಗರವಾಸಿಗಳು ಆ ಊರಿಗೇ ಬಂದು ಕುಂಡಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಖರೀದಿಸುವವರಿಗೆ ಅನುಕೂಲವಾಗಲಿ ಎಂದು ಸೊಸೈಟಿ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದರು. ಮುಗದದ ಕುಂಡಗಳಿಗೆ ಬೇಡಿಕೆ ಇದ್ದರೂ ಕಳೆದೊಂದು ದಶಕದಿಂದ ಈ ವೃತ್ತಿ ಅವಸಾನದ ಹಾದಿಯಲ್ಲಿದೆ. ಕುಂಬಾರಿಕೆ ಮಾಡುವ ಪುರುಷರಿಗೆ ಮದುವೆಯಾಗಬೇಕೆಂದರೆ ಹೆಣ್ಣು ಕೊಡುವವರಿಲ್ಲ. ಕುಂಡಗಳನ್ನು ತಯಾರಿಸಲು ಅತ್ಯಗತ್ಯವಾದ ಉರುವಲ ಕಟ್ಟಿಗೆ ಲಭ್ಯವಿಲ್ಲ.. ಇಂತಹ ಹಲವಾರು ಕಾರಣಗಳಿಂದ ಹೊಸ ತಲೆಮಾರಿನವರು ಬೇರೆ ಉದ್ಯೋಗದತ್ತ ಮುಖ ಮಾಡಿದ್ದಾರೆ.
ಇವರು ಇಕೋಫ್ರೆಂಡ್ಲಿ ಎನ್ನುತ್ತ ಬಣ್ಣದ ಮಾತಾಡಿ ತಾವು ತಯಾರಿಸಿದ ವಸ್ತುಗಳನ್ನು ಬಿಕರಿ ಮಾಡುವ ಕೌಶಲ ಕಂಡುಕೊಂಡಿಲ್ಲ. ಜನರಿಗೆ ಅತ್ಯಗತ್ಯವಾದ, ಪರಿಸರ ಸ್ನೇಹಿ ಕೌಶಲದ ವೃತ್ತಿ ಕಾಲದ ಅಗತ್ಯಕ್ಕೆ ಬದಲಾಗದೇ ಅವಸಾನದ ಹಾದಿ ಹಿಡಿದಿದೆ. ಈ ವ್ಯಥೆಯಲ್ಲಿ ಬಸವ್ವನ ಶ್ರಮ ಕರಗಿದಂತೆ ಭಾಸವಾಯ್ತು. ‘ನನ್ನ ಮೊಮ್ಮಕ್ಕಳು ನಾಲ್ಕಕ್ಷರಾ ಕಲ್ತಾರು ಅವ್ರೀಗೆ ಒಂದು ಉದ್ಯೋಗ ಸಿಕ್ಕರೆ ಸಾಕ್ರಿ. ದಿನಕ್ಕೆರಡು ರೊಟ್ಟಿ ತಲಿ ಮ್ಯಾಲೊಂದು ಸೂರು ಐತಿ, ಇನ್ನೇನು ಬೇಕ್ರಿ ಬದಕಾಕ?’ ಎಂದು ಪ್ರಶ್ನಿಸುವ, ಖಾಲಿ ಕೊಡ ಮಾರಿ ಬದುಕ ಕಟ್ಟಿದ ಬಸವ್ವನ ಅಲ್ಪತೃಪ್ತ ವ್ಯಕ್ತಿತ್ವ ನಮ್ಮೆಣಿಕೆಗೆ ಮೀರಿದ್ದು…


