ಮಂಗಳೂರು(ಸೆ.೧೫,ಕುಲಾಲ್ ವರ್ಲ್ಡ್ ನ್ಯೂಸ್): ಕರ್ನಾಟಕ ಸರಕಾರದ ಪೊಲೀಸ್ ಇಲಾಖೆ ದೇಶದ ಅತ್ಯುನ್ನತ ಇಲಾಖೆಗಳಲ್ಲಿ ಒಂದು. ಇದೇ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಇದೇ ಸಪ್ಟೆಂಬರ್ ತಿಂಗಳಲ್ಲಿ ನಿವೃತ್ತಿಯಾಗಲಿರುವ ಪೊಲೀಸ್ ಅಧಿಕಾರಿಯ ಬಗೆಗಿನ ಪರಿಚಯ ಬರಹವಿದು..
ಪೊಲೀಸರೆಂದರೆ ಸಾಕು ನೆನಪಾಗುವುದು ಕೇವಲ ದರ್ಪ, ಬೆದರಿಕೆ, ಅಹಂಕಾರ. ಆದರೆ, ಇದಕ್ಕೆ ಭಿನ್ನವೆಂಬಂತೆ ಕೆಲವು ಪೊಲೀಸ್ ಅಧಿಕಾರಿಗಳು ಇರುತ್ತಾರೆ. ಅಂಥವರಲ್ಲಿ ಎನ್. ಬಾಬು ಬಂಗೇರ ಅವರೂ ಒಬ್ಬರು. ಪೊಲೀಸರೆಂದರೆ ಪೊಲೈಟ್ ಹಾಗೂ ಸ್ನೇಹಮಯಿಗಳೂ ಹೌದು ಎನ್ನಲು ಅವರು ಮತ್ತೊಂದು ಉದಾಹರಣೆ.
ಎನ್. ಬಾಬು ಬಂಗೇರ ಇವರು ಬಂಟ್ವಾಳ ತಾಲ್ಲೂಕು ನೀರುಮಾರ್ಗ ಎಂಬ ಪುಟ್ಟ ಗ್ರಾಮದ ರಾಜನ್ ತೋಟ ಜೀಕಯ್ಯ ಮೂಲ್ಯ ಹಾಗೂ ಕೂಸಮ್ಮ ದಂಪತಿಗಳ ಮಗನಾಗಿ 1957ರಲ್ಲಿ ಹುಟ್ಟಿದರು. ಹಳ್ಳಿಯ ಕಷ್ಟದ ದಿನಗಳಲ್ಲೂ ಮೆಟ್ರಿಕ್ ವ್ಯಾಸಂಗ ಮುಗಿಸಿದ ಇವರು ಅಕ್ಕನ ಧೈರ್ಯದ ಮಾತುಗಳಿಂದ, ತಂಗಿ ತಮ್ಮಂದಿರ ಪ್ರೋತ್ಸಾಹದಿಂದ ಪೊಲೀಸ್ ಇಲಾಖೆ ಸೇರ ಬಯಸಿದರು. ಇದಕ್ಕೆ ಸಂಬಂಧಿಸಿದ ಪರೀಕ್ಷೆಯಲ್ಲೂ ಉತ್ತೀರ್ಣರಾದ ಇವರು ತರಬೇತಿ ಮುಗಿಸಿ 1976ರಲ್ಲಿ ಬಂಟ್ವಾಳ ಠಾಣೆಗೆ ಕಾನ್ಸ್ಟೇಬಲ್ ಆಗಿ ನೇಮಕವಾದರು. ನಂತರ ಕ್ರಮವಾಗಿ ಕದ್ರಿ, ವಿಟ್ಲ,ಪುತ್ತೂರು ಠಾಣೆಗಳಿಗೆ ವರ್ಗಾವಣೆಯಾಗಿ ಕಾನ್ಸ್ಟೇಬಲ್ ಅಗಿಯೇ ಮುಂದುವರೆದ ಇವರು, 2003ರಲ್ಲಿ ಮುಂಭಡ್ತಿ ಪಡೆದು ಮೂಡಬಿದಿರೆ ಠಾಣೆಗೆ ಹೆಡ್- ಕಾನ್ಸ್ಟೇಬಲ್ ಆಗಿ ವರ್ಗಾವಣೆಯಾದರು. ಮುಂದೆ ಮಂಗಳೂರು ಉತ್ತರ ಠಾಣೆಯಲ್ಲೂ ಪ್ರಾಮಾಣಿಕ ಸೇವೆ ಸಲ್ಲಿಸಿದರು, 2011ಲ್ಲಿ ಬರ್ಕೆ ಠಾಣೆಗೆ ಎ.ಎಸ್.ಐ. ಆಗಿ ವರ್ಗಾವಣೆಯಾದರು. ಪ್ರಸ್ತುತ ಮಂಗಳೂರಿನ ಉರ್ವ ಠಾಣೆಯಲ್ಲಿ ಕ್ರೈಂ ಬ್ರಾಂಚ್ ವಿಭಾಗದ ಎಸ್.ಐ ಆಗಿ ಸೇವೆಯಲ್ಲಿದ್ದಾರೆ. ತಮ್ಮ ಸೇವೆಯುದ್ದಕ್ಕೂ ಯಾವುದೇ ಕಪ್ಪು ಚುಕ್ಕೆಯನ್ನು ಪಡೆಯದೇ, ನಿಸ್ವಾರ್ಥದಿಂದ ಸೇವೆ ಸಲ್ಲಿಸಿರುವ ಬಾಬು ಅವರು ಇದೇ ಸಪ್ಟೆಂಬರ್ ನಲ್ಲಿ ಸೇವೆಯಿಂದ ನಿವೃತ್ತಿಯಾಗುತ್ತಿದ್ದಾರೆ.
“ಮಾಡುವ ಕೆಲಸವನ್ನು ಮೊದಲು ಪ್ರೀತಿಸಿ. ಬಡಜನರ ಸೇವೆಯೇ ದೇವರ ಸೇವೆ ಎಂದು ಭಾವಿಸಿ. ಶಿಸ್ತು, ಮೇಲಾಧಿಕಾರಿಗಳಿಗೆ ಗೌರವ ಕೊಡುವ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಕರ್ತವ್ಯವನ್ನೇ ಪೂಜೆ ಎಂದು ಭಾವಿಸಬೇಕು. ಅಂದಾಗ ಮಾತ್ರ ಮಾಡುವ ಕೆಲಸದಲ್ಲಿ ನೆಮ್ಮದಿ ಪಡೆಯಲು ಸಾಧ್ಯ ಎನ್ನುತ್ತಾರೆ ಬಾಬು ಬಂಗೇರ.
ಸಹೋದ್ಯೋಗಿ,ಸ್ನೇಹಿತರ ವಲಯದಲ್ಲಿ ಬಂಗೇರೆರ್, ಬಾಬಣ್ಣೆ ಎಂದೆ ಕರೆಯಲ್ಪಡುವ ಇವರ ಸಾಧನೆಯ ಬಗ್ಗೆ ಪತ್ನಿ ಮಕ್ಕಳಿಗೂ ಬಹಳಷ್ಟು ಹೆಮ್ಮೆಯಿದೆ. ಪರಿಶ್ರಮದಿಂದ ಹಳ್ಳಿಯ ಯುವಕನೂ ಏನೇನೆಲ್ಲ ಸಾಧಿಸಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಆ ಮೂಲಕ WhatsApp, FaceBook ಗಳಲ್ಲಿ ಮುಳುಗಿ ಹೋಗುತ್ತಿರುವ ಯುವ ಜನಾಂಗಕ್ಕೆ ಸ್ಪೂರ್ತಿಯಾಗಿದ್ದಾರೆ. ಸಂಘ-ಸಂಸ್ಥೆಗಳು, ಕುಲಾಲ ಸಂಘಟನೆಗಳು ಇವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಅಭಿನಂದಿಸಬೇಕಾಗಿದೆ.
ಬರಹ: ಗಿರೀಶ್ ಕುಲಾಲ್


