ಇತ್ತೀಚೆಗೆ ಮುಕ್ತಾಯಗೊಂಡ ವೀಕ್ ಎಂಡ್ ವಿಥ್ ರಮೇಶ್ ಎಂಬ ಕಿರು ತೆರೆಯ ಕಾರ್ಯಕ್ರಮ ವಿಶಿಷ್ಟ ಕಾರಣಕ್ಕೆ ಜನರಿಗೆ ಹತ್ತಿರವಾಗಿತ್ತು . ಸಮಾಜದಲ್ಲಿನ ದೊಡ್ಡ ವ್ಯಕ್ತಿಗಳು ಬೆಳೆದ ರೀತಿ , ಬದುಕಿನಲ್ಲಿ ಬೆಳೆಯಬೇಕೆನ್ನುವ ಹಂಬಲ ವಿರುವ ವೀಕ್ಷಕರಿಗೆ ಸ್ಪೂರ್ತಿಯ ಸೆಲೆಯಾಗಿ ಕಂಡಿತ್ತು . ಸಾಧನೆಯ ಹಾದಿಯಲ್ಲಿನ ನೆನಪುಗಳನ್ನು ಸಾಧಕರು ತೇವವಾದ ಕಣ್ಣುಗಳಿಂದ ಬಿಚ್ಚಿಡುತ್ತಾ ಹೋಗುತ್ತಿದ್ದರೆ , ಪ್ರೇಕ್ಷಕರ ಕಣ್ಣುಗಳಲ್ಲಿ ನೀರು ಹರಿಯುತಿತ್ತು . ಕೆಂಪು ಕುರ್ಚಿಯಲ್ಲಿ ಕುಳಿತ ಸಾಧಕರು , ಸಿನಿಮಾದವರೇ ಆಗಿರಲಿ ,ರಾಜಕೀಯ ವ್ಯಕಿಗಳೇ ಆಗಿರಲಿ, ಎಲ್ಲರಲ್ಲಿ ಒಂದು ಗುಣ ಸಾಮಾನ್ಯವಾಗಿ ಪ್ರೇಕ್ಷಕರಿಗೆ ಕಂಡಿದ್ದು , ಬಡತನದ ಹಿನ್ನಲೆ , ನಿರಂತರ ಹೋರಾಟ ಮತ್ತು ಸಾಧಿಸಬೇಕು ಎನ್ನುವ ಛಲ . ‘ಕೇಳುವ ಕಿವಿಯಿರಲು ಎಲ್ಲೆಲ್ಲೂ ಸಂಗೀತವೇ’ ಎಂಬಂತೆ ನೋಡುವ ಮನಸಿದ್ದರೆ ಸಾಧಕರು ನಮ್ಮ ನಿಮ್ಮ ನಡುವೆಯೇ, ದಿನವೂ ಸಿಗುತ್ತಾರೆ . ಅದಕೋಸ್ಕರ ಕಿರು ತೆರೆ ಮುಂದೆ ವಾರದ ಕೊನೆಯವರೆಗೂ ಕಾಯಬೇಕಾಗಿಲ್ಲ . ಅದಕ್ಕೆ ಒಂದು ಉತ್ತಮ ಉದಾಹರಣೆ ಡಾ. ಅಣ್ಣಯ್ಯ ಕುಲಾಲರು.
ಭಾರತೀಯ ವೈದ್ಯಸಂಘದಿಂದ ಸಮಾಜಮುಖಿ ವೈದ್ಯ ರಾಷ್ಟ್ರೀಯ ಪ್ರಶಸ್ತಿ (೨೦೧೫-೨೦೧೬) , ಸ್ವಸ್ಥ ಸಿರಿ ರಾಜ್ಯ ಪ್ರಶಸ್ತಿ (೨೦೧೪) , ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೨೦೧೩), ಜಯಂಟ್ಸ್ ಇಂಟರ್ನ್ಯಾಷನಲ್ ಪ್ರಶಸ್ತಿ (೨೦೧೬), ಸಾಧನ ರತ್ನ ಪ್ರಶಸ್ತಿ , ದಕ್ಷಿಣ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಪದ್ಮಶ್ರೀ ರತ್ನಪ್ಪ ಭರಮಪ್ಪ ಕುಂಬಾರ ಪ್ರಶಸ್ತಿ ,ಪ್ರಜಾಪತಿ ಕುಂಭಾರಕ ಯುವ ಪ್ರಶಸ್ತಿ ,ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಪ್ರಶಸ್ತಿ … ಇನ್ನೂ ಮುಂತಾದ ಪ್ರಶಸ್ತಿಗಳು ಹುಡುಕಿಕೊಂಡು ತಲುಪಿದ್ದು ದಕ್ಷಿಣ ಕನ್ನಡ ಜಿಲ್ಲೆಯ , ಉಳ್ತೂರು ಎಂಬ ಸಣ್ಣ ಗ್ರಾಮದಲ್ಲಿ ಹುಟ್ಟಿದ ಕರ್ಮಯೋಗಿ ಡಾ. ಅಣ್ಣಯ್ಯ ಕುಲಾಲರನ್ನು . ಸಣ್ಣ ಕೃಷಿಕ ಕುಟುಂಬದಲ್ಲಿ ಹುಟ್ಟಿದ ಡಾ. ಅಣ್ಣಯ್ಯ ರವರ ಇಲ್ಲಿಯವರೆಗಿನ ಸಾಧನೆಯ ಹಾದಿ ನೋಡಿದರೆ , ಎಸ್ ಎಲ್ ಭೈರಪ್ಪರವರ ಆತ್ಮಕಥೆ ‘ಬಿತ್ತಿ ‘ ಯ ಪುಟಗಳು ಮತ್ತೊಮ್ಮೆ ಕಣ್ಮುಂದೆ ತೆರೆದು ಕೊಳ್ಳುತ್ತಿವೆಯೇನೋ ಎಂದೆನಿಸುತ್ತದೆ . ಹಾದಿಗೆ ಬಿದ್ದ ಕಲ್ಲುಗಳನ್ನು , ತಡೆಗಳು ಎಂದುಕೊಳ್ಳದೆ , ಮೇಲೇರುವ ಮೆಟ್ಟಿಲುಗಳನ್ನಾಗಿ ಪರಿವರ್ತಿಸುವ ಸಾಧಕರ ಗುಣಗಳು ಅವರ ಪ್ರತಿ ಜೀವನದ ಹಂತಗಳಲ್ಲಿ ಕಾಣತೊಡಗುತ್ತವೆ .
ಜಮೀನ್ದಾರರ ಹೊಲಗಳನ್ನು ಉಳುಮೆ ಮಾಡಿ ಬದುಕುತಿದ್ದ ಡಾ . ಅಣ್ಣಯ್ಯ ಕುಲಾಲರ ಕುಟುಂಬಕ್ಕೆ ‘ಉಳುವವನೇ ಒಡೆಯ ‘ ಕಾನೂನು ವರವಾಗದೆ , ಶಾಪವಾಗಿದ್ದು ವಿಪರ್ಯಾಸ . ಮೊದಲೇ ಹೊಸ ಕಾನೂನಿನ ಸುಳಿವು ದೊರೆತ ಜಮೀನಿನ ಒಡೆಯರು, ಹೊಲಗಳು ಉಳುವುವರ ಪಾಲಾಗುವುದನ್ನು ತಪ್ಪಿಸಲು, ಇವರ ಎಲ್ಲ ಭೂಮಿಯನ್ನು ರಾತ್ರೋ ರಾತ್ರಿ ಮರಳಿ ಪಡೆದುಕೊಂಡರು. ಅಣ್ಣಯ್ಯರವರ ಕುಟುಂಬ ದಿನ ಬೆಳಗಾಗುವುದರ ಒಳಗೆ ಬೀದಿಗೆ ಬರುವಂತೆ ಆಯಿತು . ಆಗ ಐದನೇ ತರಗತಿ ಓದುತ್ತಿದ್ದ ಅಣ್ಣಯ್ಯ ರವರು , ಶಾಲೆ ಬಿಟ್ಟು ತಮ್ಮ ಅಣ್ಣದಿಂದರ ಜೊತೆ ಬೆಂಗಳೂರಿನ ಹೋಟೆಲಿನ ಕೆಲಸಕ್ಕೆ ಹೋಗದೆ ಬೇರೆ ವಿಧಿಯಿರಲಿಲ್ಲ .
ಶಾಲೆಯ ಚುರುಕು ಹುಡುಗ , ಓದುವುದನ್ನು ಬಿಟ್ಟು , ಹೋಟೆಲ್ ನಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡಲಾಗದ ಮಳ್ಯಾಡಿ ಮುತ್ತಯ್ಯ ಶೆಟ್ಟಿ ಎಂಬ ಮುಖ್ಯೋಪಾಧ್ಯಾಯರು , ಅಣ್ಣಯ್ಯರವರನ್ನು ಮರಳಿ ಶಾಲೆಗೆ ಸೇರಿಸುವುದಕ್ಕೆ ಕರೆತಂದರು . ಉಳಿದುಕೊಳ್ಳುವುದಕ್ಕೆ ಬಿ ಎಮ್ ಸಿ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಸಲ್ಲಿಸಿದಾಗ ನಿಯಮಾವಳಿಗಳ ತೊಂದರೆ ಎದುರಾಯಿತು. ಕೊನೆಗೆ ಊರಿನವರ ಸಹಾಯದಿಂದ ಅನಾಥ ವಿದ್ಯಾರ್ಥಿ ಕೋಟಾದಡಿ ಸ್ಥಳ ದೊರಕಿಸಿಕೊಂಡು ಪ್ರೌಢ ಶಿಕ್ಷಣವನ್ನು ಮುಗಿಸಿದರು . ಪಿ ಯು ಸಿ ಯಲ್ಲಿ ಅತ್ಯುತ್ತಮ ಅಂಕ ದೊರೆತರೂ ವೈದ್ಯಕೀಯ ಶಿಕ್ಷಣ ಸೇರಲು ಹಂಬಲವಿದ್ದರೂ ಸಿಇ ಟಿ ಪ್ರವೇಶ ಪರೀಕ್ಷೆ ಬರೆಯುವುದಕ್ಕೆ ಹಣ ಹೊಂದಿಸುವುದಕ್ಕೆ ಆಗಲಿಲ್ಲ . ಸರಿ , ಪಾಲಿಗೆ ಬಂದುದು ಪಂಚಾಮೃತ ಎಂದುಕೊಂಡು ಬಿಎಸ್ಸಿ ಪದವಿ ಪಡೆದುಕೊಂಡರು . ಜೊತೆ ಜೊತೆ ಕೆಲಸವನ್ನು ಮಾಡಿಕೊಂಡು , ಪದವಿ ಗಳಿಸುವುದು ಸಾಮಾನ್ಯ ವಿಷಯವೇನು ಆಗಿರಲಿಲ್ಲ .ಈ ಕೆಲಸ ಸಣ್ಣದು, ಆ ಕೆಲಸ ದೊಡ್ಡದು ಎಂದು ಭೇದ ತೋರದೆ , ಪೋಸ್ಟ್ ಮ್ಯಾನ್ ಗಳ ಕೆಲಸವನ್ನು ಕೂಡ ಮಾಡಿದ್ದೂ ಇತ್ತು . ಇನ್ನೇನು ಮುಂಬೈನಲ್ಲಿ ಎಲ್ ಅಂಡ್ ಟಿ ಕಂಪನಿಯ ಕೆಲಸವನ್ನು ಸೇರಬೇಕು ಎಂದುಕೊಳ್ಳುತ್ತಿರುವಾಗ , ತಾನೊಂದು ಬಗೆದರೆ , ದೈವ ವೊಂದು ಬಗೆಯಿತು ಎಂಬಂತೆ , ಹಣಕಾಸಿನ ಮುಗ್ಗಟ್ಟಿನಿಂದ ಬಾಗಿಲು ಮುಚ್ಚಿದ್ದ ವೈದ್ಯಕೀಯ ಪ್ರವೇಶ, ಬಿಎಸ್ಸ್ಸಿ ಕೋಟಾದಡಿ ತೆರೆಯುವುದರೊಂದಿಗೆ ಎಂ ಬಿ ಬಿ ಎಸ್ ಗೆ ಪ್ರವೇಶ ದೊರೆಯಿತು . ಧರ್ಮಸ್ಥಳ , ಜಿಂದಾಲ್ ,ಬಂಟ್ ಸಂಘ ,ಕುಲಾಲ್ ಕುಂಬಾರ ಸಂಘ ಇನ್ನು ಮುಂತಾದ ವಿದ್ಯಾರ್ಥಿ ವೇತನಗಳು ಕಾಲ ಕಾಲಕ್ಕೆ ದೊರಕಿ ಮನಸ್ಸನ್ನು ಓದಿನ ಕಡೆ ಕೇಂದ್ರೀಕರಿಸುವಲ್ಲಿ ಡಾ. ಅಣ್ಣಯ್ಯ ಕುಲಾಲರಿಗೆ ಸಹಾಯ ಮಾಡಿದವು .
ತಮ್ಮಗೊಂದು ನೆಲೆ ಕಂಡುಕೊಂಡು , ವೈಯಕ್ತಿಕ ಅವಶ್ಯಕತೆಗಳು ಈಡೇರಿದ ಮೇಲೆ, ಹೆಚ್ಚಿನ ತೃಪ್ತ ಜನರು ಸುಮ್ಮನಾಗಿ ಬಿಡುತ್ತಾರೆ . ಆದರೆ ‘ಕೆರೆಯ ನೀರನು ಕೆರೆಗೆ ಚೆಲ್ಲಿ ‘ ಎನ್ನುವ ಮಾತಿನಂತೆ , ಸಮಾಜದ ಋಣ ತೀರಿಸಲು ಡಾ. ಅಣ್ಣಯ್ಯ ಕುಲಾಲ್ ಮನ ತುಡಿಯುತ್ತಿತ್ತು ಎಂದು ಕಾಣುತ್ತದೆ . ವೈದ್ಯಕೀಯ ಶಿಕ್ಷಣ ಮುಗಿಸಿ ವಿವಿಧ ಆಸ್ಪತ್ರೆಗಳಲ್ಲಿ ಜನರ ಸೇವೆ ಸಲ್ಲಿಸಿದ ಮೇಲೆ , ತಮ್ಮದೇ ಕುಲಾಲ್ ಹೆಲ್ತ್ ಸೆಂಟರ್ ತೆರೆದು ಜನರ ಅರೋಗ್ಯ ಸುಧಾರಣೆ ಮಾಡಲು ತೊಡಗಿದರು . ಈ ಆಸ್ಪತ್ರೆಯ ಮೂಲಕ , ಇದುವರೆಗೆ ಸಾವಿರಾರು ಬಡ ರೋಗಿಗಳಿಗೆ ದಾನಿಗಳ ಮೂಲಕ ಉಚಿತ ಚಿಕಿತ್ಸೆ ನೀಡುವಲ್ಲಿ ನೆರವಾಗಿದ್ದಾರೆ . ಲೆಕ್ಕವಿಲ್ಲದಷ್ಟು ಅರೋಗ್ಯ ಶಿಬಿರಗಳನ್ನು ನೆಡೆಸಿದ್ದಾರೆ . ಆದರೆ ಚಿಕಿತ್ಸೆಯಲ್ಲಿ ಕೆಲವೇ ಜನರಿಗೆ ಮಾತ್ರ ಸಹಾಯ ಮಾಡಲು ಸಾಧ್ಯವಿದ್ದುದರಿಂದ , ತಮ್ಮ ಸೇವಾ ವ್ಯಾಪ್ತಿ ವಿಸ್ತರಿಸಲು ಡಾ . ಅಣ್ಣಯ್ಯ ಕುಲಾಲರ ಮನ ಹಾತೊರೆಯುತ್ತಿತ್ತು . ಅದಕೋಸ್ಕರ ತಮ್ಮ ತಂದೆಯವರ ಹೆಸರಿನಲ್ಲಿ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನ (ರಿ ) ಎಂಬ ಸಂಸ್ಥೆಯ ಮೂಲಕ ಅರೋಗ್ಯ , ಶಿಕ್ಷಣ , ಸಾಂಸ್ಕೃತಿಕ , ಸಾಮಾಜಿಕ ಪರಿವರ್ತನೆಗೆ ಮುನ್ನುಡಿ ಬರೆದರು . ಸರ್ವಜ್ಞ ವಿದ್ಯಾ ಪೀಠ , ಡಾಕ್ಟರ್ ಟುಟೋರಿಯಲ್ ಗಳು ಕೂಡ ಇವರ ಕೊಡುಗೆಗಳೇ .
ನಂತರ , ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ , ಡಾ ಅಣ್ಣಯ್ಯ ಕುಲಾಲ್ ರವರು ಸಂಘಟನೆ , ಹೋರಾಟ, ಸಂಪನ್ಮೂಲ , ಬರಹ, ಭಾಷಣ ಗಳ ಮೂಲಕ ಸಮಾಜದ ಎಲ್ಲ ವರ್ಗದ ಜನರಿರನ್ನು ತಲುಪಲು ಪ್ರಯತ್ನ ಮಾಡಿದ್ದಾರೆ . ಕನ್ನಡ ಪರ ಚಳುವಳಿ , ಪರಿಸರ ಚಳುವಳಿ , ನೇತ್ರಾವತಿ ನದಿ ಉಳಿಸಿ ಹೋರಾಟ ,ರೈಲ್ವೆ- ರಸ್ತೆ ಹೋರಾಟ ಸಮಿತಿ , ಕುಂಬಾರ ಸಮುದಾಯ ಹೋರಾಟಗಳು ,ಯುವಕ ಮಂಡಲ , ಧಾರ್ಮಿಕ ಜಾಗೃತ ಸಮಿತಿ , ರಕ್ತ ದಾನ ಶಿಬಿರಗಳು , ಉಚಿತ ಅರೋಗ್ಯ ಶಿಬಿರಗಳು ಮತ್ತು ಇನ್ನೂ ಮುಂತಾದ ಸಮಾಜಮುಖಿ ಚಟುವಟಿಕೆಗಳಲ್ಲಿ ಡಾ. ಅಣ್ಣಯ್ಯ ರವರು ಸದಾ ಸಕ್ರಿಯರಾಗಿ ಕೆಲಸ ಮಾಡಿದ್ದಾರೆ . ಪತ್ರಿಕೆಗಳಲ್ಲಿ ಇವರ ಲೇಖನಗಳು , ಕಿರು ತೆರೆಯ ಚರ್ಚಾ ಕಾರ್ಯಕ್ರಮಗಳು , ರೇಡಿಯೋ , ಎಫ್ ಎಮ್ ಗಳ ಕಾರ್ಯಕ್ರಮಳು ಬಹಳ ಜನಪ್ರಿಯ .
ಪ್ರಸ್ತುತ ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯ ವೈದ್ಯಾಧಿಕಾರಿ -ಪ್ರಾಧ್ಯಾಪಕ, ಮಾಹಿತಿ , ಸಂಪರ್ಕ, ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುವುದರ ಜೊತೆಗೆ , ಭಾರತೀಯ ವೈದ್ಯ ಸಂಘದ ರಾಷ್ಟೀಯ ಆಯೋಗದ ಸ್ಥಾಯಿ ಸಂಸ್ಥೆ ಸದಸ್ಯ , ಕರಾವಳಿಯ ಕುಟುಂಬ ವೈದ್ಯರ ಸಂಘ ,ಭಾರತೀಯ ವೈದ್ಯಕೀಯ ಸಂಘ ದ ಕರಾವಳಿ ಜಿಲ್ಲೆಗಳ ಸಂಚಾಲಕ.. ಹೀಗೆ ಗುರುತರ ಜವಾಬ್ದಾರಿಗಳನ್ನು ವಹಿಸಿಕೊಂಡು ದಿನಕ್ಕೆ ೧೬ ಗಂಟೆಗಳಿಗಿಂತಲೂ ಹೆಚ್ಚಿನ ಸಮಯವನ್ನು ಜನ ಸೇವೆಯಲ್ಲಿ ಕಳೆಯುತ್ತಿದ್ದಾರೆ.
ಜ್ಞಾನೋದಯದ ನಂತರ , ಜನರನ್ನು ತನ್ನೊಡನೆ ಕರೆದೊಯ್ಯಲು ಮರಳಿ ಬಂದ ಬುದ್ಧನಂತೆ , ತಮ್ಮದೇ ಕುಂಬಾರ ಜನಾಂಗದ ಕುಲಭಾಂಧವರನ್ನು ಸಂಘಟಿಸಿ , ಆಭಿವೃದ್ಧಿ ಪಥ ದತ್ತ ಕೊಂಡೈಯುವುದರಲ್ಲಿ ಡಾ ಅಣ್ಣಯ್ಯ ಕುಲಾಲ್ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ . ಕರ್ನಾಟಕ ರಾಜ್ಯ ಕುಂಬಾರ ಮಹಾಸಂಘ ದ ಕಾರ್ಯಾಧ್ಯಕ್ಷ , ಕರಾವಳಿ ಕುಲಾಲ್ ಕುಂಬಾರ ಯುವ ವೇದಿಕೆಯ ಸ್ಥಾಪಕ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳುವುದರ ಮೂಲಕ , ಹಿಂದುಳಿದ ವರ್ಗಗಳ ಹಿತಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ .
ಕಷ್ಟ ಕಾರ್ಪಣ್ಯಗಳು ಮತ್ತು ಬಿಡುವಿಲ್ಲದ ಕೆಲಸಗಳ ನಡುವೆ ಡಾ ಅಣ್ಣಯ್ಯ ಕುಲಾಲ್ ವರು ಕನ್ನಡ ಪ್ರೀತಿ, ಸಾಹಿತ್ಯ ಪ್ರೇಮ ವನ್ನು ಮಕ್ಕಳಂತೆ ಉಳಿಸಿ ಬೆಳೆಸಿ ಕೊಂಡಿರುವುದು ಸೋಜಿಗವೆ ಸರಿ . ಸಾಹಿತ್ಯ ರಚನೆ ನೋವುಂಡ ಜೀವಗಳಿಗೆ ಕಷ್ಟವಾಗುವುದಿಲ್ಲ . ಶಾಲೆ ಮತ್ತು ಕಾಲೇಜು ದಿನಗಳಲ್ಲಿ ‘ಕನ್ಯಾ’ ‘ಸುಷುಪ್ತಿ ‘ ಮನು ‘ ಎಂಬ ಕಾವ್ಯ ನಾಮದಲ್ಲಿ ಕವನಗಳನ್ನು ಬರೆಯುತ್ತಿದ್ದ ಡಾ ಕುಲಾಲರು , ಪ್ರಸಿದ್ಧ ಬರಹಗಾರ ಕುಂಬಾರ ವೀರಭದ್ರಪ್ಪ ಬರೆದಿರುವ ಮುನ್ನುಡಿಯೊಂದಿಗೆ ‘ಚುಚ್ಚು ಮದ್ದು’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ . ‘ ಕಾಯಿಲೆಗಳು ಮನೆ ಮಾತು , ವೈದ್ಯರುಗಳ ಕಿವಿಮಾತು ‘ ಪುಸ್ತಕದ ಮೂಲಕ ಪ್ರಸಿದ್ಧ ವೈದ್ಯರ ಲೇಖನಗಳನ್ನು ಸಂಗ್ರಹಿಸಿ, ಕನ್ನಡಕ್ಕೆ ಅನುವಾಧಿಸಿ ಜನ ಜಾಗೃತಿ ಮೂಡಿಸಲು ಪ್ರಯತಿಸಿದ್ದಾರೆ . ‘ಮದ್ದಲ್ಲ ಕಷಾಯ ‘ ಪುಸ್ತಕ ಕೊಡ ಇವರ ಕೊಡುಗೆ . ಸರ್ವಜ್ಞನ ಬಗ್ಗೆ ವಿಶೇಷ ಆಸ್ಥೆ ಹೊಂದಿರುವ ಅಣ್ಣಯ್ಯರವರು ‘ ಸರ್ವಜ್ಞನ ಸುತ್ತ ಮುತ್ತ’ ಎಂಬ ಕನ್ನಡ ಪುಸ್ತಕ ಮತ್ತು ‘sarvajna promises’ ಎಂಬ ಆಂಗ್ಲ ಪುಸ್ತಕಗಳು ಬಿಡುಗಡೆಯ ಹೊಸ್ತಿಲಲ್ಲಿವೆ . ಬಿಡುಗಡೆಗೆ ಕಾದಿರುವ ಡಾ . ಅಣ್ಣಯ್ಯ ಕುಲಾಲ್ ರವರ ಆತ್ಮ ಕಥೆ ‘ಮಣ್ಣಿನಿಂದ ಮನ್ನಣೆಯತ್ತ ‘ ಮತ್ತೊಂದು ‘ಬಿತ್ತಿ’ಯಂತೆ ಯುವಕರಿಗೆ ಸ್ಪೂರ್ತಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ .ಇವರ ಸುಮಾರು ಮುನ್ನೂರಕ್ಕಿಂತಲೂ ಹೆಚ್ಚು ಲೇಖನಗಳು ಕನ್ನಡದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ . ತಮ್ಮ ಸಾಹಿತ್ಯ ಕೃಷಿ ಮಾತ್ರವಲ್ಲದೆ , ಒಟ್ಟಾರೆ ಕನ್ನಡ ಬೆಳವಣಿಗೆ ನೆರವಾಗಲು ಮತ್ತು ಕನ್ನಡ ಪರ ಹೋರಾಟಗಳಿಗೆ, ‘ಕನ್ನಡ ಕಟ್ಟೆ ‘ಮತ್ತು ‘ಕರವೇ ಕರಾವಳಿ’ ಎಂಬ ಸಂಘಗಳನ್ನು ಕಟ್ಟಿ ಬೆಳೆಸಿದ್ದಾರೆ .
ವೈದ್ಯ , ಉತ್ತಮ ವಾಗ್ಮಿ, ಜ್ಞಾನಿ , ಸಹೃದಯಿ , ಸಾಹಿತಿ , ಸಮಾಜಮುಖಿ ಮತ್ತು ಇನ್ನು ಮುಂತಾದ ಗುಣಗಳನ್ನು ಮೈಗೂಡಿಸಿ ಕೊಂಡಿವರುವವರು ಸಹಜವಾಗಿ ರಾಜಕೀಯ ಮುಖಂಡರಾಗಲು ಅರ್ಹತೆ ಗಳಿಸಿಕೊಳ್ಳುತ್ತಾರೆ . ಈ ನಿಟ್ಟಿನಲ್ಲಿ ಬಿಜೆಪಿ ಪಕ್ಷ ಡಾ ಅಣ್ಣಯ್ಯ ಕುಲಾಲ್ ರವರನ್ನು ತನ್ನೆಡೆ ಸೆಳೆದುಕೊಳ್ಳಲು ಯಶಸ್ವಿಯಾಗಿದೆ .ಕರ್ನಾಟಕ ರಾಜ್ಯ ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಕ್ಕೆ ಡಾ. ಅಣ್ಣಯ್ಯ ಕುಲಾಲ್ ರವನ್ನು ಸಹ ಸಂಚಾಲಕರನ್ನಾಗಿ ನೇಮಿಸಿ ಪಕ್ಷ ಮತ್ತು ಸರ್ಕಾರದ ಕಾರ್ಯಕ್ರಮಗಳ ಜಾರಿಯ ಜವಾಬ್ದಾರಿಗಳನ್ನು ವಹಿಸಿ ಕೊಟ್ಟಿದೆ . ಡಾ. ಅಣ್ಣಯ್ಯ ನಂತವರು ಸಹ ಸಂಚಾಲಕ ಹುದ್ದೆ ವಹಿಸಿಕೊಂಡ ನಂತರ ಹುದ್ದೆಯ ಗೌರವ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು . ‘ಒಳ್ಳೆ ಆಳಾದವ , ಒಳ್ಳೆ ಅರಸಾಗುವ’ ಎಂಬ ಮಾತಿದೆ . ಎಲ್ಲ ಸ್ತರದ ಕಷ್ಟ ಕಾರ್ಪಣ್ಯ ಗಳನ್ನು ಅನುಭವಿಸಿ ಬೆಳೆದ ಡಾ .ಅಣ್ಣಯ್ಯ ಕುಲಾಲರ ಪ್ರತಿಭೆ ಮತ್ತು ಬದ್ಧತೆ ಗುರುತಿಸಿರುವ ಭಾರತೀಯ ಜನತಾ ಪಾರ್ಟಿ , ಮುಂದೆ ಇವರನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟ ನಾಯಕತ್ವಕ್ಕೆ ಕರೆದೊಯ್ಯುವ ಲಕ್ಷಣಗಳು ದಟ್ಟವಾಗುತ್ತಿವೆ .
ದೇವಸ್ಥಾನದ ಮೆಟ್ಟಿಲಿನ ಕಲ್ಲಿಗೂ ಗರ್ಭ ಗುಡಿಯ ಮೂರ್ತಿಯ ಕಲ್ಲಿಗೂ ಹೆಚ್ಚಿನ ವ್ಯತ್ಯಾಸವಿಲ್ಲ . ಉಳಿಯ ಏಟಿಗೆ ತನ್ನನ್ನು ತಾನು ಒಡ್ಡಿಕೊಂಡ ಕಾರಣ , ಅದೇ ಕಲ್ಲು ಮೂರ್ತಿಯಾಗಿ, ಗರ್ಭ ಗುಡಿ ಸೇರಿ , ನಂತರ ಪೂಜೆಗೆ ಅರ್ಹವಾಗುತ್ತದೆ . ಉಳಿಯ ಏಟಿಗೆ ತೆರೆದುಕೊಳ್ಳದ ಅದೇ ಕಲ್ಲು ಹೊರಗೆ ಮೆಟ್ಟಿಲಾಗಿ ಕಾಲಿನಡಿ ಸೇವೆಯುತ್ತದೆ. ಹಾಗೆ ಜೀವನದ ಅನುಭವ , ಸವಾಲು , ಮತ್ತು ಅವಕಾಶಗಳನ್ನು ಧನಾತ್ಮಕ ದೃಷ್ಟಿಯಿಂದ ಎದುರಿಸಿದ ಅಣ್ಣಯ್ಯ ಕುಲಾಲ್ ಎಂಬ ಹುಡುಗ ಇಂದು ಸಮಾಜ ಮುಖಿ ವೈದ್ಯ ಮತ್ತು ಸಮಾಜ ಸೇವಕ ರಾಗಿ ಗೌರವ ಗಳಿಸಿಕೊಂಡಿದ್ದಾರೆ . ಹಲವಾರು ಹುದ್ದೆ ಮತ್ತು ಪ್ರಶಸ್ತಿಗಳ ಗೌರವ ಹೆಚ್ಚಿಸಿದ್ದಾರೆ . ರಾಜಕೀಯ ದಲ್ಲಿ ಇಂತವರ ಸಂತತಿ ಸಾವಿರವಾದರೆ , ದೇಶದ ಅಭಿರುದ್ದಿಗೆ ಸಾವಿರ ವರುಷ ಕಾಯಬೇಕಿಲ್ಲ .
ಬರಹ : ಡಾ. ದಯಾನಂದ ಲಿಂಗೇಗೌಡ
ರೇಡಿಯೊಲೊಜಿಸ್ಟ್ ಹಾಗು ಅಂಕಣಕಾರರು,
ಟಾಟಾ ಆಸ್ಪತ್ರೆ ಕಲ್ಕೊತ್ತಾ.