ಕಾರ್ಕಳ (ಕುಲಾಲ ವರ್ಲ್ಡ್ ಡಾಟ್ ಕಾಮ್): ಬಿಚ್ಚಿದಷ್ಟು ಮತ್ತೆ ಕಟ್ಟುವ ಸಾಂಘಿಕ ಪ್ರಯತ್ನವೇ ಸಂಘಟನೆಯ ಯಶಸ್ಸಿನ ಮೂಲಸೂತ್ರವೆನ್ನುವ ತತ್ವದಲ್ಲಿ, ಈ ನೆಲದ ನಾಗರೀಕತೆಯ ಮೂಲವಾದ ಕುಂಬಾರಿಕೆಯನ್ನು ಜೀವನಾಧಾರದ ವೃತ್ತಿಯಾಗಿಸಿ, ಸಾಮಾಜಿಕವಾಗಿ ಆರ್ಥಿಕವಾಗಿ ತೀರಾ ಹಿಂದುಳಿದ ಅವಕಾಶವಂಚಿತ ಸ್ವಸಮಾಜ ಬಾಂಧವರ ಅಭ್ಯುದಯಕ್ಕೆ ಕಂಕಣ ಬದ್ದರಾಗಿ, ನಾಡಿನ ಮೂಲೆ ಮೂಲೆಯಲ್ಲಿ ಹರಿದು ಹಂಚಿಹೋಗಿರುವ ಸಮುದಾಯ ಬಾಂಧವರನ್ನು ಒಂದೇ ಸೂರಿನಡಿ ಒಗ್ಗೂಡಿಸಿ, ಪ್ರತಿ ಮನೆ ಮನಗಳಿಗೂ ನವ ನಾಗರೀಕತೆಯೆಡೆ ಸಾಗುವ ಸತ್ ಚಿಂತನೆಗಳ ಬೀಜ ಬಿತ್ತಿಕೊಂಡು, ಸಂಘಟನಾತ್ಮಕ ಧ್ವನಿಯಾಗಿಸುವ ಭಗೀರಥ ಯತ್ನದಲ್ಲಿ ಕಾರ್ಕಳ ತಾಲ್ಲೂಕಿನಾದ್ಯಂತ ಹಿಂದುಳಿದ ಪ್ರದೇಶಗಳ ಕುಂಬಾರ ಜನಾಂಗದ ಅಭಿವೃದ್ಧಿಯ ಧ್ಯೇಯದೊಂದಿಗೆ, ಸಾಂಘಿಕವಾಗಿ ಹೆಜ್ಜೆಯೂರಿದ ದೂರದರ್ಶಿತ್ವದ ಸಾಧಕ, ಕುಂಬಾರ ಸಮುದಾಯದ ಒಗಟ್ಟಿನ ಧ್ಯೋತಕವಾಗಿ, ಕುಲಾಲ ಬಾಂಧವರ ಭವಿಷ್ಯದ ಆಶಾಕಿರಣವಾಗಿ, ಸಮುದಾಯದ ಅಸ್ಮಿತೆಯಾಗಿ ಮೂಡಿದ ಕಾರ್ಕಳ ತಾಲ್ಲೂಕು ಕುಲಾಲ ಸುಧಾರಕ ಸಂಘದ ಜನಕ. ಸ್ವಸಮಾಜ ಸೇವಾ ಕೈಂಕರ್ಯಕ್ಕೆ ಹೃನ್ಮನಪೂರ್ವಕವಾಗಿ ಶ್ರಮಿಸುತ್ತಾ ಸಾಧನೆಯ ಯಶಸ್ಸಿನಂಗಳದಲ್ಲಿ ಹೊನ್ನ ಕಲಶದಂತೆ ಯುವ ಪೀಳಿಗೆಯ ಚಿತ್ತಂಗಳದಿ ಚಿರಸ್ಥಾಯಿಯಾಗುವಂತೆ ಸಾರ್ಥಕ್ಯ ಜೀವನದ ಶಾಶ್ವತ ಮೈಲುಗಲ್ಲೊಂದನ್ನು ಊರಿ ಇಹಕಾಯ ತೊರೆದ ಅಮರ ಚೇತನ ದಿ! ಯು. ಸಿ. ಮೂಲ್ಯರ ದಿವ್ಯಾತ್ಮಕ್ಕೆ ಶಿರ ಸಾಷ್ಟಾಂಗ ನಮನಗೈಯುತ್ತಾ ಕುಲಾಲ ಚಾವಡಿ ವಾಟ್ಸಪ್ ಬಳಗದ “ಪುಸ್ತಕ ಜೋಳಿಗೆ ಬಾಳಿನ ದೀವಿಗೆ” ಪಠ್ಯ ಪರಿಕರದ ಕಿಟ್ ವಿತರಣೆಯ ಭವ್ಯ ವೇದಿಕೆಯಲ್ಲಿ ನಡೆಯಲಿರುವ ದಿ! ಯು. ಸಿ. ಮೂಲ್ಯರ ಸಂಸ್ಮರಣಾ ಕಾರ್ಯಕ್ರಮದ ನಿಮಿತ್ತ ಬರೆದ ಪರಿಚಯ ಲೇಖನ.
ಪುತ್ತೂರು ತಾಲೂಕಿನ ಪಾಣಾಜೆ ಸಮೀಪದ ಉಡ್ಡಂಗಳದಲ್ಲಿ 1935 ರಲ್ಲಿ ಈ ಜಗದ ಬೆಳಕನ್ನು ಕಂಡವರು ಚೆನ್ನಪ್ಪ ಮೂಲ್ಯರು. ಕಡು ಕಷ್ಟದ ಆ ಕಾಲದಲ್ಲಿ ಮಣ್ಣನ್ನು ಮಥಿಸಿ ಸೃಜಿಸುವ ಕುಂಭ ಕಾಯಕ ಕುಂಬಾರಿಕೆಯೇ ಜೀವನಾಧಾರವಾಗಿದ್ದ ಕಾಲ.
ವಿದ್ಯೆ ಮತ್ತು ದುಡಿಮೆಯನ್ನು ಸಮಾನಾಂತರದಲ್ಲಿ ಸರಿದೂಗಿಸಿಕೊಂಡು ಪಾಣಾಜೆ ಮತ್ತು ಪುತ್ತೂರಿನಲ್ಲಿ ಪ್ರಾಥಮಿಕ ಪ್ರೌಢ ಶಿಕ್ಷಣ ಮುಗಿಸಿ ತಾಂತ್ರಿಕ ಡಿಪ್ಲೊಮಾ ವನ್ನು ಸಿವಿಲ್ ಇಂಜಿನಿಯರಿಂಗ್ ನಲ್ಲಿ ಕರ್ನಾಟಕ ಪಾಲಿಟೆಕ್ನಿಕ್ ಮಂಗಳೂರು ಇಲ್ಲಿ 1959 ರಲ್ಲಿ ಪಡೆದರು.
ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯಲ್ಲಿ ಉದ್ಯೋಗ ದೊರಕಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನಲ್ಲಿ ವೃತ್ತಿ ಜೀವನ ಆರಂಭಿಸಿದರು. ವರ್ಗಾವಣೆ ಎನ್ನುವ ಅಲೆಮಾರಿ ಬದುಕು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ (ಬೈಂದೂರು, ಕುಂದಾಪುರ, ಬಾರಕೂರು, ಬೆಳ್ತಂಗಡಿ, ಕಾರ್ಕಳ, ಬಂಟ್ವಾಳ, ವಿಠ್ಠಲ , ಸುಳ್ಯ ) ಮುಂತಾದ ಭಾಗಗಳಲ್ಲಿ ಇಂಜಿನಿಯರಾಗಿ ಕರ್ತವ್ಯ ನಿರ್ವಹಿಸುವ ಸೌಭಾಗ್ಯ ಕರುಣಿಸಿತು. ಈ ಸಂದರ್ಭದಲ್ಲಿ ಸಮುದಾಯದ ಗಣ್ಯರ ಸಂಪರ್ಕ ಮತ್ತು ಉತ್ಸಾಹಿ ತರುಣರ ಒಡನಾಟ ಸಮುದಾಯ ಸಂಘಟನೆಗೆ ಸ್ಪೂರ್ತಿ ನೀಡಿತು.
ಶಾಪವನ್ನೇ ವರವಾಗಿಸಿ ಕೊಂಡ ತ್ರಿಲೋಕ ಸಂಚಾರಿ ನಾರದರಂತೆ, ಅಲೆಮಾರಿ ಬದುಕು ದೇಶ ಸುತ್ತಿ ಕೋಶ ಓದಿದಂತೆ ಮಸ್ತಕಕ್ಕೆ ಜ್ಞಾನಾನುಭವದ ಸಾರ ತುಂಬಿತು. ಇದು ವೃತ್ತಿ ಮತ್ತು ಪ್ರವೃತ್ತಿ ಎರಡರಲ್ಲೂ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ ಕೊಳ್ಳಲು ಅನುಕೂಲವಾಯಿತು. 1995 ರಲ್ಲಿ ನಿವೃತ್ತಿ ಎನ್ನುವ ಕೀಲಿ ಕೈ ಕರ್ತವ್ಯದ ಸಂಕೋಲೆ ಕಳಚಿ ಬಂಧ ಮುಕ್ತಗೊಳಿಸಿತು. ಬದುಕಿಗೆ ಆಧಾರವಾಗಿ ಸಮಾಜದಲ್ಲಿ ಸ್ಥಾನಮಾನ ಕಲ್ಪಿಸಿದ ಕಾಯಕದ ಮೇಲೆ ಅಪಾರ ಗೌರವ ಹೊಂದಿದ್ದ ಶ್ರೀಯುತರು ನಿವೃತ್ತಿಯ ನಂತರ ಸಮುದಾಯದ ಸಂಘಟನೆಯಲ್ಲಿ ತಮ್ಮನ್ನು ಪರಿಣಾಮಕಾರಿಯಾಗಿ ತೊಡಗಿಸಿ ಕೊಂಡರು.
ಸಾಮಾಜಿಕ ಬದ್ಧತೆ ಮತ್ತು ಸಮುದಾಯದ ಮೇಲಿನ ಅಪಾರ ಕಾಳಜಿ ಹೊಂದಿದ್ದ ಶ್ರೀಯುತರು ತಮ್ಮ ವೃತ್ತಿ ಜೀವನದ ಅವಧಿಯಲ್ಲಿ ಅವಿಭಜಿತ ದ.ಕ ಜಿಲ್ಲೆ, ಬೆಂಗಳೂರು, ಮುಂಬೈ ಸಂಘದೊಂದಿಗೆ ಸಂಪರ್ಕ ಇಟ್ಟುಕೊಂಡು ಸಂಘದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಧನ ಸಹಾಯ ಮಾಡುವ ಮೂಲಕ ಸಂಘದ ಅಭ್ಯುದಯಕ್ಕೆ ತಮ್ಮದಾದ ಅಳಿಲು ಸೇವೆ ಸಲ್ಲಿಸುತ್ತಿದ್ದರು.
ಕಾರ್ಕಳದಲ್ಲೊಂದು ಸಧೃಡ ಸಮುದಾಯ ಸಂಘಟನೆ ಆಗಬೇಕು ಎನ್ನುವ ಯು. ಸಿ. ಮೂಲ್ಯರ ಮನದಾಳದ ಅಧಮ್ಯ ಕನಸಿನ ಚಿಗುರೊಂದು ಬಲಿತು, ವಟ ವೃಕ್ಷವಾಗಿ ಟಿಸಿಲೊಡೆಯುವ ಪರಿಪಕ್ವ ಕಾಲ ಸನ್ನಿಹಿತ ಆಗುತ್ತಿದ್ದಂತೆ, ಸಮುದಾಯದ ಹಿರಿ ಕಿರಿಯರನ್ನು ಒಗ್ಗೂಡಿಸಿ ಚರ್ಚಿಸಿ ಒಂದು ಸ್ಪಷ್ಟ ರೂಪು ರೇಷೆಗೆ ಅಂತಿಮ ಸ್ಪರ್ಷ ನೀಡಿದರು. “ಶುಭಶ್ಯ ಶೀಘ್ರಂ” ಅನ್ನುವಂತೆ ತ್ವರಿತ ಕಾರ್ಯದ ಸಂಬಂಧ ತಮ್ಮ ಮನೆಯಲ್ಲಿ ಮತ್ತು ಸಂಘದ ತಾತ್ಕಾಲಿಕ ಕಛೇರಿಯಲ್ಲಿ ಹತ್ತಾರು ಸಮಾಲೋಚನೆ ಸಭೆ ಕರೆದು ಚಿಂತನ ಮಂಥನ ನಡೆಸಿ ಕಟ್ಟ ಕಡೆಗೆ ದಿಟ್ಟ ನಿಲುವಿನಿಂದ ಸರ್ವರ ಸಹಮತದ ಸಹಕಾರದಿಂದ 1996 ರಲ್ಲಿ ಕಾರ್ಕಳ ಕುಲಾಲ ಸಂಘವನ್ನು ಸ್ಥಾಪಿಸಿದರು. ತೊಂಬತ್ತರ ದಶಕದ ಕಡು ಬಡತನದ ದಿನಮಾನದಲ್ಲಿ ದುಡಿಮೆಯನ್ನೇ ಆಧಾರವಾಗಿ ಇಟ್ಟುಕೊಂಡ ಕುಂಬಾರ ಸಮುದಾಯಕ್ಕೆ ಸಂಘಟನೆ ವಿಚಾರ ಅಸ್ಥೆಯ ಸಂಗತಿಯೇ ಆಗಿರಲಿಲ್ಲ. ಸಮಾಜದ ವಿವಿಧ ಸಮುದಾಯಗಳಲ್ಲಿ ಹಲವಾರು ಉತ್ಸಾಹಿ ತರುಣರ ಇಂತಹ ಪ್ರಯತ್ನಗಳು ಹಳ್ಳ ಹಿಡಿದ ಉದಾಹರಣೆಗಳೇ ಹೆಚ್ಚಿದ್ದ ಕಾಲದಲ್ಲಿ ಯು ಸಿ ಮೂಲ್ಯರ ನಿಸ್ವಾರ್ಥ ಮನಸ್ಸಿನ ಪ್ರಾಮಾಣಿಕ ಪ್ರಯತ್ನವನ್ನು ಕುಲಾಲ ಸಮಾಜ ಮುಕ್ತ ಮನಸ್ಸಿನಿಂದ ಒಪ್ಪಿ ಅಪ್ಪಿಕೊಂಡಿತು.
ಸಾಂಘಿಕ ಪ್ರಯತ್ನದ ಯಶಸ್ಸು ಉತ್ಸಾಹವನ್ನು ದುಪ್ಪಟ್ಟು ಗೊಳಿಸಿದಂತೆ ಸಮಾನ ಮನಸ್ಕರ ತಂಡವೊಂದನ್ನು ಕಟ್ಟಿ ತಾಲೂಕಿನಾದ್ಯಂತ ಸಂಚರಿಸಿ ಸಮುದಾಯ ಬಾಂಧವರಲ್ಲಿ ಸಂಘದ ಅನಿವಾರ್ಯತೆ ಬಗ್ಗೆ ಮಾಹಿತಿ ಮತ್ತು ಸಂಘದ ಆಜೀವ ಸದಸ್ಯತ್ವ ನೊಂದಾವಣೆ ಕಾರ್ಯಕ್ಕೆ ಒತ್ತು ನೀಡಿ ಸಂಘಟನೆಗೆ ಭದ್ರ ಬುನಾದಿ ಹಾಕಿದರು.
ಸಂಘದ ನಿವೇಶನ ಮತ್ತು ಕಟ್ಟಡ ನಿರ್ಮಾಣಕ್ಕೆ ಬೇಕಾದ ಮೂಲ ಧನದ ಕ್ರೋಢೀಕರಣಕ್ಕೆ ಸದಸ್ಯ ಬಾಂಧವರು ಮತ್ತು ಸಹವರ್ತಿಗಳ ಜೊತೆಗೂಡಿ ದಾನಿಗಳ ಸಂಪರ್ಕಿಸುವ ಪ್ರಯತ್ನ ನಿರಂತರ ಚಾಲನೆಯಲ್ಲಿ ಇಟ್ಟರು. ಸಂಘದ ಪ್ರಾರಂಭ ದಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ, ಸಮುದಾಯದ ಆಶಕ್ತರಿಗೆ ತುರ್ತು ಸಂದರ್ಭಗಳಲ್ಲಿ ಆರ್ಥಿಕ ನೆರವನ್ನು ನೀಡುವಂತಹ ಸಮಾಜಮುಖಿ ಚಿಂತನೆಯ ಮೂಲಕ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಕಾಯೇನ ವಾಚ ಮನಸಾ ತ್ರಿಕರಣ ಪೂರ್ವಕವಾಗಿ ಶ್ರಮಿಸಿದರು.
ಸಾಂಸಾರಿಕವಾಗಿ ಶ್ರೀಯುತರು ಧರ್ಮ ಪತ್ನಿ ಶ್ರೀಮತಿ ಕಮಲಾ ಮತ್ತು ನಾಲ್ವರು ಮಕ್ಕಳ ಸುಖೀ ಸಂಸಾರ. ತಿಂದುಂಡು ನೆಮ್ಮದಿಯ ನಿದ್ದೆ ಕಾಣುವಷ್ಟು ಸಿರಿವಂತಿಕೆಯನ್ನು ಭಗವಂತ ನೀಡಿದ್ದರೂ ಸಮುದಾಯದ ಉದ್ಧಾರಕ್ಕೆ ಅವರು ಸವೆಸಿದ ಚಪ್ಪಲಿಗಳು ಅಗಣಿತ. ಸದಾ ಸಮುದಾಯದ ಏಳಿಗೆಗೆ ಟೊಂಕ ಕಟ್ಟಿ ನಿಂತ ಸಮುದಾಯದ ಅನರ್ಘ್ಯ ರತ್ನ ಯು . ಸಿ . ಮೂಲ್ಯರು 2000 ಇಸವಿಯಲ್ಲಿ ತಮ್ಮ 65 ನೇ ವಯಸ್ಸಿನಲ್ಲಿ ಹರಿ ಸಾಯುಜ್ಯ ಪಡೆದರು.
ಇಂದಿನ ದಿನಮಾನದಲ್ಲಿ ಕಾರ್ಕಳ ಭಾಗದಲ್ಲಿ ಸಧೃಡ ಸಮುದಾಯ ಸಂಘಟನೆ ಬೆಳೆಯುವಲ್ಲಿ ಇವರ ಅಹರ್ನಿಶಿ ದುಡಿತ, ದೂರದರ್ಶಿತ್ವದ ಹೆಜ್ಜೆಗಳು ಅನೇಕಾನೇಕ ಸದ್ವಿಚಾರದ ಸತ್ಕಾರ್ಯಗಳಾಗಿ ಪಡಿ ಮೂಡಿಸುತ್ತಿವೆ . ಪ್ರಸಕ್ತ ಕಾಲದಲ್ಲಿ ಅವರ ಆಶಯದಂತೆ ಸಂಘಟನೆ ಸಧೃಡವಾಗಿ ಹೆಮ್ಮರವಾಗಿದೆ. ಅದರ ಛತ್ರ ಛಾಯೆಯಲ್ಲಿ ಅದೆಷ್ಟೋ ತಳ ಮಟ್ಟದ ಕುಟುಂಬ ಸಹಕಾರದ ಆಶ್ರಯ ಪಡೆದಿವೆ. ಕುಂಬಾರ ಸಮುದಾಯದ ಅಭಿವೃದ್ಧಿ ಏರುಗತಿಯಲ್ಲಿ ಇರುವ ಪ್ರಸಕ್ತ ಕಾಲದಲ್ಲಿ ತಳಮಟ್ಟದಲ್ಲಿ ಅಡಿಪಾಯ ಬೆಸೆದ ತ್ಯಾಗ ಮೂರ್ತಿಯನ್ನು ಕುಲಾಲ ಚಾವಡಿ ಸಂಸ್ಮರಣೆಯ ಕಾರ್ಯದ ಮೂಲಕ ಧನ್ಯತಾ ಭಾವದಿಂದ ಸ್ಮರಿಸುತ್ತದೆ.
ಬರಹ : ಸತೀಶ್ ಕಜ್ಜೋಡಿ ಮಾಳ
ಮಾಹಿತಿ ಕೃಪೆ:- ಶ್ರೀ ಧವಳಕೀರ್ತಿ (ದಿ. ಯು. ಸಿ. ಮೂಲ್ಯರ ಸುಪುತ್ರ)