ದಾವಣಗೆರೆ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಬಸವಂತಪ್ಪ ದೊಡ್ಡಮಲ್ಲಪ್ಪ ಕುಂಬಾರ ಅವರನ್ನು ರಾಜ್ಯಪಾಲರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದ ವಿಸ್ತಾರ, ವ್ಯಾಪ್ತಿ ಸ್ವರೂಪ ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಇಂತಹ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯವನ್ನು ಅಚ್ಚುಕಟ್ಟಾಗಿ ಬೋಧಿಸಿ ವಿದ್ಯಾರ್ಥಿಗಳಲ್ಲಿ ಈ ಕ್ಷೇತ್ರದ ಕುರಿತು ಆಸಕ್ತಿ ಮಾಡುವಂತೆ ಮಾಡಿರುವ ವಿರಳ ವ್ಯಕ್ತಿಗಳಲ್ಲಿ ಡಾ. ಬಿ.ಡಿ. ಕುಂಬಾರ ಪ್ರಮುಖರು. ಬಸವಂತಪ್ಪ ದೊಡ್ಡಮಲ್ಲಪ್ಪ ಕುಂಬಾರ ಅವರು ವಿದ್ಯಾರ್ಥಿಗಳು ಮತ್ತು ಸ್ನೇಹಿತರ ಬಳಗದಲ್ಲಿ ಬಿ.ಡಿ.ಕೆ. ಎಂದೇ ಚಿರಪರಿಚಿತರು.
ಡಾ. ಬಿ. ಡಿ. ಕುಂಬಾರ ಅವರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕರು ಹಾಗೂ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ವಯಸ್ಸು ೬೨, (ಜನನ ೦೧-೦೬-೧೯೫೯) ಡಾ. ಬಿ.ಡಿ. ಕುಂಬಾರ ಅವರು ಇತಿಹಾಸ ಮತ್ತು ಶಿಲ್ಪಕಲಾ ಶಾಸ್ತ್ರದಲ್ಲಿ ಸ್ನಾತಕೋತ್ತರ ಎಂ.ಎ. ಪದವಿ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿಯೂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಫೈನಾನ್ಸಿಸಿಂಗ್ ಆಫ್ ಪಬ್ಲಿಕ್ ಲೈಬ್ರರಿಸ್ ಇನ್ ಕರ್ನಾಟಕ : ಎ ಕ್ರಿಟಿಕಲ್ ಎನೆಲೈಸಿಸ್ ವಿಷಯದ ಮೇಲೆ ಪಿ.ಎಚ್.ಡಿ. ಪದವಿಯನ್ನು ಡಾ. ಸಿ.ಆರ್. ಕರಸಿದ್ಧಪ್ಪ ಅವರ ಮಾರ್ಗದರ್ಶನದಲ್ಲಿ ೧೯೯೪ ರಲ್ಲಿ ಪಡೆದಿದ್ದಾರೆ.
೧೯೮೪ ರಿಂದ ೮೬ರ ವರೆಗೆ ಬೆಳಗಾವಿಯ ಕೆ.ಎಸ್.ಆರ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಎರಡು ವರ್ಷ ಗ್ರಂಥಪಾಲಕರಾಗಿ ಸೇವೆ ಸಲ್ಲಿಸಿ, ಸೆಪ್ಟೆಂಬರ್ ೧೯೮೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗಕ್ಕೆ ಉಪನ್ಯಾಸಕರಾಗಿ ನೇಮಕಗೊಂಡಿದ್ದಾರೆ. ೧೯೯೭ ರಿಂದ ೨೦೦೫ ರ ವರೆಗೆ ಪ್ರವಾಚಕರಾಗಿ ಮತ್ತು ೨೦೦೫ ರಿಂದ ಪ್ರಾಧ್ಯಾಪಕರಾಗಿ ಇದೇ ವಿಭಾಗದಲ್ಲಿ ಸೇವೆ ಸಲ್ಲಿಸಿ, ಸದ್ಯ ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.
೩೫ ವರ್ಷಗಳ ಬೋಧನಾನುಭವದ ಹೊಂದಿರುವ ಡಾ. ಕುಂಬಾರ ೧೫೦ ಸಂಶೋಧನಾತ್ಮಕ ಲೇಖನಗಳು, ೧೧-ಹೆಚ್ ಇಂಡೆಕ್ಸ್ ಲೇಖನಗಳು ಹಾಗೂ ೧೩-ಐ ಇಂಡೆಕ್ಸ ಲೇಖನಗಳ ಮತ್ತು ೧೫ ಕ್ಕೂ ಹೆಚ್ಚಿನ ಸಂಪಾದಕತ್ವ ಗ್ರಂಥಗಳು ಪ್ರಕಟಗೊಂಡಿವೆ. ೦೫ ಅಂತರ್-ರಾಷ್ಟ್ರೀಯ, ೫೦ ರಾಷ್ಟ್ರೀಯ ಹಾಗೂ ೧೫ ಪ್ರಾದೇಶಿಕ ಮಟ್ಟದ ವಿಚಾರ ಸಂಕಿರಣ/ಸಮ್ಮೇಳಗಳಲ್ಲಿ ಭಾಗವಹಿಸಿ, ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನದ ವಿವಿಧ ಆಯಾಮಗಳ ಕುರಿತಾದ ತಮ್ಮ ಸಂಶೋಧನಾತ್ಮಕ ಲೇಖನಗಳನ್ನು ವಿದ್ವತ್ ಪೂರ್ಣವಾಗಿ ಮಂಡಿಸುವ ಜೊತೆಗೆ ಸಂಪನ್ಮೂಲ ವ್ಯಕ್ತಿಯಾಗಿಯೂ ಭಾಗವಹಿಸಿದ್ದಾರೆ.
ರಾಜ್ಯ ಹಾಗೂ ಕೇಂದ್ರಿಯ ವಿಶ್ವವಿದ್ಯಾಲಯಗಳು ಸೇರಿದಂತೆ ಸುಮಾರು ೨೫ಕ್ಕೂ ಹೆಚ್ಚು ವಿಶ್ವಿದ್ಯಾಲಯಗಳ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಷಯದ ಅಧ್ಯಯನ ಮಂಡಳಿ, ಪರೀಕ್ಷಾ ಮಂಡಳಿ ಹಾಗೂ ಶೈಕ್ಷಣಿಕ ಮಂಡಳಿಯ ಸದಸ್ಯರಾಗಿ, ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ಶಾಸ್ತ್ರದ ಪಠ್ಯಕ್ರಮ ಹಾಗೂ ಶೈಕ್ಷಣಿಕ ಪದ್ದತಿಗೆ ರೂಪರೇಷೆ ಸಿದ್ಧಪಡಿಸಿಕೊಟ್ಟಿರುತ್ತಾರೆ.
ಒಬ್ಬ ಪರಿಣಿತ ವ್ಯಕ್ತಿ ತರಬೇತುದಾರರಾಗಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಮಿತಿ, ಮತ್ತು ಅದರ ತರಬೇತಿ ಯೋಜನೆಗಳ ಸಂಪನ್ಮೂಲ ವ್ಯಕ್ತಿಯಾಗಿ, ಮೈಸೂರು, ಬೆಂಗಳೂರು, ಧಾರವಾಡ, ಕುರುಕ್ಷೇತ್ರ ಮತ್ತು ಟಾಟಾ ಸಾಮಾಜಿಕ ವಿಜ್ಞಾನಗಳ ಸಂಸ್ಥೆ, ಮುಂಬೈನಲ್ಲಿ ತರಬೇತುದಾರರಾಗಿ ಸೇವೆ ನೀಡಿದ್ದಾರೆ.
ಡಾ. ಕುಂಬಾರ ೪ ಪ್ರಾದೇಶೀಕ ಮತ್ತು ೫ ರಾಷ್ಟ್ರೀಯ (ಎರಡು ದಿನಗಳ) ಹಾಗೂ ೧-೪ ದಿನಗಳ ಅಂತರ್ರಾಷ್ಟ್ರೀಯ ವಿಚಾರ ಸಂಕಿರಣ/ಸಮ್ಮೇಳನಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ. ೧೫ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ವಿಚಾರ ಸಮ್ಮೇಳನ/ಸಂಕಿರಣಗಳಲ್ಲಿನ ತಾಂತ್ರಿಕ ಅಧಿವೇಶನಗಳ ಅಧ್ಯಕ್ಷತೆ ವಹಿಸಿದ್ದಾರೆ.
ಡಾ. ಕುಂಬಾರ ಮಾರ್ಗದರ್ಶನದಲ್ಲಿ ೧೮ ಸಂಶೋಧನಾ ವಿದ್ಯಾರ್ಥಿಗಳು ಪ್ರಬಂಧಗಳನ್ನು ಮಂಡಿಸಿ, ಪಿ.ಎಚ್.ಡಿ. ಪದವಿ ಹಾಗೂ ೦೬ ಜನ ವಿದ್ಯಾರ್ಥಿಗಳು ಎಂ. ಫಿಲ್ ಪದವಿ ಪಡೆದಿದ್ದಾರೆ. ಸದ್ಯ ೭ ಸಂಶೋಧನಾ ವಿದ್ಯಾರ್ಥಿಗಳು ಸಂಶೋಧನೆಗಳಲ್ಲಿ ನಿರತರಾಗಿದ್ದಾರೆ.
ಭಾರತೀಯ ಗ್ರಂಥಾಲಯ ಸಂಘ ದೆಹಲಿ, ಭಾರತೀಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಬೋಧಕರ ಸಂಘ, ಭಾರತೀಯ ವಿಶೇಷ ಗ್ರಂಥಾಲಯಗಳು ಮತ್ತು ಮಾಹಿತಿ ಕೇಂದ್ರಗಳ ಸಂಘ, ಕರ್ನಾಟಕ ಗ್ರಂಥಾಲಯ ಸಂಘ ಮುಂತಾದ ವೃತ್ತಿಪರ ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನೇರ, ನಿಷ್ಠುರ ನುಡಿಯ ಅವರು ಜನರ ವಿರೋಧಗಳನ್ನು ಲೆಕ್ಕಿಸದೇ ಪ್ರಗತಿಪರ ಕಾರ್ಯಮಾಡಿದ್ದಾರೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸೆನೆಟ್ , ಹಣಕಾಸು ಸಮಿತಿಗೆ, ವಿದ್ಯಾರ್ಥಿ ಕಲ್ಯಾಣ ಮಂಡಳಿಗೆ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದು ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಶಿಕ್ಷಕರ ಸಂಘದ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ, ಕವಿವಿ ಸ್ನಾತಕೋತ್ತರ ಜೆಮಖಾನಾದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಸಂಲಗ್ನತ್ವ ಪಡೆದಿರುವ ಕಲಾ, ವಾಣಿಜ್ಯ, ವಿಜ್ಞಾನ, ಬಿ.ಬಿ.ಎ. ಬಿ.ಸಿ.ಎ. ಹಾಗೂ ಬಿ.ಎಸ್.ಸಿ. (ಮಾಹಿತಿ ವಿಜ್ಞಾನ) ಮಹಾವಿದ್ಯಾಲಯಗಳ ಸ್ಥಳಿಯ ವಿಚಾರಣಾ/ತಪಾಸಣಾ ಸಮಿತಿಯ ಸದಸ್ಯರಾಗಿ ಮತ್ತು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕವಿವಿ. ಬೋಧನಾ ಸಿಬ್ಬಂದಿ ಕುಂದು-ಕೊರೆತೆ ವಿಚಾರಣಾ ಕೋಶದ ಸದಸ್ಯರಾಗಿ, ಲೈಂಗಿಕ ಕಿರುಕುಳ ನಿಯಂತ್ರಣ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ದೇಶದ ಪ್ರತಿಷ್ಠಿತ ಸಂಸ್ಥೆಯಾದ ಭಾರತೀಯ ಗ್ರಂಥಾಲಯ ಸಂಘದ ಅಧ್ಯಕ್ಷರಾಗಿ ಮತ್ತು ಭಾರತೀಯ ಗ್ರಂಥಾಲಯ ಸಂಘದ ನಿಯತಕಾಲಿಕೆಯ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ಕ್ಷೇತ್ರದಲ್ಲಿ ಸೇವೆ ಪರಿಗಣಿಸಿ ಡಾ. ಬಿ.ಡಿ. ಕುಂಬಾರ ಅವರಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.
ಗ್ರಂಥಾಲಯ ಪಿತಾಮಹ ಡಾ. ಎಸ್. ಆರ್. ರಂಗನಾಥನ್ ಅವರ ಗ್ರಂಥ ಓದಲು, ಗ್ರಂಥಕೊಬ್ಬರು, ಎಲ್ಲರಿಗೂ ಗ್ರಂಥಾಲಯಗಳು, ಓದುಗರ ಸಮಯ ಉಳಿಸಿರಿ, ಗ್ರಂಥಾಲಯ ಬೆಳೆಯುವ ಶಿಶು ಎಂಬ ಪಂಚ ಸೂತ್ರಗಳನ್ನು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ತಜ್ಞರಾದ ಪ್ರೊ. ಎಂ.ಆರ್. ಕುಂಬಾರ, ಪ್ರೊ. ಕೆ.ಎಸ್. ದೇಶಪಾಂಡೆ, ಡಾ. ಸಿ.ಆರ್. ಕರಿಸಿದ್ಧಪ್ಪ, ಡಾ. ಎಸ್.ಎಲ್. ಸಂಗಮ ಮುಂತಾದವರ ಜೀವನ ಆದರ್ಶಗಳನ್ನು ಅಳವಡಿಸಿಕೊಂಡಿದ್ದಾರೆ. ಪ್ರೊ. ಬಿ.ಡಿ. ಕುಂಬಾರ 2022 ಜುಲೈಯಿಂದ ಅವರು ದಾವಣಗೆರೆ ವಿ.ವಿ ಕುಲಪತಿಯಾಗಿ ನೇಮಕವಾಗಿದ್ದಾರೆ.