ಪುಸ್ತಕಗಳನ್ನ ಕೊಂಡು ಓದುವ ಪ್ರವೃತ್ತಿ ಬೆಳೆಯಬೇಕು : ಡಾ. ಅಣ್ಣಯ್ಯ ಕುಲಾಲ್
ಮಂಜೇಶ್ವರ(ಏ.೧೬): “ಓದು,ಬರಹ, ಪುಸ್ತಕಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು , ದಿನನಿತ್ಯ ಸಾಕಷ್ಟು ಓದುವವರು ಮಾತ್ರ ಬರೆಯಬಲ್ಲರು ಅದೇ ಸಾಹಿತ್ಯ ,ಹಾಗಂತ ಕಟ್ ಅಂಡ್ ಪೇಸ್ಟ್ ಸಾಹಿತ್ಯವಲ್ಲ. ನಮ್ಮಲ್ಲಿ ಪುಸ್ತಕಗಳನ್ನ ಕೊಂಡು ಓದುವ ಪ್ರವೃತ್ತಿ ಬೆಳೆಯಬೇಕು” ಎಂದು ಕನ್ನಡ ಕಟ್ಟೆ ಅಧ್ಯಕ್ಷ, ಪ್ರಾಧ್ಯಾಪಕ ಡಾ. ಅಣ್ಣಯ್ಯ ಕುಲಾಲ್ ಉಳ್ತೂರ್ ಹೇಳಿದರು.
ಅವರು ಮಂಜೇಶ್ವರ ಹೊಸಬೆಟ್ಟು ಕುಲಾಲ ಸಮಾಜ ಮಂದಿರದಲ್ಲಿ ನಡೆದ ಕವಯಿತ್ರಿ ಕಣ್ವತೀರ್ಥ ಕುಶಾಲಾಕ್ಷಿ ವಾಸು ಕುಲಾಲ್ ಅವರ `ರಡ್ಡ್ ಪನಿ’ ತುಳು ಕವಿತೆಗಳ ಸಂಗ್ರಹಗಳ ೨ನೇ ಕೃತಿ ಬಿಡುಗಡೆಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
“ಪರಿಸರ, ಪ್ರಕೃತಿ, ಬದುಕು ಇವುಗಳ ಸಣ್ಣ ಸಣ್ಣ ಬದಲಾವಣೆ-ತಲ್ಲಣ -ಕಂಪನ ಗಳನ್ನ ಗ್ರಹಿಸಬಲ್ಲವರು, ನೋವು ನಲಿವನ್ನು ಅತೀ ಹತ್ತಿರದಿಂದ ಬೆರಗುಕಣ್ಣುಗಳಿಂದ ನೋಡಿದವರು, ತಳಮಟ್ಟದ ಜನ ಜೀವನದ ಜೊತೆ ಬೇರೆ ಬಂದವರು ಮಾತ್ರ ಜನ ಮನವ ಮುಟ್ಟುವಂತಹ ಕಥೆ-ಕವನ ಹಾಗೂ ಸಾಹಿತ್ಯವನ್ನು ರಚಿಸಬಲ್ಲರು. ಅಂಥವರ ಸಾಲಿನಲ್ಲಿ ಕುಶಾಲಾಕ್ಷಿ ಕುಲಾಲ್ ರವರ `ರಡ್ಡ್ ಪನಿ’ ಕವನ ಸಂಕಲನ ನಿಲ್ಲುವಂತದ್ದು ಎಂದು ಅವರು ಅಭಿಪ್ರಾಯಪಟ್ಟರು.
ಕವಿ, ಸಾಹಿತಿ ಯೋಗೀಶ್ ರಾವ್ ಚಿಗುರುಪಾದೆ, ಸುರತ್ಕಲ್ ಗೋವಿಂದದಾಸ ಕಾಲೇಜಿನ ಉಪ ಪ್ರಾಂಶುಪಾಲ ಪಿ. ಕೃಷ್ಣಮೂರ್ತಿ, ಅಖಿಲ ಭಾರತ ತುಳು ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಡಿ. ಎಂ. ಕುಲಾಲ್ ಈ ಸಂದರ್ಭ ಉಪಸ್ಥಿತರಿದ್ದರು.



