ಎದೆಗೆ ಗುಂಡು ಹೊಕ್ಕರೂ ಉಗ್ರನನ್ನು ಸದೆಬಡಿದ ವೀರ!
ಮಂಗಳೂರು(ಏ.೧೬): ಒಂದಲ್ಲ, ಎರಡಲ್ಲ ಐದು ಬಾರಿ ಜೀವವನ್ನೇ ಪಣಕ್ಕಿಟ್ಟು ಭಾರತ ಮಾತೆಯ ಸೇವೆಗೈದಿದ್ದ ಧೀರ ಯೋಧನೊಬ್ಬ ಉಗ್ರರ ದಾಳಿಗೆ ಸಿಲುಕಿ ಗಂಭೀರ ಸ್ಥಿತಿಗೆ ತಲುಪಿ ಸುಮಾರು ಅರ್ಧ ವರ್ಷ ಆಸ್ಪತ್ರೆಯ ಬೆಡ್ನಲ್ಲಿ ಮಲಗಿ ಈಗ ಚೇತರಿಸಿಕೊಂಡು ಹುಟ್ಟೂರಿಗೆ ಮರಳಿದ್ದಾರೆ.
ಬಂಟ್ವಾಳ ತಾ|ನ ಕುರ್ನಾಡು ಗ್ರಾಮದ ಮುಡಿಪು ನಿವಾಸಿ ಸಂತೋಷ್ ಕುಲಾಲ್ (33ವರ್ಷ) ಅವರೇ ಉಗ್ರರೊಂದಿಗೆ ಹೋರಾಡಿ ಸಾವಿನ ದವಡೆಯಿಂದ ಪಾರಾಗಿ ಬಂದ ಯೋಧ. ಅವರು ಅ. 12ರಂದು ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯ ಪಾಂಪೋರ್ನಲ್ಲಿ ಉಗ್ರರೊಡನೆ ಹೋರಾಡಿ ಗುಂಡೇಟಿಗೆ ಸಿಲುಕಿ ಸಾವು ಜಯಿಸಿ ಬಂದವರಾಗಿದ್ದು, ಐದೂವರೆ ತಿಂಗಳ ಚಿಕಿತ್ಸೆ ಬಳಿಕ ಹುಟ್ಟೂರು ಮುಡಿಪುವಿಗೆ ಆಗಮಿಸಿದ್ದಾರೆ.
ದೇಶ ಸೇವೆಯ ತುಡಿತ
ಬಂಟ್ವಾಳ ತಾ|ನ ರಾಮಣ್ಣ ಸಾಲಿಯಾನ್-ವಿಮಲಾ ದಂಪತಿಯ ಇಬ್ಬರು ಮಕ್ಕಳಲ್ಲಿ ಸಂತೋಷ್ ಹಿರಿಯವರು. ಚಿಕ್ಕಂದಿನಲ್ಲಿಯೇ ತಂದೆ ನಿಧನರಾದ ಬಳಿಕ ತಾಯಿ ಮತ್ತು ಸಹೋದರಿಯೊಂದಿಗೆ ಮುಡಿಪುವಿನ ಕೊಡಕಲ್ಲಿನಲ್ಲಿರುವ ಅಜ್ಜಿ ಮನೆಗೆ ಬಂದಿದ್ದ ಸಂತೋಷ್ ಪ್ರಾಥಮಿಕ ಶಿಕ್ಷಣದಿಂದ ಪಿಯುಸಿ ವರೆಗೆ ಮುಡಿಪು ಸರಕಾರಿ ಶಾಲೆಯಲ್ಲಿ ಕಲಿತರು. ಪಿಯುಸಿ ಮುಗಿಸಿ ಸೇನೆಯ ನೇಮಕಾತಿ ಶಿಬಿರದಲ್ಲಿ ಭಾಗವಹಿಸಿ ಆಯ್ಕೆಯಾದರು. 2003ರಿಂದ 2016ರ ವರೆಗೆ ಜಮ್ಮು-ಕಾಶ್ಮೀರ ಸೇರಿದಂತೆ ನಾಗಾಲ್ಯಾಂಡ್, ಬರ್ಮಾ, ಮಣಿಪುರದಲ್ಲಿ ನಕ್ಸಲ್ ಸಹಿತ ಉಗ್ರ ನಿಗ್ರಹ ಕಾರ್ಯಪಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆರ್ಮಿ ಸರ್ವಿಸ್ ಕೋರ್ನಲ್ಲಿದ್ದ ಸಂತೋಷ್ ಅವರು ಕಮಾಂಡೋ ಕೋರ್ಸ್ ಮುಗಿಸಿ ಕಮಾಂಡೋ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಪಾಂಪೋರ್ ದಾಳಿ
2016ರ ಸೆಪ್ಟಂಬರ್ನಲ್ಲಿ ಊರಿಗೆ ಬಂದಿದ್ದ ಸಂತೋಷ್ಗೆ ರಜೆ ಮುಗಿಯುವ ಮೊದಲೇ ಕರ್ತವ್ಯಕ್ಕೆ ಹಾಜರಾಗುವಂತೆ ಕರೆ ಬಂದಿತ್ತು. ಭಾರತೀಯ ಪಡೆಯ ಸರ್ಜಿಕಲ್ ಸ್ಟ್ರೈಕ್ನ ತಂಡಕ್ಕೆ ಬ್ಯಾಕ್ ಸಪೋರ್ಟ್ ಮಾಡುವ ಕಾರ್ಯವನ್ನು ಸಂತೋಷ್ ಅವರಿದ್ದ ತಂಡಕ್ಕೆ ವಹಿಸಲಾಗಿತ್ತು. ಅದಾದ ಬಳಿಕ ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿದ್ದಾಗ ಜಮ್ಮು
ಕಾಶ್ಮೀರ ರಾ.ಹೆದ್ದಾರಿಯ ಪಾಂಪೋರ್ನಲ್ಲಿರುವ ಸರಕಾರಿ ಕಟ್ಟಡವೊಂದರಲ್ಲಿ ಭಯೋತ್ಪಾದಕರು ಅಡಗಿದ್ದಾರೆ ಎನ್ನುವ ಸುಳಿವಿನ ಹಿನ್ನೆಲೆಯಲ್ಲಿ ಇವರಿದ್ದ 6 ಜನರ ಕಮಾಂಡೋ ಕಾರ್ಯಪಡೆಗೆ ಶೋಧ ಕಾರ್ಯ ವಹಿಸಲಾಗಿತ್ತು. ಕಟ್ಟಡ ಮತ್ತು ಕಟ್ಟಡದ ಪಕ್ಕದಲ್ಲಿದ್ದ ಗುಡ್ಡದಲ್ಲಿ ಭಯೋತ್ಪಾದಕರಿದ್ದ ಮಾಹಿತಿ ಸಿಕ್ಕಿತ್ತು. ಅಷ್ಟೊತ್ತಿಗೆ ಎರಡೂ ಕಡೆಯಿಂದ ಗುಂಡಿನ ದಾಳಿ ಪ್ರಾರಂಭವಾಗಿತ್ತು.
“ನಾವು ಗುಡ್ಡದಲ್ಲಿದ್ದ ಮೂವರು ಭಯೋತ್ಪಾದಕರನ್ನು ಮತ್ತು ಕಟ್ಟಡದಲ್ಲಿ ಅಡಗಿದ್ದ ಓರ್ವ ಭಯೋತ್ಪಾದಕನನ್ನು ಕೊಲ್ಲುವಲ್ಲಿ ಯಶಸ್ವಿಯಾದೆವು. ಕಟ್ಟಡದಲ್ಲಿದ್ದ ಭಯೋತ್ಪಾದಕರು ನಮ್ಮ ಮೇಲೆ ದಾಳಿ ನಡೆಸಿದಾಗ ನನ್ನ ಎದೆಗೆ ಎರಡು ಗುಂಡು ಹಾಗೂ ಕಾಲಿಗೆ ಮೂರು ಗುಂಡು ತಗುಲಿದ್ದವು. ನಾವಿದ್ದ 6 ಜನರಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಎದೆಗೆ ಗುಂಡು ಬಿದ್ದ ಬಳಿಕ ಏನಾಯಿತೆಂದು ಗೊತ್ತಾಗಲಿಲ್ಲ. ಎರಡೂವರೆ ವಾರ ಕೋಮಾದಲ್ಲಿದ್ದೆ. ಎಚ್ಚರವಾದಾಗ ಆಸ್ಪತ್ರೆಯಲ್ಲಿ ಇರುವುದು ತಿಳಿಯಿತು. ತನ್ನ ಸಹೋದ್ಯೋಗಿಗಳು ಅಲ್ಲಿನ ಆರು ಅಂತಸ್ತಿನ ಕಟ್ಟಡ ಸ್ಫೋಟಿಸಿ ಭಯೋತ್ಪಾದಕರನ್ನು ಕೊಂದಿದ್ದರು ಎಂಬುದು ಅನಂತರ ತಿಳಿಯಿತು.
ಕೂದಲೆಳೆ ಅಂತರದಲ್ಲಿ ಬದುಕಿದ್ದೆ
4 ಬಾರಿ ಸಾವಿನ ದವಡೆಯಿಂದ ಪಾರಾಗಿದ್ದೇನೆ. ಮಣಿಪುರದಲ್ಲಿ ನಕ್ಸಲರು ದಾಳಿ ನಡೆಸಿ ನಮ್ಮ ತಂಡದ 3 ವಾಹನಗಳನ್ನು ಸ್ಫೋಟಿಸಿದ್ದು, ಅದರಲ್ಲಿ 14 ಸೈನಿಕರು ಹುತಾತ್ಮರಾಗಿದ್ದರು. ನಾಲ್ಕನೇ ವಾಹನದಲ್ಲಿದ್ದ ನಾವು ಕೂದಲೆಳೆ ಅಂತರದಲ್ಲಿ ಪಾರಾಗಿದ್ದೇವು. ಇನ್ನೂ 2 ವರ್ಷ ಸೇವಾವಧಿ ಬಾಕಿ ಇದ್ದು, ಗುಣಮುಖರಾಗಿ ದೇಶ ಸೇವೆಗೆ ಮರಳಬೇಕೆಂದಿದ್ದೇನೆ ಎಂದು ಸಂತೋಷ್ ಹೇಳಿದ್ದಾರೆ.
ಮನೆಯ ಆಧಾರಸ್ತಂಭ
ಸಂತೋಷ್ ಮದುವೆಯಾಗಿ 3 ವರ್ಷ ಕಳೆದಿದೆ. ಪತ್ನಿ ಖಾಸಗಿ ಶಾಲೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಶಿಕ್ಷಕಿ, ಬಡ ಕುಟುಂಬಕ್ಕೆ ಸಂತೋಷ್ ಅವರೇ ಆಧಾರ ಸ್ತಂಭ. ತಾಯಿ, ಸಹೋದರಿ, ಸಹೋದರಿಯ ಮಗುವನ್ನು ನೋಡುವ ಜವಾಬ್ದಾರಿ ಸಂತೋಷ್ ಅವರಿಗಿದೆ. ಆದರೆ ಗಂಭೀರವಾಗಿ ಗಾಯ ಗೊಂಡು ಸೇನೆಯಿಂದ ಮನೆಗೆ ವಾಪಾಸಾಗಿರುವ ಸಂತೋಷ್ ಕುಟುಂಬಕ್ಕೆ ಆರ್ಥಿಕ ಚೈತನ್ಯ ನೀಡುವ ಕಾರ್ಯ ಆಗಬೇಕಾಗಿದೆ.
ಮನೆ ಮಂದಿಗೆ ತಿಳಿಸಿರಲಿಲ್ಲ
ಸೆಪ್ಟಂಬರ್ನಲ್ಲಿ ಮನೆಗೆ ಬಂದಿದ್ದ ಸಂತೋಷ್ ಕೆಲವೇ ದಿನಗಳಲ್ಲಿ ಕರ್ತವ್ಯದ ಕರೆಗೆ ಓಗೊಟ್ಟು ತೆರಳಿದ್ದರು. ಅ. 12ರಂದು ನಡೆದ ದಾಳಿಯಲ್ಲಿ ತನಗೆ ಮಾರಣಾಂತಿಕ ಗಾಯವಾಗಿದೆ ಎನ್ನುವ ವಿಚಾರವನ್ನು ಪತ್ನಿ, ತಾಯಿ ಹಾಗೂ ಸಹೋದರಿಗೆ ತಿಳಿಸಿರಲಿಲ್ಲ. ಪತ್ನಿಯ ಸಹೋದರನಿಗೆ ಮಾತ್ರ ಮಾಹಿತಿ ನೀಡಿದ್ದರು. ಜಮ್ಮುವಿನ ಪಠಾನ್ಕೋಟ್ ಆಸ್ಪತ್ರೆಯಲ್ಲಿದ್ದ ಸಂತೋಷ್ ಬಳಿಕ ದಿಲ್ಲಿಯ ಕಮಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ದಿಲ್ಲಿಯಿಂದ ವಿಮಾನ ಮೂಲಕ ಬೆಂಗಳೂರಿಗೆ ತಲುಪಿ, ಬೆಂಗಳೂರಿನಿಂದ ಸೇನಾ ವಾಹನದಲ್ಲಿ ಎ. 3ರಂದು ಮನೆಗೆ ತಲುಪಿದಾಗಲೇ ಪತ್ನಿ, ತಾಯಿ, ಸಹೋದರಿಗೆ ಕಾರ್ಯಾಚರಣೆಯಲ್ಲಿ ಗಾಯಗೊಂಡ ವಿಚಾರ ತಿಳಿದದ್ದು. ಕೋಮಾ ಸ್ಥಿತಿಯಿಂದ ಹೊರಬಂದ ಬಳಿಕ ಮನೆಯವರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದರು. ಆದರೆ ಗಾಯಗೊಂಡಿರುವುದರ ಬಗ್ಗೆ ತಿಳಿಸಿರಲಿಲ್ಲ.
(ಸುದ್ದಿ ಸೌಜನ್ಯ : ಉದಯವಾಣಿ)
ಕುಲಾಲ/ಕುಂಬಾರ ಸಮುದಾಯದ ಹಿರಿಯ ಮುಖಂಡ ಹಾಗೂ ಬಿಜೆಪಿ ಅರೋಗ್ಯ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಡಾ ಅಣ್ಣಯ್ಯ ಕುಲಾಲ್ ಉಳ್ತೂರು, ವಿಶ್ವ ಹಿಂದೂ ಪರಿಷತ್ ನ ನಾಯಕರುಗಳಾದ ಗೋಪಾಲ್ ಕುತ್ತಾರ್ , ವಿಕಾಸ್ ಮುಡಿಪು ,ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲ ಮಾತೃ ಸಂಘದ ಸಂಘಟನಾ ಕಾರ್ಯದರ್ಶಿ ನಾರಾಯಣ ಬಂಗೇರ ,ಮಂಗಳೂರು ನಗರ (ಉಳ್ಳಾಲ ವಿಧಾನಸಭಾ )ಘಟಕದ ಕುಲಾಲ ಯುವ ವೇದಿಕೆಯ ನಾಯಕರಾದ ಜಯ ಕುಲಾಲ್, ಹರೀಶ್ ಮಜಲ್ ,ನವೀನ್ ಕುಲಾಲ್ , ವಿಶ್ವನಾಥ್ ಕುಲಾಲ್ ಬೆಂಗಳೂರು ಮುಂತಾದವರು ಯೋಧ ಸಂತೋಷ್ ಕುಲಾಲ್ ಮನೆಗೆ ತೆರಳಿ ಯೋಗ ಕ್ಷೇಮ ವಿಚಾರಿಸಿದರು.





