ಬೆಂಗಳೂರು(ಏ.೧೨): ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದು ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ. ಅಂಬುಜಾಕ್ಷಿ ಕುಂಬಾರ್ ಅವರು ನಿನ್ನೆ ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಡಾ. ರಾಜ್ಕುಮಾರ್ ಗಾಜಿನ ಮನೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೇಯರ್ ಜಿ. ಪದ್ಮಾವತಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಮಾರಂಭದಲ್ಲಿ ಉಪಸ್ಥಿತರಿದ್ದು, ಕೆಲವೇ ಮಂದಿಗೆ ಪ್ರಶಸ್ತಿ ನೀಡಿ ಸಿರ್ಗಮಿಸಿದರು. ವಿವಿಧ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಒಟ್ಟು ೨೨೮ ಮಂದಿ
ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅಂಬುಜಾಕ್ಷಿ ಅವರು `ಸಾಧಿಸುವ ಛಲವಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಹಿಂದಿನ ಕಷ್ಟದ ಜೀವನವನ್ನು ಎದುರಿಸಿ ಎಲ್ಲಾ ಅಡೆತಡೆಗಳನ್ನು ದಾಟಿ ಗುರಿ ಮುಟ್ಟಿದ್ದೇನೆ.ನನ್ನನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆಯಲ್ಲದೆ ಇನ್ನಷ್ಟು ಸಾಧನೆ ಮಾಡಲು ಸ್ಪೂರ್ತಿಯನ್ನು ನೀಡಿದೆ ಎಂದರು.
ಇದೇ ಸಂದರ್ಭ ಕರಾವಳಿ ಕುಲಾಲ/ಕುಂಬಾರ ಯುವವೇದಿಕೆ, ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘ ಹಾಗೂ ಕುಂಭ ವೈದ್ಯರ ಕೂಟದ ನಾಯಕರು ಡಾ. ಅಂಬುಜಾಕ್ಷಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.




