ಏಪ್ರಿಲ್ ತಿಂಗಳ ಐದನೇ ದಿನ. ಇನ್ನೂ ಬಾಂದಳದಲ್ಲಿ ಸೂರ್ಯ ಎದ್ದಿರಲಿಲ್ಲ. ಸುಮಾರು ಮೂರು ಗಂಟೆ ಮೂವತ್ತು ನಿಮಿಷದ ಹೊತ್ತು. ಮಂಗಳೂರಿನಲ್ಲಿ ಹಾಲು, ಪೇಪರ್ ನವರು ಬಿಟ್ಟು ಬೇರೆಲ್ಲರೂ ಸಿಹಿನಿದ್ರೆಯ ಮಧ್ಯದಲ್ಲಿ ಇರುವ ಕಾಲ. ಅಂತಹ ಹೊತ್ತಿನಲ್ಲಿ ಮಂಗಳೂರಿನ ಉರ್ವ ಪೊಲೀಸ್ ಠಾಣೆಯ ಎಎಸ್ ಐ ಐತಪ್ಪ ಮೂಲ್ಯ ಅವರು ರೌಂಡ್ಸ್ ಗೆ ಹೊರಡಲು ಬೈಕ್ ಹೊರಗೆ ತೆಗೆಯುತ್ತಾರೆ. ಬೈಕ್ ಲೇಡಿಹಿಲ್ ಬಳಿ ಬರುತ್ತಿದ್ದಂತೆ ರೊಯ್ಯನೆ ಮತ್ತೊಂದು ಬೈಕ್ ಇವರ ಹತ್ತಿರದಿಂದ ಹಾದು ಹೋಗುತ್ತದೆ. ಅದು ಐತಪ್ಪ ಒಬ್ಬರೇ ಇದ್ದಾರಾ ಎಂದು ಖಚಿತ ಮಾಡುವುದಕ್ಕೆ ಎಂದು ಅಂದುಕೊಳ್ಳಲು ಐತಪ್ಪ ಹೋಗಲೇ ಇಲ್ಲ. ಕ್ಷಣಾರ್ಧದಲ್ಲಿ ಬೈಕ್ ಮತ್ತೆ ಇವರ ಹತ್ತಿರ ಬರುತ್ತಿದ್ದಂತೆ ಇವರು ಅದನ್ನು ನಿಲ್ಲಿಸಿದ್ದಾರೆ.
ಏಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಐತಪ್ಪ ಮೂಲ್ಯರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ ಕುಂಬಾರ ಸರಕಾರಿ ನೌಕರರ ಸಂಘದ ಮುಖಂಡರು.
ನಮಗೆಲ್ಲಾ ಗೊತ್ತಿರುವ ಹಾಗೆ ಸರಗಳ್ಳರ ಹಾವಳಿ ಮಂಗಳೂರಿನಲ್ಲಿ ಎಷ್ಟು ಜಾಗೃತಿ ಮೂಡಿಸಿದರೂ ಕಡಿಮೆಯಾಗಿಲ್ಲ. ಬಂಗಾರ ಕಾಣಿಸುವಂತೆ ಧರಿಸಿ ಹೋಗುವ ಪಾದಚಾರಿ ಮಹಿಳೆಯರು ಸರಗಳ್ಳರಿಗೆ ಸುಲಭದ ತುತ್ತು. ಸಣ್ಣ ಸಂಶಯದ ಮೇಲೆ ಐತಪ್ಪ ಇವರನ್ನು ನಿಲ್ಲಿಸಿದ್ದಾರೆ. ಧರಿಸಿರುವ ಯೂನಿಫಾರ್ಮ್ ನೋಡುವಾಗ ಐತಪ್ಪ ಅವರು ಪೊಲೀಸ್ ಎಂದು ಕತ್ತಲಲ್ಲಿ ಕೂಡ ಯಾರೂ ಗುರುತಿಸಬಹುದಾಗಿತ್ತು. ಆದರೆ ಬೈಕ್ ನಲ್ಲಿ ಬಂದವರಿಗೆ ಇನ್ನೊಂದು ಮಾಹಿತಿ ಬೇಕಾಗಿತ್ತು. ಅದೇನೆಂದರೆ ಇವರು ಯಾವ ಸ್ಟೇಶನ್?
ನೀವು ಯಾವ ಸ್ಟೇಶನ್, ಅತ್ತ ಕಡೆಯಿಂದ ಪ್ರಶ್ನೆ ಬಂತು. ಐತಪ್ಪ ಸಹಜವಾಗಿ ಉರ್ವಾ ಎಂದು ಹೇಳಿದ್ದಾರೆ. ನಂತರ ಬೈಕ್ ನಲ್ಲಿ ಬಂದವರ ಎರಡನೇಯ ಶಬ್ದವೇ “ಅಡಿಲಾ.., ಅಡಿಲಾ.. ” (ಹೊಡೆ.. ಹೊಡೆ) ಎಂದು ಬೈಕ್ ಸವಾರ ಹಿಂದೆ ಕುಳಿತುಕೊಂಡವನಿಗೆ ಬೊಬ್ಬೆ ಹಾಕಿ ಹೇಳಿದ್ದಾನೆ. ಬೈಕ್ ನಲ್ಲಿದ್ದ ರಾಡ್ ಹೊರಗೆ ತೆಗೆದ ವ್ಯಕ್ತಿ ಮೊದಲು ಹೊಡೆದದ್ದೇ ತಲೆಗೆ. ಅದರ ಕಾರಣ ಬೇರೆ ಹೇಳಬೇಕಾಗಿಲ್ಲ. ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಜೀವ ತೆಗೆದು ವಿಕೃತ ನಗೆ ಬೀರಲು ಗುಂಪೊಂದು ತಯಾರಿ ನಡೆಸಿಬಿಟ್ಟಿತ್ತು. ಐತಪ್ಪ ಅವರೇ ಟಾರ್ಗೆಟ್ ? ಬಹುತೇಕ ಹೌದು ಮತ್ತು ಸ್ಪಷ್ಟವಾಗಿ ಹೇಳಬೇಕಾದರೆ ಉರ್ವಾ ಸ್ಟೇಶನ್ನಿನ ಸಿಬ್ಬಂದಿಯೊಬ್ಬರನ್ನು ಬಲಿ ತೆಗೆದುಕೊಳ್ಳಲು ಸಂಚು ನಡೆದಿತ್ತು. ಉರ್ವಾ ಸ್ಟೇಶನ್ನಿನವರೇ ಯಾಕೆ? ಮೊನ್ನೆ ಎಪ್ರಿಲ್ 4 ರಂದು ಪಿಎಫ್ ಐ ಮಾಡಿದ ‘ಅ’ಶಾಂತಿಯುತ ಪ್ರತಿಭಟನೆಯಲ್ಲಿ ಕಲ್ಲುಗಳನ್ನು ಪೊಲೀಸರ ಮೇಲೆ ತೂರಿದಾಗ ಪೊಲೀಸರು ತಮ್ಮ ಕರ್ತವ್ಯ ಮೆರೆದಿದ್ದರಲ್ಲ, ಅದರ ನಂತರ ಕಲ್ಲು ತೂರಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ಇಟ್ಟಿದ್ದೇ ಈ ಉರ್ವಾ ಸ್ಟೇಶನ್ನಿನಲ್ಲಿ. ಆ ಕೋಪ ಐತಪ್ಪನವರನ್ನು ಹತ್ಯೆ ಮಾಡಲು ಬಂದವರಲ್ಲಿ ಸ್ಪಷ್ಟವಾಗಿತ್ತು. ಅಷ್ಟಕ್ಕೂ ಹೊಡೆದು ಓಡಿ ಹೋದವರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನುವ ಸುದ್ದಿ ಇದೆ. ಅದರಲ್ಲಿ ಒಬ್ಬ ದೇರಳಕಟ್ಟೆಯಲ್ಲಿ ಕೆಲವು ವರ್ಷಗಳ ಹಿಂದೆ ಮೆಡಿಕಲ್ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಲು ಯತ್ನಿಸಿದ `target’ ತಂಡದ ಸದಸ್ಯ. ಆವತ್ತು ಕೂಡ ಆರೋಪಿಗಳನ್ನು ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗಳಾಗಿದ್ದವು. ಪೊಲೀಸರು ಹೊಡೆಯುವುದು, ಕೊಲೆಗೆ ಯತ್ನಿಸುವುದು ಇವರ ಫ್ಯಾಶನ್.
ಒಂದು ವೇಳೆ ಐತಪ್ಪನವರು ಹೆಲ್ಮೆಟ್ ಧರಿಸದೇ ಇದ್ದಿದ್ದರೆ ಅವರ ತಲೆಗೆ ಹೊಡೆದ ರಭಸಕ್ಕೆ ಅವರು ಬದುಕಿ ಉಳಿಯುವುದು ಕಷ್ಟವಾಗಿತ್ತು. ಆದರೆ ಅದೃಷ್ಟವಶಾತ್ ಅವರು ರಕ್ಷಣೆಗೆ ಎಂದು ಧರಿಸಿದ ಹೆಲ್ಮೆಟ್ ಅವರ ಪ್ರಾಣ ಈ ರೀತಿಯಲ್ಲಿ ಉಳಿಸಿದೆ. ಕಿರಾತಕರು ಹೊಡೆದ ಏಟಿಗೆ ಹೆಲ್ಮೆಟ್ ತುಂಡಾಗಿ ಇವರ ತಲೆ ಒಡೆದಿದೆ ಎಂದರೆ ನೀವೆ ಅರ್ಥ ಮಾಡಿಕೊಳ್ಳಿ. ಹೊಡೆದವರ ಉದ್ದೇಶ ಏನಿತ್ತು ? ಇವತ್ತು ಸಂಜೆ ನಾನು ಹಾಗೂ ನನ್ನ ಸನ್ಮಿತ್ರ ಗೆಳೆಯರು ಮಂಗಳೂರಿನ ಏಜೆ ಆಸ್ಪತ್ರೆಗೆ ಹೋಗಿ ಸಾವು ಬದುಕಿನ ಆಟದಲ್ಲಿ ಸಾವನ್ನು ಗೆದ್ದು ಬಂದಿರುವ ಐತಪ್ಪ ಅವರಿಗೆ ಧೈರ್ಯದ ಮಾತುಗಳನ್ನು ಹೇಳಿ ಬಂದೆವು. ಈಗಲೂ ಅವರಿಗೆ ಬಲಭಾಗದ ಕಣ್ಣನ್ನು complete ತೆರೆಯಲು ಆಗುತ್ತಿಲ್ಲ. ಸ್ವಲ್ಪ ಕಷ್ಟ ಪಟ್ಟು ತೆರೆಯಬಹುದು. ನೋವಿದೆ. ಬಿದ್ದ ಹೊಡೆತಕ್ಕೆ ಐತಪ್ಪ ಅವರು ರಸ್ತೆಗೆ ಬಿದ್ದ ನಂತರ ಅವರಿಗೆ ಏನಾಗಿದೆ ಎನ್ನುವ ನೆನಪಾಗುತ್ತಿಲ್ಲ. ಏಕೆಂದರೆ ಇವರಿಗೆ ಪ್ರಜ್ಞೆ ತಪ್ಪಿ ಹೋಗಿತ್ತು. ನಂತರ ಎಷ್ಟೋ ಹೊತ್ತಿನ ಬಳಿಕ ಯಾರೋ ಇವರನ್ನು ರಿಕ್ಷಾದಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಗ ಐತಪ್ಪನವರಿಗೆ ಎಚ್ಚರಿಕೆಯಾಗಿದೆ. ಬಳಿಕ ಅವರು ಕಂಟ್ರೋಲ್ ರೂಂಗೆ ವಿಷಯ ಮುಟ್ಟಿಸಿದ್ದಾರೆ.
ಐತಪ್ಪನವರನ್ನು ಮಾತನಾಡಿಸಿ ಹೊರಗೆ ಬಂದ ನಂತರ ಅನಿಸಿತು. ನಾವು ರಾತ್ರಿ ಮಲಗಿದಾಗ ಐದು ನಿಮಿಷ ಕರೆಂಟ್ ಹೋದರೆ ಚಿರಿಪಿರಿ ಮಾಡುತ್ತೇವೆ. ಆದರೆ ರಾತ್ರಿಗಳ ನಿದ್ದೆಗಳನ್ನೇ ಮರೆತಿರುವ ಪೊಲೀಸರನ್ನು ಹುಡುಕಿ, ಕಾದು ನಿಂತು ಹೊಡೆಯುವವರ ಮಧ್ಯೆ ನಾವು ವಾಸಿಸುತ್ತಿದ್ದೇವೆ ಎಂದರೆ ಅದು ಇನ್ನೂ ಅಸಹ್ಯ. ಕೊನೆಯದಾಗಿ ಒಂದು ಮಾತು, ಐತಪ್ಪನವರೇ, ನಿಮ್ಮೊಂದಿಗೆ ನಾವಿದ್ದೇವೆ. ಪೊಲೀಸಿನವರು ನಮಗೆ ಸರಿ ಎನಿಸಿದ್ದು ಮಾಡಿದರೆ ಬೆಂಬಲಿಸಿ, ನ್ಯಾಯಪರವಾಗಿ ಮಾಡಿದಾಗ ತುಟಿಪಿಟಿಕ್ ಎನ್ನದವರು ಎಲ್ಲೋ ಕುಳಿತು “ವಿಚಾರ” ಮಂಡಿಸುತ್ತಾ ಇರಬಹುದು.
ಹನುಮಂತ್ ಕಾಮತ್ (ಸಾಮಾಜಿಕ ಕಾರ್ಯಕರ್ತರು)


