
ನಗರದ ಹೊರಪೇಟೆ ವೃತ್ತದಲ್ಲಿ 80 ವರ್ಷದಿಂದ ಕುಂಬಾರಿಕೆ ವಸ್ತುಗಳನ್ನು ಮಾರಾಟ ಮಾಡುತ್ತಿರುವ ನೀಲಾಂಬಿಕೆ ಅವರ ಕುಟುಂಬಕ್ಕೆ ಈ ಬಾರಿಯ ದೀಪಾವಳಿ ಹಾಗೂ ಕಾರ್ತಿಕ ಮಾಸ ಅಷ್ಟೇನು ಸಂತಸ ತಂದಿಲ್ಲ.
ಬರ ಹಾಗೂ ನೋಟು ರದ್ದತಿಯ ಬಿಸಿ, ಸಣ್ಣ ವ್ಯಾಪಾರಿಗಳಿಗೂ ತಟ್ಟಿದೆ. ಕಳೆದ ಸಾಲಿನಲ್ಲಿದ್ದಷ್ಟು ವಹಿವಾಟು ಈ ಬಾರಿ ಇಲ್ಲ. ಒಂದು ದೀಪದ ಬೆಲೆ ₹2 ಆದರೂ ವ್ಯಾಪಾರ ಅಷ್ಟಕಷ್ಟೇ ಎನ್ನುವುದು ನೀಲಾಂಬಿಕೆ ಅಭಿಪ್ರಾಯ.
ಮಣ್ಣಿನ ಹಣತೆ ಹಾಗೂ ಪಿಂಗಾಣಿ ಹಣತೆಗಳನ್ನು ಗುಜರಾತ್, ತಮಿಳುನಾಡಿನಿಂದ ಖರೀದಿಸಿ ತರಲಾಗುತ್ತಿದೆ. ಒಮ್ಮೆ ₹ 50 ಸಾವಿರ ಬಂಡವಾಳ ಹಾಕಿ ತರುತ್ತೇವೆ. ದೀಪಾವಳಿ ಹಾಗೂ ಕಾರ್ತಿಕ ಮಾಸದಲ್ಲಿ ಮಾತ್ರ ಕೊಂಚ ವ್ಯಾಪಾರ ಹೆಚ್ಚಿರುತ್ತಿತ್ತು. ಆದರೆ, ಈ ಬಾರಿ ವ್ಯಾಪಾರ ಕಡಿಮೆಯಾಗಿದೆ. ದೇವಾಲಯಗಳಲ್ಲಿ ಲಕ್ಷ ದೀಪೋತ್ಸವಕ್ಕಾಗಿ ಸಾವಿರಾರು ದೀಪ ಖರೀದಿಸಲು ಬರುತ್ತಿದ್ದವರು ಈಗ ಲಕ್ಷ ದೀಪೋತ್ಸವವನ್ನೇ ನಿಲ್ಲಿಸಿದ್ದಾರೆ. ನೋಟಿನ ಸಮಸ್ಯೆಯ ಕಾರಣ ದೇವಾಲಯ ಸಮಿತಿಗಳು ಖರೀದಿಗೆ ಮುಂದಾಗುತ್ತಿಲ್ಲ. ಮನೆಗಳಲ್ಲಿ ದೀಪ ಬೆಳಗಲು ಬಿಡಿ ಬಿಡಿಯಾಗಿ ಖರೀದಿಸುವವರು ಬಿಟ್ಟರೆ ದೊಡ್ಡ ಪ್ರಮಾಣದಲ್ಲಿ ಯಾರೂ ಖರೀದಿಸುತ್ತಿಲ್ಲ ಎಂದು ತಿಳಿಸಿದರು.

ಹೊರಪೇಟೆಯಲ್ಲಿ ದೀಪ ಹಾಗೂ ಕುಂಬಾರಿಕೆ ವಸ್ತು ಮಾರಾಟ ಮಾಡುವ ನಾಲ್ಕು ಅಂಗಡಿಗಳಿವೆ. ಕೆಲವರು ಮಂಡಿಪೇಟೆ, ಮಾರುಕಟ್ಟೆಯಿಂದ ಖರೀದಿಸಿ ತರುತ್ತಾರೆ. ಆದ್ದರಿಂದ ನಮ್ಮಲ್ಲಿ ವ್ಯಾಪಾರ ಕ್ಷೀಣಿಸಿದೆ ಎಂದರು.
ಪ್ರತಿ ತಿಂಗಳು ₹10 ಸಾವಿರ ವ್ಯಾಪಾರ ಆಗುತ್ತದೆ. ಜೋಡಿ ಹಣತೆಗೆ ₹ 4, ದೀಪ ಹಿಡಿದು ಸ್ವಾಗತಿಸುವ ಗೊಂಬೆಯನ್ನು ತಲಾ ₹ 25 ರಂತೆ ಮಾರಾಟ ಮಾಡುತ್ತೇವೆ. ಮಡಿಕೆ, ಕುಡಿಕೆ, ಒಲೆ ಇನ್ನಿತರ ವಸ್ತುಗಳನ್ನು ಹುಳಿಯಾರು, ತೋವಿನಕೆರೆ, ತುರುವೇಕೆರೆಯಿಂದ ಖರೀದಿಸಿ ತಂದು ಮಾರುತ್ತೇವೆ ಎಂದು ವಿವರಿಸಿದರು.
ಟ್ಯಾಪ್ ಮಡಿಕೆಗಳೂ ಲಭ್ಯ: ಟ್ಯಾಪ್ ಇರುವ ಮಡಿಕೆಗಳೂ ಕೂಡ ಇಲ್ಲಿ ಸಿಗುತ್ತವೆ. ಬೇಸಿಗೆಯಲ್ಲಿ ನೀರನ್ನು ತಂಪಾಗಿಡಲು ಬಹುತೇಕರು ಟ್ಯಾಪ್ ಇರುವ ಮಡಿಕೆಗಳನ್ನು ಖರೀದಿಸುತ್ತಾರೆ ಎಂದು ನೀಲಾಂಬಿಕೆ ಅವರು ತಿಳಿಸಿದರು.
(ಕೃಪೆ : ಪ್ರಜಾವಾಣಿ)

