ಅನಾಥ ಮಕ್ಕಳ ಕರುಣಾಜನಕ ಕಥೆ
ಯಾದಗಿರಿ(ನ.೨೨): ತಂದೆ-ತಾಯಿ ಮೊದಲೇ ಇಲ್ಲ, ಸಾಕುತ್ತಿದ್ದ್ದ ಅಜ್ಜಿಯೂ ಈಚೆಗೆ ನಿಧನರಾಗಿದ್ದರಿಂದ ಪುಟ್ಟಣ ಅಣ್ಣ-ತಂಗಿ ಈಗ ಅನಾಥರಾಗಿದ್ದಾರೆ. ಕೂಲಿ ಮಾಡಿ ತುತ್ತಿನ ಚೀಲ ತುಂಬಿಸಿಕೊಳ್ಳಲು ನಿತ್ಯ ಹೈರಾಣ ಆಗುತ್ತಿದ್ದಾರೆ. ಜತೆಗೆ ಅಕ್ಷರ ಕಲಿಕೆಯನ್ನೂ ಬಿಟ್ಟಿಲ್ಲ.
ಇದು ಯಾವುದೋ ಸಿನಿಮಾ ಕಥೆಯಲ್ಲ. ಇದು ಯಾದಗಿರಿ ತಾಲೂಕಿನ ವಂಕಸಂಬರ ೧೧ ವರ್ಷದ ಬಾಲಕ ಜಗಲಿಂಗ ರಾಮಪ್ಪ ಕುಂಬಾರ ಮತ್ತು ಆತನ ಸಹೋದರಿ ಆರು ವರ್ಷದ ಕವಿತಾಳ ಕರುಣಾಜನಕ ಕಥೆ. ಅಣ್ಣ ತಂಗಿ ಪರಿಸ್ಥಿತಿ ಕಂಡು ಕರುಳು ಕಿತ್ತು ಬರುತ್ತದೆ. ಎಲ್ಲರೊಂದಿಗೂ ಅಡ್ಡಿ ಬೆಳೆಯಬೇಕಾದ ಕಂದಮ್ಮ ಹೆತ್ತವರನ್ನು ಕಳೆದುಕೊಂಡು ಪರದಾಡುತ್ತಿದ್ದಾರೆ.
ಬಾಲಕನಿಗೆ ಐಎಎಸ್ ಅಧಿಕಾರಿಯಾಗುವ ಮಹದಾಸೆ. ಜತೆಗೆ ತಂಗಿಯನ್ನು ಓಡಿಸುವ ಹೊಣೆ. ಆತನ ಕನಸಿಗೆ ನೀರೆರೆಯಬೇಕಾದ ಹೆತ್ತವರು ಇಲ್ಲದ ನೋವಿನ ನಡುವೆ. ಜಗಲಿಂಗ ಗ್ರಮದ ಸರಕಾರೀ ಪ್ರಾಥಮಿಕ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದರೆ, ಆತನ ತಂಗಿ ಕವಿತಾ ಒಂದನೇ ತರಗತಿ ಓದುತ್ತಿದ್ದಾಳೆ. ಓದಿನಲ್ಲಿ ಇಬ್ಬರೂ ಚುರುಕಾಗಿದ್ದಾರೆ.
ಜಗಲಿಂಗ ವಾರದಲ್ಲಿ ಮೂರು ದಿನ ಕೂಲಿ ಮಾಡಿ, ತಾನು ಓದುವ ಜೊತೆಗೆ ತಂಗಿಯನ್ನು ಓದಿಸುತ್ತಾ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾನೆ. ಸ್ವಂತ ಜಮೀನು ಇಲ್ಲ, ಬಂದ ಹಣದಲ್ಲಿ ತನ್ನ ತಂಗಿ ಕವಿತಾಳನ್ನು ಸಲಹುತ್ತಿದ್ದಾನೆ. ಶಾಲೆಯಲ್ಲಿ ಕೊಡುವ ಮಧ್ಯಾಹ್ನದ ಬಿಸಿಯೂಟ ಇಬ್ಬರ ಹೊಟ್ಟೆಗೆ ಆಧಾರ. ತೀರಿ ಹೋದ ಅಜ್ಜಿಯ ಹೆಸರಿನಲ್ಲಿರುವ ಬಿಪಿಎಲ್ ಪಡಿತರ ಚೀಟಿಯನ್ನೇ ಬಳಸಿ ರೇಷನ್ ತರುತ್ತಿದ್ದು, ಈಗದು ರದ್ದು ಆಗುವ ಆತಂಕ ಕಾಡಲಾರಂಭಿಸಿದೆ.
ಮುರುಕು ಗುಡಿಸಲಿನಲ್ಲಿ ಇಬ್ಬರು ಮಕ್ಕಳು ವಾಸಿಸುತ್ತಾರೆ. ಜಗಲಿಂಗನು ಸ್ವಂತ ಅಡುಗೆ ಮಾಡುತ್ತಾನೆ. ನೆರೆಹೊರೆಯವರು ಸಹಾಯ ಮಾಡುತ್ತಾರೆ. ಮನೆಯ ಸುತ್ತಲಿನವರು ಮತ್ತು ಸಂಬಂಧಿಕರು ಊಟ ಕೊಟ್ಟರೆ ತೆಗೆದುಕೊಂಡು ಸೇವಿಸುತ್ತಾನೆ. ತುರ್ತು ಹೊತ್ತಿನ ಆಸರೆಗಾಗಿ ಅನ್ನ ಸಾಂಬಾರು ಮಾಡುವುದು ಕಲಿತಿದ್ದಾನೆ. ಆತನೇ ಅಡುಗೆ ಮಾಡಿ ತಂಗಿಗೆ ಬಡಿಸುತ್ತಾನೆ. ತಾಯಿ ನೆನಪು ಬಂದು ತಂಗಿ ಅತ್ತರೆ, `ಅವ್ವ ಹೊಲಕ್ಕೆ ಹೋಗಿದ್ದಾಳೆ, ಬರುತ್ತಾಳೆ ನೀನು ಊಟ ಮಾಡು’ ಎಂದು ಹೇಳಿ ರಮಿಸುತ್ತೇನೆ ಎಂದು ಹೇಳಿದಾಗ ಕಣ್ಣಾಲಿಗಳು ತೇವಗೊಳ್ಳುತ್ತವೆ. ಸಂಕಷ್ಟದಲ್ಲಿರುವ ಅನಾಥ ಅಣ್ಣ-ತಂಗಿಗೆ ನೆರವು ನೀಡುವ ಮೂಲಕ ಓದಿನ ಕೆಲಸಕ್ಕೆ ಪೋಷಿಸುವ ಕೆಲಸ ಆಗಬೇಕಾಗಿದೆ.
ವಿಧಿಯಾಟಕ್ಕೆ ಕನಲಿ ಹೋದರು :
ಜಗಲಿಂಗನ ತಾಯಿ ಬುಗ್ಗಮ್ಮಳನ್ನು ತೆಲಂಗಾಣಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ಪತಿ ರಾಮಪ್ಪ ಮನೆ ಅಳಿಯನಾಗಿ ಬಂದಿದ್ದ. ಕುಟುಂಬದಲ್ಲಿ ಬಿರುಕು ಮೂಡಿದ್ದರಿಂದ ಆರು ವರ್ಷಗಳ ಹಿಂದೆ ಬಿಟ್ಟು ಹೋದಾತ ಮರಳಿ ಬಂದಿಲ್ಲ. ಗಂಡ ಹೋದ ಬಳಿಕ ಬುಗ್ಗಮ್ಮ ತನ್ನ ಎರಡು ಮಕ್ಕಳನ್ನು ಕೂಲಿ ಮಾಡಿ ಸಲಹುತ್ತಿದ್ದಳು. ಆದರೆ ವಿಧಿಯಾಟದಿಂದ ಮೂರು ವರ್ಶಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಳು. ಆಕೆ ತೀರಿಕೊಂಡ ಬಳಿಕ ಅಜ್ಜಿ ಶಿವಮ್ಮಳ ನೆರಳಿನಡಿ ಬದುಕುತ್ತಿದ್ದರು. ಅಜ್ಜಿಯೂ ತಿಂಗಳ ಹಿಂದೆ ಮೃತಪಟ್ಟಿದ್ದರಿಂದ ಎರಡು ಮಕ್ಕಳು ಅನಾಥವಾಗಿದ್ದಾರೆ. ಮಕ್ಕಳ ಸ್ಥಿತಿ ಕಂಡು ಊರವರು ಮಮ್ಮಲ ಮರುಗುತ್ತಿದ್ದಾರೆ.
ನೀವು ಸಹಾಯ ಮಾಡಬಹುದು :
ಅನಾಥ ಮಕ್ಕಳಾದ ಜಗಲಿಂಗ ಮತ್ತು ಕವಿತಾಳಿಗೆ ನೆರವು ನೀಡಲು ಇಚ್ಚಿಸುವುದಾದರೆ ಜಗಲಿಂಗ ತಂದೆ ರಾಮಪ್ಪ ಅವರ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಖಾತೆ 11185101022984 (IFSC code pkgb 0011185) ಗೆ ಹಣ ಜಮಾ ಮಾಡಬಹುದು ಇಲ್ಲವೇ ಮಕ್ಕಳನ್ನು ಭೇಟಿ ಮಾಡಿ ನೆರವು ನೀಡಬಹುದಾಗಿದೆ.
(ಕೃಪೆ : ವಿಜಯ ಕರ್ನಾಟಕ)

