ಪ್ರತಿ ವರ್ಷದಂತೆ ಈ ವರ್ಷವೂ ಸಂಭ್ರಮ, ಸಡಗರ ಹೊತ್ತು ತಂದಿದೆ. ಆದರೆ, ಅಂಧಕಾರವನ್ನು ಅಳಿಸಿ ಬೆಳಕು ಹರಿಸುವ ಹಣತೆಗಳನ್ನು ತಯಾರಿಸುವ ಕುಂಬಾರರ ಬದುಕು ಮಾತ್ರ ಅಕ್ಷರಶಃ ಕತ್ತಲೆಯಲ್ಲಿ ಮುಳುಗಿದೆ.
ಚಿಕ್ಕೋಡಿ(ಅ. ೧೯): ದೀಪಗಳ ಹಬ್ಬ ದೀಪಾವಳಿ ಮತ್ತೆ ಬಂದಿದೆ. ತಾಲ್ಲೂಕಿನ ಕೋಥಳಿ ಗ್ರಾಮದ ಹತ್ತಾರು ಕುಟುಂಬಗಳು ನಿತ್ಯವೂ ಸಾವಿರಾರು ಪ್ರಣತಿಗಳನ್ನು ತಯಾರಿಸುತ್ತಿವೆ.
ಪ್ರತಿ ವರ್ಷದಂತೆ ಈ ವರ್ಷವೂ ಸಂಭ್ರಮ, ಸಡಗರ ಹೊತ್ತು ತಂದಿದೆ. ಆದರೆ, ಅಂಧಕಾರವನ್ನು ಅಳಿಸಿ ಬೆಳಕು ಹರಿಸುವ ಹಣತೆಗಳನ್ನು ತಯಾರಿಸುವ ಕುಂಬಾರರ ಬದುಕು ಮಾತ್ರ ಅಕ್ಷರಶಃ ಕತ್ತಲೆಯಲ್ಲಿ ಮುಳುಗಿದೆ.
ಇಲ್ಲಿನ ಕುಂಬಾರ ಕುಟುಂಬಗಳು ತಯಾರಿಸುವ ಸಾಂಪ್ರದಾಯಿಕ ಮಣ್ಣಿನ ಪ್ರಣತಿ (ಹಣತೆ)ಗಳಿಗೆ ಮಹಾರಾಷ್ಟ್ರದಲ್ಲಿ ಭಾರಿ ಬೇಡಿಕೆ. ಇಲ್ಲಿಂದ ಪ್ರತಿ ವರ್ಷ ದೀಪಾವಳಿಗೆ ಲಕ್ಷ, ಲಕ್ಷ ಪ್ರಣತಿಗಳು ಅಲ್ಲಿನ ವಿವಿಧ ಮಾರುಕಟ್ಟೆಗಳಿಗೆ ಸರಬರಾಜು ಆಗುತ್ತವೆ. ಆದರೂ, ಇತ್ತೀಚಿನ ವರ್ಷಗಳಲ್ಲಿ ಉತ್ಪಾದನಾ ವೆಚ್ಚ ಹೆಚ್ಚಾಗಿ ನಿರೀಕ್ಷಿತ ಲಾಭ ದೊರಕುತ್ತಿಲ್ಲ.
ಗ್ರಾಮದಲ್ಲಿ 30 ಕುಂಬಾರ ಕುಟುಂಬಗಳಿದ್ದು, ಆ ಪೈಕಿ ಸುಮಾರು 20 ಕುಟುಂಬಗಳು ಉಪಜೀವನಕ್ಕಾಗಿ ಇದನ್ನೇ ನೆಚ್ಚಿಕೊಂಡಿವೆ. ಆದರೆ, ಕುಂಬಾರಿಕೆಯಿಂದ ಕುಟುಂಬ ನಿರ್ವಹಣೆ ಹೊರತುಪಡಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಆಗುತ್ತಿಲ್ಲ.
‘ಮಹಾರಾಷ್ಟ್ರದ ಸಾಂಗಲಿ, ಮಿರಜ್, ತಾಸಗಾಂವ, ಮಾಧವನಗರ ಮುಂತಾದ ಪಟ್ಟಣಗಳಿಗೆ ಪ್ರತಿ ವರ್ಷ ಲಕ್ಷಾಂತರ ಪ್ರಣತಿಗಳನ್ನು ತಯಾರಿಸಿ ಇಲ್ಲಿಂದ ಸರಬರಾಜು ಮಾಡಲಾಗುತ್ತಿದೆ. ಪ್ರತಿ ವರ್ಷ ದೀಪಾವಳಿಗೂ ಮುನ್ನವೇ ಮಹಾರಾಷ್ಟ್ರದ ವ್ಯಾಪಾರಿಗಳು ತಮಗೆ ಇಂತಿಷ್ಟು ಪ್ರಣತಿಗಳು ಬೇಕು ಎಂದು ಆರ್ಡರ್ ಕೊಡುತ್ತಾರೆ. ಅವರ ಬೇಡಿಕೆಗೆ ತಕ್ಕಂತೆ ಎರಡು ತಿಂಗಳು ಶ್ರಮ ವಹಿಸಿ ಹಣತೆಗಳನ್ನು ತಯಾರಿಸಿ ಕೊಡುತ್ತೇವೆ’ ಎಂದು ರಾಜು ಕುಂಬಾರ ಹೇಳುತ್ತಾರೆ.

‘ಪ್ರಸಕ್ತ ವರ್ಷ ಒಂದು ಸಾವಿರ ಹಣತೆಗಳಿಗೆ ಸರಾಸರಿ ₹ 1400ಗಳಿಗೆ ಮಾರಾಟ ಮಾಡಲಾಗುತ್ತಿದ್ದು, ಒಂದು ಸಾವಿರ ಹಣತೆ ತಯಾರಿಸಲು ಮಣ್ಣು, ಸುಡಲು ಕಟ್ಟಿಗೆ, ಸಾರಿಗೆ ವೆಚ್ಚ ಹಾಗೂ ಇತರೆ ಕಚ್ಚಾವಸ್ತುಗಳು ಸೇರಿ ಸುಮಾರು ₹ 800ರಿಂದ ₹ 900 ಖರ್ಚು ಬರುತ್ತದೆ. ಉತ್ಪಾದನಾ ವೆಚ್ಚವನ್ನು ಕಳೆದು ತಮ್ಮ ಉಪಜೀವನ ನಡೆಸಲು ಮಾತ್ರ ಈ ಉದ್ಯೋಗ ನೆರವಾಗುತ್ತಿದೆ. ದಿನವೂ ಕೂಲಿ ಅರಸಿಕೊಂಡು ಹೋಗುವುದ ಕ್ಕಿಂತ ಕುಲಕಸುಬು ಮುಂದುವರಿಸಿ ಕೊಂಡು ಹೋಗುವ ಮೂಲಕ ಕುಟುಂಬ ನಿರ್ವಹಣೆ ಮಾಡುತ್ತೇವೆ’ ಎಂದರು.
ಗ್ರಾಮದ ಕುಂಬಾರ ಕುಟುಂಬಗಳಲ್ಲಿ 6ರಿಂದ 7 ಜನ ಬಿ.ಇಡಿ ಮೊದಲಾದ ಪದವಿ ಪಡೆದರೂ ನೌಕರಿ ಸಿಗದೇ, ಕೆಲವರು ಖಾಸಗಿ ಸಂಸ್ಥೆಗಳಲ್ಲಿ ತಾತ್ಕಾಲಿಕ ನೌಕರಿಯೊಂದಿಗೆ ಕುಂಬಾರಿಕೆಯನ್ನೂ ಮಾಡುತ್ತಿದ್ದರೆ, ಕೆಲವರು ಇದೇ ವೃತ್ತಿ ಅವಲಂಬಿಸಿದ್ದಾರೆ.
‘ಕುಂಬಾರ ಕೈಯ್ಯಾಗಿನ ಪಣತೀನ ಹಬ್ಬಕ್ಕ ಶ್ರೇಷ್ಠ ಅನ್ನೂ ಕಾಲವೊಂದಿತ್ತು. ಮೊದಲು ಇಲ್ಲಿಂದಲೇ 3 ಲಕ್ಷ ಪಣತಿ ಕಳಿಸ್ತಿದ್ವಿ. ಆದ್ರ, ಈಗ ಜನಾ ಪ್ಲಾಸ್ಟರ್್ ಆಫ್್ ಪ್ಯಾರಿಸ್ ಅಥವಾ ಚೀನಿಮಣ್ಣಿನ ಪಣತಿ ಹೆಚ್ಚಿಗೆ ಬಳಸಾಕತ್ತಾರ. ಇದ್ರಿಂದ ಪರಿಸರ ಸ್ನೇಹಿ ಮಣ್ಣಿನ ಪ್ರಣತಿಗಳಿಗಿ ಬೇಡಿಕೆ ಕಡಿಮಿ ಆಗೈತಿ’ ಎನ್ನುತ್ತಾರೆ ಬಿ.ಇಡಿ. ಪದವೀಧರ ಶ್ರೀಕಾಂತ ಕುಂಬಾರ.
‘ನಮ್ಮ ಮಕ್ಕಳಿಗೂ ಕುಂಬಾರಿಕೆ ಕಲೆಯನ್ನು ಕಲಿಸಬೇಕು ಎಂಬ ಇಚ್ಛೆ ಇದೆ. ಆದರೆ, ಬರಬರ್ತಾ ಉತ್ಪಾದನಾ ವೆಚ್ಚ ಹೆಚ್ಚಿಗಿ ಆಗಾಕತೈತೀ. ಬೇಡಿಕಿ ಕುಗ್ಗಾಕತೈತಿ. ಇದರಿಂದ ಮಕ್ಕಳ ಭವಿಷ್ಯ ಹೆಂಗ್ ಅನ್ನೂ ಚಿಂತೀ ಕಾಡಾಕತೈತಿ’ ಎಂಬುದು ಅವರ ಅಳಲು.
‘ಸ್ಥಳೀಯವಾಗಿ ಸಿಗುವ ಕೆಂಪು ಮತ್ತು ಕಪ್ಪು ಮಣ್ಣು ಹಾಗೂ ಬೀಡಿಯಿಂದ ತರುವ ಜೇಡಿಮಣ್ಣಿನಲ್ಲಿ ಕಟ್ಟಿಗೆ ಹೊಟ್ಟನ್ನು ಮಿಶ್ರಣ ಮಾಡಿ ತಯಾರಿಸುವ ಪ್ರಣತಿಗಳಿಗೆ ವಿಶೇಷ ಬೇಡಿಕೆ ಇದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ಅಥವಾ ಚೀನಿಮಣ್ಣಿನ ಪ್ರಣತಿಗಳಿಗಿಂತ ತಾವು ತಯಾರಿಸುವ ಮಣ್ಣಿನ ಪ್ರಣತಿಗಳು ಕಡಿಮೆ ಬೆಲೆಗೆ ಸಿಗುವುದರಿಂದಲೂ ದೀಪ ಹಚ್ಚಲು ಮಣ್ಣಿನ ಪ್ರಣತಿಗಳನ್ನೇ ಉಪಯೋಗಿಸುವುದು ಒಳಿತು’ ಎನ್ನುತ್ತಾರೆ ಅವರು.
‘ಸಂಕಷ್ಟದಲ್ಲಿರುವ ಕುಂಬಾರ ಕುಟುಂಬಗಳ ನೆರವಿಗೆ ಸರ್ಕಾರ ಧಾವಿಸಬೇಕು. ಗ್ರಾಮದಲ್ಲಿ ಕೆಲವು ಕುಟುಂಬಗಳಿಗೆ ಕಳೆದ ಹತ್ತಾರು ವರ್ಷಗಳ ಹಿಂದೆ ಸರ್ಕಾರ ಬೇರಿಂಗ್ ತಿಗರಿ ನೀಡಿದೆ. ಅದನ್ನು ಹೊರತುಪಡಿಸಿ ಯಾವುದೇ ಸವಲತ್ತು ನೀಡಿಲ್ಲ. ಕೆಲವು ಕುಂಬಾರ ಕುಟುಂಬಗಳು ಸಾಲ ಮಾಡಿ ವಿದ್ಯುತ್ ಚಾಲಿತ ತಿಗರಿ ಖರೀದಿಸಿವೆ. ಖಾನಾಪುರದಲ್ಲಿ ದೇಶದಲ್ಲೇ ಏಕೈಕ ಕೇಂದ್ರಿಯ ಕುಂಬಾರಿಕೆ ಕೈಗಾರಿಕೆ ತರಬೇತಿ ಕೇಂದ್ರವಿದ್ದು, ಆ ಮೂಲಕ ವೃತ್ತಿ ಕೌಶಲ ವೃದ್ಧಿಗಾಗಿ ತರಬೇತಿ ನೀಡಿ ಸೂಕ್ತ ಆರ್ಥಿಕ ನೆರವನ್ನೂ ನೀಡಲಾಗುತ್ತಿದೆ. ಆಸಕ್ತ ಕುಂಬಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರ್ನಾಟಕ ಪ್ರದೇಶ ಕುಂಬಾರರ ಸಂಘದ ಉಪಾಧ್ಯಕ್ಷ ಬಾಳಾಸಾಹೇಬ ಎ. ಕುಂಬಾರ ತಿಳಿಸಿದರು.
***
ಸರ್ಕಾರ ಗ್ರಾಮದಲ್ಲಿ ಕುಂಬಾರಿಕೆ ಭಟ್ಟಿಗಳಿಗೆ ಶೆಡ್ ನಿರ್ಮಿಸಬೇಕು. ಹಾಗೂ ವಿದ್ಯುತ್ ಚಾಲಿತ ತಿಗರಿಗಳನ್ನು ನೀಡುವ ಅಗತ್ಯವಿದೆ
–ಬಾಳಾಸಾಹೇಬ ಕುಂಬಾರ, ಉಪಾಧ್ಯಕ್ಷ, ಕರ್ನಾಟಕ ಕುಂಬಾರರ ಸಂಘ
ಸುಧಾಕರ ತಳವಾರ
(ಕೃಪೆ : ಪ್ರಜಾವಾಣಿ)



