ಆಟಿ ಸಂಭ್ರಮಕ್ಕೆ ಕಡಿವಾಣ ಹಾಕಿ ರೂಪುರೇಷೆ ನಿರ್ಮಿಸಲು ಸಂಪನ್ಮೂಲ ವ್ಯಕ್ತಿಗಳ ಅಭಿಮತ
ಮಂಗಳೂರು : ಹಸಿದ ಹೊಟ್ಟೆ .. ಹರಿದ ಬಟ್ಟೆ.. ಧೋ ಎಂದು ಸುರಿವ… ಮಳೆ ಜಾರುವ.., ನೆಲ ಸೋರುವ ಮನ ….
ಇವು ಆಟಿಯ ನೋವಿನ ಬಡತನವನ್ನು ತಿಳಿಹೇಳುವ ಚಿತ್ರಣ. ಸುಮಾರು 35/40 ವರ್ಷ ಪ್ರಾಯದ ಬಡ ಕುಟುಂಬದ ಹಳ್ಳಿಯಿಂದ ಬಂದವರಿಗೆ ಮಾತ್ರ ತಿಳಿದಿರುತ್ತದೆ ಇಂಥ ದಿನಗಳು.. ಅಂತಹ ನೋವಿನ ದಿನಗಳನ್ನ ಆಚರಣೆ ಅಂತ ಮಾಡುವುದು ಸರಿಯಲ್ಲ. ಅದು ಆಟಿಯ ನೆನಪು ಮಾತ್ರ ಆಗಲು ಸಾಧ್ಯ ಎಂದು ಸಾಮಾಜಿಕ ಚಿಂತಕ, ವೈದ್ಯ ಕನ್ನಡಕಟ್ಟೆಯ ಅಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಅಭಿಪ್ರಾಯಪಟ್ಟರು.
ಅವರು ಕರ್ನಾಟಕ ತುಳು ಅಕಾಡಮಿ ಹಾಗು ಆಯುಷ್ ಇಲಾಖೆ, ಆಯುಷ್ ಫೌಂಡೇಶನ್ನ ಜಂಟಿ ಸಹಯೋಗದಲ್ಲಿ `ಆಯುರ್ವೇದ ಹಾಗು ಆಟಿಯ ಆಚರಣೆ’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಾ ,ಆಚರಣೆ ಅಂತಾದರೆ ಅದು ಸಂತಸದ ಕ್ಷಣವಾಗಿರಬೇಕು. ಆಟಿಯ ನೋವು ಬಡತನ ಯಾವತ್ತೂ ಸಂತಸದ ಕ್ಷಣ ಆಗಿಯೇ ಇರಲಿಲ್ಲ. ಹಾಗಾಗಿ ಆಟಿಯ ಆಚರಣೆ ಎಂಬ ಸಂಭ್ರಮ ಸರ್ವತಾ ತಪ್ಪು ಅಂದರು.
ಅಂದು ಜನರು ಗಡ್ಡೆ ಗೆಣಸು ಸೊಪ್ಪುಗಳನ್ನ ಹೊಟ್ಟೆಗಿಲ್ಲದೆ ತಿಂದರೇ ವಿನಹ ಫ್ಯಾಷನ್ ಗಾಗಿ ತಿಂದಿಲ್ಲ. ತಿನ್ನುವಾಗ ಸ್ವಲ್ಪಔಷಧೀಯ ಗುಣವಿರುವ ಸೊಪ್ಪುಗಳನ್ನ ಆರಿಸಿಕೊಂಡರು. ಅದು ಆಯುರ್ವೇದದ ಕೊಡುಗೆ. ಆಯುರ್ವೇದ ಎಂಬುದು ಬರೀ ಔಷಧ ಶಾಸ್ತ್ರ ಅಥವಾ ಸಸ್ಯಶಾಸ್ತ್ರ ಎನ್ನುವುದಕ್ಕಿಂತ ನಾವು ಅದನ್ನ ಜೀವನಶಾಸ್ತ್ರ ಅಂತ ನಾವು ಒಪ್ಪಿಕೊಂಡು ಬದುಕಿದ್ದೇವೆ.
ಆಟಿಯ ದಿನಗಳಲ್ಲಿ ಆಯುರ್ವೇದದ ತಜ್ಞರ ಮೂಲಕ ಮಕ್ಕಳಿಗೆ ಹಳ್ಳಿಗೆ ಕರೆದುಕೊಂಡು ಹೋಗಿ ಗಿಡಗಳ ಪರಿಚಯ ಮಾಡಬೇಕು. ಅಂದಿನ ಬಡತನದ ನೆನಪಿಗಾಗಿ ಆಟಿಯಲ್ಲಿ ಒಂದು ಹೊತ್ತು ಮಾತ್ರ ಉಂಡು, ಉಳಿತಾಯ ಮಾಡಿ ನಾವು ಹುಟ್ಟಿದ ಹಳ್ಳಿ ಯಾ ಹತ್ತಿರದ ಹಳ್ಳಿಯ ಬಡವರ ಕೇರಿಗೆ ಹೋಗಿ ಅವರ ಜೊತೆ ಬೆರೆತು, ಅಲ್ಲಿಯೇ ಸೊಪ್ಪು, ಗಡ್ಡೆ, ಗೆಣಸು ಸಂಗ್ರಹಿಸಿ ಯುವಕರಿಗೆ-ಮಕ್ಕಳಿಗೆ ಅವುಗಳನ್ನ ಪರಿಚಯಿಸಿ, ಹಳ್ಳಿಯ ಬಡತನದಲ್ಲಿರುವವರಿಗೆ ಆಟಿಯಲ್ಲಿ ಉಳಿಸಿದ ಉಳಿತಾಯದ ಹಣದಿಂದ ಸಹಾಯ ಮಾಡಿದರೆ ಆಟಿಯ ಆಚರಣೆ ಹೆಚ್ಚು ಅರ್ಥಪೂರ್ಣವಾಗುತ್ತದೆ. ಅದುಬಿಟ್ಟು ಪಾಯಸ, ಹೋಳಿಗೆ, ಲಾಡು, ಕೋಳಿ ಸುಕ್ಕ, ಎಳ್ಳು ಉಂಡೆ ಬಡಿಸುತ್ತಾ.. ಜರಿಸೀರೆ, ಬಂಗಾರದ ಬಳೆ ಹಾಕಿಕೊಂಡು ಪಾಶ್ಚಾತ್ಯ ಹಾಡುಗಳಿಗೆ ನಲಿಕೆ ಸರಿಯಲ್ಲ. ಆಚರಣೆಯ ಹೆಸರಲ್ಲಿ ಅಂದಿನ ನೋವಿನ ದಿನಗಗಳನ್ನ ಗೇಲಿ ಮಾಡಬಾರದು ಎಂಬ ವಾದವನ್ನ ಮಂಡಿಸಿದರು.
ಆಯುಷ್ ಹಾಗು ಆಯುರ್ವೇದ ತಜ್ಞ ವೈದ್ಯರಾದ ಡಾ. ಸಂದೀಪ್ ಬೇಕಲ್ , ಆಳ್ವಾಸ್ ಕಾಲೇಜಿನ ಡಾ. ಸುಬ್ರಮಣ್ಯ ಪದ್ಯಾಣ, ಆಯುಷ್ ಫೌಂಡೇಶನ್ ನ ಡಾ. ಆಶಾ ಜ್ಯೋತಿ ರೈ ,ಆಯುಷ್ ವೈದ್ಯಾಧಿಕಾರಿ ಡಾ. ಮೊಹಮ್ಮದ್ ಇಕ್ಬಾಲ್ ಆಟಿಯ ದಿನಗಳಲ್ಲಿ ಆಯುರ್ವೇದದ ಕಷಾಯ ಹಾಗು ಗಡ್ಡೆ ಗೆಣಸುಗಳ ಮಹತ್ವ ಹಾಗು ಸಾಧಕ ಬಾಧಕ ಗಳ ಬಗ್ಗೆ ಮಾಹಿತಿ ನೀಡಿ ಆಟಿಯ ವೈಭವೀಕರಣ ಸಲ್ಲದು ಅಂದರು. ಸಂಪನ್ಮೂಲ ವ್ಯಕ್ತಿ ಗಳಾಗಿದ್ದ ದಯಾನಂದ ಕತ್ತಲಸಾರ್ ಆಟಿಯ ಮಾಯೆ ಮದ್ದು ಬಗ್ಗೆ ಮಾಹಿತಿ ನೀಡಿದರು .
ದ. ಕ ಜಿಲ್ಲಾ ಮಹಿಳಾ ಒಕ್ಕೂಟದ ವಿಜಯಲಕ್ಷ್ಮೀ . ಬಿ. ಶೆಟ್ಟಿ, ಆಯುಷ್ ನ ಡಾ. ನಾರಾಯಣ ಅಸ್ರ, ಡಾ. ಸತೀಶ್ ಕೃಷ್ಣ , ತುಳುಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಎಂ. ಜಾನಕಿ ಬ್ರಹ್ಮಾವರ, ಸದಸ್ಯರಾದ ಡಿ. ಎಮ್ ಕುಲಾಲ್ , ರೂಪಕಲಾ ಆಳ್ವ, ಮೋಹನ್ ಕೊಪ್ಪಲ. ರಿಜಿಸ್ಟ್ರಾರ್ ಚಂದ್ರ ಹಾಸ ರೈ ಮುಂತಾದವರು ಸಂವಾದ ಕಾರ್ಯಕ್ರಮವನ್ನು ಸಂಯೋಜಿಸುವುದರ ಜೊತೆಗೆ ಸಂವಾದದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಪ್ರಜಾವಾಣಿಯ ರಾಜಲಕ್ಷ್ಮೀ ಕೋಡಿಬೆಟ್ಟು, ಕರಾವಳಿ ಲೇಖಕಿಯರ ಕೂಟದ ಕೆ. ವಿ. ರೋಹಿಣಿ, ಮಂಜುಳಾ ಸುಕುಮಾರ, ಡಾ. ವಿಶ್ವನಾಥ್ ಬಡಿಕಾನ, ಡಾ. ಕಿಶೋರ ಕುಮಾರ ಶೇಣಿ ಮುಂತಾದ ಚಿಂತಕರ ಜೊತೆಗೂಡಿ ಆಟಿ ಆಚರಣೆಯ ಹೆಸರಲ್ಲಿ ದಾರಿ ತಪ್ಪುತ್ತಿದೆ ಅದನ್ನ ಸರಿದಾರಿಗೆ ತರಬೇಕು. ಶಾಲಾ ಮಕ್ಕಳಿಗೆ ಇದನ್ನ ತಿಳಿಹೇಳಬೇಕು. ಸಂಭ್ರಮಕ್ಕೆ ಕಡಿವಾಣಹಾಕಬೇಕು ತುಳು ಅಕಾಡೆಮಿ ವತಿಯಿಂದ ಇಂತಹ ಕೂಟ ಗಳಿಗೆ ಸಹಾಯ ನೀಡುವಾಗ ಅಂತಹ ಸಂಘಟನೆ ಗಳಿಗೆ ಮಾರ್ಗ್ ದರ್ಶನದ ಜೊತೆ ಸೂಕ್ತ ಕಿವಿ ಮಾತು ಹೇಳಬೇಕು. ನೋವಿನ ದಿನಗಳ ನೆನಪು ಆಚರಣೆಯ ಹೆಸರಲ್ಲಿ ವ್ಯವಹಾರವಾಗಿ ಬದುಕುವ ದಾರಿಯಾಗಿ ಪರಿವರ್ತನೆಯಾಗಬಾರದು ಎಂಬ ಒಟ್ಟಾಭಿಪ್ರಾಯ ಮೂಡಿಬಂತು. ಜಾನಕೀ ಬ್ರಹ್ಮಾವರ ಅಧ್ಯಕ್ಷತೆ ವಹಿಸಿದ್ದರು. ಡಿ. ಎಂ. ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು.



