ಬೆಂಗಳೂರು: ‘ಅರಮನೆ’ ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಸಮಕಾಲೀನ ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರಾದ ಕುಂ. ವೀರಭದ್ರಪ್ಪ ಅವರ ಹೊಸ ಕಾದಂಬರಿ ‘ನಿಜಲಿಂಗ’ ಬಿಡುಗಡೆಗೆ ಸಿದ್ಧವಾಗಿದೆ.
ಚೋರ ಕಲೆಯ ನೀತಿಕೋಶ, ನಂಬಿಕೆಗಳು, ಜನಪ್ರಿಯತೆಗಾಗಿ ಜೇಬುಗಳ್ಳನ ಮನೆಯಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮುಖ್ಯಮಂತ್ರಿ… ಹೀಗೆ ರಾಜಕೀಯ, ಸಿನಿಮಾ ಲೋಕದ ವಿಡಂಬನೆ ಮುಂತಾದವನ್ನು ಚಿತ್ರಿಸಿರುವ ಈ ಕಾದಂಬರಿಯ ಕುರಿತು ಸ್ವತಃ ಕುಂವೀ ಅವರಿಗೇ ವಿಶೇಷ ಪ್ರೀತಿಯಿದೆ. ಪ್ರಸಿದ್ಧ ವಿಮರ್ಶಕ ಓ.ಎಲ್. ನಾಗಭೂಷಣ ಸ್ವಾಮಿ ಅವರ ಮುನ್ನುಡಿ ಹಾಗೂ ಇನ್ನೊಬ್ಬ ವಿಮರ್ಶಕ ಸಿ. ಎನ್. ರಾಮಚಂದ್ರನ್ ಅವರ ಬೆನ್ನುಡಿ ಕಾದಂಬರಿಗಿದೆ.
ಕಾದಂಬರಿ ಅನೇಕ ಕುತೂಹಲಗಳನ್ನೊಳಗೊಂಡಿದೆ. ಇದರಲ್ಲಿ ನಿಜಲಿಂಗನ ಪಾತ್ರ ಪ್ರಧಾನವಾದುದು. ಕಾರಣಾಂತರದಿಂದ ಕಳ್ಳರ ಗುಂಪಿನ ನಡುವೆ ಬೆಳೆಯುವ ಅವನ ವ್ಯಕ್ತಿತ್ವದ ಶಕ್ತಿ-ಓರೆಕೋರೆಗಳು ಇದರ ಒಂದು ಮುಖ್ಯ ಎಳೆ. ಬಳ್ಳಾರಿ ಸುತ್ತಮುತ್ತಲಿನ ಪರಿಸರದ ಪಾತ್ರಗಳನ್ನೇ ಹೆಚ್ಚು ಸೃಷ್ಟಿಸುತ್ತಿದ್ದ ಕುಂ.ವೀ., ಈ ಸಲ ತೆಂಗು, ಕಾಫಿ ಬೆಳೆಯುವ ಅರಸೀಕೆರೆ ಮತ್ತು ಸಕಲೇಶಪುರದ ಕಡೆಗೂ ಮನಸ್ಸು ಹರಿಸಿ ಹೊಸ ಬಗೆಯ ಪಾತ್ರಗಳನ್ನು ನಿರ್ವಿುಸಿರುವುದು ಕುತೂಹಲಕರ. ಅರ್ಧ ವಾಸ್ತವಿಕ, ಅರ್ಧ ಕಾಲ್ಪನಿಕ ಉಳಿದದ್ದು ಐತಿಹಾಸಿಕ-ಎಂಬ ವಿನ್ಯಾಸದಲ್ಲಿ ಈ ಕಾದಂಬರಿ ಒಂದೂವರೆ ವರ್ಷದ ಅವಧಿಯಲ್ಲಿ ರಚನೆಯಾಗಿದೆ. ರೋಚಕ ಘಟನೆಗಳು, ತಿರುವುಗಳ ಮೂಲಕ ಬ್ರಿಟಿಷ್ ಕಾಲದ ಭಾರತ ಮತ್ತು ಸ್ವಾತಂತ್ರ್ಯಾನಂತರದ ಭಾರತದ ಕತೆಗಳು ಇದರೊಳಗೆ ಹೆಣೆದುಕೊಂಡಿವೆ.
ಬೆಂಗಳೂರಲ್ಲಿ ಬಿಡುಗಡೆ: 25ರ ಸಂಭ್ರಮದಲ್ಲಿರುವ ಅಥಣಿಯ ಅನುಪಮಾ ಪ್ರಕಾಶನ ಕಾದಂಬರಿ ಪ್ರಕಟಿಸಿದ್ದು ಆಗಸ್ಟ್ 14ರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಬಿಡುಗಡೆಯಾಗಲಿದೆ.
ನೃಪತುಂಗ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುಂವೀ ಅವರ 18ನೆಯ ಕಾದಂಬರಿ ‘ನಿಜಲಿಂಗ’. 1980ರಲ್ಲಿ ಅವರ ಮೊದಲ ಕಾದಂಬರಿ ‘ಕಪ್ಪು’ ಪ್ರಕಟವಾಯಿತು. ನಂತರ ಬೇಲಿ ಮತ್ತು ಹೊಲ, ಶಾಮಣ್ಣ, ಆರೋಹಣ, ಅರಮನೆ…ಹೀಗೆ ನಿರಂತರವಾಗಿ ಕಾದಂಬರಿಗಳನ್ನು ಬರೆಯುತ್ತ ಬಂದಿದ್ದಾರೆ. ಭಗವತಿ ಕಾಡು, ಕೂರ್ವವತಾರ ಸೇರಿದಂತೆ ಹತ್ತಕ್ಕೂ ಹೆಚ್ಚು ಕಥಾ ಸಂಕಲನಗಳನ್ನು ನೀಡಿರುವ ಅವರು ತೆಲುಗು ಭಾಷೆಯ 300ಕ್ಕೂ ಹೆಚ್ಚು ಕಥೆಗಳನ್ನು ಅನುವಾದಿಸಿದ್ದಾರೆ. ‘ಗಾಂಧಿ ಕ್ಲಾಸು’ ಅವರ ಆತ್ಮಕಥೆ. ಅವರ ಕಥೆ, ಕಾದಂಬರಿಗಳನ್ನು ಆಧರಿಸಿ ಏಳು ಸಿನಿಮಾಗಳಾಗಿವೆ. ಕುಂವೀ ಸಾಹಿತ್ಯ ಕುರಿತು ಈವರೆಗೆ ಏಳು ಪಿಎಚ್.ಡಿ. ಮಹಾಪ್ರಬಂಧಗಳು, ಒಂಭತ್ತು ಎಂ.ಪಿಲ್.ಪ್ರಬಂಧಗಳು ಪ್ರಕಟವಾಗಿವೆ.
ನಿಜಲಿಂಗ ನನ್ನ 18ನೇ ಕಾದಂಬರಿ ಎನಿಸಿದರೂ ಬರೆದವನಿಗೆ ಹೆಚ್ಚು ತೃಪ್ತಿ ನೀಡಿದ ಮೂರನೇ ಕೃತಿ. ಇದರ ವಸ್ತು ಹೊಳೆದದ್ದು ವಾಸ್ತವವಾಗಿ ಎಪ್ಪತ್ತರ ದಶಕದಲ್ಲಿ. ಕೊಟ್ಟೂರಿಗೆ ಸಮೀಪದ ಹಳ್ಳಿಯಲ್ಲಿ ಇಂಥದೊಂದು ವಿಲಕ್ಷಣ ಘಟನೆ ಸಂಭವಿಸಿದಾಗ ಆಗಿನ್ನೂ ವಿದ್ಯಾರ್ಥಿಯಾಗಿದ್ದೆ. ಅದನ್ನು ಚಿಕ್ಕ ಕಥೆಯಾಗಿಸಿದ್ದು ದಶಕದ ಬಳಿಕ. 1988ರಿಂದ ಮನಸ್ಸಿನಲ್ಲಿ ಸೃಜನಶೀಲವಾಗಿ ಕಾಡುತ್ತಿದ್ದ ಇದನ್ನು ಈ ಮಟ್ಟದ ಕಾದಂಬರಿಯನ್ನಾಗಿಸಲು ಹದಿನೆಂಟು ತಿಂಗಳು ಹಿಡಿಯಿತು. ನನ್ನ ಪಂಚೇಂದ್ರಿಯಗಳು ದಶಕಗಳ ಕಾಲ ಗ್ರಹಿಸಿದ ಆಯಾ ಕಾಲಘಟ್ಟದ ಅನುಭವಗಳು ಕಾದಂಬರಿಯೊಳಗೆ ವಿವಿಧ ಪಾತ್ರಗಳನ್ನು ಧರಿಸಿವೆ. ನನ್ನ ಇನ್ನಿತರ ಕೃತಿಗಳಲ್ಲಿ ಬಳಕೆಯಾಗಿರುವ ಭಾಷೆಗೂ ಇದರಲ್ಲಿನ ಭಾಷೆಗೂ ವ್ಯತ್ಯಾಸವಿದೆ.— ಕುಂ. ವೀರಭದ್ರಪ್ಪ ಕಾದಂಬರಿಕಾರ
———————————————————————————————————
‘ವ್ಯಾಸನ ಮಹಾಭಾರತ, ಬಾಣನ ಕಾದಂಬರಿ, ದಶಕುಮಾರ ಚರಿತೆ ಅಥವಾ ಅರೆಬಿಯನ್ ನೈಟ್ಸ್ ಗಮನವಿಟ್ಟು ಓದಿದವರಿದ್ದರೆ ಕುಂವೀ ಕಥನ ಆ ಮಾದರಿಯದ್ದು ಅನ್ನುವುದು ಹೊಳೆಯುತ್ತದೆ.’— ಓ. ಎಲ್. ನಾಗಭೂಷಣಸ್ವಾಮಿ (ಮುನ್ನುಡಿಯಲ್ಲಿ)
———————————————————————————————————
‘ಕುಂವೀ ಅವರ ಈ ಹೊಸ ಕಾದಂಬರಿಯನ್ನು ಅದ್ಭುತ-ರಮ್ಯ ಕಥಾನಕ ಎಂದೂ ಗುರುತಿಸಬಹುದು. ವಿಡಂಬನಾತ್ಮಕ ರಾಜಕೀಯ ಕಾದಂಬರಿ ಎಂದರೂ ಆದೀತು’—ಸಿ. ಎನ್. ರಾಮಚಂದ್ರನ್ (ಬೆನ್ನುಡಿಯಲ್ಲಿ)


