ಮಣ್ಣು ಅನ್ನೋದರಿಂದ ಈ ಜನಾಂಗ ದೂರವಿದೆ. ಮೊದಲೆಲ್ಲ ಮಣ್ಣು ಎಂದರೆ ಅದು ಬದುಕಿನ ಅವಿಭಾಜ್ಯ. ಆಧುನೀಕರಣ ಹೊಂದುತ್ತಾ, ಅದಕ್ಕೆ ತೆರೆದುಕೊಳ್ಳುತ್ತಾ ಮಣ್ಣನ್ನು ಮರೆತಿದ್ದೇವೆ. ಕರಾವಳಿ ಭಾಗದದಲ್ಲಿ ಈಗಲೂ ಮೀನಿನ ಪದಾರ್ಥವನ್ನು ಮಾಡುವುದು, ಹಳೆ ಮೈಸೂರು ಪ್ರಾಂತದ ಗ್ರಾಮೀಣ ಜನರು ಮಣ್ಣಿನ ಪಾತ್ರೆಯಲ್ಲಿ ಅಡುಗೆ ತಯಾರಿಸುತ್ತಿರುವುದು, ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದವರು ತಂಪಾದ ಮೊಸರನ್ನು ಮಡಕೆಯಲ್ಲಿ ಹಾಕಿ ಕೊಡುತ್ತಿರುವುದು ಏಕೆ ಗೊತ್ತಾ?
ಒಂದು ಅರ್ಥದಲ್ಲಿ ನಾವೆಲ್ಲರೂ ಮಣ್ಣಿನ ಮಕ್ಕಳೇ. ಆದರೆ ಈಗೀಗ ಮಣ್ಣಿನ ನಡುವಿನ ಸಂಬಂಧ ಸಡಿಲವಾಗುತ್ತಿದೆ. ಆಧುನೀಕರಣ ಎಂದರೆ ಮಣ್ಣಿನ ಸಂಬಂಧದಿಂದ ದೂರ ಇರುವುದೂ ಒಂದಾಗಿದೆ ಎನಿಸುತ್ತದೆ. ಮಣ್ಣು ಮತ್ತು ನಾವು ಅಂತ ಹುಡುಕುತ್ತಾ ಹೋದರೆ ಮಣ್ಣಿಲ್ಲದೇ ಬದುಕು ಆರೋಗ್ಯಕರವಾಗಿರೋಲ್ಲ. ಮಣ್ಣಿನ ಮಕ್ಕಳು ಎಂಬ ಮಾತನ್ನು ಆಡುತ್ತೇವೆ. ಇದೇಕೆ ಎನ್ನುವುದು ಹೇಳಿದವರಿಗೂ ಗೊತ್ತಿರಲಿಕ್ಕಿಲ್ಲ. ಇದರಲ್ಲಿ ಏನಾದರೂ ಅರ್ಥವಿದೆಯೆ?
ಮಣ್ಣಿನಲ್ಲಿ 18 ಬಗೆಯ ಸೂಕ್ಷ್ಮ ಪೋಷಕಾಂಶಗಳು (ಮೈಕ್ರೋ ನ್ಯೂಟ್ರಿಯಂಟ್ಸ್) ಇವೆ. ಇದೇ ಪೋಷಕಾಂಶಗಳು ಮಣ್ಣಿಗೇ ಸೇರುವ, ದೇಹವನ್ನು ಸುಟ್ಟ ಬೂದಿಯಲ್ಲಿರುವುದು ಸಂಶೋಧನೆಯಿಂದ ಸಾಬೀತಾಗಿದೆ. ಈ ಪೋಷಕಾಂಶಗಳು ಮಣ್ಣಿನಲ್ಲಿ ಬೆಳೆಯುವ ಗಿಡ, ಮರಗಳ ಮೂಲಕ ಫಲಗಳಲ್ಲಿ ಕೇಂದ್ರೀಕೃತವಾಗುತ್ತವೆ. ಫಲವನ್ನು ಮನುಷ್ಯರು, ಮಧ್ಯದ ಭಾಗ ಜಾನುವಾರುಗಳು ತಿಂದು ಬುಡ ಮತ್ತೆ ಮಣ್ಣಿಗೆ ಸೇರುತ್ತದೆ. ಇದು ಮುಖ್ಯವಾಗಿ ಅಕ್ಕಿ, ರಾಗಿ, ಜೋಳ ಇತ್ಯಾದಿ ಧಾನ್ಯಗಳಲ್ಲಿ. ಈ ಮಣ್ಣಿನಿಂದ ಬಂದ ಪೋಷಕಾಂಶಗಳನ್ನು ಮಣ್ಣಿನ ಪಾತ್ರೆಯಲ್ಲಿ ಬೇಯಿಸಿ ತಿನ್ನುವುದು ಸರ್ವಶ್ರೇಷ್ಠ. ಇದು ಆಯುರ್ವೇದ ಆಚಾರ್ಯ ವಾಗ್ಭಟರ ಅಷ್ಟಾಂಗ ಹೃದಯದಲ್ಲಿ ಇದೆ. ಇದಾವುದನ್ನೂ ಓದದ ನಮ್ಮ ಸೋಕಾಲ್ಡ್ ಅನಕ್ಷರಸ್ಥ ಹಿರಿಯರು ಹಿಂದಿನ ಕಾಲದಲ್ಲಿ ಮಣ್ಣಿನ ಪಾತ್ರೆಯಲ್ಲಿ (ಮಡಕೆ) ಅಡುಗೆ ಮಾಡಿ ಊಟ ಮಾಡುತ್ತಿದ್ದರು, ಗಿಡಮೂಲಿಕೆ ಔಷಧಿ ತಯಾರಿಸುವಾಗಲೂ ಮಣ್ಣಿನ ಪಾತ್ರೆಯಲ್ಲಿ ತಯಾರಿಸುತ್ತಿದ್ದರು/ಈಗಲೂ ತಯಾರಿಸುತ್ತಾರೆ. ಕರಾವಳಿ ಭಾಗದ ಸೋಕಾಲ್ಡ್ ಸುಶಿಕ್ಷಿತ-ಅಶಿಕ್ಷಿತರು ಈಗಲೂ ಮೀನಿನ ಪದಾರ್ಥವನ್ನು ಮಾಡುವುದು, ಹಳೆ ಮೈಸೂರು ಪ್ರಾಂತದ ಗ್ರಾಮೀಣ ಜನರು ಮಣ್ಣಿನ ಪಾತ್ರೆಯಲ್ಲಿ ಅಡುಗೆ ತಯಾರಿಸುತ್ತಿರುವುದು, ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದವರು ತಂಪಾದ ಮೊಸರನ್ನು ಮಡಕೆಯಲ್ಲಿ ಹಾಕಿ ಕೊಡುತ್ತಿರುವುದು ಇವ್ಯಾವುವೂ ದೊಡ್ಡ ಸಂಗತಿಯಲ್ಲ. ಆದರೆ ಬಹುತೇಕ ಎಲ್ಲರ ಮನೆಯಲ್ಲಿ ಮಡಿಕೆ, ಅಡಿಗೆ ಮಾಯವಾಗಿದ್ದರೂ ನಾವು ಪ್ರತಿಷ್ಠೆ ಎಂದು ತಿಳಿಯುವ ಸ್ಟಾರ್ ಹೊಟೇಲ್ನವರು ಕೆಲವು ಪದಾರ್ಥಗಳನ್ನು ಮಡಕೆಯಲ್ಲಿ ಮಾಡುತ್ತಿರುವುದು ವಿಶೇಷ ಸುದ್ದಿಯಾಗಿದೆ. ಇಷ್ಟಕ್ಕೂ ಇವರೆಲ್ಲಾ ಮಡಿಕೆಯಲ್ಲಿ ಅಥವಾ ಮಣ್ಣಿಗೆ ಸಂಬಂಧಿಸಿದ ವಸ್ತುಗಳಲ್ಲಿ ಅಡುಗೆ ಮಾಡುವುದು ಏಕೆ?
ಪಾತ್ರೆ ಕೋಷ್ಟಕ
ಬೇರೆ ಬೇರೆ ಪಾತ್ರೆಗಳಲ್ಲಿ ಅಡುಗೆ ಮಾಡಿದರೆ ಎಷ್ಟೆಷ್ಟು ಅಂಶ ದೇಹಕ್ಕೆ ಸಿಗಬಹುದು? ಕಂಚಿನ ಪಾತ್ರೆಯಲ್ಲಿ ಅಡುಗೆ ಮಾಡಿದರೆ ಶೇ.97 ಅಂಶ, ತಾಮ್ರ, ಹಿತ್ತಾಳೆ ಪಾತ್ರೆಯಲ್ಲಿ ಅಡುಗೆ ಮಾಡಿದರೆ ಶೇ.93 ಅಂಶ, ಸ್ಟೀಲ್ನಲ್ಲಿ ಮಾಡಿದರೆ ಶೇ.50 ಅಂಶ, ಅಲ್ಯೂಮೀನಿಯಂ, ಇಂಡಾಲಿಯಂನಲ್ಲಿ ಮಾಡಿದರೆ ಶೇ.7, ಮಣ್ಣಿನ ಪಾತ್ರೆಯಲ್ಲಿ ಮಾಡಿದರೆ ಶೇ.100 ಪೋಷಕಾಂಶಗಳು ದೇಹಕ್ಕೆ ಸಿಗುತ್ತದೆ. ಲಕ್ನೋದ ಸೆಂಟ್ರಲ್ ಡ್ರಗ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಡಿಆರ್ಐ) ಮಾಡಿದ ಸಂಶೋಧನೆ ಪ್ರಕಾರ ಮಣ್ಣಿನ ಮಡಕೆಯಲ್ಲಿ ಮಾಡಿದ ಅಡುಗೆಯಲ್ಲಿ ಶೇ.100, ಕಂಚಿನಲ್ಲಿ ಶೇ.93, ಹಿತ್ತಾಳೆಯಲ್ಲಿ ಶೇ. 87, ಪ್ರಶ್ಶರ್ ಕುಕ್ಕರ್ ಅಡುಗೆಯಲ್ಲಿ ಶೇ.13 ಸೂಕ್ಷ್ಮ ಪೋಷಕಾಂಶಗಳು ಇರುತ್ತವೆ ಎಂದು ರಾಜೀವ್ ದೀಕ್ಷಿತ್ ಉಲ್ಲೇಖೀಸುತ್ತಿದ್ದರು. ಪ್ರಶ್ಶರ್ ಕುಕ್ಕರ್ ಅಡುಗೆ ಪೌಷ್ಟಿಕಾಂಶ ಕುರಿತು ಸಾಕಷ್ಟು ಪರ-ವಿರೋಧ ಅಭಿಪ್ರಾಯಗಳಿವೆ. ಇದರ ಬಳಿಕ ಚಾಲ್ತಿಗೆ ಬಂದ ಮೈಕ್ರೋವೇವ್ ಅವನ್ ಅಡುಗೆ ವಿಚಾರದಲ್ಲಿಯೂ ಹೀಗೆಯೇ. ಕಂಚು, ಹಿತ್ತಾಳೆ ಪಾತ್ರೆಗಳಲ್ಲಿ ಹುಳಿಯ ಪದಾರ್ಥಗಳನ್ನು ಬೇಯಿಸಬಾರದು. ಏಕೆಂದರೆ ಕಂಚು (ತಾಮ್ರ+ತವರ), ಹಿತ್ತಾಳೆ (ತಾಮ್ರ +ಸತು) ಪಾತ್ರೆಯಲ್ಲಿರುವ ತಾಮ್ರವು ಹುಳಿ ಪದಾರ್ಥದ ಮೇಲೆ ತನ್ನ ನೆಗೆಟಿವ್ ಗುಣ ಬೀರುತ್ತದೆ. ಆದ್ದರಿಂದಲೇ ತಾಮ್ರದ ಪಾತ್ರೆಗಳಿಗೆ ಕಲಾಯಿ (ತಾಮ್ರದ ಜೊತೆ ಪದಾರ್ಥಗಳಿಗೆ ಸಂಪರ್ಕವಾಗದಂತೆ ತವರದ ಲೇಪನ) ಹಾಕುವ ಕ್ರಮವಿದೆ.
ಆಹಾರ ಕೋಷ್ಟಕ
ತಿನ್ನುವ ಕ್ರಮವಾದರೂ ಹೇಗೆ? ಸೂರ್ಯೋದಯದ ಬಳಿಕ ನೀರು ತಂದು ಮಡಕೆಯಲ್ಲಿ ಬೇಯಿಸಬೇಕು ಮತ್ತು ಅಡುಗೆಯಾಗಿ 48 ನಿಮಿಷದೊಳಗೆ ತಿಂದರೆ ಆ ಎಲ್ಲಾ ಪೋಷಕಾಂಶಗಳು ದೇಹಕ್ಕೆ ಸಿಗುತ್ತವೆ. ಊಟವನ್ನು ಹೇಗೆ ಮಾಡಬೇಕೆಂಬ ನಿಯಮವೂ ಇದೆ. ಸೂರ್ಯನ ಬೆಳಕು ಇರುವ ಹೊತ್ತಿನಲ್ಲಿಯೇ ಅಂದರೆ ಸೂರ್ಯೋದಯದ ಅನಂತರ, ಸೂರ್ಯಾಸ್ತದೊಳಗೆ ಊಟ ಮಾಡಬೇಕು. ವಿದ್ಯುತ್ ಬೆಳಕಿನಲ್ಲಿ ಊಟ ಮಾಡಲೇಬಾರದು ಎಂದು ಹೇಳುವುದಕ್ಕಿಂತ ಟಿ.ವಿ. ನೋಡುತ್ತ ತಿನ್ನಬಾರದು ಎಂದರೆ ಎಷ್ಟೋ ಜನರಿಗೆ ಕರ್ಕಶ ಎನಿಸಬಹುದು. ಸೂರ್ಯನ ಬೆಳಕಿನಲ್ಲಿ ಊಟ ಮಾಡಬೇಕು ಎಂದರೆ ಈಗ ವಿದ್ಯುತ್ ಅಭಾವವಿರುವಲ್ಲಿ ಅಳವಡಿಸುವ ಸೌರವಿದ್ಯುತ್ ಸೂಕ್ತವೆನಿಸುತ್ತದೆ. ಸೋಲಾರ್ ಕುಕ್ಕರ್ ಉತ್ತಮವಾದರೂ ಅದು ಅಲ್ಯೂಮೀನಿಯಂನಲ್ಲಿ ತಯಾರಾಗಿ ಬರುತ್ತಿದೆ. ಬೆಳಗ್ಗೆ ಸೂರ್ಯೋದಯದ ಬೆಳಕಿನ ಪ್ರಭಾವ ಅಡುಗೆಮನೆ/ ಊಟದ ಮನೆಗೆ ಸಿಗಬೇಕೆಂಬ ಕಾರಣಕ್ಕಾಗಿಯೋ ಏನೋ ಆಗ್ನೇಯದಲ್ಲಿ ಅಡುಗೆ ಮನೆ ಇರಬೇಕೆಂದು ವಾಸ್ತುಶಾಸ್ತ್ರ ಹೇಳುತ್ತಿದೆ. ಜೈನಧರ್ಮದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದೊಳಗೆ ಆಹಾರ ಸೇವನೆ ಕ್ರಮ ಚಾಲ್ತಿಗೆ ಬರಲು ಇದೇ ಕಾರಣ ಇರಬಹುದು. ಬೆಳಗ್ಗೆ ಮೊಸರು/ ಹಣ್ಣಿನ ರಸ, ಮಧ್ಯಾಹ್ನ ಮಜ್ಜಿಗೆ, ಸೂರ್ಯಾಸ್ತದ ಬಳಿಕ ಹಾಲು ಸೇವಿಸಬೇಕು. ಊಟದ ನಡುವೆ ಎಷ್ಟೋ ಜನರಿಗೆ ನೀರು ಕುಡಿಯುವ ಅಭ್ಯಾಸವಿದೆ. ಇದು ಸರಿಯಲ್ಲ. ಊಟಕ್ಕಿಂತ ಒಂದು ಗಂಟೆ ಮೊದಲು ಮತ್ತು ಊಟ ಮಾಡಿ ಒಂದೂವರೆ ಗಂಟೆ ಅನಂತರ ನೀರು ಸೇವಿಸಬೇಕು. “ಬಾಯಾರಿಕೆಯಾದಾಗ ಊಟ ಮಾಡಬೇಡ’, “ಹಸಿವಾದಾಗ ನೀರು ಕುಡಿಯಬೇಡ’, “ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬಿತ್ಯಾದಿ ಗಾದೆಗಳ್ಳೋ? ವೇದಗಳ್ಳೋ?
ಸಮಾನತೆ ಕೋಷ್ಟಕ?
ನಾವು ಈಗ ಏನು ಮಾಡುತ್ತಿದ್ದೇವೆ? ಬಡವರಿರಲಿ, ಸಿರಿವಂತರಿರಲಿ, ಯುವಕರಿರಲಿ ಇವರೆಲ್ಲಾ ಸಾಮಾಜಿಕ ಅಂತಸ್ತಿನಲ್ಲಿ ಬೇರೆ ಬೇರೆ ವರ್ಗದವರಾದರೂ ಸರ್ವರೋಗಗಳಿಗೆ ದ್ವಾರಪಾಲಕರಂತಿರುವ ಮಧುಮೇಹ, ಕೊಬ್ಬು, ರಕ್ತದೊತ್ತಡಗಳು ಬಂದು ಎಲ್ಲರಲ್ಲೂ ಸಮಾನತೆ ಕಂಡುಬರುತ್ತಿದೆಯಲ್ಲಾ? ಫಲಿತಾಂಶ ಎಲ್ಲರ ಮೇಲೂ ಒಂದೇ ರೀತಿಯಾದರೂ ಫಲಿತಾಂಶದಿಂದ ಆಗುವ ತತ್ತರ ಬಡವರಿಗೆ ಹೆಚ್ಚು, ಸಿರಿವಂತರಿಗೆ ಸ್ವಲ್ಪ ಕಡಿಮೆ. ಕೆಲವು ತಿಂಗಳು ಮಣ್ಣಿನ ಮಡಕೆಯಲ್ಲಿ ಅನ್ನ/ಪದಾರ್ಥಗಳನ್ನು ಬೇಯಿಸಿ ಊಟ ಮಾಡಿ ನೋಡಿ. ಮಧುಮೇಹ ಶಮನವಾಗುತ್ತದೋ ಇಲ್ಲವೋ ನೋಡಿ ಎನ್ನುವ ಸವಾಲು ಎಸೆಯುತ್ತಾರೆ ಪತಂಜಲಿ ಸಮಿತಿಯ ರಾಜ್ಯ ಯೋಗ ವಿಸ್ತಾರಕ ಶಿರಸಿಯ ಅಂಡಾರು ದೇವರಾಜ ಪ್ರಭು. ಇದಕ್ಕೆ ಪೂರಕವಾಗಿ ಒಂದು ವರ್ಷ ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡಿ ಊಟಮಾಡಿದರೆ ಮಧುಮೇಹ 480 ಅಂಕಗಳಿಂದ 180ಕ್ಕೆ ಇಳಿದುದನ್ನು ಲಕ್ನೊಸಿಡಿಆರ್ಐ ಸಂಶೋಧನೆ ಮಾಡಿರುವುದನ್ನು ರಾಜೀವ್ ದೀಕ್ಷಿತ್ ದಾಖಲಿಸಿದ್ದಾರೆ. ಅನಗತ್ಯ ತಲೆಹರಟೆ, ಉಪಟಳ ಕೊಡುವುದು, ಸಮಸ್ಯೆಗಳನ್ನು ಪರಿಹರಿಸದೆ ಇತರರಿಗೆ ವರ್ಗಾವಣೆ ಮಾಡುವ ತಂತ್ರ, ಮತ್ಸರ, ಅಹಂಕಾರ, ದ್ವೇಷ, ಕೋಪ, ದುರಾಸೆ ಇತ್ಯಾದಿಗಳಿಂದಲೂ ಕಾಯಿಲೆಗಳು ಬರುತ್ತದೆ. ಹೀಗೆ ಬದುಕದಂತೆ ಯೋಗ, ಪ್ರಾಣಾಯಾಮ ವ್ಯಕ್ತಿಯನ್ನು ರೂಪಿಸುತ್ತದೆ. 64 ವರ್ಷ ಪ್ರಾಯದಲ್ಲಿ ಯೋಗ ಜೀವನಕ್ಕೆ ಪ್ರವೇಶಿಸಿದ ಪ್ರಭುಗಳಿಗೆ ಈಗ 74 ವರ್ಷ. ವಿವಿಧೆಡೆ ಸಂಚರಿಸಿ ಸಕ್ರಮ ಜೀವನವಿಧಾನ ತಿಳಿಸುತ್ತಿದ್ದಾರೆ. ಲೇಖನದಲ್ಲಿ ಹೇಳಿದ್ದೆಲ್ಲವೂ ಸವಾಲೇ. ಈ ಸವಾಲಿಗೆ ಪ್ರತಿಸವಾಲು ಹಾಕುವುದಾದರೆ ಅಥವಾ ಇನ್ನಷ್ಟು ಸವಾಲು ಬೇಕಿದ್ದರೆ ಮಾತನಾಡಿ: 9448943778.
ಪರೀಕ್ಷಾ ಕೋಷ್ಟಕ
ಯಾವ ಪಾತ್ರೆಯಲ್ಲಿ ಅಡುಗೆ ಮಾಡಿದರೆ ಒಳಿತು ಎಂಬ ಕುರಿತು ಸುಲಭದ ಪರೀಕ್ಷೆ ಬೇಕೆಂದರೆ ಒಂದೇ ರೀತಿಯ ಪದಾರ್ಥವನ್ನು (ಅನ್ನ, ತರಕಾರಿ, ಮೀನು ಇತ್ಯಾದಿ) ಬೇರೆ ಬೇರೆ ಪಾತ್ರೆಗಳಲ್ಲಿ ತಯಾರಿಸಿ ರುಚಿ, ಅನಂತರ ಆಗುವ ಅನುಭವ ನೋಡಬಹುದು. “ಆಗದ ಗಂಡನಿಗೆ ಮೊಸರಲ್ಲಿ ಕಲ್ಲು ಬಂತು’ ಎನ್ನುವವರು ಅನಿಲ ಸಿಲಿಂಡರ್ನಲ್ಲಿ ಮಡಕೆಯಲ್ಲಿ ಅಡುಗೆ ಮಾಡಲು ಆಗುವುದಿಲ್ಲ ಎನ್ನುತ್ತಾರೆ. ಆದರೆ ಮಡಕೆಯಲ್ಲಿ ಅಡುಗೆ ಮಾಡುವಾಗ ಅನಿಲ ಸಿಲಿಂಡರ್ ಬೆಂಕಿ ಜ್ವಾಲೆ ಪ್ರಮಾಣವನ್ನು ಕಡಿಮೆ ಇರಿಸಿದರೆ ತೊಂದರೆ ಆಗುವುದಿಲ್ಲ ಎಂದು ಮಾಡಿದವರು ಹೇಳುತ್ತಾರೆ. ಕಾರಣವಿಷ್ಟೆ, ಸಾಮಾನ್ಯ ಒಲೆಯಲ್ಲಿ ಬೆಂಕಿಯ ಜ್ವಾಲೆ ಹರಡಿಕೊಂಡಿರುತ್ತದೆ, ಸಿಲಿಂಡರ್ ಬೆಂಕಿ ಒಂದೇ ಕಡೆ ಕೇಂದ್ರಿಕೃತವಾಗಿರುತ್ತದೆ. ಆದ್ದರಿಂದ ಜ್ವಾಲೆಯನ್ನು ಸ್ವಲ್ಪ ಕಡಿಮೆ ಇಡಬೇಕು. “ಮಣ್ಣಿನ ಪಾತ್ರೆಗಳನ್ನು ಮಾಡುವಾಗ ನಿರ್ದಿಷ್ಟ ಕ್ರಮಗಳನ್ನು ಅನುಸರಿಸಬೇಕು. ಎಲ್ಲಾ ತರಹದ ಬೆಂಕಿಗಳಲ್ಲಿಯೂ ಅಡುಗೆ ತಯಾರಿಸಬಹುದು. ನಮ್ಮ ಯಾವ ಮಣ್ಣಿನ ಪಾತ್ರೆಗಳೂ ಕೈತಪ್ಪಿ ನೆಲಕ್ಕೆ ಬೀಳುವುದು ಹೊರತುಪಡಿಸಿ ಒಡೆದುಹೋಗುವುದಿಲ್ಲ’ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ ಮಣ್ಣಿನ ನಾನಾ ತರಹದ ಪಾತ್ರೆಗಳನ್ನು ತಯಾರಿಸುವ ಉಡುಪಿ ತಾಲೂಕು ಆರೂರು ಕೀರ್ತಿನಗರದ ಕುಮಾರ್ ಕುಲಾಲ್.
ಇವರ ಮಡಕೆಗಳು ಮುಂಬೈ ಮಹಾನಗರವನ್ನೂ ತಲುಪುತ್ತಿವೆ, ವಿದೇಶಕ್ಕೂ ಹೋಗಿವೆ. ಉಡುಪಿ, ಕಟಪಾಡಿ ಸಂತೆಗಳಲ್ಲಿ, ಉಡುಪಿ ರಥಬೀದಿಯ ಎರಡು ಅಂಗಡಿಗಳು, ಮಂಗಳೂರಿನ ನಾಲ್ಕು ಅಂಗಡಿಗಳಲ್ಲಿ ಇವರ ಪಾತ್ರೆಗಳು ಜನಪ್ರಿಯವಾಗಿವೆ. ಅನ್ನಮಾಡುವ ಮಡಕೆ, ಅಳಿಗೆ, ಹಾಲು ಬಿಸಿ ಮಾಡುವ ಪಾತ್ರೆ, ದೋಸೆ ಮಾಡಲು ರೊಟ್ಟಿ ಓಡು, ನೀರು ಸಂಗ್ರಹದ ಸಣ್ಣ ಮತ್ತು ದೊಡ್ಡ ಹೂಜಿ ಇತ್ಯಾದಿ 40 ರೀತಿಯ ಮಣ್ಣಿನ ಪಾತ್ರೆಗಳನ್ನು ಇವರು ಮಾಡುತ್ತಾರೆ. ಮಡಕೆ ಕುರಿತು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಕುಮಾರ್ ಕುಲಾಲ್ ಸಂಪರ್ಕಿಸಿ : 9663631346.
ಸ್ನಾನಕ್ಕೆ ಸಾಬೂನು ಬೇಕೆ?
ನಮಗೆ ಸ್ನಾನವೆಂದರೆ ಸಾಬೂನಿಲ್ಲದೆ ಸಾಧ್ಯವೆ ಇಲ್ಲ ಎಂಬ ಕಾಲಘಟ್ಟದಲ್ಲಿದ್ದೇವೆ. ಕೆಂಪು ತೊಗರಿಬೇಳೆ, ಕಡಲೆಬೇಳೆ, ಹೆಸರು ಬೇಳೆ, ಬಟಾಣಿ ಕಾಳು, ಜವೆಗೋದಿ (ಬಾರ್ಲಿ), ಸೀಗೆ ಕಾಯಿ, ಒಣನೆಲ್ಲಿಕಾಯಿ, ಕಹಿಬೇವಿನ ಎಲೆ ಪೌಡರ್, ಕಸ್ತೂರಿ ಅರಸಿನ, ಕಚೋರ, ಲೋದ್ರದ ಚಕ್ಕೆ, ಶ್ರೀಗಂಧದ ಕೊರಡುಗಳನ್ನು ತಲಾ 100 ಗ್ರಾಂ., ಅಂಟುವಾಳಕಾಯಿ ಸಿಪ್ಪೆ 200 ಗ್ರಾಂ., ಪಚ್ಚೆಕರ್ಪೂರ 5 ಗ್ರಾಂ. ಇಷ್ಟನ್ನು ಪುಡಿ ಮಾಡಿ ಇಟ್ಟುಕೊಂಡು ಆಯಾ ದಿನದ ಅಗತ್ಯದಷ್ಟು (ಸುಮಾರು ಒಂದು ಚಮಚ) ಪುಡಿಯನ್ನು ತಣ್ಣಗಿನ ಹಾಲಿನಲ್ಲಿ ಮಿಶ್ರ ಮಾಡಿ ಸ್ನಾನ ಮಾಡಿ ಪರಿಣಾಮ ನೋಡಿ.
* ಮಟಪಾಡಿ ಕುಮಾರಸ್ವಾಮಿ
(ಕೃಪೆ : ಉದಯವಾಣಿ)
