ಕಾಸರಗೋಡು : ಬಡತನದಲ್ಲೇ ಕಷ್ಟಪಟ್ಟು ಡಿಪ್ಲೊಮಾವರೆಗೆ ಓದಿದ್ದ ಆತ ಎಂಜಿನಿಯರಿಂಗ್ ಕಲಿಯುವ ಕನಸು ಕಂಡಿದ್ದ. ಮೋಸ- ವಂಚನೆ ಮಾಡದೆ ಕಷ್ಟಪಟ್ಟು ದುಡಿದು ಹಣ ಸಂಪಾದನೆ ಮಾಡಿ ಸುಖಕರ ಜೀವನ ನಡೆಸಬೇಕೆಂದು ಯೋಚಿಸಿದ್ದ ಆತ, ಮೂರು ವರ್ಷ ಕಾಲ ಮಸ್ಕತ್ನಲ್ಲಿ ಮಂಗಳೂರು ಮೂಲದ ಕಂಪೆನಿಯೊಂದರಲ್ಲಿ ಮೆಕ್ಯಾನಿಕ್ ಆಗಿ ದುಡಿಯುತ್ತಿದ್ದ. ಆದರೆ ವಿಧಿಲಿಖಿತ ಬೇರೆಯದ್ದೇ ಇತ್ತು. ಅದೊಂದು ಕರಾಳ ದಿನ ಕೆಲಸ ಮಧ್ಯೆ ಯಂತ್ರಕ್ಕೆ ಸಿಲುಕಿ ಅವರ ಕೈ ಬೆರಳುಗಳು ತುಂಡರಿಸಲ್ಪಟ್ಟಿತ್ತು. ಆ ಬಳಿಕ ಒಂದು ವರ್ಷ ಕಾಲ ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಆತ ೬ ತಿಂಗಳ ಹಿಂದೆ ಊರಿಗೆ ಬಂದಿದ್ದ. ಘಟನೆ ಬಳಿಕ ಈ ಹಿಂದಿನ ಕೆಲಸ ನಿರ್ವಹಿಸಲು ಸಾಧ್ಯವಿಲ್ಲವೆಂದು ಆತನಿಗೂ, ಅವನ ಕಂಪೆನಿಗೂ ಮನದಟ್ಟಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿರುವ ಕಂಪೆನಿಯಲ್ಲಿ ಬೇರೆ ಯಾವುದಾದರೂ ಪರ್ಯಾಯ ಕೆಲಸ ನೀಡುವಂತೆ ಕಚೇರಿ ಅಧಿಕಾರಿಗಳಲ್ಲಿ ಆಗ್ರಹಿಸಿದ್ದ. ಕಂಪೆನಿ ಅಧಿಕಾರಿಗಳೂ ಇದಕ್ಕೆ ಒಪ್ಪಿದ್ದರು. ಕಂಪೆನಿಯ ಮೇಲೆ ಪೂರ್ಣ ಭರವಸೆ ಇಟ್ಟಿದ್ದ ಆತ ಅದೆಷ್ಟು ಅಲೆದಾಟ ನಡೆಸಿದರೂ ಕೆಲಸ ನೀಡಲು ಒಪ್ಪಲಿಲ್ಲ. ತನ್ನ ಕಷ್ಟವನ್ನು ಅವರಿವರ ಬಳಿ ಹೇಳಿಕೊಂಡಿದ್ದ ಆತ, ಕೊನೆಗೊಂದು ನಿರ್ಧಾರಕ್ಕೆ ಬಂದಿದ್ದ. ಅದು ಆತ್ಮಹತ್ಯೆ..!
ಹೌದು.. ಕಳೆದ ಜೂನ್ ೮ರಂದು ರಾತ್ರಿ ಕಾಸರಗೋಡಿಗೆ ರೈಲಿನಲ್ಲಿ ಹೋದ ಆತ ಅಲ್ಲಿನ ರೈಲು ನಿಲ್ದಾಣ ವಿಶ್ರಾಂತಿ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ.. , ಅಲ್ಲಿಗೆ ಅವನು ಕಂಡಿದ್ದ ಕನಸು ಕಮರಿ ಹೋಯಿತು. ಕಷ್ಟಕಾಲದಲ್ಲಿ ಕೈಕೊಟ್ಟ ಕಂಪೆನಿ ಅಧಿಕಾರಿಗಳ ಆತ್ಮಕ್ಕೆ ಶಾಂತಿಯಾಯಿತು!! ಆದರೆ ಸತ್ತವನ ಆತ್ಮಕ್ಕೆ ಶಾಂತಿ ಸಿಗಬೇಕೆಂದರೆ ಕಂಪೆನಿ ಅಧಿಕಾರಿಗಳ ಕೊರಳಪಟ್ಟಿ ಹಿಡಿದು ನಮ್ಮ ಯುವಕನಿಗೆ ಹೀಗೇಕೆ ಮಾಡಿದಿರಿ ಎಂದು ಕೇಳಬೇಕು… ಹೀಗೆ ಕೆಚ್ಚೆದೆಯಿಂದ ಕೇಳುವ ಕುಲಾಲ ಸಂಘಟನೆಯೊಂದರ ಉದಯವಾಗಬೇಕು..
ಆತ್ಮಹತ್ಯೆಗೈದ ಯುವಕ ಬೇರಾರೂ ಅಲ್ಲ… ಪೆರ್ಲ ಬಳಿಯ ಶಿವಗಿರಿ ಬದಿಯೂರು ನಿವಾಸಿ ನಾರಾಯಣ ಮೂಲ್ಯರ ಪುತ್ರ ಕೃಷ್ಣ. ಊರು-ಕೇರಿಗೊಂದು ಜಾತಿ ಸಂಘಟನೆಯ ಹೆಸರಿಟ್ಟುಕೊಂಡು ನಾಲ್ಕು ಪೊಳ್ಳು ಭರವಸೆ/ಹುಸಿ ಆಡಂಬರ ತೋರಿಸಿ ಏನು ಪ್ರಯೋಜನ ?
ಕನಸು ಭಗ್ನ : ಯುವಕ ನೇಣಿಗೆ
Special Reports
1 Min Read


