ಇತ್ತೀಚೆಗೆ ಸ್ನೇಹಿತೆಯ ಮದುವೆ ಬೀಗರೂಟಕ್ಕೆ ಹೋಗಿದ್ದಾಗ, ಮಣ್ಣಿನ ಪುಟಾಣಿ ಕುಡಿಕೆಯೊಂದರಲ್ಲಿ ಬಿಸಿ ಬಿಸಿ ಬಿರಿಯಾನಿ ತುಂಬಿ ಎಲ್ಲರ ಎಲೆಗೂ ಇಟ್ಟರು. ಅರೆ! ಮಣ್ಣಿನ ಕುಡಿಕೆ ಮರಳಿ ಬರುತಿದೆ ಅಂದು ಖುಷಿಯಾಯ್ತು.
ಹಿಂದೆ ಮಣ್ಣಿನ ಮಡಿಕೆ-ಕುಡಿಕೆ, ದವಸ ಧಾನ್ಯ ತುಂಬುವ ಗುಡಾಣಗಳು, ದೀಪಗಳು ದಿನ ಬಳಕೆಯ ವಸ್ತುಗಳಾಗಿದ್ದವು. ಕಾಲ ಕಳೆದಂತೆ ಆಲಂಕಾರಿಕ ವಸ್ತುಗಳಾದವು. ಊರ ಬೀದಿಯಲ್ಲಿ ಮಣ್ಣಿನ ರಾಧಾ-ಕೃಷ್ಣ, ಗಿಣಿ, ಆನೆ, ಒಂಟೆ, ಜಿಂಕೆಯ ಗೊಂಬೆಗಳನ್ನು ಮಾರುತ್ತಿದ್ದುದು ಒಂದು ಕ್ಷಣ ಕಣ್ಮುಂದೆ ಬಂತು. ಮಣ್ಣಿನ ಪರಿಕರಗಳಿಂದು ಬಳಕೆಯಲ್ಲಿಲ್ಲ. ಕುಂಬಾರಿಕೆ ಕಣ್ಮರೆಯಾಗುತ್ತಿದೆ ಎನ್ನುವ ಈ ಹೊತ್ತಿನಲ್ಲಿ ಹೊಸ ರೂಪ ದೊಂದಿಗೆ ಮರಳಿ ಬರುತ್ತಿವೆ.
ರಾಮನಗರದಲ್ಲಿ ಕೆಲವೇ ವರ್ಷಗಳ ಹಿಂದೆ ಮೂರು ಸಾವಿರಕ್ಕೂ ಹೆಚ್ಚು ಮಂದಿ ಕುಂಬಾರಿಕೆಯನ್ನು ನೆಚ್ಚಿಕೊಂಡಿದ್ದರು. ಸುತ್ತ–ಮುತ್ತಲ ಕೆರೆಗಳಿಂದ ಸಿಗುವ ಮಣ್ಣಿನಿಂದ ಉತ್ಪನ್ನಗಳನ್ನು ತಯಾರಿಸುತ್ತಿದ್ದರು. ಯುವಜನತೆ ಕುಂಬಾರಿಕೆ ಬಗ್ಗೆ ಒಲವು ತೋರದ ಸಮಯದಲ್ಲಿ, ಶ್ರದ್ಧೆ, ಬದ್ಧತೆ, ಹೊಸ ಕಾಲಕ್ಕೆ ಒಗ್ಗುವ ಸೃಜನಶೀಲ ಮನಸ್ಸಿದ್ದರೆ ಯಾವುದೇ ಸಾಂಪ್ರದಾಯಿಕ ವೃತ್ತಿಯನ್ನು ಜೀವಂತವಾಗಿರಿಸಬಹುದು ಎಂಬುದು ರಾಮನಗರದ ಮಣ್ಣಿನ ಉತ್ಪನ್ನಗಳ ತಯಾರಕರ ಮಾತು.
ಆಧುನಿಕ ಕಾಲಕ್ಕೆ ತಕ್ಕಂತೆ ಆಲಂಕಾರಿಕ ಲವ್ಲಿ ಪಾಟ್, ಮ್ಯಾಜಿಕ್ ದೀಪಗಳು, ತುಳಸಿ ಕಟ್ಟೆ, ಪೆನ್ಸ್ಟ್ಯಾಂಡ್, ಜಾರ್ಗಳು, ಆನೆ, ಕುದುರೆ, ಒಂಟೆಗಳನ್ನು ತಯಾರಿಸುತ್ತಿದ್ದಾರೆ. ಭತ್ತ, ರಾಗಿ ಶೇಖರಿಸಿ ಇಡುತ್ತಿದ್ದ ಗುಡಾಣಗಳು ದೊಡ್ಡ ದೊಡ್ಡ ಹೋಟೆಲ್ಗಳ ಮುಂದೆ ಆಲಂಕಾರಿಕ ವಸ್ತುಗಳಾಗಿವೆ.
ದೂರ ಪ್ರಯಾಣ, ಹೊಲ-ಗದ್ದೆಗಳಿಗೆ ನೀರು ತುಂಬಿಸಿ ಒಯ್ಯುತ್ತಿದ್ದ ತಂತ್ರಾಣಿ ಈಗಿಲ್ಲ. ಬದಲಿಗೆ ಮಣ್ಣಿನ ವಾಟರ್ ಬಾಟೆಲ್ಗಳಿಗೆ ಬೇಡಿಕೆ ಹೆಚ್ಚಿದೆ. ಎ.ಸಿ ಇಲ್ಲದೆ ಬಿರು ಬೇಸಿಗೆಯಲ್ಲೂ ನೀರನ್ನು ತಣ್ಣಗಿರಿಸುತ್ತವೆ ಈ ಮಣ್ಣಿನ ಬಾಟಲಿಗಳು. ಆರಾಮವಾಗಿ ಕಾರ್ನಲ್ಲಿ ಒಯ್ಯಬಹುದು. ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಮಜ್ಜಿಗೆ, ಜ್ಯೂಸ್ಗಳನ್ನು ಕೊಡಲು ಬಳಸುತ್ತಾರೆ. ಮಣ್ಣಿನಿಂದ ರೂಪಿಸಿದ ಚೆಂದದ ಕಿವಿಯೋಲೆ, ಬಳೆ, ಜುಮುಕಿಗಳನ್ನು ಕಾಣಬಹುದು.
ರಾಮನಗರದ ಜನಪದ ಲೋಕದಲ್ಲಿ ಅನಸೂಯಾ ಬಾಯಿ 30 ವರ್ಷಗಳಿಂದ ಮಣ್ಣಿನ ಉತ್ಪನ್ನಗಳ ಮೇಲೆ ಪ್ರಯೋಗ ಮಾಡುತ್ತಲೇ ಇದ್ದಾರೆ. ಜೊತೆಗೆ ಬಸವರಾಜು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಮಣ್ಣಿನ ಉತ್ಪನ್ನಗಳಿಗೆ ಆಧುನಿಕ ಸ್ಪರ್ಶ ನೀಡುತ್ತಿದ್ದಾರೆ. ಆ ಮೂಲಕ ಮಣ್ಣಿನ ಪರಿಕರಗಳಿಂದು ಜೀವಂತವಾಗಿರುವ ಲಕ್ಷಣಗಳು ಕಂಡುಬರುತ್ತಿವೆ.
ಅನಸೂಯ ಬಾಯಿ ಮಣ್ಣಿನ ಪರಿಕರಗಳ ತಯಾರಿಕೆ ಜೊತೆಗೆ, ಕನಕಪುರ, ಮಡಿಕೇರಿ, ವಿರಾಜಪೇಟೆ, ಚನ್ನಪಟ್ಟಣ, ಮಾಗಡಿ, ಹೊಸೂರಿನ ಶಾಲಾ-ಕಾಲೇಜುಗಳಲ್ಲಿ ಮಣ್ಣಿನ ಮಡಿಕೆ–ಕುಡಿಕೆ ಇತರ ಕಲಾಕೃತಿ ತಯಾರು ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಅಲ್ಲದೆ ಬಾಂಬೆ, ದೆಹಲಿ, ಕೋಲ್ಕತ್ತಾ, ಪುಣೆಗಳಲ್ಲೂ ಪ್ರಾತ್ಯಕ್ಷಿಕೆ ಕೊಟ್ಟಿದ್ದಾರೆ.
ಇವರು ಮಾಡುವ ಮೊಸರು-ತುಪ್ಪದ ಕುಡಿಕೆಗಳು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕಕ್ಕೆ ರಫ್ತಾಗಿವೆ. ಒಮ್ಮೆ ವಿದೇಶಿಗರು ಜಾನಪದ ಲೋಕಕ್ಕೆ ಭೇಟಿ ಕೊಟ್ಟಾಗ ಇದನ್ನು ಮೆಚ್ಚಿ, ಅವರೇ ಕೇಳಿ ತರಿಸಿಕೊಂಡಿದ್ದಾರೆ.
‘ಆಗ ಅಡುಗೆ ಮಾಡಲು ಮಡಿಕೆ ಬಳಸುತ್ತಿದ್ದರು, ಈಗ ಅದೆಲ್ಲ ಹೋಗಿದೆ. ಆದರೆ ಮಣ್ಣಿನ ಉತ್ಪನ್ನಗಳು ಹೊಸ ರೂಪದಲ್ಲಿ ಅಸ್ಥಿತ್ವ ಉಳಿಸಿಕೊಂಡಿವೆ ನೋಡಿ’ ಎಂದು ಖುಷಿಯಿಂದ ತಮ್ಮ ಕಲಾಕೃತಿಗಳನ್ನು ತೋರುತ್ತಾರೆ ಅನಸೂಯಾ.
‘ಈ ಕಾಲದಲ್ಲಿ ನಗರದ ಜನರು ಆಲಂಕಾರಿಕ ಉದ್ದೇಶಗಳಿಗೆ ಮಣ್ಣಿನ ವಸ್ತುಗಳನ್ನು ಕೊಳ್ಳುತ್ತಾರೆ. ಆದ್ದರಿಂದ ಅಗತ್ಯಕ್ಕೆ ತಕ್ಕಂತೆ ವಸ್ತುಗಳನ್ನು ತಯಾರಿಸುತ್ತಿದ್ದೇವೆ. ಈ ಮೂಲಕ ಕಲೆ ಉಳಿಸಿಕೊಳ್ಳುತ್ತೇವೆಂಬ ನಂಬಿಕೆ ಇದೆ’ ಎನ್ನುತ್ತಾರೆ ರಾಮನಗರದ ಮತ್ತೊಬ್ಬ ಕಲಾವಿದ ಬಸವರಾಜು.
ನಿಸರ್ಗ ಎಚ್ ಮಲ್ಲಿಗೆರೆ
(ಕೃಪೆ : ಪ್ರಜಾವಾಣಿ)





