ಸೇಡಂ: ರೈತರ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ ಸೋಮವಾರ ತಾಲ್ಲೂಕಿನಾದ್ಯಂತ ಸಡಗರದಿಂದ ಆಚರಿಸಲಾಯಿತು. ಹಬ್ಬದ ನಿಮಿತ್ತ ತಾಲ್ಲೂಕಿನ ವಿವಿಧ ಗ್ರಾಮದಲ್ಲಿ ರೈತರು ಬೆಳಿಗ್ಗೆ ಹೊಲದಲ್ಲಿನ ಮಣ್ಣು ತಂದು ಎತ್ತುಗಳನ್ನು ಮಾಡುವ ಕಾಯಕದಲ್ಲಿ ತಲ್ಲಿನರಾಗಿರುವುದು ಕಂಡುಬಂದಿತು.
ಕೆಲವು ಗ್ರಾಮಗಳಲ್ಲಿ ಕುಂಬಾರರು ಮಾಡಿದ ಎತ್ತುಗಳನ್ನು ಜನರು ಖರೀದಿ ಮಾಡಿದರೆ, ಇನ್ನುಳಿದ ಕಡೆಗಳಲ್ಲಿ ಪ್ಲಾಸ್ಟಿಕ್ನಿಂದ ತಯಾರಿಸ್ಪಟ್ಟ ಎತ್ತುಗಳನ್ನು ಖರೀದಿಸಿದರು. ಮಣ್ಣಿನಿಂದ ಮಾಡಿದ ಎತ್ತುಗಳನ್ನು ಮನೆಗೆ ತಂದು ಪೂಜೆ ಮಾಡಿ ನೇವೈದ್ಯ ಮಾಡಿ ಸಮರ್ಪಿಸಿದರು.
ತಾಲ್ಲೂಕಿನ ಮುಧೋಳ ಗ್ರಾಮದ ರತ್ನಮ್ಮ ತಿಪ್ಪಣ್ಣ ಕುಂಬಾರ ಅವರ ಮನೆಯಲ್ಲಿ ಮಗ ರಮೇಶ್ ತಿಪ್ಪಣ್ಣ, ರಾಧಮ್ಮ ರಮೇಶ್ ಅವರು ಮಣ್ಣೆತ್ತಿನ ಅಮಾವಾಸ್ಯೆಯ ನಿಮಿತ್ತವಾಗಿ ಸುಮಾರು ದಿನಗಳಿಂದ ಮಣ್ಣೆತ್ತು ಮಾಡುವ ಕಾಯದಲ್ಲಿ ನಿರತರಾಗಿದ್ದರು.
ನಮ್ಮ ಕುಟುಂಬದಲ್ಲಿ ಪ್ರತಿಯೊಬ್ಬರೂ ಮಣ್ಣೆತ್ತನ್ನು ಮಾಡುತ್ತಾ ಬಂದಿದ್ದೇವೆ. ಎತ್ತು ಮಾಡುವುದು ಪ್ರತಿಯೊಬ್ಬರಿಗೂ ಬರುತ್ತದೆ.
ಹಬ್ಬದ ನಿಮಿತ್ತ 200ಕ್ಕೂ ಅಧಿಕ ಎತ್ತುಗಳನ್ನು ಮಾಡಿದ್ದೇವೆ.
ಅಮಾವಾಸ್ಯೆ ದಿನ ಗ್ರಾಮದ ತುಂಬ ತೆರಳಿ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ರತ್ನಮ್ಮ. ‘ಇತ್ತೀಚೆಗೆ ಕುಂಬಾರರು ಮಾಡಿದ ಎತ್ತುಗಳ ಬೇಡಿಕೆ ಕಡಿಮೆಯಾಗುತ್ತಿದೆ. ಮಣ್ಣಿನ ಕಲೆ ನಶಿಸುತ್ತಿದೆ. ಕುಂಬಾರಿಕೆಯ ಕಲೆಗೆ ಪ್ರೋತ್ಸಾಹ ಸಿಗುವ ನಿಟ್ಟಿನಲ್ಲಿ ಸಾಂಪ್ರದಾಯಿಕ ಕಲೆಯ ಮಣ್ಣೆತ್ತಿನ ಅಮಾವಾಸ್ಯೆಯ ಹಬ್ಬಕ್ಕೆ ಹೆಚ್ಚಿನ ಒತ್ತು ಸಿಗಲಿ’ ಎನ್ನುತ್ತಾರೆ ಮುಧೋಳ ಗ್ರಾಮದ ಮುಖಂಡ ಅಶೋಕ ಫಿರಂಗಿ.
ಗಂಗಾವತಿ: ಬಣ್ಣದ ಬಸವನಿಗೆ ಹೆಚ್ಚಿದ ಬೇಡಿಕೆ
ಈ ಬಾರಿ ಮಾರುಕಟ್ಟೆಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಎತ್ತುಗಳು ದಾಳಿಯಿಟ್ಟಿದ್ದವು. ಮಣ್ಣಿನ ಎತ್ತುಗಳಿಗೆ ಪೈಪೋಟಿ ನೀಡಿದ್ದ ಬಣ್ಣಬಣ್ಣದ ಬಸವಗಳನ್ನು ಗ್ರಾಹಕರು ಖರೀದಿಸಿದರು.
ಮೂರರಿಂದ ನಾಲ್ಕು ಇಂಚು ಎತ್ತರದ, ಐದಾರು ಇಂಚು ಉದ್ದದ ಪಿಒಪಿ ಬಸವನ ಜೋಡಿಗೆ ಬೆಳಗ್ಗೆ ₹60ರಿಂದ 70 ಧಾರಣೆ ಇತ್ತು. ಸಂಜೆ ಹೊತ್ತಿಗೆ ₹40ಕ್ಕೆ ನೀಡಿದರು. ಇನ್ನು ಸ್ಥಳೀಯ ಮಣ್ಣಿನಿಂದ ಮಾಡಿದ ಎತ್ತುಗಳಿಗೆ ₹20ರಿಂದ 30 ಧಾರಣೆ ಲಭಿಸಿತು.
ಈಗ ಮಣ್ಣು ಎತ್ತಿನ ಅಮವಾಸ್ಯೆಯಂದು ಪೂಜಿಸುವ ಬವಸನ ಮೂರ್ತಿಗಳು ಕೂಡ ಪಿಒಪಿಯಲ್ಲಿ ಅರಳುತ್ತಿರುವುದು ಸ್ಥಳೀಯ ಕುಂಬಾರರ ಕೆಲಸವನ್ನು ಕಸಿಯುವಂತ ಮಾಡಿದೆ. ದೀಪಾವಳಿಯಲ್ಲಿ ದೂರದ ರಾಜಾಸ್ತಾನದಿಂದ ಬರುವ ಜೇಡಿ ಮಣ್ಣಿನ ಟೆರ್ರಾಕೋಟಾ ಅಥವಾ ಪಿಒಪಿ ಹಣತೆಗಳು, ಗಣೇಶನ ಹಬ್ಬದ ಸಂದರ್ಭದಲ್ಲಿ ವಿನಾಯಕನ ಮೂರ್ತಿ, ಈಗ ಮಣ್ಣಿನ ಬಸವನ ಸ್ಥಾನದಲ್ಲಿ ಪರ್ಯಾಯ ಮೂರ್ತಿಗಳ ಮೂಲಕ ಪಿಒಪಿ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿದೆ.
ಪಿಒಪಿಯಲ್ಲಿ ಅರಳುವ ಮೂರ್ತಿಗಳ ಬಣ್ಣ, ಶೈಲಿ, ವಿನ್ಯಾಸಕ್ಕೆ ಮಾರು ಹೋಗುತ್ತಿರುವ ಗ್ರಾಹಕರು ಹಣ ಹೆಚ್ಚಾದರೂ ಖರೀದಿಸುತ್ತಾರೆ. ಇದರಿಂದಾಗಿ ಸೋಮವಾರ ಸ್ಥಳೀಯ ಮಣ್ಣಿನಿಂದ ತಯಾರಿಸಿದ ಎತ್ತುಗಳಿಗೆ ಬೇಡಿಕೆ ಕಡಿಮೆ ಇತ್ತು.
‘ದೂರದ ಮಹಾರಾಷ್ಟ್ರದ ನಗರಗಳಿಂದ ಪಿಒಪಿ ಎತ್ತುಗಳನ್ನು ತರಿಸಲಾಗಿದೆ. ಅಲ್ಲಿಯ ಮಾರುಕಟ್ಟೆಯಲ್ಲಿ ಜೋಡಿ ಎತ್ತುಗಳಿಗೆ ₨20. ಸಾಗಣೆ ವೆಚ್ಚ ಸೇರಿಸಿ ಸ್ಥಳೀಯ ಮಾರುಕಟ್ಟೆಯಲ್ಲಿ ₨. 50ರಿಂದ 60ಕ್ಕೆ ಮಾರಾಟ ಮಾಡಲಾಗಿದೆ’ ಎಂದು ವರ್ತಕ ಅನಿಲ್ ಬಾಸೂರು ಹೇಳಿದರು.
ಹಂತಹಂತವಾಗಿ ಪಿಒಪಿ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿದೆ. ಇದು ಪಾರಂಪರಿಕ ವೃತ್ತಿಯಲ್ಲಿರುವ ಕುಂಬಾರರಿಗೆ ಹೊಡೆತ ಬೀಳುತ್ತಿದೆ. ಸರ್ಕಾರ ವೃತ್ತಿ ತರಬೇತಿ ನೀಡಬೇಕು ಎಂದು ಕುಂಬಾರ ಈರಪ್ಪ ಮುದೇನೂರು ಹೇಳಿದರು.
ಕೃಷಿ ಪ್ರಧಾನ ಸಮುದಾಯದಲ್ಲಿ ಮೆಣ್ಣೆತ್ತಿನ ಅಮವಾಸ್ಯೆಗೆ ಎಲ್ಲಿಲ್ಲದ ವಿಶೇಷ ಸ್ಥಾನಮಾನ. ಮಣ್ಣೆತ್ತಿನ ಅಮವಾಸ್ಯೆಯಂದು ಎತ್ತುಗಳನ್ನು ದೇವರ ಜಗುಲಿಯಲ್ಲಿಟ್ಟು ಪೂಜಿಸಿ ಸಂಜೆ ಅಥವಾ ಮಾರನೇ ದಿನ ಹರಿಯುವ ನೀರಿಗೆ ಬಿಡುವ ಸಂಪ್ರದಾಯವಿದೆ.






