`ಕಲ್ಲಲಾಂಬು’ ಇದನ್ನು ತುಳುವರು ಸಾಮಾನ್ಯವಾಗಿ ನೋಡಿರುತ್ತಾರೆ, ನೋಡಿರದಿದ್ದರೂ ಹೆಸರನ್ನಾದರೂ ಕೇಳಿರುತ್ತಾರೆ. ಕಲ್ಲಣಬೆ ಎಂದು ಕರೆಯಲ್ಪಡುವ ಈ ಗೋಲಿಯಾಕಾರದ ಶುಭ್ರ ಬಿಳಿಬಣ್ಣದ ಅಣಬೆಯ ವಿಶೇಷತೆ ಏನೆಂದರೆ ಇದು ಮುಂಗಾರಿನ ಪ್ರಾರಂಭದಲ್ಲಿ ಮಾತ್ರ ಕಾಣಸಿಗುವುದು. ಮೊದಲ ಮಳೆ ಭೂಮಿಗೆ ಬೀಳುವಾಗ ಸಿಡಿಲಿನ ಆರ್ಭಟ ಜೋರಾಗಿಯೇ ಇರುತ್ತದೆ. ಈ ವೇಳೆ ಜೌಗುಮಣ್ಣಿನಲ್ಲಿ ಭೂಮಿಯ ಮೇಲೆ ಬಿಳಿಬಣ್ಣದ ಪಾಚಿ ಹಿಡಿದಂತೆ ಕಂಡುಬರುತ್ತದೆ. ಅಲ್ಲಿ ಕತ್ತಿ ಇಲ್ಲವೇ ಕೋಲಿನಿಂದ ಅಗೆದರೆ ಸಿಗುವುದು ಇದೇ ಕಲ್ಲಣಬೆ ಅಥವಾ ಕಲ್ಲಲಾಂಬು.
ಕಲ್ಲಣಬೆ ಸಾಮಾನ್ಯವಾಗಿ ಭೂಮಿಯಡಿಯಲ್ಲಿ ಹಿಂಡು ಹಿಂಡಾಗಿ ಒಂದೇ ಜಾಗದಲ್ಲಿ ಕಂಡುಬರುತ್ತದೆ. ಇಲ್ಲವೇ ಕರ್ಮರ್ ಮರದ ಹಾಡಿಯ ಅಲ್ಲಲ್ಲಿ ಈ ಅಣಬೆಗಳು ಚದುರಿಕೊಂಡು ಬೆಳೆದಿರುತ್ತವೆ. ಇದನ್ನು ಸಂಗ್ರಹಿಸಿ ತರುವುದೇ ಕಷ್ಟದ ಕೆಲಸ. ಒಂದು ಸಣ್ಣ ಚೀಲ ತುಂಬಬೇಕಾದರೆ ಗುಡ್ಡ, ಹಾಡಿಯಲ್ಲಿ ಸುಮಾರು ಮೈಲು ದೂರ ನಡೆಯಬೇಕು. ಕಲ್ಲಣಬೆ ಸಂಗ್ರಹಿಸುವವರು ಮುಂಜಾನೆ ಹಾಡಿಯನ್ನು ಪ್ರವೇಶಿಸಿದರೆ ಮಧ್ಯಾಹ್ನದ ಸುಮಾರಿಗೆ ಚೀಲ ಭರ್ತಿ ಕಲ್ಲಣಬೆ ಹಿಡಿದು ವಾಪಸ್ ಆಗುವುದುಂಟು. ಹೀಗೆ ಕಳೆದ ಕೆಲವು ವರ್ಷಗಳಿಂದ ಕಲ್ಲಣಬೆಯ ಜೊತೆ ಮುಂಗಾರಿನ ಸಮಯದಲ್ಲಿ ನಂಟು ಬೆಳೆಸಿಕೊಂಡಿರುವವರಲ್ಲಿ ಕಾರ್ಕಳ-ಇರ್ವತ್ತೂರಿನ ಕಾಂತು ಯಾನೆ ಶ್ರೀಕಾಂತ್ ಕುಲಾಲ್ ಕೂಡಾ ಒಬ್ಬರು. ಕಾರ್ಕಳ ಪೇಟೆಯಲ್ಲಿ ಕಲ್ಲಣಬೆ ಖರೀದಿಸಬೇಕಾದರೆ ನೀವು ಕಾಂತು ಅವರನ್ನು ಹುಡುಕಿದರಾಯಿತು. ತಾಜಾ ಕಲ್ಲಣಬೆ ನಿಮಗೆ ಲಭ್ಯವಾಗುತ್ತದೆ.
ಎಲ್ಲಿ ಸಿಗುತ್ತದೆ?
ಅರಣ್ಯ ಪ್ರದೇಶ ಹೆಚ್ಚಾಗಿ ಇರುವಲ್ಲಿ ಇಲ್ಲವೇ (ಕರ್ಮರ್ ಮರದ ಹಾಡಿ) ಉರುವಲು ಕಟ್ಟಿಗೆಯ ಹಾಡಿಯಲ್ಲಿ ಕಲ್ಲಲಾಂಬು ಹೆಚ್ಚಾಗಿ ಸಿಗುತ್ತದೆ. ಇದರ ಇರುವಿಕೆಯೂ ಮೇಲ್ನೋಟಕ್ಕೆ ಅಷ್ಟು ಸುಲಭವಾಗಿ ಕಂಡುಬರುವುದಿಲ್ಲ. ನೀವು ಕಲ್ಲಣಬೆ ಹುಡುಕುವಲ್ಲಿ ಪರಿಣತರಾಗಿದ್ದರೆ ಮಾತ್ರ ನಿಮಗೆ ಅದು ಕಂಡೀತು. ಬಿಳಿಬಣ್ಣದ ಪಾಚಿ ಬೆಳೆದಲ್ಲಿ ಕೆದಕಿದರೆ ಭೂಮಿಯ ಅಡಿಭಾಗದಲ್ಲಿ ಕಲ್ಲಣಬೆ ಸಿಗುತ್ತದೆ. ಇದನ್ನು ಸಂಗ್ರಹಿಸಿ ತಂದು ನೀರಿನಲ್ಲಿ ಮುಳುಗಿಸಿ ಅದರ ಸುತ್ತ ಅಂಟಿಕೊಂಡಿದ್ದ ಮಣ್ಣನ್ನು ಚೆನ್ನಾಗಿ ತೊಳೆದ ಬಳಿಕವಷ್ಟೆ ಖಾದ್ಯ ಪದಾರ್ಥ ತಯಾರಿಕೆಗೆ ಇದು ಯೋಗ್ಯವಾಗುತ್ತದೆ.
ಕಲ್ಲಣಬೆ ಲಭ್ಯವಾಗುವ ಕುರಿತು ಕಾಂತು ಅವರಲ್ಲಿ ವಿಚಾರಿಸಿದರೆ ಅದರ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ. `ಕಲ್ಲಣಬೆ ಕಾರ್ಕಳದ ಮಿಯಾರು, ಹೊಸ್ಮಾರು, ಈದು, ಜಾರ್ಕಳ ಮಾತ್ರವಲ್ಲದೆ ಹೆಬ್ರಿ, ಅಜೆಕಾರು ಕಡೆಗಳಿಂದ ಸಿಗುತ್ತದೆ. ಇದನ್ನು ಕಾಡಿನಲ್ಲಿ ಹುಡುಕಾಡಿ ಸಂಗ್ರಹಿಸುವ ಜನರ ಗುಂಪೇ ಇಲ್ಲಿದೆ. ಅವರು ತಂದು ನಮಗೆ ನೀಡುತ್ತಾರೆ. ನಾವು ಅದನ್ನು ಗ್ರಾಹಕರಿಗೆ ಮಾರಾಟ ಮಾಡುತ್ತೇವೆ. ಜೂನ್ ತಿಂಗಳ ಪ್ರಾರಂಭದಿಂದ ಜುಲೈ ತಿಂಗಳ ಮಧ್ಯಭಾಗದ ಅವಧಿಯಲ್ಲಿ ಮಾತ್ರವೇ ದೊರಕುವ ಕಲ್ಲಣಬೆಗೆ ಗ್ರಾಹಕರ ಡಿಮ್ಯಾಂಡ್ ಕೂಡಾ ಜಾಸ್ತಿ ಇದೆ. ಅವರ ಡಿಮ್ಯಾಂಡ್ಗೆ ಅನುಗುಣವಾಗಿ ನಾವು ಪೂರೈಕೆ ಮಾಡುತ್ತೇವೆ ಎನ್ನುತ್ತಾರೆ ಕಾಂತು.
ಕೆ.ಜಿ.ಗೆ 250-300 ರೂ.
`ಕಲ್ಲಣಬೆ ಸಂಗ್ರಹಿಸುವವರಿಗೆ ನಾವು ಕೆ.ಜಿ.ಯೊಂದಕ್ಕೆ 200-230 ರೂ. ಕೊಡುತ್ತೇವೆ. ಅದನ್ನು ಸ್ವಲ್ಪ ಲಾಭಾಂಶವಿಟ್ಟು ಗ್ರಾಹಕರಿಗೆ 250-300 ರೂ.ಗೆ ಮಾರಾಟ ಮಾಡುತ್ತೇವೆ. ಕಲ್ಲಣಬೆ ಸಿಗುವ ಸೀಸನ್ನಲ್ಲಿ ಅದನ್ನು ಮಾರುಕಟ್ಟೆಯಲ್ಲಿ ಕಾದು ಕುಳಿತು ಖರೀದಿಸುವ ಗ್ರಾಹಕರೂ ಇರುತ್ತಾರೆ. ಇವರೆಲ್ಲ ಕಲ್ಲಣಬೆಯನ್ನು ಸ್ವಾದಿಷ್ಟ ರುಚಿ ಇರುವ ಕಾರಣಕ್ಕೆ ಇಷ್ಟಪಡುತ್ತಾರೆ. ನಾವೂ ಅಷ್ಟೇ ಮಳೆಗಾಲದ ಪ್ರಾರಂಭದ ಸೀಸನ್ನಲ್ಲಿ ಈ ಅಣಬೆಯನ್ನು ಮಾರಾಟ ಮಾಡುತ್ತೇವೆ, ಆನಂತರ ಗ್ರಾಹಕರು ಕೇಳಿದರೂ ಅವರಿಗೆ ಪೂರೈಸಲು ಆಗುವುದಿಲ್ಲ.’
ಒಂದೇ ದಿನ ಬಾಳಿಕೆ:
`ಕಲ್ಲಲಾಂಬು ಇಲ್ಲವೇ ಕಲ್ಲಣಬೆಯ ಇನ್ನೊಂದು ವಿಶೇಷವೇನೆಂದರೆ ಇದು ಒಂದೇ ದಿನ ಬಾಳಿಕೆ ಬರುವುದು. ಸಂಗ್ರಹಿಸಿ ತಂದ ಕಲ್ಲಣಬೆಯನ್ನು ಆ ದಿನವೇ ಪದಾರ್ಥ ಮಾಡಿದರಾಯಿತು. ಒಂದು ವೇಳೆ ನಾಳೆ ಮಾಡಿದರಾಯಿತು ಎಂದು ಇರಿಸಿದರೆ ಅದು ಕೆಡುತ್ತದೆ. ಅದನ್ನು ಹೇಗೆ ಮಾಡಿದರೂ ಮರುದಿನ ಬಳಕೆ ಮಾಡಲು ಆಗುವುದಿಲ್ಲ. ಒಂದೇ ದಿನ ಬಾಳಿಕೆ ಬರುವ ಕಲ್ಲಣಬೆಯನ್ನು ಈ ಕಾರಣದಿಂದ ಸಂಗ್ರಹಿಸಿಟ್ಟು ಮಾರಾಟ ಮಾಡುವಂತಿಲ್ಲ. ಹೀಗೆ ಮಾಡಿದರೆ ವ್ಯಾಪಾರಿಗಳಿಗೆ ನಷ್ಟ ಉಂಟಾಗುತ್ತದೆ’ ಎನ್ನುತ್ತಾರೆ ಕಾಂತು.
ಕಲ್ಲಲಾಂಬುವಿನ ಘಮ್ಮೆನ್ನುವ ಖಾದ್ಯ:
ಕಲ್ಲಣಬೆಯನ್ನು ಸಾಂಬಾರು, ಗಸಿ ಇಲ್ಲವೇ ಸುಕ್ಕ ತಯಾರಿಸಿ ಊಟದ ಜೊತೆ ಸವಿಯಬಹುದು. ಘಮ್ಮೆನ್ನುವ ಪರಿಮಳ, ರುಚಿಕರ ಸ್ವಾದದಿಂದ ತುಳುವರ ಮನೆಮಾತಾಗಿರುವ ಕಲ್ಲಲಾಂಬು ಎಲ್ಲಾ ಕಾಲದಲ್ಲೂ ಸಿಗುವುದಿಲ್ಲ. ಹೀಗಾಗಿ ಕಲ್ಲಲಾಂಬು ಪ್ರಿಯರು ಒಂದೋ ತಾವೇ ಮನೆ ಪಕ್ಕದ ಹಾಡಿ, ಗುಡ್ಡದಲ್ಲಿ ಕಲ್ಲಲಾಂಬುಗಾಗಿ ಹುಡುಕಾಡಬೇಕು. ಇಲ್ಲವಾದಲ್ಲಿ ಮಾರುಕಟ್ಟೆಯಲ್ಲಿ ಕಲ್ಲಲಾಂಬು ಎಲ್ಲಾದರೂ ಸಿಗುತ್ತದೆಯೇ ಎಂದು ವಿಚಾರಿಸಬೇಕು. ರುಚಿ ನೋಡಲು ಕಲ್ಲಣಬೆ ಈ ಮಳೆಗಾಲದಲ್ಲಿ ಸಿಗಲಿಲ್ಲವೆಂದಾದರೆ ಮುಂದಿನ ಮಳೆಗಾಲದ ತನಕ ಕಾಯಬೇಕು.
ಕಾಂತು ಅವರ ಮೊಬೈಲ್ ಸಂಖ್ಯೆ : 9686139763
ಬರಹ : ಶಶಿಧರ ಬೆಳ್ಳಾಯರು




