450 ರೂಪಾಯಿಯ ತಂದೂರಿ ಒಲೆ 3 ಸಾವಿರಕ್ಕೆ ಮಾರಾಟ ಮಾಡುವ ದಲ್ಲಾಳಿಗಳು !
ಚಿಕ್ಕಬಳ್ಳಾಪುರ: ‘ದೂರದೂರದ ಕೆರೆಗೆ ಹೋಗಿ ಅವರಿವರ ಕೈಕಾಲು ಹಿಡಿದು, ಹಣ ಖರ್ಚು ಮಾಡಿ ಜೇಡಿಮಣ್ಣು ಮತ್ತು ಮರಳು ತಂದು ಸಿದ್ಧಪಡಿಸುವ ತಂದೂರಿ ಒಲೆಯನ್ನು ಅವರು ನಮ್ಮಿಂದ ಬರೀ ರೂ 450ಕ್ಕೆ ಖರೀದಿಸಿ, ಬೆಂಗಳೂರು ಅಥವಾ ಮುಂಬೈಯಲ್ಲಿ ರೂ 3 ರಿಂದ ರೂ 5 ಸಾವಿರಕ್ಕೆ ಮಾರುತ್ತಾರೆ. ಏನೂ ಮಾಡಲಾಗದ ಬಡಪಾಯಿಗಳ ಸ್ಥಿತಿಯೇ ಇಷ್ಟೆಂದು ದಿನ ನೂಕುತ್ತಿದ್ದೇವೆ’.
ಬೆಳಿಗ್ಗೆ 8 ರಿಂದ ಸಂಜೆ 6ರ ವರೆಗೆ ತಂದೂರಿ ಒಲೆಗಳನ್ನು ಸಿದ್ಧಪಡಿಸುವುದನ್ನೇ ಕಾಯಕ ಮಾಡಿಕೊಂಡಿರುವ ಕುಂಬಾರರು ಹೀಗೆ ನೋವು ವ್ಯಕ್ತಪಡಿಸುವ ಜತೆಗೆ ಸರ್ಕಾರದಿಂದ ಒಂದರ್ಥದಲ್ಲಿ ‘ಅಸ್ಕೃಶ್ಯ’ರಾಗಿಯೇ ಉಳಿದಿದ್ದೇವೆ ಎನ್ನುತ್ತಾರೆ. ಚಿಕ್ಕಬಳ್ಳಾಪುರ ತಾಲ್ಲೂಕು ಸುಲ್ತಾನಪೇಟೆಯ ಶಿಥಿಲ ಶೆಡ್ಗಳಲ್ಲಿ ಕುಂಬಾರಿಕೆ ಮಾಡುವ ಅವರು, ‘ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ನಮ್ಮ ಜೀವನೋತ್ಸಾಹ ಕಸಿದುಕೊಳ್ಳಲಾಗುತ್ತಿದೆ’ ಎನ್ನುತ್ತಾರೆ.
ಹೂ ಕುಂಡಗಳನ್ನು ತಯಾರಿಸುತ್ತಿರುವ ಚಿನ್ನಣ್ಣಯ್ಯ ಕುಂಬಾರ
‘ಕುಂಬಾರಿಕೆ ಕಸುಬು ಕ್ಷೀಣಿಸುತ್ತಿದ್ದರೂ ಅದನ್ನೇ ನೆಚ್ಚಿ ಬದುಕುತ್ತಿರುವ ಕುಂಬಾರರಿಗೆ ಕೈಗಾರಿಕೆ ಇಲಾಖೆಯಿಂದ ನಿರೀಕ್ಷಿತ ನೆರವು ಸಿಗುತ್ತಿಲ್ಲ. ಸುಲ್ತಾನಪೇಟೆಯ 40ಕ್ಕೂ ಹೆಚ್ಚು ಕುಂಬಾರಿಕೆ ಕುಟುಂಬಗಳು ಬೆಂಗಳೂರು, ಮುಂಬೈಯಂತಹ ಮಹಾನಗರ ಸೇರಿದ್ದು, 5 ರಿಂದ 6 ಕುಟುಂಬದವರು ಮಾತ್ರ ಇಲ್ಲಿದ್ದಾರೆ. ಗೃಹಕೈಗಾರಿಕೆಗಳ ವ್ಯಾಪ್ತಿಗೆ ಒಳಪಟ್ಟರೂ ಕೈಗಾರಿಕೆ ಇಲಾಖೆಯಿಂದ ಸಮರ್ಪಕ ಸ್ಪಂದನೆಯಿಲ್ಲ’ ಎಂದು ಕುಂಬಾರಕರ್ತ ಗೋವಿಂದಸ್ವಾಮಿ ಹೇಳುತ್ತಾರೆ.
ಉತ್ತರ ಭಾರತೀಯರು ಹೆಚ್ಚು ಇಷ್ಟಪಡುವ ತಂದೂರಿ ರೋಟಿಗಳಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಅದಕ್ಕೆ ಸಮವಾಗಿ ತಂದೂರಿ ಒಲೆಗಳಿಗೆ ಪಂಚತಾರಾ ಹೋಟೆಲ್ ಮತ್ತು ಇತರೆಡೆ ಬೇಡಿಕೆಯಿದೆ. ಕೆಲ ದಲ್ಲಾಳಿಗಳು ಮತ್ತು ಇತರರು ತಂದೂರಿ ಒಲೆಗಳನ್ನು ರೂ. 450ಕ್ಕೆ ಖರೀದಿಸಿ ಬೆಂಗಳೂರು ಮತ್ತು ಬೇರೆ ಊರುಗಳಲ್ಲಿ ರೂ 3 ರಿಂದ ರೂ 5 ಸಾವಿರಕ್ಕೆ ಮಾರುತ್ತಾರೆ ಎಂದು ಅವರು ತಿಳಿಸಿದರು.
ಕುಂಬಾರರ ಕುಶಲ ಕೈಗಾರಿಕಾ ಸಹಕಾರ ಸಂಘ ಕಟ್ಟಿಕೊಂಡಿದ್ದೇವೆ. ಆದರೂ ಅದಕ್ಕೆ ತಕ್ಕಮಟ್ಟಿನ ಕಚೇರಿ ಅಥವಾ ಸೌಕರ್ಯವಾಗಲಿ ಇಲ್ಲ. ಯಾವುದೇ ಕ್ಷಣ ಕುಸಿದು ಬೀಳುವಂತಹ ಶೆಡ್ನಲ್ಲಿ ತಂದೂರಿ ಒಲೆ, ಹೂ–ಗಿಡ ಕುಂಡಗಳು, ಮಡಿಕೆ ಮುಂತಾದವು ಮಾಡುತ್ತಿದ್ದೇವೆ. ನೆಪ ಮಾತ್ರಕ್ಕೆ ಕೈಗಾರಿಕೆ ಅಧಿಕಾರಿಗಳು ಆಗೊಮ್ಮೆ ಈಗೊಮ್ಮೆ ಭೇಟಿ ನೀಡುವುದು ಹೊರತುಪಡಿಸಿದರೆ ಸರ್ಕಾರಿ ಸೌಲಭ್ಯಗಳು ಅಥವಾ ನೆರವಿನ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅವರು ತಿಳಿಸಿದರು.
ಸುಲ್ತಾನಪೇಟೆಯಲ್ಲಿ ತಯಾರಿಸಲಾದ ತಂದೂರಿ ಒಲೆಗಳು
ಒಂದು ಹೂಕುಂಡ ಸಿದ್ಧಪಡಿಸಲು ರೂ 5 ರಿಂದ ರೂ 6 ತಗುಲುತ್ತದೆ. ಅಲ್ಪ ಮಟ್ಟದ ಲಾಭ ನಮಗೆ ಸಿಗುತ್ತದೆ. ಅವುಗಳನ್ನೇ ಬೆಂಗಳೂರಿಗೆ ಒಯ್ದು ರೂ 30 ರಿಂದ ರೂ 40ಕ್ಕೆ ಮಾರುತ್ತಾರೆ. ಕುಂಬಾರಿಕೆ ಬಿಟ್ಟು ಬೇರೆ ಕೆಲಸ ಗೊತ್ತಿರದಿದ್ದಕ್ಕೆ ಇದನ್ನೇ ನಂಬಿಕೊಂಡು ಬದುಕುತ್ತಿದ್ದೇವೆ ಎಂದು ಅವರು ತಿಳಿಸಿದರು.
ಜೇಡಿ ಮಣ್ಣು ಜತೆಗೆ ಮರಳು ತರುವಾಗ ಪೊಲೀಸರು ಮತ್ತು ಇನ್ನಿತರರಿಂದ ನಿತ್ಯವೂ ಕಿರಿಕಿರಿ ಅನುಭವಿಸಬೇಕು. ಕೆರೆ–ಕುಂಟೆಗಳು ಬತ್ತುತ್ತಿರುವ ಕಾರಣ ದೂರದೂರಕ್ಕೆ ಹುಡುಕುತ್ತ ಹೋಗಬೇಕು. ಕುಂಬಾರರು ಸಿದ್ಧಪಡಿಸುವ ಉತ್ಪನ್ನಗಳಿಗೆ ನಿಶ್ಚಿತ ಬೆಲೆ ಎಂಬುದಿಲ್ಲ. ಸರ್ಕಾರದಿಂದ ಬೆಂಬಲ ಬೆಲೆ ಕೂಡ ಸಿಗುವುದಿಲ್ಲ. ಕುಂಬಾರರದ್ದು ಸದಾ ಕಷ್ಟದ ಜೀವನ ಎಂದು ಯಾರೂ ಮದುವೆಗೆ ಹೆಣ್ಣು ಸಹ ನೀಡುತ್ತಿಲ್ಲ ಎಂದು ಕುಂಬಾರಕರ್ತರಾದ ಮಹೇಶ್ ಮತ್ತು ರಾಜು ಹೇಳಿದರು.
ಸರ್ಕಾರದಿಂದ ಸ್ಪಂದನೆಯಿಲ್ಲ
ನಮ್ಮ ತಂದೆ ಕಾಲದಿಂದಲೂ ಕುಂಬಾರಿಕೆ ಕೆಲಸ ಮಾಡುತ್ತಿದ್ದೇನೆ. ಕೈಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಹಲ ಬಾರಿ ಮನವಿಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮ ಸಹಕಾರ ಸಂಘಕ್ಕೆ ಆದ್ಯತೆ ನೀಡುತ್ತಿಲ್ಲ.
–ಗೋವಿಂದಸ್ವಾಮಿ
ಕೆಲಸ ಬಿಟ್ಟು ಮುಂಬೈಗೆ
ದಿನಪೂರ್ತಿ ಕುಂಬಾರ ಕೆಲಸ ಮಾಡಲು ಯುವಜನರು ಇಚ್ಛಿಸುತ್ತಿಲ್ಲ. ಎಸ್ಎಸ್ಎಲ್ಸಿ ಮತ್ತು ಪಿಯುಸಿ ಓದಿದರೆ ಸಾಕು ಬೆಂಗಳೂರು ಅಥವಾ ಮುಂಬೈಗೆ ಹೊರಡುತ್ತಾರೆ. 8 ರಿಂದ 10 ಮಂದಿ ಮಾತ್ರ ಈಗ ಕೆಲಸ ಮಾಡುತ್ತಿದ್ದಾರೆ.
–ಮಹೇಶ್
ಮದುವೆಗೆ ಹೆಣ್ಣು ನೀಡುತ್ತಿಲ್ಲ
ಕುಂಬಾರರು ಯಾವಾಗಲೂ ಸಂಕಷ್ಟದಲ್ಲೇ ಇರುತ್ತಾರೆ ಎಂಬ ಕಾರಣಕ್ಕೆ ಯುವಕರಿಗೆ ಮದುವೆಗೆ ಹೆಣ್ಣುಮಕ್ಕಳು ಸಿಗುತ್ತಿಲ್ಲ. ನಮ್ಮ ಸಮಸ್ಯೆ ಮತ್ತು ಗೋಳು ಯಾರ ಮುಂದೆ ಹೇಳಿಕೊಳ್ಳಬೇಕು.
–ರಾಜು
posted by : Dinesh Bangera Irvathur 26/03/2016



