(ಕುಂಬಾರ ಗುಂಡಿ ನಿವಾಸಿಗಳು ಪಕ್ಕದ ಓಣಿಯಿಂದ ಸಹಕಾರ ಪದ್ಧತಿಯಲ್ಲಿ ಎತ್ತಿನ ಬಂಡಿಯಲ್ಲಿ ನೀರು ತರುತ್ತಿರುವುದು)
ಹಾವೇರಿ: ‘ಕುಂಬಾರರಿಗೆ ವರುಷ, ದೊಣ್ಣೆಗೆ ನಿಮಿಷ’ ಎಂಬ ಗಾದೆ ಮಾತು ಜನಜನಿತ. ಈ ಮಾತಿನ ವಾಸ್ತವ ಅರಿಯಲು ನಗರದ ಹುಕ್ಕೇರಿಮಠ ರಸ್ತೆಯಲ್ಲಿರುವ ಕುಂಬಾರ ಗುಂಡಿಗೆ ಬರಬೇಕು. ಇಲ್ಲಿ ಕುಡಿಯಲು, ದಿನನಿತ್ಯದ ಕ್ರಿಯೆಗಳು, ಮಡಕೆ ತಯಾರಿಸಲು ನೀರಿಲ್ಲದೇ ಕುಂಬಾರರು ಪ್ರಯಾಸ ಪಡುತ್ತಿದ್ದು, ನೀರು ಪೂರೈಕೆ ವ್ಯವಸ್ಥೆ ಸರಿಪಡಿಸದ ಜಿಲ್ಲಾಡಳಿತ, ನಗರಸಭೆ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ‘ಕುಂಬಾರಿಕೆ ಕಲೆ’ಗೇ ದೊಣ್ಣೆ ಏಟು ಬೀಳುತ್ತಿದೆ.
ಇಲ್ಲಿ ಸುಮಾರು 30 ಮನೆಗಳು, ಅಂದಾಜು 150 ಜನಸಂಖ್ಯೆ ಇದೆ. ಇಲ್ಲಿ ಕುಂಬಾರಿಕೆ ಮಣ್ಣಿಗಾಗಿ ಹೊಂಡ ತೋಡುವ ಕಾರಣ ಈ ಓಣಿಯು ‘ಕುಂಬಾರ ಗುಂಡಿ’ ಎಂದೇ ಹೆಸರು ಪಡೆದುಕೊಂಡಿದೆ. ಆದರೆ, ಕುಂಬಾರಿಕೆಯ ಈ ಕುಟುಂಬಗಳು ಸರ್ಕಾರದ ಬಹುತೇಕ ಸೌಲಭ್ಯಗಳಿಂದ ವಂಚಿತವಾಗಿವೆ.
ಕುಂಬಾರಿಕೆಗೆ ಮಣ್ಣು, ನೀರು, ಬೆಂಕಿಯೇ ಆಧಾರ. ಈ ಪೈಕಿ ಮಣ್ಣು ಸ್ಥಳದಲ್ಲೇ ಸಿಗುತ್ತಿದೆ. ಆದರೆ, ನೀರು ಮತ್ತು ಬೆಂಕಿಯ ಉರುವಲು ದುಸ್ತರವಾಗಿದೆ. ಈ ಬಾರಿ ನೀರಿನ ಸಮಸ್ಯೆ ಹೇಳತೀರದಾಗಿದೆ.
‘ಓಣಿ ಪಕ್ಕದಲ್ಲಿನ ಕೊಳಚೆ ನೀರಿನ ಕಾಲುವೆಯ ನೀರು ನುಗ್ಗುವ ಪರಿಣಾಮ, ಮಳೆಗಾಲದಲ್ಲಿ ಈ ಪ್ರದೇಶ ಜಲಾವೃತಗೊಂಡಿರುತ್ತದೆ. ಹಲವು ಮನೆಗಳಿಗೆ ಮೊಣಕಾಲು ಮುಳುಗುವಷ್ಟು ನೀರು ನುಗ್ಗಿರುತ್ತದೆ. ಆದರೆ, ಬೇಸಿಗೆ ಬಂದರೆ ಕುಡಿಯಲೂ ನೀರಿಲ್ಲ. ಇಲ್ಲಿ ಮೂರು ಸಾರ್ವಜನಿಕ ನಳವಿದ್ದರೂ, 15ರಿಂದ 20 ದಿನಕ್ಕೊಮ್ಮೆ ನೀರು ಬಿಡುತ್ತಾರೆ’ ಎನ್ನುತ್ತಾರೆ ಸ್ಥಳೀಯ ಯುವಕ ಆನಂದ.
‘ನಳದಲ್ಲಿ ನೀರು ಬಾರದಿದ್ದರೆ, ಪಕ್ಕದ ಕೊಳವೆಬಾವಿಗೆ ಹೋಗಬೇಕು. ಆ ನೀರು ಸವಳು ಬರುತ್ತಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಅಲ್ಲದೇ ನೀರಿಗಾಗಿ ದೀರ್ಘ ಸರದಿ ಕಾಯಬೇಕು. ಆ ನೀರನ್ನು ಬಟ್ಟೆ, ಪಾತ್ರೆ ಇತ್ಯಾದಿ ತೊಳೆಯಲು ಮಾತ್ರ ಬಳಸಬಹುದು, ಹೊರತು ಅಡುಗೆಗೆ ಅಸಾಧ್ಯ’ ಎನ್ನುತ್ತಾರೆ ಶಿವರಾಜ್ ಕುಂಬಾರ.
‘ಅಲ್ಲೂ ಪ್ರತಿನಿತ್ಯ ನೀರು ಸಿಗುವುದಿಲ್ಲ. ಮಳೆಗಾಲದಲ್ಲಿ ಕೊಳಚೆ ನೀರು ನುಗ್ಗಿ ಬದುಕು ದುಸ್ತರವಾದರೆ, ಬೇಸಿಗೆಯಲ್ಲಿ ಕುಡಿಯಲು ನೀರಿಲ್ಲದೇ ಜೀವಿಸುವುದೇ ಕಷ್ಟವಾಗಿದೆ’ ಎನ್ನುತ್ತಾರೆ ಅವರು. ನಗರಸಭೆಯ ಈ ವ್ಯವಸ್ಥೆ ಪರಿಣಾಮ, ಅಪರೂಪಕ್ಕೊಮ್ಮೆ ನೀರು ಬಂದಾಗ ನಿವಾಸಿಗಳು ನೀರಿಗಾಗಿ ಜಗಳವಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಇನ್ನು, ಟ್ಯಾಂಕರ್ ನೀರು ತರಿಸಿಕೊಳ್ಳುವಷ್ಟು ಆರ್ಥಿಕ ಸದೃಢತೆ ಇಲ್ಲ. ಅದಕಾಗಿ ನಾಲ್ಕೈದು ಮನೆಗಳು ಸೇರಿಕೊಂಡು ಆಸುಪಾಸಿನ ಕೊಳವೆಬಾವಿಗಳಿಂದ ಬಿಂದಿಗೆಯಲ್ಲಿ ಎತ್ತಿನ ಬಂಡಿ ಮೂಲಕ ‘ಸಹಕಾರ ಪದ್ಧತಿ’ಯಲ್ಲಿ ನೀರು ತರುತ್ತಾರೆ.
ಫ್ರಿಡ್ಜ್, ಸ್ಟೀಲ್, ಪ್ಲಾಸ್ಟಿಕ್ ಬಿಂದಿಗೆ ಅಬ್ಬರದ ನಡುವೆ ಪರಿಸರ ಸ್ನೇಹಿ ಮಡಕೆಗೆ ಬೇಡಿಕೆ ಕಡಿಮೆಯಾಗಿದೆ. ಆದರೂ, ಬೇಸಿಗೆ ಬಂದರೆ ಮಡಕೆಗೆ ತಕ್ಕಮಟ್ಟಿನ ಬೆಲೆ ಬರುತ್ತದೆ. ಆದರೆ, ನೀರಿನ ಕೊರತೆ ಕಾರಣ ಮಡಕೆ ತಯಾರಿಯೂ ದುಬಾರಿಯಾಗುತ್ತಿದೆ. ಈ ಎಲ್ಲ ಸಮಸ್ಯೆಗಳಿಂದ ಬಹುತೇಕರು ಕುಂಬಾರಿಕೆ ಬಿಟ್ಟು ಮನೆಗೆಲಸ, ಕೂಲಿಯತ್ತ ತೆರಳುತ್ತಿದ್ದಾರೆ.
ಮೂಲಸೌಕರ್ಯ: ‘ಇಲ್ಲಿ ಬೀದಿ ದೀಪವೂ ಇಲ್ಲ. ತೋಟದಯಲ್ಲಾಪುರ ಸಂಪರ್ಕ ರಸ್ತೆಯನ್ನು ಅಭಿವೃದ್ಧಿ ಮಾಡಿಲ್ಲ. ಇಲ್ಲಿನ ಮನೆಗಳಲ್ಲಿ ಶೌಚಾಲಯಗಳಿಲ್ಲ. ಓಣಿಗೊಂದು ಸಾರ್ವಜನಿಕ ಶೌಚಾಲಯವೂ ಇಲ್ಲ. ಅಕ್ಕಪಕ್ಕದ ಹೊಲಗಳಿಗೆ ಬೇಲಿ ಹಾಕಲಾಗಿದೆ. ಇದರಿಂದ ಮಹಿಳೆಯರು ಪ್ರತಿನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಇದು ಪರೋಕ್ಷವಾಗಿ ಮಹಿಳೆಯರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ’ ಎನ್ನುತ್ತಾರೆ ಸ್ಥಳೀಯ ಮಹಿಳೆಯರು.
ಸ್ಥಳೀಯ ಸಮಸ್ಯೆ ಬಗ್ಗೆ ನಗರಸಭೆ ಸದಸ್ಯರು, ಶಾಸಕರು, ಜನಪ್ರತಿನಿಧಿಗಳು ಅಸ್ಥೆ ವಹಿಸಿ ಕ್ರಮಕೈಗೊಳ್ಳಬೇಕಾಗಿದೆ. ವಿವಿಧ ನಿಗಮಗಳು ಸವಲತ್ತು ಕಲ್ಪಿಸಬೇಕಾಗಿದೆ.
ಕುಂಬಾರ ಗುಂಡಿಗೆ ಕೊಳವೆ ಬಾವಿ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪ್ರತಿ ಮನೆಗೊಂದು ಹಾಗೂ ಒಂದು ಸಾರ್ವಜನಿಕ ಶೌಚಾಲಯ ಕಟ್ಟಿಸಬೇಕು. ಪಕ್ಕದ ಕೊಳಚೆ ಕಾಲುವೆ ನೀರು ಇತ್ತ ಹರಿದು ಬಾರದಂತೆ ವ್ಯವಸ್ಥೆ ಮಾಡಬೇಕು ಎನ್ನುವುದು ಜನರ ಬೇಡಿಕೆ. ಶತ ಶತಮಾನಗಳಿಂದ ಕರಗತವಾದ ಕುಂಬಾರಿಕೆ ಕಲೆಯೊಂದು, ಒಂದೆಡೆ ಬೇಡಿಕೆ ಮತ್ತೊಂದೆಡೆ ನೀರಿಲ್ಲದೇ ಮರೆಯಾಗುತ್ತಿದೆ. ‘ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ’ ಎಂಬ ಸ್ಥಿತಿ ಸೃಷ್ಟಿಯಾಗಿದೆ.


