ಗುಜರಾತ್ : ಈ ಭಿಕ್ಷುಕನನ್ನು ನೀವು ಹೀಗಳೆಯಬೇಡಿ. ಭಿಕ್ಷೆ ಬೇಡಿ ಬಂದ ಹಣದಲ್ಲಿ ತನ್ನ ಜೀವನೋಪಾಯಕ್ಕಾಗಿ ಸ್ವಲ್ಪ ಹಣವನ್ನು ಇಟ್ಟುಕೊಂಡು ಮಿಕ್ಕದ್ದನ್ನು ಈತ ಸಾಮಾಜಿಕ ಕಾರ್ಯಗಳಿಗೆ ಬಳಸುತ್ತಿದ್ದಾರೆ. ಅದರಲ್ಲೂ ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಈ ಹಣ ವಿನಿಯೋಗಿಸುತ್ತಿದ್ದಾರೆ.
ಗುಜರಾತಿನ ಮೆಹ್ಸನಾದ 68 ವರ್ಷದ ಖಿಮ್ಜಿಭಾಯ್ ಪ್ರಜಾಪತಿ ಕಳೆದ 13 ವರ್ಷಗಳಿಂದಲೂ ಈ ಕಾರ್ಯ ಮಾಡಿಕೊಂಡು ಬರುತ್ತಿದ್ದು, ಭಿಕ್ಷೆ ಬೇಡಿದ ಹಣದಲ್ಲಿ ಅಂಗನವಾಡಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕಡು ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಪುಸ್ತಕ, ಯೂನಿಫಾರ್ಮ್ ಕೊಡಿಸುತ್ತಿದ್ದಾರೆ. ಇವರ ಈ ಕಾರ್ಯ ಭಾರೀ ಶ್ಲಾಘನೆಗೆ ಪಾತ್ರವಾಗಿದೆ.
ಈ ಬಾರಿ ಖಿಮ್ಜಿಭಾಯ್ ಮಗ್ಪಾರುದ ಕೊಲೆಗೇರಿಯ ಅಂಗನವಾಡಿಯಲ್ಲಿ ಕಲಿಯುತ್ತಿರುವ 10 ಹೆಣ್ಣು ಮಕ್ಕಳಿಗೆ ಬಂಗಾರದ ಕಿವಿಯೋಲೆ ಕೊಡಿಸಿದ್ದಾರೆ. ಖಿಮ್ಜಿಭಾಯ್ ಈ ಮಕ್ಕಳಿಗೆ ಕಿವಿಯೋಲೆ ನೀಡುತ್ತಿದ್ದಂತೆಯೇ ಆ ಬಡ ಕುಟುಂಬದ ಪೋಷಕರ ಕಣ್ಣಂಚು ತೇವವಾಗಿದೆ. ಕೂಲಿ ಕಾರ್ಮಿಕರಾಗಿರುವ ತಾವುಗಳು ಮಕ್ಕಳಿಗೆ ಬಂಗಾರ ಕೊಡಿಸುವುದು ಕನಸಿನ ಮಾತು. ಖಿಮ್ಜಿಭಾಯ್ ಸಹಾಯದಿಂದ ಇಂದು ಅದು ನೆರವೇರಿದೆ ಎಂದು ಹೇಳಿದ್ದಾರೆ. ಅಂಗವಿಕಲರಾಗಿರುವ ಖಿಮ್ಜಿಭಾಯ್ ಈವರೆಗೆ 80 ಲಕ್ಷ ರೂಪಾಯಿ ಬಡ ಹೆಣ್ಣುಮಕ್ಕಳ ಶಿಕ್ಷಣಕ್ಕೆ ದಾನ ಮಾಡಿದ್ದಾರೆ. ಕೋಟಿಗಟ್ಟಲೆ ಹಣ ತಮ್ಮ ಬಳಿ ಕೊಳೆಯುತ್ತಿದ್ದರೂ ನಯಾ ಪೈಸೆ ದಾನ ಮಾಡದ ಶ್ರೀಮಂತರ ಮಧ್ಯೆ ಭಿಕ್ಷುಕನ ಹೃದಯ ಶ್ರೀಮಂತಿಕೆಯನ್ನು ಮೆಚ್ಚಲೇ ಬೇಕಲ್ಲವೇ ?



