ಕಾರವಾರ: ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎನ್ನುತ್ತಾರೆ ತಿಳಿದವರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಕುಂಬಾರನ ಜೀವನ ಮಡಕೆಯ ಸ್ಥಿತಿಯಂತಾಗಿದ್ದು, ಆಧುನಿಕತೆಯ ಕ್ರಾಂತಿಯ ದೊಣ್ಣೆಗೆ ಸಿಲುಕಿ ನಿಮಿಷದಲ್ಲಿ ಪುಡಿಯಾಗಿ ಹೊಗಿದ್ದಾನೆ. ಸಂಪ್ರದಾಯಿಕ ಕುಂಬಾರಿಕೆ ಮಾಡಿಕೊಂಡು ಬರುತ್ತಿರುವವರು ಇಂತಹ ಸ್ಥಿತಿಯಲ್ಲಿಯೂ ತಮ್ಮ ಅಂದಿನ ಕಾಲದ ಕಸುಬನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ.
ಇವರು ಮಾಡುವ ಕೆಲಸಕ್ಕೆ ಕನಿಷ್ಟ ಲಾಭವೂ ದೊರಕುವುದಿಲ್ಲ. ಹೀಗಿದ್ದರೂ ದೀಪಾವಳಿ, ಕ್ರಿಸ್ಮಸ್ ನಂತಹ ಅನೇಕ ಹಬ್ಬಗಳು ಕುಂಬಾರನ ಬದುಕಿಗೆ ಬೆಳಕಾಗಿವೆ. ಇಂತಹ ವಿಶೇಷ ಹಬ್ಬಗಳಲ್ಲಿ ಗೋವಾದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಸ್ಮರಣಾರ್ಥ ನೆಡಯುವ ಹಬ್ಬವೂ ಒಂದು. ಈ ಹಬ್ಬದ ವಿಶೇಷ ಎಂದರೆ ಗೋವಾದಲ್ಲಿ ಕ್ರೈಸ್ತರು ಈ ಉತ್ಸವದಂದು ತಮ್ಮವರಿಗೆ ಪರಸ್ಪರ ಮಣ್ಣಿನಿಂದ ಮಾಡಿದ ಮಡಿಕೆ, ಮಣ್ಣಿನ ಒಲೆಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಹಾಗಾಗಿ ಮಣ್ಣಿನಿಂದ ಮಾಡಿದ ಮಡಿಕೆ, ಒಲೆಗಳಿಗೆ ಎಲ್ಲಿಲ್ಲದ ಬೇಡಿಕೆ.
ಇದೇ ತಿಂಗಳ ಮೊದಲ ವಾರದಿಂದ ಪ್ರಾರಂಭವಾಗಿರುವ ಈ ಉತ್ಸವಕ್ಕೆ ತನ್ನದೇ ಆದ ಮಹತ್ವವಿದೆ. ಸ್ಪೇನ್ ದೇಶದಿಂದ ಕ್ರೈಸ್ತ ಮತ ಪ್ರಚಾರಕ್ಕಾಗಿ ಐದು ಶತಮಾನದ ಹಿಂದೆ ಭಾರತದ ಗೋವಾಕ್ಕೆ ಆಗಮಿಸಿದ್ದ ಸಂತ ಕ್ಸೇವಿಯರ್ ಮರಳಿ ತನ್ನ ದೇಶಕ್ಕೆ ಹೋಗುವಾಗ ಡಿಸೆಂಬರ್ ಮೂರರಂದು ನಿಧನರಾದರು. ಇಂದಿಗೂ ಕೂಡ ಅವರ ದೇಹವನ್ನು ಸಂರಕ್ಷಿಸಿಡಲಾಗಿದೆ. ಇವರ ಸ್ಮರಣಾರ್ಥ ಫೀಸ್ಟ್ ಆಫ್ ಫ್ರಾನ್ಸಿಸ್ ಕ್ಸೇವಿಯರ್(ಪೆಸ್ತ್) ಎಂಬ ಹೆಸರಿನಲ್ಲಿ ಉತ್ಸವವನ್ನು ಆಚರಿಸಲಾಗುತ್ತದೆ. ಈ ಉತ್ಸವವು ಗೋವಾದಿಂದ ಹಿಡಿದು ಹೊನ್ನಾವರದ ಶರಾವತಿ ನದಿಯ ತುದಿಯವರೆಗೆ ಕ್ರೈಸ್ತರು ಆಚರಿಸುತ್ತಾರೆ.
ಈ ಆಚರಣೆಗೆ ಕುಂಬಾರ ಮಾಡಿದ ಮಡಿಕೆಗೆ ಅಗ್ರ ಸ್ಥಾನ. ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯ ಅಂಕೋಲದಲ್ಲಿ ತಯಾರಿಸಿದ ಮಡಿಕೆ, ಒಲೆಗಳಿಗೆ ಎಲ್ಲಿಲ್ಲದ ಬೇಡಿಕೆ. ಹಾಗಾಗಿ ವರ್ಷದ ಮೊದಲ ತಿಂಗಳಲ್ಲಿ ಅಂಕೋಲದ ಕುಂಬಾರರು ಮಡಿಕೆ ಮತ್ತು ಒಲೆಗಳನ್ನು ಮಾಡಿ ಗೋವಾದಲ್ಲಿ ಮಾರಾಟ ಮಾಡುತ್ತಾರೆ. ಒಂದು ಒಲೆಗೆ 150 ರಿಂದ 250 ರೂಪಾಯಿಗಳಷ್ಟು ಹಣ ಪಡೆದರೆ ಮಡಿಕೆಗೆ 100 ರಿಂದ 400 ರೂ. ಗಳವರೆಗೆ ದರವನ್ನು ನಿಗದಿ ಮಾಡಲಾಗಿದೆ. ಅವುಗಳ ಗಾತ್ರ ಅಳತೆಗೆ ತಕ್ಕಂತೆ ದರಗಳೂ ಕೊಡ ಏರಿಕೆಯಾಗುತ್ತದೆ. ಕೇವಲ ಎರೆಡು ತಿಂಗಳುಗಳಲ್ಲಿ ಸಾವಿರಾರು ಅಂಕೋಲದ ಮಡಿಕೆ ಗೋವಾದ ಉತ್ಸವದಲ್ಲಿ ನೀರಿನಂತೆ ಬಿಕರಿಯಾಗುತ್ತದೆ.
ಆಚರಣೆಯ ಹಿನ್ನೆಲೆ:
ಫ್ರಾನ್ಸಿಸ್ ಕ್ಸೇವಿಯರ್ ಗೋವಾಕ್ಕೆ ಬಂದು ನೆಲೆ ನಿಂತ ಮೇಲೆ ಜನರು ಇವರತ್ತ ಹೆಚ್ಚು ಆಕರ್ಷಿತರಾದರು. ಇವರನ್ನು ದೇವಮಾನವನೆಂದು ಅನೇಕರು ನಂಬಿದ್ದರು. ಇವರ ಸುತ್ತ ಇಂದಿಗೂ ಅನೇಕ ಪವಾಡದ ಕಥೆಗಳಿದ್ದು ಇವರನ್ನು ದೈವ ಸ್ವರೂಪವೆಂದು ಇಂದಿಗೂ ಪೂಜಿಸಲಾಗುತ್ತಿದೆ. ಅವರು ತಮ್ಮ ದೇಶಕ್ಕೆ ತೆರಳುವಾಗ ಸಾವನ್ನಪ್ಪಿದ್ದರಿಂದ ಡಿಸೆಂಬರ್ ಮೂರನ್ನು ಫೀಸ್ಟ್ ಆಫ್ ಫ್ರಾನ್ಸಿಸ್ ಕ್ಸೇವಿಯರ್ ಉತ್ಸವಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಹಿಂದೂಗಳು ನಿಧನರಾದಾಗ ಮಡಿಕೆ ಮತ್ತು ಒಲೆಗಳನ್ನು ಹೇಗೆ ಉಪಯೋಗಿಸುತ್ತಾರೋ ಆ ಮಾದರಿಯಲ್ಲಿ ಈ ಮಡಿಕೆ ಮತ್ತು ಒಲೆಗಳಲ್ಲಿ ವಿವಿಧ ತರಹದ ಮಾಂಸದ ಅಡುಗೆ ಮಾಡಿ ಸಂಬಂಧಿಕರನ್ನು ಕರೆದು ಆತಿಥ್ಯ ನೀಡಲಾಗುತ್ತದೆ. ಜನವರಿ ತಿಂಗಳ ಕೊನೆಯವರೆಗೂ ಈ ಹಬ್ಬದ ಆಚರಣೆಯಿದ್ದು ಈ ಮೂಲಕ ಕ್ರೈಸ್ತ ಧರ್ಮಗುರು ಕ್ಸೇವಿಯರ್ ಗೆ ಶ್ರದ್ಧಾಂಜಲಿ ಸಮರ್ಪಿಸುತ್ತಾರೆ.
ಅಂಕೋಲದ ಮಡಕೆಗಳಿಗೆ ಮಾನ್ಯತೆ: ಈ ಹಬ್ಬದಲ್ಲಿ ಎರಡು ತಿಂಗಳುಗಳ ಕಾಲ ಮಡಿಕೆ ಮತ್ತು ಕುಂಬಾರರ ಮಣ್ಣಿನ ಒಲೆಗಳು ಹೆಚ್ಚು ಬೇಡಿಕೆಯನ್ನು ಪಡೆದುಕೊಳ್ಳುತ್ತವೆ. ದೂರದ ಬೆಳಗಾವಿ, ಧಾರವಾಡ, ಹುಬ್ಬಳ್ಳಿಗಳಿಂದ ಅತೀ ಹೆಚ್ಚಿನ ಮಡಿಕೆಗಳು ಗೋವಾದಲ್ಲಿ ಮಾರಾಟಕ್ಕೆ ಬಂದರೂ ಇವೆಲ್ಲದಕ್ಕೂ ಹೆಚ್ಚಾಗಿ ಅಂಕೋಲದವರ ಮಡಿಕೆಗೆ ಬೇಡಿಕೆ ಇದ್ದು ಅತೀ ಹೆಚ್ಚು ಮಾರಾಟವಾಗುತ್ತದೆ. ಐದು ತಲೆಮಾರಿಗೂ ಹೆಚ್ಚು ಕಾಲದಿಂದ ಈ ಕಸುಬಿನಲ್ಲಿ ಅಂಕೋಲದ ಕುಂಬಾರರು ಪರಿಣಿತರು. ಇಲ್ಲಿನ ಕುಂಬಾರರು ಮಾಡುವ ಒಲೆಗಳು ಗಟ್ಟಿಯಾಗಿದ್ದು ಉತ್ತಮವಾಗಿರುತ್ತದೆ. ಇವು ಬೆಲೆಯಲ್ಲಿಯೂ ಕಮ್ಮಿಯಿದ್ದು ಇಲ್ಲಿನ ಜನರ ಗಮನ ಸೆಳದಿದೆ.
ಇಂದಿನ ದಿನಗಳಲ್ಲಿ ಸಂಪ್ರದಾಯಿಕ ಮಡಿಕೆ ಮಾಡುವವರ ಸಂಖ್ಯೆ ಕ್ಷೀಣಿಸುತ್ತಿದೆ. ಅದರ ಜೊತೆಗೆ ಅವುಗಳ ಬೆಲೆಯೂ ಕೊಡ ತಳ ಹಿಡಿದಿದೆ. ಹೀಗಿರುವಾಗ ತಲಾ ತಲಾಂತರದಿಂದ ಅಂಕೋಲದ ಕುಂಬಾರರು ಹಳೆಯ ಶೈಲಿಯಲ್ಲಿ ಗುಣಮಟ್ಟದ ಮಡಿಕೆ, ಒಲೆಗಳನ್ನು ಮಾಡಿ ಇಂದಿಗೂ ಬೇಡಿಕೆ ಉಳಿಸಿಕೊಂಡು ಉತ್ತಮ ಲಾಭಗಳಿಸುತ್ತಿದ್ದು ಅವಸಾನದ ಅಂಚಿಗೆ ಹೊಗಿರುವ ಜೇಡಿ ಮಣ್ಣಿನ ಒಲೆ, ಮಡಿಕೆಗಳಿಗೆ ಸಂಪ್ರದಾಯದ ಆಚರಣೆಯಲ್ಲಿ ಮರುಜೀವ ಬಂದಂತಾಗಿದೆ.
ಬರಹ : ನವೀನ್ಸಾಗರ್



