ಬೆಂಗಳೂರು: ಕೃಷಿ ಮೇಳದಲ್ಲಿ ಮಡಿಕೆ ತಯಾರಿಕೆ ಪ್ರಾತ್ಯಕ್ಷಿಕೆ ನೀಡಿದ ಕುಂಬಾರರಿಗೆ ಈಗ ನಗರದಲ್ಲಿ ಅವಕಾಶಗಳ ಬಾಗಿಲು ತೆರೆದುಕೊಂಡಿದೆ.
ನಾಲ್ಕು ದಿನಗಳ ಮೇಳದಲ್ಲಿ ಕುಂಬಾರಿಕೆ ಪ್ರದರ್ಶಿಸಿದ ಪರಿಣಾಮ ಕೇವಲ ಒಬ್ಬ ಮಡಿಕೆ ತಯಾರಕ ಅಲ್ಲ, ಇಡೀ ಊರಿನಲ್ಲಿದ್ದ ವೃತ್ತಿ ಬಾಂಧವರ ಅದೃಷ್ಟ ಖುಲಾಯಿಸುತ್ತಿದೆ. ಇಷ್ಟೇ ಅಲ್ಲ, ಅವಸಾನದ ಅಂಚಿನಲ್ಲಿದ್ದ ಕುಂಬಾರಿಕೆಯೂ ಮರುಜೀವ ಪಡೆಯಲು ಹಾದಿ ಸುಗಮವಾಗಿದೆ.
ಮೇಳದಲ್ಲಿ ಹೆಚ್ಚು ನಗರವಾಸಿಗಳನ್ನು ಆಕರ್ಷಿಸಿದ್ದು ಮಳಿಗೆಗಳ ಹೊರಗಡೆ ಇದ್ದ ಇಬ್ಬರು ಮಡಿಕೆ ತಯಾರಕರ ಪ್ರಾತ್ಯಕ್ಷಿಕೆಗಳು. ಈ ಮಧ್ಯೆ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಮಣ್ಣಿನಲ್ಲಿ ತಯಾರಿಸಿದ ಉತ್ಪನ್ನಗಳು ಫ್ಯಾಶನ್ ರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ 30ರಿಂದ 40 ಉದ್ಯಮಿಗಳು ಈ ಮಡಿಕೆ ತಯಾರಕರಿಗೆ ತಿಂಗಳಿಗೆ ಸಾವಿರಾರು ವಿವಿಧ ಗಾತ್ರದ ಮಡಿಕೆ, ಚಹಾ ಕಪ್ಗ್ಳು, ಐಸ್ ಕ್ರೀಂ ಕಪ್ಗ್ಳ ಪೂರೈಕೆಗೆ ಬೇಡಿಕೆ ಇಟ್ಟಿದ್ದಾರೆ.
ವೃತ್ತಿ ಬಾಂಧವರಿಗೆಲ್ಲಾ ಉದ್ಯೋಗ:
ಹಟ್ಟಿ ಕಾಪಿ, ಬಿರಿಯಾನಿ ಮಡಿಕೆ, ಅಲಂಕಾರಿಕ ಹೂವುಗಳ ತಯಾರಕರು, ಐಸ್ ಕ್ರೀಂ ವ್ಯಾಪಾರಿಗಳು, ಶಾಲೆಗಳಲ್ಲಿ ತರಬೇತಿ ನೀಡುವುದು ಸೇರಿದಂತೆ ಹಲವು ಉದ್ಯಮಿಗಳು ಇದರಲ್ಲಿ ಸೇರಿದ್ದಾರೆ. ಒಬ್ಬೊಬ್ಬ ಉದ್ಯಮಿಗಳು ತಿಂಗಳಿಗೆ ಕನಿಷ್ಠ 500ರಿಂದ ಸಾವಿರ ಉತ್ಪನ್ನಗಳು ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಹಾಗೊಂದು ವೇಳೆ ಈ ಆರ್ಡರ್ಗಳು ನಮಗೆ ಪಕ್ಕಾ ಆದಲ್ಲಿ ಊರಿನಲ್ಲಿರುವ ಎಲ್ಲ 20 ವೃತ್ತಿ ಬಾಂಧವರಿಗೆ ನಿರಂತರ ಉದ್ಯೋಗ ಸಿಕ್ಕಂತಾಗುತ್ತದೆ. ಕನಿಷ್ಠ 8ರಿಂದ 9 ಸಾವಿರ ರೂ. ತಿಂಗಳಿಗೆ ಆದಾಯವೂ ಬರಲಿದೆ ಎಂದು ಮಡಿಕೆ ತಯಾರಕ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಕೂಟನಹಳ್ಳಿಯ ನಾಗರಾಜ್ ತಿಳಿಸುತ್ತಾರೆ.
ಭೇಟಿ ನೀಡಿದ ವ್ಯಾಪಾರೋದ್ಯಮಿಗಳು ಹೊಸ ಹೊಸ ವಿನ್ಯಾಸದ ಮಡಿಕೆ-ಕುಡಿಕೆಗಳು ಬೇಕು ಎಂದು ಕೇಳಿದ್ದಾರೆ. ಆದರೆ, ಈಗ ಅಷ್ಟೊಂದು ಪ್ರಮಾಣದಲ್ಲಿ ಪೂರೈಕೆಗೆ ನಮಗೆ ಯಂತ್ರೋಪಕರಣಗಳ ಅವಶ್ಯಕತೆಯೂ ಇದೆ ಎಂದು ಹೇಳಿದರು.
ವಾರಕ್ಕೆ 30 ಸಾವಿರ ರೂ. ವ್ಯಾಪಾರ:
2013ರಿಂದ ಕೃಷಿ ಮೇಳಕ್ಕೆ ಬರುತ್ತಿದ್ದೇವೆ. ಅಲ್ಲಿಂದ ಇಲ್ಲಿಯವರೆಗೆ ಮಡಿಕೆ ವ್ಯಾಪಾರದಲ್ಲಿ ಸಾಕಷ್ಟು ಚೇತರಿಕೆ ಕಂಡುಬಂದಿದೆ. ವಾರಕ್ಕೆ 30 ಸಾವಿರ ರೂ.ವರೆಗೂ ವ್ಯಾಪಾರ ಆಗುತ್ತಿದೆ. ಇದಕ್ಕೂ ಮೊದಲು ವಾರಕ್ಕೆ ಅಬ್ಬಬ್ಟಾ ಎಂದರೆ ಐದು ಸಾವಿರ ಆಗುತ್ತಿತ್ತು ಎಂದರು.
ಬಿಎ-ಬಿಪಿಇಡಿ ಮುಗಿಸಿರುವ ನಾಗರಾಜ್ ಹುಣಸಿಕೋಟೆಯ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಮೇಷ್ಟ್ರು. ಬೆಳಗ್ಗೆ ಮತ್ತು ಸಂಜೆ ಅವರು ಮಡಿಕೆಯನ್ನೂ ತಯಾರಿಸುತ್ತಾರೆ. ಇವರಲ್ಲದೆ, ಮೇಳದಲ್ಲಿದ್ದ ಮತ್ತೂಬ್ಬ ಮಡಿಕೆ ತಯಾರಕ ಮುನಿವೆಂಕಟಪ್ಪ ಅವರಿಗೂ ಇಷ್ಟೇ ಬೇಡಿಕೆಗಳು ಬಂದಿವೆ.
ಜಾನಪದ ಕಲಾ ತಂಡಕ್ಕೂ ಬೇಡಿಕೆ:
ಅದೇ ರೀತಿ, ಜಾನಪದ ಕಲಾ ತಂಡಗಳಿಗೂ ರಾಜ್ಯದ ನಾನಾ ಭಾಗಗಳಿಂದ ಬೇಡಿಕೆ ಬರುವಂತೆ ಮಾಡುವಲ್ಲಿ ಕೃಷಿ ಮೇಳ ಯಶಸ್ವಿಯಾಗಿದೆ.
ಸುಗ್ಗಿ ಕುಣಿತದ ನಿಸರ್ಗ ಕಲಾ ತಂಡಕ್ಕೆ 15ಕ್ಕೂ ಹೆಚ್ಚು ಕಡೆಯಿಂದ ಪ್ರದರ್ಶನಕ್ಕೆ ಬೇಡಿಕೆಗಳು ಬಂದಿವೆ. 40 ಜನರ ಯುವಕರ ತಂಡದ ಪೈಕಿ ಮೇಳದಲ್ಲಿ ಆರು ಜನ ಸುಗ್ಗಿ ಕುಣಿತದಿಂದ ರಂಜಿಸಿದ್ದರು. ಕಾಲೇಜುಗಳ ಆಡಳಿತ ಮಂಡಳಿಗಳು, ಮಹನೀಯರ ಜಯಂತಿಗಳಲ್ಲಿ ಪ್ರದರ್ಶನ ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ತಂಡದ ನವೀನ್ಕುಮಾರ್ ತಿಳಿಸಿದರು.
ಮೇಳದಲ್ಲಿ ಸುಗ್ಗಿ ಕುಣಿತಕ್ಕೆ ನಾಲ್ಕು ದಿನಕ್ಕೆ 30 ಸಾವಿರ ರೂ. ಸಂಭಾವನೆ ಕೊಟ್ಟಿದ್ದಾರೆ. ಜತೆಗೆ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರೇಕ್ಷಕರಿಂದಲೂ ನಿತ್ಯ ಸುಮಾರು 1,500 ರೂ. ಬಂದಿದೆ. ಉಳಿದ ದಿನಗಳಲ್ಲೂ ನಾವು ಸುಗ್ಗಿ ಕುಣಿತವನ್ನೇ ಅವಲಂಬಿಸಿದ್ದೇವೆ. ಬೀದಿ ನಾಟಕ, ಲೇಡೀಸ್ ತಮಟೆ, ದೇವರ ಮೆರವಣಿಗೆಗಳಲ್ಲಿ ಪ್ರದರ್ಶನ ನೀಡುತ್ತೇವೆ. ಜತೆಗೆ ಉಚಿತ ತರಬೇತಿ ಶಿಬಿರಗಳನ್ನೂ ನಡೆಸುತ್ತೇವೆ ಎಂದು ಅವರು ಹೇಳಿದರು.
ಅಲ್ಲದೆ, ಕೊಳ್ಳೇಗಾಲದ ಸಿದ್ದಯ್ಯನಪುರದ ತಂಬೂರಿ ಕತೆ ಮತ್ತು ಕಂಸಾಳೆ ಕಲಾವಿದರಿಗೆ ಮಂಡ್ಯ, ಚನ್ನಪಟ್ಟಣ, ಬೆಂಗಳೂರು, ಮೈಸೂರು, ಚಾಮರಾಜನಗರದಿಂದೆಲ್ಲಾ ಪ್ರದರ್ಶನಕ್ಕೆ ಬೇಡಿಕೆಗಳು ಬಂದಿವೆ. ದೇವಸ್ಥಾನ ಉದ್ಘಾಟನೆ, ಯುವಜನ ಮೇಳ, ಮದುವೆ, ಗೃಹಪ್ರವೇಶ ಮತ್ತಿತರ ಸಮಾರಂಭಗಳಲ್ಲಿ ಪ್ರದರ್ಶನ ನೀಡುತ್ತೇವೆ. ಆದರೆ, ನಮ್ಮಂತಹ ಕಲಾವಿದರಿಗೆ ಕಾಯಂ ಇಂತಿಷ್ಟು ಆದಾಯ ಇಲ್ಲದಿರುವುದು ಅತಂತ್ರರನ್ನಾಗಿ ಮಾಡಿದೆ. ಇದೊಂದು ರೀತಿ, ಆಡಾಡ್ತ ರಾಗ ನರಳಾಡ್ತ ರೋಗ ಎನ್ನುವಂತಾಗಿದೆ ಎಂದು ತಂಡದ ನಾಯಕ ಕೈಲಾಸಮೂರ್ತಿ ಬೇಸರ ವ್ಯಕ್ತಪಡಿಸುತ್ತಾರೆ.
* ವಿಜಯಕುಮಾರ್ ಚಂದರಗಿ (ಚಿತ್ರ : ಕೇಶವ ವಿಟ್ಲ)




