ನಾಗಾರಾಧನೆಯಲ್ಲಿ ಕಂಡುಬರುವ ಒಂದು ವಿಶಿಷ್ಟ ಹರಕೆ ‘ಮುರಿಸೇವೆ’
ಉಡುಪಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ನಾಗ ಮುರಿ ಅಥವಾ ಮೂರಿ ಎನ್ನುವುದು ತುಳುನಾಡು ಮತ್ತು ಕರಾವಳಿ ಕರ್ನಾಟಕದ ನಾಗಾರಾಧನೆಯಲ್ಲಿ ಕಂಡುಬರುವ ಒಂದು ವಿಶಿಷ್ಟ ಹರಕೆ ಮತ್ತು ಆಚರಣೆಯಾಗಿದೆ. ಇದು ನಾಗನಿಗೆ ಅರ್ಪಿಸುವ ಮಣ್ಣಿನ ಮಡಕೆಯ ಸೇವೆಯಾಗಿದ್ದು, ಸಾಮಾನ್ಯವಾಗಿ ನಾಗನ ಪಾತ್ರಿ ಅಥವಾ ಭಕ್ತರು ನಾಗನ ಕಲ್ಲಿನ ಸನ್ನಿಧಿಯಲ್ಲಿ ಈ ವಿಶಿಷ್ಟ ಪೂಜೆಯನ್ನು ಸಲ್ಲಿಸುತ್ತಾರೆ. ನಿರ್ದಿಷ್ಟ ಮನೆಯ ಮೂಲ್ಯ ಸಮುದಾಯದ ಮಡಿಕೆ ತಯಾರಕರು ಕೆಲವೊಂದು ವಿಧಿ ವಿಧಾನಗಳನ್ನು ಪೂರೈಸಿ ತಯಾರಿಸಿದ ನಾಗನ ರೂಪವಿರುವ ಮಣ್ಣಿನ ಗಡಿಗೆಯನ್ನು ಶಾಸ್ತ್ರಬದ್ಧ ವಿಧಿ ವಿಧಾನದಂತೆ ಹರಕೆ ಹೊತ್ತವರ ಶಿರದಲ್ಲಿ ಇಡಲಾಗುತ್ತದೆ. ತದನಂತರ “ಮುರಿ ಸೇವೆ” ರೂಪದಲ್ಲಿನಿರ್ದಿಷ್ಟ ಸಮುದಾಯದವರಿಂದ ನಾಗಬನದಲ್ಲಿ ನಾಗಾರಾಧನೆ ಮೂಲಕ ಪ್ರಕೃತಿಗೆ ಸಮರ್ಪಿಸಲಾಗುತ್ತದೆ. ಮೂರಿ ಅಥವಾ ಮುರಿ ಎನ್ನುವುದು ದ್ರಾವಿಡ ಮೂಲದ ಶಬ್ದ. ಮಣ್ಣು ಮತ್ತು ಮಣ್ಣಿಂದ ಮಾಡಿದ ಮಡಕೆಗಳು ತಮ್ಮ ವಿಶಿಷ್ಟ ಆಕೃತಿ ಮತ್ತು ಕಾರಣಗಳಿಂದ ದೈವಗಳಾಗಿ ಆರಾಧನೆಗೊಳ್ಳುತ್ತವೆ. ನಾಗಬನದಲ್ಲಿ ನಾಗನ ಕಲ್ಲಿನ ಸಮೀಪ ಈ ಮುರಿಯನ್ನು ಪೂಜಿಸಿ ಅರ್ಪಿಸಲಾಗುತ್ತದೆ. ಈ ಸೇವೆ ಸಲ್ಲಿಸುವುದರಿಂದ ಚರ್ಮ ರೋಗಗಳು, ಸಂತಾನ ಸಮಸ್ಯೆಗಳು ಮತ್ತು ನಾಗದೋಷಗಳು ದೂರವಾಗುತ್ತವೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ.


