ಮೂಡುಬಿದಿರೆ(ಕುಲಾಲ ವರ್ಲ್ಡ್ ಡಾಟ್ ಕಾಮ್): ಇದ್ದುದರಲ್ಲಿಯೇ ಕೊಂಚ ಭಾಗವನ್ನು ಇತರರಿಗಾಗಿ ಮುಡಿಪಾಗಿಡುವುದು ದೊಡ್ಡ ಗುಣ. ಆದರೆ, ತನ್ನ ಗಳಿಕೆಯ ಸಾರ್ಥಕತೆಯನ್ನು ಹಸಿದ ಒಡಲುಗಳ ಕಣ್ಣೀರೊರೆಸುವಲ್ಲಿ ಕಾಣುವ ಮನಸುಗಳಿವೆಯಲ್ಲಾ, ಅವು ನಿಜಕ್ಕೂ ಅಪರೂಪ. ಅಂತಹದೊಂದು ಅಪರೂಪದ ಕರುಣಾಮಯಿ ಸಾಲಿಗೆ ಸೇರಿದವರು ಮೂಡುಬಿದಿರೆಯ ಆನಂದ ಕುಲಾಲ್.
ಕಳೆದ ಒಂದು ವರ್ಷದಿಂದ ವಯೋಸಹಜವಾಗಿ ದುಡಿಯಲಾಗದೆ, ಒಪ್ಪತ್ತಿನ ಊಟಕ್ಕೂ ಕಷ್ಟಪಡುತ್ತಿದ್ದ ಅಸಹಾಯಕ ಹಿರಿಯರ ಪಾಲಿಗೆ ಆನಂದ ಕುಲಾಲ್ ಅವರು ಅನ್ನದಾತನಾಗಿ ನಿಂತಿದ್ದಾರೆ. ಪ್ರತಿದಿನವೂ ಹಸಿದು ಬರುವ ಜೀವಗಳಿಗೆ ಬೆಳಗಿನ ಉಪಹಾರ, ಮಧ್ಯಾಹ್ನದ ಹೊಟ್ಟೆತುಂಬುವ ಊಟ ಹಾಗೂ ಸಂಜೆಯ ತಿಂಡಿಯನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಉಚಿತವಾಗಿ ನೀಡುತ್ತಾ, ಅವರು ಮಾಡುತ್ತಿರುವ ಮಾನವೀಯ ಸೇವೆ ನಿಜಕ್ಕೂ ಹೃದಯಸ್ಪರ್ಶಿಯಾಗಿದೆ.
ತಮ್ಮ ಸ್ವಂತ ದುಡಿಮೆಯ ಒಂದು ಪಾಲನ್ನು ಸಮಾಜದ ಹಿಂದುಳಿದವರ ಹಸಿವು ನೀಗಿಸಲು ಮತ್ತು ಸಮಾಜಮುಖಿ ಕೆಲಸಗಳಿಗೆ ಮೀಸಲಿಟ್ಟಿರುವ ಅವರ ಈ ಉದಾರತೆ ಎಲ್ಲರಿಗೂ ಮಾದರಿ. ನೇತಾಜಿ ಬ್ರಿಗೇಡ್ ಸಂಸ್ಥೆಯ ಗೌರವಾಧ್ಯಕ್ಷರಾಗಿ ಹಾಗೂ ಮೂಡುಬಿದಿರೆ ಕುಲಾಲ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ಸದಾ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವ ಅವರ ನಿರಂತರ ಸೇವೆಯನ್ನು ಗುರುತಿಸಿ, ಆಕ್ಸಿಸ್ ಮಾಕ್ಸ್ ಲೈಫ್ ಇನ್ಸೂರೆನ್ಸ್ ಸಂಸ್ಥೆಯು ಅವರಿಗೆ ಅತ್ಯಂತ ಗೌರವದಿಂದ ‘ಸೇವಾರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಿದೆ. ಈ ಪ್ರಶಸ್ತಿ ಕೇವಲ ಅವರ ಸೇವೆಗೆ ಸಿಕ್ಕ ಗೌರವವಲ್ಲ, ಬದಲಿಗೆ ಸದ್ದಿಲ್ಲದೆ ಸಮಾಜದ ಕಣ್ಣೀರು ಒರೆಸುವ ಅವರ ಅಪ್ಪಟ ಮಾನವೀಯತೆಗೆ ಸಂದ ಪ್ರತಿಫಲವಾಗಿದೆ.

