ಒಂದು ಕಾಲದಲ್ಲಿ ಕುಂಬಾರಿಕೆಗೆ ತುಂಬಾ ಪ್ರಸಿದ್ಧಿ ಪಡೆದಿದ್ದ ಊರು ಮಣೇಲ್. ನೆರೆ ನೀರು ಬಂದು ತಂಗುವ ಪಟ್ಲಗಳಲ್ಲಿ ಮಡಿಕೆ ಮಾಡಲು ಸಿಗುವ ಜೇಡಿಮಣ್ಣು ಸಾಕಷ್ಟು ಸಿಗುತ್ತಿದ್ದರಿಂದ ಕುಂಬಾರಿಕೆ ಎಂಬ ಗುಡಿಕೈಗಾರಿಕೆ ಜಿಲ್ಲೆಯಲ್ಲಿ ಸಾಕಷ್ಟು ಪ್ರಸಿದ್ಧಿಗೆ ಬಂದಿತ್ತು. ಮಣೇಲಿನ ಕುಲಾಲರು ತಲೆಗೆ ತೆರಿಯ ಇಟ್ಟುಕೊಂಡು, ಬಡಿಗೆಯ ಮೇಲೆ ಮಂಡೆ, ಬಿಸಲೆ, ಬಾವಡೆ, ಕರ, ನೀರಡ್ಯರ, ತೂರಿ ಹೀಗೆ ಮುಂತಾದ ಮಣ್ಣಿನ ಪಾತ್ರೆಗಳನ್ನು ತಲೆಯ ಮೇಲೆ ಹೊತ್ತುಕೊಂಡು ಮೈಲಿಗಟ್ಟಲೆ ನಡೆದು ವ್ಯಾಪಾರ ಮಾಡಿಕೊಂಡು ಬರುತ್ತಿದ್ದರು. ಕುಂಬಾರಿಕೆಯಿಂದ ಸಾಕಷ್ಟು ದುಡ್ಡು ಸಂಪಾದಿಸುತ್ತಿದ್ದ ಅವರು ಮಾರುಕಟ್ಟೆಯಿಂದ ನುಂಗೆಲ್(ಒಣ ಮೀನು), ಬಲ್ಯಾರ್, ಸಾಂಬಾರು ಪದಾರ್ಥಗಳನ್ನು ತಂದು, ಊರಿನಲ್ಲಿ ಬೆಳೆಸಿದ ಬಸಳೆ ಹಾಗೂ ಸೌತೆಕಾಯಿ ಪಲ್ಯದ ಜೊತೆ ಊಟ ಮಾಡಿಕೊಂಡು ಗಟ್ಟಿಗರಾಗಿದ್ದರು.
ಮಣೇಲ್ನ ಪಾತ್ರೆ ಗುಣಮಟ್ಟದಿಂದಾಗಿ ಸಾಕಷ್ಟು ಹೆಸರು ಪಡೆದಿತ್ತು. `ಮಣೇಲ್ ಕರ’ ಎಂದಾಕ್ಷಣ ಕಣ್ಣು ಮುಚ್ಚಿ ಖರೀದಿಸುವ ಖಾಯಂ ಗಿರಾಕಿಗಳು ಜಿಲ್ಲೆಯಲ್ಲಿ ಕಂಡು ಬರುತ್ತಿದ್ದರು. ಕೆಲವರು ಮಣೇಲ್ದ ಕರ ಎಂದು ನಂಬಿಸಿ ವ್ಯಾಪಾರ ಮಾಡುತ್ತಿದ್ದರೆಂದರೆ ಮಣೇಲ್ ಮಣ್ಣಿನ ಪಾತ್ರೆಗಳ ಗುಣಮಟ್ಟವನ್ನು ಅರ್ಥೈಸಬಹುದು. ಈ ಹಿಂದೆ ಮಣೇಲ್ ಆಗಿದ್ದ ಊರಿನ ಹೆಸರು ಇಂದು ಮಳಲಿ ಎಂದು ಬದಲಾಗಿ, ಮಣೇಲ್ ಹೆಸರನ್ನು ಕಳೆದುಕೊಂಡು ಬಿಟ್ಟಿತು. ಆದರೂ ಇಂದು ಹೆಚ್ಚಿನವರು ಮಳಲಿಯನ್ನು ಮಣೇಲ್ ಎಂದೇ ಕರೆಯುತ್ತಾರೆ. ಮಣ್ಣಿನಿಂದಾಗಿ ಮಣೇಲ್ ಎಂಬ ಹೆಸರು ಬಂದಿರಬಹುದು ಎಂಬ ಚರ್ಚೆಯೂ ನಡೆಯುತ್ತದೆ.
ಮಂಗಳೂರು ತಾಲೂಕಿನ ಗುರುಪುರ ಕೈಕಂಬದಿಂದ ಸುಮಾರು ಮೂರು ಕಿ.ಮೀ ಅಂತರದಲ್ಲಿ ಮಳಲಿ(ಮಣೇಲ್) ಎಂಬ ಪುಟ್ಟ ಊರು ಸಿಗುತ್ತದೆ. ಮಣೇಲಿನಲ್ಲಿ ಮಣ್ಣಿನ ಮಡಿಕೆ ತಯಾರಿಸುವ ಕುಂಬಾರರು(ಕುಲಾಲರು, ಮೂಲ್ಯರು) ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಡಿಕೆ ಮಾಡುವುದು ಹಿಂದೆ ಗುಡಿಕೈಗಾರಿಕೆಯಾಗಿ ಮಾಡಿಕೊಂಡು ಬಂದಿದ್ದರು. ಮಣೇಲಿನ ಮಣ್ಣಿನ ಮಡಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ಧಿ ಹೊಂದಿತ್ತು, ಹೆಚ್ಚಿನ ಬೇಡಿಕೆ ಹೊಂದಿತ್ತು. ಈಗಲೂ ಇಲ್ಲಿನ ಮಣ್ಣನ್ನು ಅಗೆದಾಗ ಮಡಿಕೆ ತಯಾರಿಸಿದ ಕುರುಹುಗಳು ಸಾಮಾನ್ಯವಾಗಿ ಸಿಗುತ್ತದೆ. ಅಷ್ಟರಮಟ್ಟಿಗೆ ಇಲ್ಲಿ ಮಡಿಕೆ ತಯಾರಿಸಿವುದು ವ್ಯಾಪಕವಾಗಿತ್ತು. ಆದರೆ ಇಂದು ಅಲ್ಲೊಂದು ಇಲ್ಲೊಂದು ಎಂಬಂತೆ ಮಡಿಕೆ ತಯಾರಿಸುವುದು ಕಂಡು ಬರುತ್ತದೆ. ಇಲ್ಲಿ ಮಣ್ಣಿನ ಮಡಿಕೆಗೆ ಬೇಕಾಗುವ ಜೇಡಿಮಣ್ಣು ಹಾಗೂ ಪರೆಲ್( ಪರೇಲ್ ಅಂದರೆ ಜೇಡಿಮಣ್ಣಿಗೆ ಮಿಶ್ರಣ ಮಡುವ ಬಿಳಿ ಬಣ್ಣದ ಮರಳಿನಂಥಾ ಮಣ್ಣು, ಇದನ್ನು ಜೇಡಿ ಮಣ್ಣಿಗೆ ಮಿಶ್ರಣ ಮಾಡಿದರೆ ಮಡಿಕೆ ಗಟ್ಟಿಮುಟ್ಟಾಗುತ್ತದೆ) ಮಣ್ಣು ಹೆಚ್ಚಾಗಿ ಸಿಗುತ್ತಿದ್ದರಿಂದ ಮಣೇಲ್ ಆಗಿ ಅನ್ವರ್ಥನಾಮದಿಂದ ಕರೆಸಿಕೊಂಡಿತ್ತು ಎನ್ನಬಹುದು.
ಈ ಬಗ್ಗೆ ಮಣೇಲ್ ಊರಿನ ಬಗ್ಗೆ `ತುಳು ರೀಸರ್ಚ್ ಬ್ಲಾಗ್ಸ್ಪಾಟ್ ಡಾಟ್ ಕಾಂ’ನಲ್ಲಿ ಸ್ವಲ್ಪ ವಿವರಿಸಿದ್ದಾರೆ. ನೇತ್ರಾವತಿ ನದಿ ಬದಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಬಂದಿರುವ ಒಂದು ಚಿಕ್ಕ ಊರು ಮಣೇಲ್ ಎಂದು ಅದರಲ್ಲಿ ವಿವರಿಸಲಾಗಿದೆ. ಇಲ್ಲಿ ಫಲ್ಗುಣಿ ನದಿ ಹರಿಯುತ್ತದೆ. ಆದರೆ ಮಳಲಿಯಿಂದ ಪೊಳಲಿಗೆ ಅಡ್ಡಲಾಗಿ ಫಲ್ಗುಣಿ ನದಿ ಇರುವುದರಿಂದ ಮಳಲಿಯಿಂದ ಪೊಳಲಿಗೆ ಹೋಗುವವರು ಆ ನದಿಯ ಮರಳಿನಲ್ಲಿ ನಡೆದುಕೊಂಡು ಹೋಗುತ್ತಾರೆ. ಮರಳಿನಿಂದ ಮಣೇಲ್ ಎಂಬ ಹೆಸರು ಬಂದಿರಬಹುದೆಂದು ವಾದಿಸುವವರೂ ಇದ್ದಾರೆ. ಆದರೆ ಹಾಗೆ ಬರಲು ಸಾಧ್ಯವೇ ಇಲ್ಲ, ಯಾಕೆಂದರೆ ಮರಳನ್ನು ತುಳುವಲ್ಲಿ ಪೊಯ್ಯೆ ಎನ್ನುತ್ತಾರೆ. ಜೇಡಿ ಮಣ್ಣು ಹಾಗೂ ಪರೇಲ್ ಮಣ್ಣು ಒಟ್ಟಾಗಿ ಸಿಗುತ್ತಿದ್ದ ಕಾರಣ ಹೋಗಿ ಕಾಲಕ್ರಮೇಣ `ಮಣೇಲ್’ ಆಗಿ ಊರು ಪರಿವರ್ತಿತಗೊಂಡಿತು ಎಂದು ಅರ್ಥೈಸಬಹುದು. ಇನ್ನೂ ಹೇಳಬೇಕೆಂದರೆ ಕುಲಾಲರ ಕುಲಕಸುಬು ಮಣ್ಣಿನಿಂದಾಗಿ ಮಣೇಲ್ ಎಂಬ ಹೆಸರು ಬಂದಿರಬಹುದೆಂದು ಅಂದಾಜಿಸಲಾಗುತ್ತದೆ.
ಕಾಲಕ್ರಮೇಣ ಊರಿನ ಹೆಸರುಗಳನ್ನು ಕನ್ನಡೀಕರಣಗೊಳಿಸುವ ಫ್ಶಾಶನ್ ಬೆಳೆದ ಕಾರಣ ತುಳು ಹೆಸರಲ್ಲಿದ್ದ ಊರ ಹೆಸರುಗಳೆಲ್ಲಾ ಕನ್ನಡೀಕರಣಗೊಂಡವು. ಅದೇ ಕಾರಣದಿಂದ ಮಣೇಲ್-ಮಳಲಿಯಾಗಿ ಪರಿವರ್ತನೆಗೊಂಡಿರಬಹುದು. ಇದೇ ರೀತಿ ಅನೇಕ ತುಳು ಹೆಸರುಗಳುಳ್ಳ ಊರುಗಳು ಕನ್ನಡಕ್ಕೆ ರೂಪಾಂತರಗೊಂಡಿದೆ. ಉದಾಹರಣೆಗೆ ಪೆರಿಯಡ್ಕವನ್ನು ಹಿರಿಯಡ್ಕ ಆಗಿ, ಪೊಸೋಡಿಯನ್ನು ಹೊಸಬೆಟ್ಟು ಆಗಿ, ಪುರಲ್ ಅನ್ನು ಪೊಳಲಿಯಾಗಿ ಕನ್ನಡೀಕರಣಗೊಳಿಸಿರುವುದನ್ನು ನೋಡಬಹುದು.
ಇಂದಿಗೂ ಸಹ ಮಳಲಿಯನ್ನು ಮಣೇಲ್ ಅಂತ, ಪೂಳಲಿಯನ್ನು ಪುರಾಲ್ ಅಂತ ಕರೆಯುತ್ತಿದ್ದಾರೆ. ಆದರೆ ಅವುಗಳು ಈಗ ಅಧಿಕೃತವಾಗಿಲ್ಲ. ಮಳಲಿಯಾಗಿ ಪರಿವರ್ತನೆಗೊಂಡ ಮಣೇಲ್ ಅನ್ನು ಈಗ ಹೆಚ್ಚಾಗಿ ಮಳಲಿ ಎಂದೇ ಕರೆಯುತ್ತಿದ್ದಾರೆ. ಪಂಚಾಯತ್ನಲ್ಲೂ ಮಳಲಿ ಎಂದು ಉಲ್ಲೇಖಿಸಲಾಗಿದೆ. ಇಲ್ಲಿನ ಅಂಚೆಕಚೇರಿ, ಶಾಲೆಯ ಹೆಸರು ಕೂಡಾ ಮಳಲಿಯಾಗಿ ಬದಲಾಗಿದೆ. ಜನರು ತಮ್ಮನ್ನು ಮಳಲಿಯವರೆಂದೇ ಗುರುತಿಸಿಕೊಳ್ಳುತ್ತಿದ್ದಾರೆ. ಊರಿನ ಹೆಸರಿನಲ್ಲಿ ಇರುವ ಗೊಂದಲ ಹಾಗೆಯೇ ಮುಂದುವರಿದಿದ್ದು, ವಿದ್ವಾಂಸರು ಈ ಊರುಗಳ ಬಗ್ಗೆ ಅಧ್ಯಯನ ನಡೆಸುವ ಅವಶ್ಯಕತೆ ಇದೆ. ಮಣ್ಣಿನಿಂದ ಹೆಸರುಪಡೆದುಕೊಂಡ ಮಣೇಲ್ ಮಣ್ಣು ಸೇರುವುದು ಬೇಡ. ಅದರೊಂದಿಗೆ ಮಳಲಿಯನ್ನು ಮಣೇಲ್ ಆಗಿ ಬದಲಾಯಿಸಬೇಕೆಂಬ ಒತ್ತಾಯವೂ ಕೇಳಿಬಂದಿದೆ. ಆದರೆ ಈ ರೀತಿ ಹೆಸರು ಬದಲಾವಣೆಗೆ ಕುಲಾಲರು ಮುಂದೆ ಬರಬೇಕಾಗಿದೆ. ಯಾಕೆಂದರೆ ಕುಲಾಲರಿಗೆ ಮಣ್ಣು ಸ್ವಾಭಿಮಾನದ ಸಂಕೇತವಾಗಿದೆ. ಅದೂ ಅಲ್ಲದೆ ಉತ್ತರ ಕರ್ನಾಟಕದಲ್ಲಿ ಮಳಲಿ ಎಂಬ ಅನೇಕ ಊರಿನ ಹೆಸರುಗಳಿವೆ.
ಬರಹ : ಚೇಕಿತಾನ ಮಣೇಲ್




