ಬೆಳ್ಮಣ್(ಕುಲಾಲ ವರ್ಲ್ಡ್ ಡಾಟ್ ಕಾಮ್) : ಅಸೌಖ್ಯದಿಂದ ಹಾಸಿಗೆ ಹಿಡಿದ ಕೊರಗಿನ ಜತೆ ಮನೆ ಕುಸಿಯುವ ಭೀತಿಯಲ್ಲಿರುವ 90 ವರ್ಷದ ಕೊರಗ ಮೂಲ್ಯರ ಕುಟುಂಬದ ಅಸಹಾಯಕ ಸ್ಥಿತಿಗೆ ಆಸರೆಯಾಗಲು ಫ್ರೆಂಡ್ಸ್ ಕ್ಲಬ್ ಒಂದು ಮುಂದಾಗಿದೆ. ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ದಾನಿಗಳ ನೆರವಿನಿಂದ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಕೊಡಲಿದೆ.
90 ವರ್ಷದ ಕೊರಗ ಮೂಲ್ಯರು ವಾಸಿಸುತ್ತಿರುವ ಸಣ್ಣ ಹಳೆ ಮನೆ ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ. ಕೈ ಕಾಲುಗಳ ಬಲ ಕಳೆದುಕೊಂಡಿರುವ ಕೊರಗ ಮೂಲ್ಯರು ಮೂಲೆ ಸೇರಿದ್ದಾರೆ. ಅವರ ಪತ್ನಿ ಸುಮತಿ ಹೊಟೇಲ್ ಒಂದರಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಾರೆ. ಇವರ ಪುತ್ರ ವಿಜಯ ಅವರು ತಂದೆಯ ಬಳಿ ಇದ್ದು ಶುಶ್ರೂಷೆ ಮಾಡುತ್ತಿದ್ದಾರೆ. ಅವರ ಪತ್ನಿಯೂ ಕ್ಯಾನ್ಸರ್ ಕಾಯಿಲೆಯಿಂದ ತೀರಿಕೊಂಡಿದ್ದಾರೆ.
ಈ ಎಲ್ಲಾ ಸಮಸ್ಯೆಗಳಿಂದ ಕಂಗೆಟ್ಟ ಕುಟುಂಬ ವಾಸಿಸಲು ಸರಿಯಾದ ಸೂರಿಲ್ಲದೆ ಸಂಕಷ್ಟದಲ್ಲಿರುವುದನ್ನು ತಿಳಿದ ಇನ್ನಾ ಗ್ರಾಮ ಪಂಚಾಯತ್ ಸದಸ್ಯ ಪ್ರೇಮ್ ಕುಲಾಲ್ ಸಾಮಾಜಿಕ ಕಳಕಳಿಯ ಸೇವಾ ಸಂಸ್ಥೆ ಪ್ರಶಸ್ತಿ ಪುರಸ್ಕೃತ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ನ ಗಮನಕ್ಕೆ ತಂದರು. ಇದೀಗ ಫ್ರೆಂಡ್ಸ್ ಕ್ಲಬ್ ಮನೆ ಕಟ್ಟಿಕೊಡಲು ಮುಂದಾಗಿದೆ.
ಎಪ್ರಿಲ್ 6ರಂದು ಶಿಲಾನ್ಯಾಸ:
ಪ್ರೇಮ್ ಕುಲಾಲ್ರವರ ಮೂಲಕ ಬೆಳಕಿಗೆ ಬಂದ ಈ ಮಾನವೀಯ ನೆಲೆಯ ಯೋಜನೆಯನ್ನು ಕೈಗೆತ್ತಿಕೊಂಡ ಪ್ರಶಸ್ತಿ ಪುರಸ್ಕೃತ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಈಗಾಗಲೇ ದಾನಿಗಳನ್ನು ಸಂಪರ್ಕಿಸಿದ್ದು ಸಕಾಲಿಕ ಸ್ಪಂದನೆ ವ್ಯಕ್ತವಾಗಿದೆ. ಎಪ್ರಿಲ್ 6ರಂದು ಈ ಸದುದ್ದೇಶಿತ ಯೋಜನೆಗೆ ಶಿಲಾನ್ಯಾಸ ನಡೆದಿದೆ.
ಕೊರಗ ಮೂಲ್ಯರ ಅಗತ್ಯತೆಗೆ ಸ್ಪಂದಿಸಿ ಈ ಮನೆ ನಿರ್ಮಾಣಕ್ಕೆ ಇಳಿದಿದ್ದೇವೆ. ಜನರು ನಮ್ಮ ಜತೆ ಕೈಜೋಡಿಸಿ ಎಂದು ಫ್ರೆಂಡ್ಸ್ ಕ್ಲಬ್ ಸಂಚಾಲಕ ಸಂದೀಪ್ ಪೂಜಾರಿ ಅಬ್ಬನಡ್ಕ ಮನವಿ ಮಾಡಿದ್ದಾರೆ.