ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮನೆಗೆ ಆಧಾರವಾಗಿದ್ದು ಇತ್ತೀಚೆಗೆ ನಡೆದ ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟ ನರಿಕೊಂಬು ಗ್ರಾಪಂ ಸದಸ್ಯ ಅರುಣ್ ಕುಲಾಲ್ (45) ಮತ್ತು ಅವರ ಪುತ್ರ ಧ್ಯಾನ್ (15) ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ವಿನಂತಿಸಲಾಗಿದೆ.
ಪುತ್ತೂರು ನಗರದ ಹೊರವಲಯದ ಕಬಕ ಸಮೀಪದ ಕೂವೆತ್ತಿಲ ಎಂಬಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಅವಘಡ ನಡೆದಿತ್ತು.
ಬಂಟ್ವಾಳ ತಾಲ್ಲೂಕಿನ ನರಿಕೊಂಬು ಸಮೀಪದ ನಾಯಿಲ ಬೋರುಗುಡ್ಡೆ ನಿವಾಸಿ, ನರಿಕೊಂಬು ಗ್ರಾಪಂ ಸದಸ್ಯ, ಸಮಾಜ ಸೇವಾ ಬ್ಯಾಂಕ್ ನಿರ್ದೇಶಕ ಅರುಣ್ ಕುಲಾಲ್ (45), ಅವರ ಪುತ್ರ, ಪ್ರಥಮ ಪಿಯುಸಿಗೆ ದಾಖಲಾಗಿದ್ದ ಧ್ಯಾನ್ (15) ಮೃತಪಟ್ಟಿದ್ದರು. ಸುಳ್ಯದಲ್ಲಿ ನಡೆಯಲಿದ್ದ ಸಂಬಂಧಿಕರೊಬ್ಬರ ವಿವಾಹ ಸಮಾರಂಭಕ್ಕೆ ತೆರಳುವಾಗ ಅವಘಡ ನಡೆದಿದೆ. ಅರುಣ್ ಕುಲಾಲ್ ಅವರು ಮಾಣಿ ಕಡೆಯಿಂದ ಸುಳ್ಯಕಡೆಗೆ ಚಲಾಯಿಸುತ್ತಿದ್ದ ಬೈಕ್ಗೆ ಪುತ್ತೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿದೆ. ಅರುಣ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಧ್ಯಾನ್ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಮೃತಪಟ್ಟರು. ಅರುಣ್ ಕುಲಾಲ್ ಅವರಿಗೆ ಪತ್ನಿ ಜಯಮಾಲಿನಿ, ಪುತ್ರ, 8ನೇ ತರಗತಿ ವಿದ್ಯಾರ್ಥಿ ಪುತ್ರ ರೋಶನ್, ಸಹೋದರ ಗಣೇಶ್ ಕುಲಾಲ್, ಇಬ್ಬರು ಸಹೋದರಿಯರು ಇದ್ದಾರೆ. ಬಡಗಿ ವೃತ್ತಿ ನಡೆಸುತ್ತಿದ್ದ ಅರುಣ್ ಅವರು ಬಿಜೆಪಿ ಕಾರ್ಯಕರ್ತರಾಗಿದ್ದರು.