ಮೋಳೆ: ಕರ್ನಾಟಕ-ಹಾಗೂ ಮಹಾರಾಷ್ಟ್ರದ ಗಡಿ ಗ್ರಾಮವಾದ ಅಥಣಿ ತಾಲೂಕಿನ ಮಂಗಸೂಳಿ ಗ್ರಾಮದ ಅಶೋಕ ಕುಂಬಾರ ಅವರ ಕುಟುಂಬವು ಭೂಮಾತೆ ಮಣ್ಣಿನಲ್ಲಿ ಗಣಪತಿ ಸೃಷ್ಟಿಸುವುದರಲ್ಲಿ ಪ್ರಸಿದ್ದರಾದ ಅಶೋಕ ಕುಂಬಾರರ ಕುಟುಂಬದಲ್ಲಿ ಗಣಪತಿಯ ವಿವಿಧ ರೂಪಗಳು ಮೂಡಿವೆ.
ವರ್ಷದ ನಾಲ್ಕು ತಿಂಗಳು ಮನೆ ಮಂದಿಯೆಲ್ಲ ತಮ್ಮ ತೋಟದ ದ್ರಾಕ್ಷಿ ಬೆಳೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ದ್ರಾಕ್ಷಿ ಕಟಾವು ಆದ ಮೇಲೆ 6 ತಿಂಗಳುಗಳ ಕಾಲ ಗಣಪತಿ ರಚನೆಯ ಕಾಯಕದಲ್ಲಿ ನಿರತರಾಗುತ್ತಾರೆ. ಗಣೇಶ ಚತುರ್ಥಿ ಸಮೀಪಿಸುತ್ತಿದ್ದಂತೆ 2 ತಿಂಗಳುಗಳ ಕಾಲ ಬಣ್ಣ ಬಳೆಯುವ ಕಾಯಕದಲ್ಲಿ ನಿರತರಾಗುತ್ತಾರೆ.
ಹಿಂದಿನ ದಿನಮಾನಗಳಲ್ಲಿ ಬಿಳಿ ಸೇಡು ಮಣ್ಣನ್ನು ತಂದು ಅದನ್ನು ನೀರಿನಲ್ಲಿ ನೆನೆಸಿ ನಂತರ ಹದವಾಗಿ ಕುಟ್ಟಿ ಗಣೇಶನ ಮೂರ್ತಿಗಳನ್ನು ನಿರ್ಮಿಸುತ್ತಿದ್ದರು. ಆದರೆ ಈಗ ಕಾಲ ಬದಲಾದಂತೆ ಮಣ್ಣಿನ ಬದಲಾಗಿ ಪ್ಲಾಸ್ಟರ ಗಣಪತಿಗಳನ್ನು ರಚಿಸಲು ಪ್ರಾರಂಭಿಸಿದ್ದಾರೆ.
ಅಶೋಕ ಕುಂಬಾರ ಅವರು ಈ ವರ್ಷ 6 ಸಾವಿರ ಸಣ್ಣ ಹಾಗೂ 1 ಸಾವಿರ ದೊಡ್ಡ ಗಣಪತಿಗಳನ್ನು ರಚಿಸಿದ್ದಾರೆ. 6 ಇಂಚಿನ ಎತ್ತರದಿಂದ 18 ಅಡಿ ಎತ್ತರದ ವರೆಗಿನ ಗಣಪತಿಗಳನ್ನು ರಚಿಸಿದ್ದಾರೆ. ಪ್ರತಿಯೊಂದನ್ನು ಕೈಯಿಂದಲೇ ಗರುಡವಾಹನ, ಮೂಷಿಕ ವಾಹನನಾಗಿ, ಶಿವಲಿಂಗದ ಸಾನಿಧ್ಯದಲ್ಲೂ ಸಾಯಿಬಾಬಾನ ರೂಪದಲ್ಲೂ, ದಗಡುಶೇಠ, ಲಲಬಾಗರಾಜಾ, ದುಂಡುಕಮಲದ ಗಣಪ, ಸೋಲ್ಲಾಪೂರ ಪಾಟೀಲ, ಗಜಕರಣಿ, ಸಿಂಹದ ಮೇಲೆ ಆಸಿನವಾದ ಗಣಪ, ಗರುಡ ಮೇಲಿನ ಗಣಪ, ಇಲಿ ಮೇಲಿನ ಗಣಪ, ನಂದಿ ಮೇಲೆ ಕುಳಿತಿರುವ ಗಣಪ ಹೀಗೆ ವಿವಿಧ ಬಗೆಯ ಗಣಪತಿಗಳನ್ನು ರಚಿಸುತ್ತಾರೆ.
ಗಣಪತಿ ತಯಾರಿಸುವ ಕಲಾವಿದ ಅಶೋಕ ಕುಂಬಾರ ಅವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಹಣ ಗಳಿಕೆಗಿಂತಲೂ ಪರಂಪರಾಗತವಾಗಿ ಕುಟುಂಬದವರ ವೃತ್ತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಕಳೆದ ನಾಲ್ಕಾರು ವರ್ಷಗಳಿಂದ ಭೀಕರ ಬರಗಾಲದ ಛಾಯೇ ಆವರಿಸಿದರೆ, ಈ ಬಾರಿ ಮಳೆಯಾಗದಿದ್ದರೂ ಕೃತಕ ಪ್ರವಾಹ ಬಂದು ಈ ಭಾಗದ ಜನರಿಗೆ ಹತ್ತು ಹಲವು ಸಂಕಷ್ಟಗಳು ಕಾಡುತ್ತಿವೆ.
ಒಂದೇಡೆ ಪ್ರವಾಹದಿಂದ ಬೆಳೆದ ಬೆಳೆಗಳೆಲ್ಲ ನೀರಿನಲ್ಲಿ ಕೊಳೆತು ಹೋಗಿ ನಾಶವಾದರೆ ಇನ್ನೊಂದೆಡೆ ಕುಡಿಯುವ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಉದ್ಬವಿಸಿದೆ. ಇಷ್ಟೇಲ್ಲ ತೊಂದರೆಗಳಿದ್ದರೂ ಕೂಡ ಗಣೇಶ ಚತುರ್ಥಿ ಸಮಿಪಿಸುತ್ತಿದ್ದಂತೆ ಈಗಲೇ ಗಣೇಶ ಮಂಡಳಿಗಳು ಚೌತಿಯ ಸಿದ್ದತೆಯಲ್ಲಿ ತೊಡಗಿದ್ದಾರೆ. ಹಿಂದಿನ ವರ್ಷ ಗಣಪತಿ ಕೊಂಡವರು ಈ ವರ್ಷವೂ ತಮ್ಮ ಬೇಡಿಕೆ ಸಲ್ಲಿಸಿ ಅರ್ಧ ಹಣ ನೀಡಿ ಗಣಪತಿಗಳಿಗೆ ತಮ್ಮ ಹೆಸರುಗಳನ್ನು ಮಂಗಸೂಳಿಯಲ್ಲಿ ಬರೆಯಿಸಿ ಹೋಗುತ್ತಿದ್ದರೆ, ಕೆಲವರು ನೆರೆಯ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಲಾಪೂರಗಳಲ್ಲಿ ಗಣಪತಿಗಳಿಗೆ ಭಕ್ತರು ಬೇಡಿಕೆ ಇಡುತ್ತಿರುವುದು ಕಂಡು ಬರುತ್ತಿದೆ.


