ನಾಡೋಜ ಪ್ರಶಸ್ತಿಯು ಹಂಪಿ ಕನ್ನಡ ವಿಶ್ವವಿದ್ಯಾಲಯವು ಪ್ರತಿವರ್ಷ ನೀಡುವ ಪ್ರತಿಷ್ಠಿತ ಪ್ರಶಸ್ತಿ. ನಾಡೋಜ ಎಂಬ ಪದವು ಆದಿಕವಿ ಪಂಪನಿಗೆ ಸಂಬಂಧಿಸಿದ್ದಾಗಿದೆ. ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಅವರ ಶಾಂತಿನಿಕೇತನದಲ್ಲಿ ನೀಡಲಾಗುತ್ತಿರುವ ‘ದೇಶಿಕೋತ್ತಮ’ ಪದವಿಯ ಪ್ರೇರಣೆಯಿಂದ ಕನ್ನಡ ವಿವಿ ನಾಡೋಜ ಪದವಿ ನೀಡುತ್ತಿದೆ.
ಹೊಸಪೇಟೆ (ವಿಜಯನಗರ): ಕುಂಬಾರ ಸಮುದಾಯದ ಪ್ರಸಿದ್ಧ ಸಾಹಿತಿ ಕುಂ.ವೀರಭದ್ರಪ್ಪ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯ ನೀಡುವ ಪ್ರತಿಷ್ಠಿತ ‘ನಾಡೋಜ’ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ವಿಶ್ವವಿದ್ಯಾಲಯದ 33ನೇ ನುಡಿಹಬ್ಬ (ಘಟಿಕೋತ್ಸವ) ಶುಕ್ರವಾರ ಸಂಜೆ ವಿದ್ಯಾರಣ್ಯ ಕ್ಯಾಂಪಸ್ನ ‘ನವರಂಗ’ ಬಯಲು ರಂಗಮಂದಿರದಲ್ಲಿ ನಡೆಯಲಿದ್ದು, ರಾಜ್ಯಪಾಲ ಥಾವರ್ಚಂದ್ ಗೆಹಲೋಟ್ ಅವರು ನಾಡೋಜ ಪದವಿ ಪ್ರದಾನ ಮಾಡುವರು ಎಂದು ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ಬುಧವಾರ ಕ್ಯಾಂಪಸ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕೊಟ್ಟೂರಿನವರಾದ ಕುಂ.ವೀ. ಅವರಿಗೆ ಕಳೆದ ವರ್ಷವೇ ನಾಡೋಜ ಗೌರವ ನೀಡಲು ಶಿಫಾರಸು ಮಾಡಲಾಗಿತ್ತು. ಈ ವರ್ಷ ಅದಕ್ಕೆ ಸಮ್ಮತಿ ಸಿಕ್ಕಿದೆ. ಅಲ್ಲದೇ ಅವರ ಜೊತೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತರಾದ ನ್ಯಾ. ಶಿವರಾಜ್ ವಿ. ಪಾಟೀಲ್, ಧಾರವಾಡದ ಹಿಂದೂಸ್ತಾನಿ ಗಾಯಕ ಪದ್ಮಶ್ರಿ ಎಂ. ವೆಂಕಟೇಶ್ ಕುಮಾರ್ ಅವರೂ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಈ ಮೂವರು ವೈವಿಧ್ಯಮಯ ಕ್ಷೇತ್ರಗಳ ಸಾಧಕರನ್ನು ಗುರುತಿಸಿದ ಹೆಮ್ಮೆ ವಿಶ್ವವಿದ್ಯಾಲಯಕ್ಕೆ ಇದೆ. ಇದುವರೆಗೆ 98 ಮಂದಿ ನಾಡೋಜ ಗೌರವಕ್ಕೆ ಪಾತ್ರರಾಗಿದ್ದಾರೆ. ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ರಾಜಾಸಾಬ್ ಎ.ಎಚ್. ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಡಿ.ಲಿಟ್ ಮತ್ತು ಪಿಎಚ್.ಡಿ. ಪದವಿ ಪ್ರದಾನ ಮಾಡುವರು ಎಂದು ಪರಮಶಿವಮೂರ್ತಿ ಎಂದು ಹೇಳಿದರು.