ವಿಕ್ಕಿ ಕೌಶಲ್ ಅವರ ‘ಸ್ಯಾಮ್ ಬಹಾದ್ದೂರ್’ ಮೂಲಕ ಬೆಸ್ಟ್ ಮೇಕಪ್ ಆರ್ಟಿಸ್ಟ್ ಎಂಬ ಹೆಗ್ಗಳಿಕೆ ಪಡೆದಿರುವ ಚಿದಾನಂದ್, ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ,ಸುಶಾಂತ್ ಸಿಂಗ್ ರಜಪೂತ್, ದಳಪತಿ ವಿಜಯ್, ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಶಿವನ್ ವಿಕ್ರಂ, ಪರೇಶ್ ರಾವಲ್, ನವಾಜುದ್ದೀನ್ ಸಿದ್ಧಿಕಿ ಮೊದಲಾದ ಪ್ರಸಿದ್ಧ ನಟರ ಚಿತ್ರಗಳಲ್ಲಿ ತಮ್ಮ ಅದ್ಭುತ ಕೈಚಳಕ ಪ್ರದರ್ಶಿಸಿದ್ದಾರೆ…
ಮುಂಬಯಿ(ಕುಲಾಲ ವರ್ಲ್ಡ್ ಡಾಟ್ ಕಾಮ್): ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಷಾ ಅವರ ಬದುಕಿನ ಹೋರಾಟದ ಕಥೆಗಳನ್ನು ಆಧಾರವಾಗಿ ಇಟ್ಟುಕೊಂಡು ‘ಸ್ಯಾಮ್ ಬಹಾದ್ದೂರ್’ ಎಂಬ ಹಿಂದೀ ಸಿನಿಮಾ ತೆರೆಗೆ ಬಂದಿದೆ. ಮೇಘನಾ ಗುಲ್ಜಾರ್ ಈ ಸಿನೆಮಾ ನಿರ್ದೇಶನ ಮಾಡಿದ್ದಾರೆ. ಈ ರೀತಿಯ ಪಾತ್ರಗಳಿಗೆ ತುಂಬಾ ಚೆನ್ನಾಗಿ ಸೂಟ್ ಆಗುವ ವಿಕ್ಕಿ ಕೌಶಲ್ ಎಂಬ ನಟ ಸ್ಯಾಮ್ ಪಾತ್ರ ಮಾಡಿದ್ದಾರೆ. ಭಾರತೀಯ ಮಿಲಿಟರಿ ಇತಿಹಾಸದ ಅದ್ಭುತ ಅನಾವರಣವು ಈ ಸಿನಿಮಾದಲ್ಲಿ ಆಗಿದೆ. ಹಾಗೆಯೇ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಷಾ ಅವರ ವ್ಯಕ್ತಿತ್ವ ಕೂಡ. ಭಾರತೀಯರು ನೋಡಲೇ ಬೇಕಾದ ಸಿನಿಮಾ ಅದು. ಇಂತಹ ಅದ್ಭುತ ಸಿನಿಮಾದಲ್ಲಿ ನಮ್ಮ ಕುಲಾಲ ಸಮಾಜದ ಪ್ರತಿಭಾವಂತ ಮೇಕಪ್ ಆರ್ಟಿಸ್ಟ್ ಒಬ್ಬರ ಪರಿಶ್ರಮ ಇದೆಯೆಂದರೆ ನಮಗೆ ಅದೆಷ್ಟು ಹೆಮ್ಮೆ ಅಲ್ಲವೇ ?
ರಂಗಭೂಮಿ ಆಗಲೀ ಸಿನಿಮಾ ಅಗಲೀ ಅಲ್ಲಿ ಬಣ್ಣಕ್ಕೆ ಹೆಚ್ಚು ಮಹತ್ವ. ತೆರೆಯ ಮೇಲೆ ಕಲಾವಿದರು ಮಿಂಚಲು ಅವರ ಸಂಭಾಷಣೆಯೊಂದಿಗೆ ಮುಖಕ್ಕೆ ಹಚ್ಚಿರುವ ಬಣ್ಣ, ವೇಷಭೂಷಣವೂ ಮುಖ್ಯ. ಹೀಗಾಗಿ, ಪ್ರಸಾಧನ ಅಥವಾ ಮೇಕಪ್ಗೆ ಕಲಾವಿದರು ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ. ಆದರೆ ಬಹುಪಾಲು ಸಂದರ್ಭದಲ್ಲಿ ಪ್ರಸಾಧನ ಕಲಾವಿದರು ಮುನ್ನೆಲೆಗೆ ಬರುವುದಿಲ್ಲ. ತೆರೆಮರೆಯಲ್ಲೇ ಇದ್ದುಕೊಂಡು ಸಿನಿಮಾ ಯಶಸ್ವಿಯಾಗಲು ಪರೋಕ್ಷವಾಗಿ ಕಾರಣರಾಗುತ್ತಾರೆ. ಪ್ರಚಾರದ ಹಂಗಿಲ್ಲದೇ ಆಧುನಿಕ ಪ್ರಸಾಧನ ರಂಗದ ಕೆಲವು ಪಟ್ಟುಗಳನ್ನು ಏಕಲವ್ಯನಂತೆ ಸ್ವಯಂ ಕಲಿತು ಆ ಮೂಲಕ ಬಾಲಿವುಡ್ ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ ಕಲಾವಿದ ಚಿದಾನಂದ ಕುಲಾಲ್.
ಹೌದು ಮೂಲತಃ ತುಳುನಾಡಿನವರಾದ ಚಿಂದಾನಂದ ಕುಲಾಲ್ ಎಂದರೆ ಪ್ರಸ್ತುತ ಬಾಲಿವುಡ್ ಮೇಕಪ್ ಲೋಕದಲ್ಲಿ ಚಿರಪರಿಚಿತ ಹೆಸರು. ಅತೀ ಸಣ್ಣ ವಯಸ್ಸಿನಲ್ಲೇ ಆಧುನಿಕ ಮೇಕಪ್ ರಂಗದಲ್ಲಿ ಬಾಲಿವುಡ್ ಚಿತ್ರ ನಿರ್ದೇಶಕರ ಗಮನಸೆಳೆದ ಈ ಸಾಮಾನ್ಯ ಕುಟುಂಬದ ಯುವಕ ತನ್ನ ಅಪರೂಪದ ಸಾಧನೆ, ಸಂಶೋಧನೆ ಮೂಲಕ ಸಿನಿಮಾ ರಂಗ ಹುಬ್ಬೇರಿಸುವಂತೆ ಮಾಡಿದ್ದಾರೆ.
ಭಾರತದಲ್ಲಿ ಮನುಷ್ಯರ ಕೃತಕ ಅಂಗಾಂಗ ಮುಖವರ್ಣಿಕೆ ನಿರ್ಮಿಸುವ, ಅಂದರೆ ಆಂಗ್ಲ ಭಾಷೆಯಲ್ಲಿ Prosthetic ಎಂದು ಕರೆಯಲ್ಪಡುವ ಮೇಕಪ್ ಮಾಡುವ ವ್ಯಕ್ತಿಗಳೇ ವಿರಳ. ಅಂತಹ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಚಿದಾನಂದ್ ತಮ್ಮ ಕ್ರಿಯೇಟಿವ್ ಚಿಂತನೆ, ಕೈಚಳಕ ಮೂಲಕ ಪ್ರಸಿದ್ಧಿಗೆ ಬಂದಿದ್ದಾರೆ. ಚಿದಾನಂದ ಅವರು ಅಕಾಡೆಮಿಕ್ ಆಗಿ ಕಲಿತಿದ್ದು ಇಲೆಕ್ಟ್ರಾನಿಕ್ ಇಂಜಿನಿಯರಿಂಗ್ ಆದರೂ ಬೆಳೆದಿದ್ದು ತಾನು ಕನಸಿನಲ್ಲೂ ಎಣಿಸಿರದೇ ಇರುವ ಕ್ಷೇತ್ರದಲ್ಲಿ!
ಗುರುವಿಲ್ಲದೆ ಅರಳಿದ ಕಲಾ ಪ್ರತಿಭೆ !
ಚಿಕ್ಕ ವಯಸ್ಸಿನಲ್ಲೇ ಪಠ್ಯೇತರ ಚಟುವಟಿಕೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಈ ರಂಗದಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂದು ಹಾತೊರೆಯುತ್ತಿದ್ದ ಚಿದಾನಂದ್, ಶಾಲಾ ದಿನಗಳಲ್ಲಿ ಚಿತ್ರಕಲೆ, ಡಾನ್ಸ್ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು. ಯಾವುದೇ ಕಾರ್ಯವನ್ನು ಮಾಡಿದರೂ ಅದರಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ, ಕ್ರಿಯೇಟಿವ್ ಸ್ವಭಾವದವರದ ಚಿದಾನಂದ್, ಇಂಜಿನಿಯರಿಂಗ್ ಕಲಿಯುತ್ತಿದ್ದ ಸಂದರ್ಭ ಅಚಾನಕ್ ಆಗಿ ಕಂಡ ಪ್ರೊತೆಸ್ಟಿಕ್ ಮೇಕಪ್ ನ ಒಂದು ವೀಡಿಯೋ ಅವರನ್ನು ಆಕರ್ಷಿಸಿತು.
ತಂತ್ರಜ್ಞಾನ ಮತ್ತು ಕಲೆಯನ್ನು ಉಪಯೋಗಿಸಿ ಮಾಡುವ ಈ ಮೇಕಪ್ ಬಗ್ಗೆ ಆಸಕ್ತಿ ಮೂಡಿ ಆ ಬಗ್ಗೆ ಹೆಚ್ಚಿನ ಅಧ್ಯಯನ ಸ್ವಯಂ ನಡೆಸಿದರು. ಭಾರತದಲ್ಲಿ ಈ ಕಲೆಯ ಕುರಿತ ಯಾವುದೇ ಕೋರ್ಸ್ ಇಲ್ಲದೇ ಇರುವುದನ್ನು ಮನಗಂಡ ಅವರು, ಯೂಟ್ಯೂಬ್ ನಲ್ಲಿ ವಿದೇಶಿಯರ ಕೆಲವು ಇಂಥ ಕಲಾತ್ಮಕ ವೀಡಿಯೊ ನೋಡಿ, ಪ್ರೇರಣೆಗೊಂಡು ಕಲಿತರು. ಮಾತ್ರವಲ್ಲದೇ ತಾನು ನೋಡಿದ ಕಲಾಕೃತಿಯನ್ನು ರಿಕ್ರಿಯೇಟ್ ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡತೊಡಗಿದರು. ಬಳಿಕ ಅದನ್ನೇ ಹವ್ಯಾಸವಾಗಿ ರೂಡಿಸಿಕೊಂಡರು. ಇವರ ಈ ವಿಶಿಷ್ಟ ಕಲೆಯನ್ನು ಗಮನಿಸಿದ ಮುಂಬಯಿಯ ಕಲಾವಿದರೊಬ್ಬರು ತನ್ನ ಜೊತೆ ಕೆಲಸ ಮಾಡಲು ಅವಕಾಶ ನೀಡಿದರು. ಇದು ಅವರ ಬದುಕಿಗೆ ಮಹತ್ತರ ತಿರುವನ್ನು ತಂದುಕೊಟ್ಟಿತು.
ಪ್ಯಾಶನ್ ಎಂಬಂತೆ ಈ ಕ್ಯಾರೆಕ್ಟರ್ ಡಿಸೈನ್ ಹಾಗು ಮೇಕಪ್ ಆರ್ಟಿಸ್ಟ್ ಆಯ್ಕೆ ಮಾಡಿಕೊಂಡ ಚಿದಾನಂದ್ ಬಳಿಕ ಇದೇ ಕೆಲಸದಲ್ಲಿ ಪಳಗಿ ತನ್ನ ವೃತ್ತಿಯನ್ನು ಖಾಯಂಗೊಳಿಸಿದರು. ತನ್ನ ಈ ಕಲೆಗೆ ಚಿತ್ರರಂಗದಲ್ಲಿ ವಿಶೇಷ ಬೆಲೆ, ಬೇಡಿಕೆಯಿದೆ ಎಂದು ಅರಿತ ಅವರು ಮುಂಬಯಿಯಲ್ಲಿ 2018ರಲ್ಲಿ ಅವರು `ಚಿದಾ ಎಫ್ ಎಕ್ಸ್ ಸ್ಟುಡಿಯೋ’ ಎಂಬ ಮೇಕಪ್ ಸಂಸ್ಥೆಯನ್ನು ಆರಂಭಿಸಿದರು. ಅತ್ಯಲ್ಪ ಸಮಯದಲ್ಲಿ ಪ್ರಸಿದ್ಧಿ ಪಡೆದ ಇವರ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಕನ್ನಡ ಸೇರಿದಂತೆ ಅನೇಕ ದಕ್ಷಿಣ ಭಾರತದ ಸಿನಿಮಾಗಳಿಗೆ, ವೆಬ್ ಸೀರಿಸ್ ಗಳಿಗೆ, ಧಾರಾವಾಹಿಗಳಿಗೆ ಮೇಕಪ್ ಕೆಲಸ ಮಾಡಿ ಸೈ ಅನಿಸಿಕೊಂಡಿದೆ. ವಿಕ್ಕಿ ಕೌಶಲ್ ಅವರ ‘ಸ್ಯಾಮ್ ಬಹಾದ್ದೂರ್’ ಮೂಲಕ ಬೆಸ್ಟ್ ಮೇಕಪ್ ಆರ್ಟಿಸ್ಟ್ ಎಂಬ ಹೆಗ್ಗಳಿಕೆ ಪಡೆದಿರುವ ಚಿದಾನಂದ್ “ಕಲ್ಕಿ 2898 AD,” ಶಿವರಾಜ್ ಕುಮಾರ್ ಅವರ “ಭೈರತಿ ರಣಗಲ್” , ಮುಂಬಯಿ ಡೈರೀಸ್ ಎಸ್ ೨, ರಾಕೆಟ್ ಬಾಯ್ಸ್ S1 and S2, `ಜಲ್ಸಾ’ ಚುಚ್ಚೋರೆ’ , ಹೌಸ್ ಫುಲ್ ೪, ಶಿವರಾಜ್ ಕುಮಾರ್ ಅವರ `ಘೋಸ್ಟ್’ ಅಮಿತಾಭ್ ಬಚ್ಚನ್ ಅವರ `ಗುಲಾಬೋ ಸಿತಾಬೋ. “ಬಾಲ’ , ಕಿಚ್ಚ ಸುದೀಪ್ ಅವರ “ವಿಕ್ರಾಂತ್ ರೋಣ’ ದಳಪತಿ ವಿಜಯ್ ಅವರ `ಬೀಸ್ಟ್” ಶಿವನ್ ವಿಕ್ರಂ ಅವರ “ಕೋಬ್ರಾ” ಸಲ್ಮಾನ್ ಖಾನ್ ಅವರ “ಭಾರತ್’ ಲಾಲ್ ಸಿಂಗ್ ಚಡ್ಡಾ ಅವರ “ಪಂಚಾಯತ್;; ಸೀರಿಸ್ , “ಬಂಟಿ ಓರ್ ಬಬ್ಲೀ” ಮುಂತಾದ ಅನೇಕಾನೇಕ ದಕ್ಷಿಣ ಭಾರತದ ಸಿನಿಮಾಗಳಲ್ಲಿ ತಮ್ಮ ಕಲೆ ಚಾತುರ್ಯ ಪ್ರತಿಬಿಂಬಿಸಿದ ಚಿದಾನಂದ್ ಅವರ ಸಂಸ್ಥೆ ಇನ್ನಷ್ಟು ಬೃಹದಾಕಾರವಾಗಿ ಬೆಳೆದು ನಾಡಿಗೆ ಕೀರ್ತಿ ತರಲಿ ಎಂದು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಶುಭ ಹಾರೈಸುತ್ತದೆ.
ಗಡಿನಾಡ ಪ್ರತಿಭೆ ..
ಹುಟ್ಟು ಪ್ರತಿಭಾವಂತರಾದ ಚಿದಾನಂದ ಕುಲಾಲ್ ಹುಟ್ಟಿ ಬೆಳೆದಿದ್ದು, ಗಡಿನಾಡು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸಮೀಪದ ಬಡಾಜೆ ಎಂಬಲ್ಲಿ. ಕೃಷ್ಣ ಅರಿಕಾನ ಮತ್ತು ಇಂದಿರಾ ದಂಪತಿಯ ಮೂವರು ಮಕ್ಕಳಲ್ಲಿ, ಎರಡನೇಯವರಾದ ಚಿದಾನಂದ್, ನಾಲ್ಕನೇ ತರಗತಿವರೆಗೆ ಓದಿದ್ದು ಮಂಜೇಶ್ವರದ ಸ್ಫೂರ್ತಿ ವಿದ್ಯಾನಿಕೇತನದಲ್ಲಿ.
ಆ ಬಳಿಕ ಕೊಲ್ಯ ಸೋಮೇಶ್ವರದ ಸೇಂಟ್ ಜೋಸೆಫ್ಸ್ ಜಾಯ್ ಲಾಂಡ್ ಶಾಲೆಯಲ್ಲಿ ಹತ್ತನೇ ತರಗತಿ ಮುಗಿಸಿ, ಮಂಗಳೂರಿನ ಶಾರದಾ ನಿಕೇತನದಲ್ಲಿ ಪಿಯುಸಿ ವಿದ್ಯಾಭಾಸ. ಸಹ್ಯಾದ್ರಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ಸ್ ಇಂಜಿನಿಯರಿಂಗ್ ಓದಿದ್ದಾರೆ. ಇವರ ಅಣ್ಣ ಬೆಂಗಳೂರಿನ ಕಂಪೆನಿಯೊಂದರಲ್ಲಿ ಮ್ಯಾನೇಜರ್ ಆಗಿದ್ದರೆ, ತಂಗಿ ಮೈಕ್ರೋ ಬಯೋಲಜಿಯಲ್ಲಿ ಎಂಎಸ್ಸಿ ಕಲಿತು ಮಂಗಳೂರಿನ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.
ಚಿದಾನಂದ್ ಅವರ ಮೇಕಪ್ ನ ಕಲಾ ಚಾತುರ್ಯದ ವೀಡಿಯೋಗಳನ್ನು ಕೆಳಗಿನ
ಯೂಟ್ಯೂಬ್ -ಇನ್ಸ್ಟಾಗ್ರಾಮ್ ಲಿಂಕ್ ಮೂಲಕ ನೋಡಬಹುದು ..
https://www.youtube.com/@CHIDA_FX_STUDIO
https://www.instagram.com/chida_fx_studio?igsh=cGJodmpqMWoxbmYy
ಬರಹ: ದಿನೇಶ್ ಬಂಗೇರ ಇರ್ವತ್ತೂರು