ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಣ್ಣಿಗೆ ಗೌರವದ ಬೆಳೆ ನೀಡಿ ಇಂದಿಗೂ ಮಣ್ಣಿನ ಪಾತ್ರೆಗಳ ತಯಾರಿಸುವ ಮೂಲಕ ಪರಂಪರಾಗತವಾಗಿ ಬಂದಂತಹ ತಮ್ಮ ಕುಲ ಕಸುಬುಗಳನ್ನು ಮುಂದುವರಿಸಿಕೊಂಡು ಬಂದಿರುವ ಕುಲಾಲ ಸಮಾಜ ಬಾಂಧವರೇ ನಿಜವಾದ ಮಣ್ಣಿನ ಮಕ್ಕಳು ಎಂದು ಸುದಾನ ವಸತಿಯುತ ಶಾಲಾ ಸಂಚಾಲಕ ರೆ.ವಿಜಯ ಹಾರ್ವಿನ್ ಹೇಳಿದರು.
ಕುಂಭಶ್ರೀ ಕುಲಾಲ ಫ್ರೆಂಡ್ಸ್ ಪುತ್ತೂರು ಇದರ ವತಿಯಿಂದ ಭಾಸ್ಕರ ಎಂ ಪೆರುವಾಯಿಯವರ ಸಾರಥ್ಯದಲ್ಲಿ ಫೆ.೨೮ರಂದು ನೆಹರುನಗರದ ಸುದಾನ ವಸತಿಯುತ ಶಾಲಾ ಮೈದಾನದಲ್ಲಿ ನಡೆದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಹಾಗೂ ಕೊಡಗು ಜಿಲ್ಲೆಗಳ ಅಂತರ್ ಜಿಲ್ಲಾ ಮಟ್ಟದ ಕುಲಾಲ ಟ್ರೋಫಿ-೨೦೨೧ನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಂದು ಸಮಾಜಕ್ಕೂ ತನ್ನದೇ ಆದ ಹಿನ್ನೆಲೆ, ಸಂಸ್ಕಾರ, ಸಂಪ್ರದಾಯ, ಕಲೆ, ಸಂಸ್ಕೃತಿ, ಆಚರಣೆಗಳಿವೆ. ಅವುಗಳನ್ನು ಉಳಿಸಿ, ಬೆಳೆಸಿಕೊಂಡು ಇತರ ಸಮಾಜಗಳು ಬೆಳೆಯಲು ಸಹಕಾರ ನೀಡಬೇಕು ಎಂದರು. ಸ್ಪರ್ಧಾತ್ಮಕ ಚಟುವಟಿಕೆಗಳು ಪ್ರತಿಭೆಗಳು ಬೆಳೆಯಲು ಪೂರಕವಾಗಲಿದೆ. ಹೀಗಾಗಿ ಕ್ರೀಡೆಯನ್ನು ಮೂಲವಾಗಿಸಿಕೊಂಡು ಸಮಾಜ ಬಾಂಧವರೆಲ್ಲರೂ ಒಂದುಗೂಡಿಸಿ ಪ್ರತಿಭೆಗಳು ಬೆಳೆಯಲು ಸಹಕಾರಿಯಾಗುವುದರೊಂದಿಗೆ ಸಮಾಜ ಬಾಂಧವರಲ್ಲಿ ಆತ್ಮೀಯತೆ, ಬಾಂಧವ್ಯ, ಸೌಹಾರ್ದತೆ ಬೆಳೆಯಲು ಸಹಕಾರಿಯಾಗಲಿದೆ ಎಂದರು.
ಮಾಣಿ ಕುಲಾಲ ಸಂಘದ ಅಧ್ಯಕ್ಷ ಬೋಜನಾರಾಯಣ ಮಾಣಿ ಮಾತನಾಡಿ, ಕುಲಾಲ ಸಮಾಜದಲ್ಲಿ ಜನಸಂಖ್ಯೆ ಸಾಕಷ್ಟಿದ್ದು ಪ್ರಬಲ ಸಮಾಜವಾಗಿದೆ. ಆದರೂ ನಿಗಮ ಮಂಡಳಿ ಸೇರಿದಂತೆ ಈತನಕ ಯಾವುದೇ ರಾಜಕೀಯ ಸ್ಥಾನಮಾನಗಳು ಲಭಿಸಿಲ್ಲ. ನಾವು ಶಾಂತಿ ಪ್ರಿಯರಾಗಿದ್ದು ಯಾವುದೇ ಸ್ಥಾನಗಳಿಗಾಗಿ ಹೋರಾಟಗಳನ್ನು ಮಾಡಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟದ ಮೂಲಕ ನಮ್ಮ ಸಮಾಜ ಶಕ್ತಿಯನ್ನು ತೋರಿಸಬೇಕು. ರಾಜಕೀಯ ಸ್ಥಾನಗಳು ದೊರೆತಾಗ ನಮ್ಮ ಸಮಾಜ ಪ್ರಬಲ ಸಮಾಜವಾಗಿ ಬೆಳೆಯಲು ಸಾಧ್ಯವಿದೆ ಎಂದರು.
ಕುಲಾಲ ಸಂಘ ಬೆಳ್ಳಾರೆ ಇದರ ನಿಕಟಪೂರ್ವ ಅಧ್ಯಕ್ಷ ಕೇಶವ ಪಂಜಿಗಾರು ಮಾತನಾಡಿ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಸಮಾಜದ ಉನ್ನತಿಗಾಗಿ. ಇವುಗಳ ಆಯೋಜನೆಯ ಮೂಲಕ ಸಮಾಜ ಬಾಂಧವರು ಒಗ್ಗಟ್ಟಿನಿಂದ ಭಾಗವಹಿಸುವುದು ಮಾತ್ರವಲ್ಲದೆ ಸಮಾಜದಲ್ಲಿರುವ ಸೂಕ್ತ ಪ್ರತಿಭೆಗಳನ್ನು ಸಮಾಜಕ್ಕೆ ಅರ್ಪಣೆ ಮಾಡಲು ಸಹಕಾರಿಯಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಉಪಾಧ್ಯಕ್ಷ ದಾಮೋಧರ ವಿ. ಕುಲಾಲ್ ಮಾತನಾಡಿ, ಕ್ರೀಡಾಕೂಟ ಆಯೋಜಿಸುವ ಮುಖಾಂತರ ಸಮಾಜ ಬಾಂಧವರನ್ನು ಸಮಾಜದ ಮುಖ್ಯವಾಹಿನಿಗೆ ತುರುವುದೇ ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ ಭಾಸ್ಕರ್ರವರ ಸಾರಥ್ಯದಲ್ಲಿ ಅಂತರ್ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಉತ್ತಮ ಕಾರ್ಯ ಮಾಡುವಾಗ ಟೀಕೆಗಳು, ಕಾಳೆಲೆಯುವುದು ಸಾಮಾನ್ಯ. ಅದ್ಯಾವುದಕ್ಕೂ ಅಂಜದೆ ಮುನ್ನಡೆದಾಗ ಯಶಸ್ಸು ಸಾಧ್ಯ ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ತಾಂತ್ರಿಕ ಸಹಾಯಕ ರಮೇಶ್ ಕುಲಾಲ್ ಮಡಿಕೆ ತಯಾರಿಕ ಪ್ರಾತ್ಯಕ್ಷಿಕೆ ನಡೆಸಿದರು. ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಯಿತು.
ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ ಎಂ ಪೆರುವಾಯಿ, ಮಾಜಿ ಅಧ್ಯಕ್ಷಬಿ.ಎಸ್ ಕುಲಾಲ್, ವಿಟ್ಲ ಕುಲಾಲ ಸಂಘದ ಅಧ್ಯಕ್ಷ ಬಾಬು ಮೂಲ್ಯ, ಸಮಾಜ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಬಾಳೆಹಿತ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲಿಖಿತಾ ವಲಂಗಾಜೆ ಪ್ರಾರ್ಥಿಸಿದರು. ಸೌಮ್ಯ ಪ್ರಕಾಶ್ ಕುಲಾಲ್ ಮಾಣಿ ಸ್ವಾಗತಿಸಿದರು. ನಿಶೀಲ್ ಕೆದಿಲ, ಹರೀಶ್ ಕಜೆ, ದಿನೇಶ್, ಶ್ರೀಕಾಂತ್, ರಿತೇಶ್, ಹಿತೇಶ್, ಜನಾರ್ದನ ಸಾರ್ಯ, ಶ್ರೀಕಾಂತ್ ಅತಿಥಿಗಳನ್ನು ಶಾಲು ಹಾಕಿ, ವೀಲ್ಯ ನೀಡಿ ಸ್ವಾಗತಿಸಿದರು. ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಜನಾರ್ದನ ಕುಲಾಲ್ ಸನ್ಮಾನಿತರ ಪರಿಚಯ ಮಾಡಿದರು. ಜೀವಿತ್ ಕುಲಾಲ್ ವಂದಿಸಿದರು. ವಿನೋದ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪುರುಷರಿಗಾಗಿ ಕಬಡ್ಡಿ, ಬಾಲಿಬಾಲ್, ಹಗ್ಗಜಗ್ಗಾಟ, ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟಗಳು ನಡೆಯಿತು.