ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕುಂಬಾರ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸುವುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕುಂಬಾರ ಸಮಾಜದವರು ಫ್ರೀಡಂಪಾರ್ಕ್ನಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿದರು.
ಕರ್ನಾಟಕ ಕುಂಬಾರ ಯುವಸೇನೆ ವತಿಯಿಂದ ಪ್ರತಿಭಟನೆ ನಡೆಸಿದ ಸಮಾಜದವರು ಕುಂಬಾರ ಸಮಾಜಕ್ಕೆ ಕುಂಭ ಕಲಾಭಿವೃದ್ಧಿ ನಿಗಮವನ್ನು ದೇವರಾಜ ಅರಸು ನಿಗಮ ಅಭಿವೃದ್ಧಿ ನಿಗಮದಿಂದ ಪ್ರತ್ಯೇಕಿಸಿ ಕುಂಬಾರ ಸಮಾಜ ಅಭಿವೃದ್ಧಿ ನಿಗಮವನ್ನಾಗಿ ಮಾಡಬೇಕೆಂದು ರಾಜ್ಯಾಧ್ಯಕ್ಷ ಶಂಕರ್ಶೆಟ್ಟಿ ಕುಂಬಾರ ಒತ್ತಾಯಿಸಿದರು.
ಕುಂಬಾರ ಸಮಾಜವನ್ನು ಎಸ್ಟಿ ವರ್ಗಕ್ಕೆ ಸೇರಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಅಲ್ಲಿಯವರೆಗೆ ಸಮುದಾಯಕ್ಕೆ 2ಎ ವಿಶೇಷ ಒಳ ಮೀಸಲಾತಿ ನೀಡಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ವಿವಿಧ ಉಪನಾಮಗಳಿಂದ ಕರೆಯಲ್ಪಡುವ ಕುಂಬಾರ ಸಮಾಜದವರಿಗೆ ಜಾತಿಪತ್ರದ 2ಎ ಗೊಂದಲ ನಿವಾರಿಸಿ ಏಕರೂಪ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಇದೇ ಸಂದರ್ಭದಲ್ಲಿ ಆಗ್ರಹಿಸಿದರು. ಕುಂಬಾರ ಸಮಾಜದ ಕಣ್ಮಣಿಗಳಾದ ಕಾಯಕಯೋಗಿ, ಶಿವಶರಣ ಕುಮಾರ ಗುಂಡಯ್ಯ ಜನ್ಮಸ್ಥಳವಾದ ಬೀದರ್ ಜಿಲ್ಲೆ ಬಾಲ್ಕಿಯ ತ್ರಿಪದಿ ಕವಿ ಸರ್ವಜ್ಞರ ಜನ್ಮಸ್ಥಳವನ್ನು ಅಭಿವೃದ್ಧಿಗೊಳಿಸಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.