ಕುಂದಾಪುರ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಸಂಘಟನೆಗಾಗಿ ಕ್ರೀಡೆ-ಒಗ್ಗಟ್ಟಿಗಾಗಿ ಕ್ರೀಡೆ-ಏಳಿಗೆಗಾಗಿ ಕ್ರೀಡೆ- ಈ ಗಟ್ಟಿ ತತ್ವದ ತಳಹದಿಯಲ್ಲಿ ಕುಲಾಲ ಸಮಾಜ ಸುಧಾರಕ ಸಂಘ(ರಿ) ಕುಂದಾಪುರ ಇದರ ಆಶ್ರಯದಲ್ಲಿ ಕರಾವಳಿ ಕುಲಾಲ ಯುವ ವೇದಿಕೆ ಕುಂದಾಪುರ ವಿಧಾನಸಭಾ ಕ್ಷೇತ್ರ ಮತ್ತು ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿದ್ಕಲ್ ಕಟ್ಟೆ ಕಾಲೇಜು ಕ್ರೀಡಾಂಗಣದಲ್ಲಿ ಜರುಗಿದ ನಾಲ್ಕನೇ ವರ್ಷದ ಕುಲಾಲ ಕ್ರೀಡೋತ್ಸವ-2019 ಅತ್ಯದ್ಬುತ ಯಶಸ್ಸಿನೊಂದಿಗೆ ಸಂಪನ್ನಗೊಂಡಿತು. ಕುಂದಾಪುರ ಮತ್ತು ಬೈಂದೂರು ವಿಧಾನಸಭಾ ವ್ಯಾಪ್ತಿಯ ಸಾವಿರಕ್ಕೂ ಮಿಕ್ಕಿ ಕ್ರೀಡಾ ಆಸಕ್ತರು, ಸ್ಪರ್ಧಿಗಳು ಭಾಗವಹಿಸಿ ದಿನವೀಡೀ ಆಡಿ-ಕುಣಿದು ಸಂಭ್ರಮಪಟ್ಟರು. ಸಂಘಟನೆಯೊಂದು ಶಿಸ್ತುಬದ್ದವಾಗಿ ಕ್ರೀಡಾಕೂಟವನ್ನು ಆಯೋಜಿಸಿದರೆ ಸಮುದಾಯದ ಮಂದಿ ಎಷ್ಟು ಆಸಕ್ತಿ ಮತ್ತು ಹುರುಪಿನಿಂದ ಪಾಲ್ಗೊಳ್ಳಬಹುದು ಎಂಬುದಕ್ಕೆ ಈ ಕ್ರೀಡಾಕೂಟ ದಿನವಿಡೀ ಸಾಕ್ಷಿಯಾಯಿತು.
ಸಾಂಘಿಕ ಪ್ರಯತ್ನದ ಫಲಶ್ರುತಿ:
ಬೆಳಿಗ್ಗೆ ಎಂಟರ ಒಳಗೆ ಕ್ರೀಡೋತ್ಸವ ಸಮಿತಿಯ ಪಧಾಧಿಕಾರಿಗಳು, ವಿವಿಧ ಸಂಘಟನೆಗಳ ನಾಯಕರು ಕ್ರೀಡಾಂಗಣದಲ್ಲಿ ಹಾಜರಾಗಿದ್ದು ವಿಶೇಷವಾಗಿತ್ತು. ಸಂಘಟನಾತ್ಮಕವಾಗಿ ಪ್ರತಿಯೊಬ್ಬರು ಅವರವರ ಜವಬ್ದಾರಿಯನ್ನ ಅರಿತು ಕೆಲಸಮಾಡಿದ್ದು ಕ್ರೀಡೋತ್ಸವದ ಆರಂಭಕ್ಕೆ ಕಳೆಕಟ್ಟಿತು. ಒಂಬತ್ತು ಗಂಟೆಯ ಒಳಗೆ ಕ್ರೀಡೆಯಲ್ಲಿ ಸ್ಪರ್ಧಿಸುವ ಕ್ರೀಡಾಳುಗಳು ತಂಡೋಪ ತಂಡವಾಗಿ ಆಗಮಿಸಿ ಹೆಸರನ್ನು ನಮೂದಿಸಿ ಆಟ ಆಡಲು ಶಿಸ್ತುಬದ್ದ ಸೈನಿಕರಂತೆ ಸಿದ್ದವಾಗಿತ್ತು ಇನ್ನೊಂದು ವಿಶೇಷ. ಕ್ರೀಡಾಳುಗಳಲ್ಲಿ ಕ್ರೀಡಾ ಸ್ಪೂರ್ತಿ ಇಮ್ಮಡಿಯಾಗುವ ಹಾಗೇ ಕ್ರೀಡಾಂಗಣವನ್ನು ಸಿದ್ದಗೊಳಿಸಲಾಗಿತ್ತು. ಚಿಕ್ಕ-ಚೊಕ್ಕವಾದ ಉದ್ಘಾಟನೆ, ಅತಿಥಿ ಮಹನೀಯರ ಸಮಯ ಪ್ರಜ್ಞೆ, ಶಿಸ್ತಾದ ನೊಂದಾವಣೆ, ಸ್ವಯಂಸೇವಕರ ದಂಡು ಎಲ್ಲವೂ ಕ್ರೀಡಾಕೂಟದ ಯಶಸ್ಸಿನಲ್ಲಿ ಬಹುಮುಖ್ಯ ಪಾತ್ರವಹಿಸಿದ್ದವು.
ಉಂಡು ದಣಿದರು: ಆಡಿ ಕುಣಿದರು:
ಬೆಳಗ್ಗಿನಿಂದಲೇ ಕುಲಾಲ ಯುವ ಸಂಘಟನೆಗಳ ವಿವಿಧ ಘಟಕಗಳ ಕ್ರೀಡಾ ತಂಡ ವಾಲಿಬಾಲ್, ತ್ರೋಬಾಲ್, ಹಗ್ಗಜಗ್ಗಾಟ, ಕ್ರಿಕೇಟ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಬೇರೆ ಬೇರೆ ಊರುಗಳಿಂದ ಬಾಗವಹಿಸಿದ ಉತ್ಸಾಹಿ ತರುಣರ ದಂಡೇ ಕ್ರೀಡಾಂಗಣದಲ್ಲಿ ಮೇಳೈಸಿ ಯುವ ಗಾಳಿಯನ್ನು ಎಲ್ಲೇಡೆಗೆ ಬೀರಿತು. ಪುರುಷ-ಮಹಿಳೆಯರೆಂಬ ಬೇಧವಿಲ್ಲದೇ ಸಮಸ್ತರು ಅತ್ಯುತ್ಸಾಹದಿಂದ ಪಾಲ್ಗೊಂಡರು. ಆರು ಜನ ದೈಹಿಕ ಶಿಕ್ಷಣ ಶಿಕ್ಷಕರು ತೀರ್ಪುಗಾರರಾಗಿ ಭಾಗವಹಿಸಿ ಸಮರ್ಥ ತೀರ್ಪನ್ನು ನೀಡಿದರು. ಅಗಮಿಸಿದ ಸಮಸ್ತರಿಗೆ ಶುಚಿ-ರುಚಿಯಾದ ಭೋಜನವನ್ನು ಧಾನಿಯೊಬ್ಬರ ಸಹಕಾರದಿಂದ ವ್ಯವಸ್ಥೆಗೊಳಿಸಲಾಗಿತ್ತು. ಜನ್ಸಾಲೆ ಕುಲಾಲ ಯುವ ವೇದಿಕೆಯ ಘಟಕದ ವತಿಯಿಂದ ದಣಿದ ಎಲ್ಲ ಕ್ರೀಡಾಪಟುಗಳಿಗೆ ತಂಪು ಮಜ್ಜಿಗೆಯ ವ್ಯವಸ್ಥೆ ಮಾಡಿದ್ದು ಚೇತೋಹಾರಿಯಾಗಿತ್ತು. ಕುಲಾಲ ಕ್ರೀಡೋತ್ಸವದಲ್ಲಿ ಹಿರಿ-ಕಿರಿಯರೆಂಬ ಬೇಧವಿಲ್ಲದೇ ಎರಡು ವಿಧಾನಸಭಾ ವ್ಯಾಪ್ತಿಯ ನೂರಾರು ಮಂದಿ ಭಾಗವಹಿಸಿ ಸ್ಪರ್ಧಾಳುಗಳಿಗೆ ಪ್ರೋತ್ಸಾಹ ಕೊಟ್ಟರು.
ಮಣ್ಣಿನ ಸ್ಮರಣಿಕೆಗಳ ವಿತರಣೆ:
ಈ ವರ್ಷದ ಕುಲಾಲ ಕ್ರೀಡೋತ್ಸವದಲ್ಲಿ ಭಾಗವಹಿಸಿದ ಗಣ್ಯರಿಗೆ, ಆರ್ಥಿಕ ಸಹಾಯಹಸ್ತ ನೀಡಿದ ಧಾನಿಗಳಿಗೆ, ವಿವಿಧ ಸಹಕಾರ ನೀಡಿದ ನಾಯಕರುಗಳಿಗೆ ಮಣ್ಣಿನಿಂದಲೇ ತಯಾರಿಸಿದ ಪರಿಕರಗಳನ್ನು, ಮಗ್ ಗಳನ್ನು ನೀಡಿದ್ದು ಸಮಯೋಚಿತವಾಗಿತ್ತು. ಕುಂಬಾರಿಕೆಯ ಮೌಲ್ಯ-ಅಗತ್ಯವನ್ನು ಸೂಕ್ಷ್ಮವಾಗಿ ಎಲ್ಲರಿಗೆ ಫಸರಿಸುವ ಬದ್ದತೆಯನ್ನು ಕ್ರೀಡೋತ್ಸವ ಸಮಿತಿ ಈ ಮೂಲಕ ಮಾಡಿತ್ತು. ಕ್ರೀಡಾಕೂಟದ ಕೊನೆಯಲ್ಲಿ ಸ್ವಚ್ಚ ಭಾರತ ಎಂಬ ಪರಿಕಲ್ಪನೆಯಡಿಯಲ್ಲಿ ಕ್ರೀಡಾಂಗಣದ ಸುತ್ತ ಬಿದ್ದಿದ್ದ ಕಸವನ್ನು ಸ್ವಯಂ ಪ್ರೇರಣೆಯಿಂದ ಕ್ರೀಡಾಕೂಟದಲ್ಲಿ ಪಾಲ್ಗೊಂಡವರು ಆಯ್ದು ಕಸದ ಡಬ್ಬಿಯೊಳಗೆ ಸೇರಿಸಿ ಸಾಮಾಜಿಕ ಜವಬ್ದಾರಿಯನ್ನು ಮೆರೆದರು. ಕ್ರೀಡೋತ್ಸವ ಸಮಿತಿಯ ಪಧಾಧಿಕಾರಿಗಳು, ಸಂಘಟನೆಗಳ ನಾಯಕರು ಇದರಲ್ಲಿ ಕೈಜೋಡಿಸಿದರು. ಒಟ್ಟಿನಿಲ್ಲ ಕುಲಾಲ ಕ್ರೀಡೋತ್ಸವ ಅತ್ಯಧ್ಬುತ ಯಶಸ್ಸಿನೊಂದಿಗೆ ಸಂಪನ್ನಗೊಂಡಿತು.
ಗಣ್ಯರ ಉವಾಚ:
‘ವರ್ಷದಿಂದ ವರ್ಷಕ್ಕೆ ಕುಲಾಲ ಕ್ರೀಡೋತ್ಸವ ಯಶಸ್ವಿಯಾಗಿ ನಡೆಯುತ್ತಿದೆ. ಕರಾವಳಿಯ ಕುಲಾಲರ ಅತೀ ದೊಡ್ಡ ಕ್ರೀಡಾಕೂಟ ಇದಾಗಿರುವುದು ಕುಲಾಲರಿಗೆಲ್ಲ ಹೆಮ್ಮೆ ಮತ್ತು ಅಭಿಮಾನ ಮೂಡಿಸುತ್ತದೆ.
– ಕ್ರೀಡೋತ್ಸವ-೨೦೧೯ರ ಉದ್ಘಾಟನೆಯನ್ನು ನೆರವೇರಿಸಿ -ಡಾ. ಎಮ್ ವಿ ಕುಲಾಲ್
‘ಈ ಕ್ರೀಡಾಕೂಟದಿಂದ ಕುಲಾಲರ ಸಂಘಟನೆಗಳು ಇನ್ನೂ ಬಲಗೊಳ್ಳುತ್ತವೆ. ತರುಣ ಮಂದಿ ಸಂಘಟನೆಯೆಡೆಗೆ ಆಕರ್ಷಿತರಾಗುವಲ್ಲಿ ಈ ಕ್ರೀಡಾಕೂಟ ಮಹತ್ವದ ಪಾತ್ರ ವಹಿಸುತ್ತವೆ.
-ಸತೀಶ್ ಕುಲಾಲ್ ಕಡಿಯಾಳಿ ರಾಜ್ಯ ಪ್ರಧಾನ ಕಾರ್ಯದರ್ಶಿ,ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ
‘ ಕುಲಾಲ ಸಮುದಾಯದ ನೂರಾರು ಕ್ರೀಡಾಪಟುಗಳಿಗೆ ಇದೊಂದು ಅದ್ಬುತ ಅವಕಾಶ. ಯುವ ಸಂಘಟನೆಗಳ ಒಗ್ಗಟ್ಟು ಮತ್ತು ಯುವ ನಾಯಕರ ಪಾತ್ರ ಕ್ರೀಡಾಕೂಟದ ಯಶಸ್ಸಿಗೆ ಕಾರಣ’
ರಾಜೀವ ಕುಲಾಲ್ ಆರೂರು-ಆರೂರು ಗ್ರಾ.ಪಂ ಅಧ್ಯಕ್ಷರು (ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು)
‘ ಕುಲಾಲ ಕ್ರೀಡೋತ್ಸವದಿಂದ ಕುಲಾಲ ತರುಣರು ಬಹಳ ಆಸಕ್ತಿಯಿಂದ ಸಂಘಗಳಲ್ಲಿ ಪಾಲ್ಗೊಳ್ಳುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ. ಸರ್ವರ ಸಹಕಾರದಿಂದ ಈ ಕುಲಾಲ ಕ್ರೀಡೋತ್ಸವ ವರ್ಷದಿಂದ ವರ್ಷಕ್ಕೆ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವುದು ಖುಷಿಯ ವಿಚಾರ’
-ಪ್ರಭಾಕರ ಕುಲಾಲ್ -ವಲಯ ಅರಣ್ಯಾಧಿಕಾರಿ ಕುಂದಾಪುರ (ಕುಲಾಲ ಕ್ರೀಡೋತ್ಸವ ಸಮಿತಿಯ ಅಧ್ಯಕ್ಷರು)
‘ಕುಲಾಲ ಕ್ರೀಡೋತ್ಸವದ ಯಶಸ್ಸು ಇದರ ಹಿಂದೆ ನಿರಂತರವಾಗಿ ದುಡಿದ ಕರಾವಳಿ ಕುಲಾಲ ಯುವ ವೇದಿಕೆಯ ನೂರಾರು ಕಾರ್ಯಕರ್ತರಿಗೆ ಸಲ್ಲುತ್ತದೆ. ಇದು ಒಬ್ಬರ ಯಶಸ್ಸಲ್ಲ. ಸರ್ವರ ಪ್ರಯತ್ನದಿಂದಷ್ಟೇ ಈ ಕ್ರೀಡಾಕೂಟ ಯಶಸ್ವಿಯಾದದ್ದು. ಮುಂದೆಯೂ ಸರ್ವರ ಸಹಕಾರ ನಿರೀಕ್ಷಿಸುತ್ತೇವೆ.’
-ಸತೀಶ್ ಕುಲಾಲ್ ನಡೂರು-ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಉಡುಪಿ ಜಿಲ್ಲೆ
—————–
ಚಿತ್ರ-ವರದಿ : ಮಂಜುನಾಥ ಹಿಲಿಯಾಣ