ಶತಮಾನದ ಹೊಸ್ತಿಲಲ್ಲಿರುವ ಸಂಘ ಜಿಲ್ಲೆಗಷ್ಟೇ ಸೀಮಿತವಾಗಬಾರದು : ಡಾ. ಅಣ್ಣಯ್ಯ ಕುಲಾಲ್
ಮಂಗಳೂರು(ಏ.೦೮, ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮೂಲ್ಯ, ಕುಲಾಲ, ಕುಂಬಾರ ಸಮುದಾಯದ ಹಿರಿಯರ ಸಮಾಜಮುಖೀ ಚಿಂತನೆಯಿಂದ ಸುಮಾರು 93 ವರ್ಷಗಳ ಇತಿಹಾಸವಿರುವ, ಇಡೀ ರಾಜ್ಯಕ್ಕೆ ಒಂದು ಮಾತೃ ಸಂಘ ಆಗುವ ಎಲ್ಲಾ ಅರ್ಹತೆ ಇದ್ದ ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲ ಸಂಘ ಕೇವಲ ದ.ಕ. ಜಿಲ್ಲೆ ಅಥವಾ ಮಂಗಳೂರು ನಗರ ವ್ಯಾಪ್ತಿಗೆ ಮಾತ್ರ ಸೀಮಿತ ಗೊಳಿಸಬಾರದು ಎಂದು ಕರಾವಳಿ ಕುಲಾಲ ಕುಂಬಾರರ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು ಹೇಳಿದರು.
ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ, ಮಹಿಳಾ ಮಂಡಳಿ, ಸೇವಾದಳಗಳ ಜಂಟಿ ಆಶ್ರಯದಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣ ದಲ್ಲಿ ರವಿವಾರ ಜರುಗಿದ ಕ್ರೀಡಾ ಕೂಟವನ್ನ ಉದ್ಘಾಟಿಸಿ ಮಾತನಾಡಿದರು.
ರಾಜ್ಯದ ಅತೀ ಹಿರಿಯ ಸಂಘಟನೆಗೆ ನೂರು ವರ್ಷಗಳ ಸಂಭ್ರಮ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ಸಂಘವನ್ನು ಬಲಗೊಳಿಸುವ ಕೆಲಸವನ್ನು ಬೇಧಭಾವ, ಸಂಕುಚಿತ ಭಾವ ಬಿಟ್ಟು, ವಿಶಾಲ ಮನೋಭಾವದೊಂದಿಗೆ ಬೆರೆಯಬೇಕು ಎಂದರು. ಮಾತೃ ಸಂಘದಲ್ಲೇ ಹುಟ್ಟು ಪಡೆದು ಈಗ ಹತ್ತನೇ ವರ್ಷದ ಸಂಭ್ರಮ ದಲ್ಲಿ ಇರುವ ಕರ್ನಾಟಕ ರಾಜ್ಯ ಕುಲಾಲ್ ಕುಂಬಾರ ಯುವ ವೇಧಿಕೆ ಮಾತೃ ಸಂಘದ ನೂರನೇ ವರ್ಷದ ಸಂಭ್ರಮಕ್ಕೆ ನೂರು ಯುವ ಘಟಕಗಳ ಸಂಘಟನಾ ಶಕ್ತಿ ಕೊಡಲು ಎಲ್ಲಾ ಪ್ರಯತ್ನ ಮಾಡಲಿದೆ ಎಂದರು.
ಸುಮಾರು 30 ಅಧಿಕ ವರ್ಷಗಳಿಂದ ಮಾತೃ ಸಂಘದ ಸತತ ಸೇವೆಯಲ್ಲಿರುವ ನನಗೆ ಸಂಘದ ಅನೇಕ ಹಿರಿಯರು ಪ್ರೇರಣೆ ನೀಡಿದ್ದಾರೆ. ಅವರಲ್ಲಿ ಬಡವರ ಸಾವು ನೋವುಗಳಿಗೆ ಸ್ಪಂದಿಸಿ ಜನಾನುರಾಗಿ ಯಾಗಿದ್ದ ನಾರ್ಣಪ್ಪ, ವೀರ ನಾರಾಯಣ ಹಾಗು ದೇವಿ ದೇವಸ್ಥಾನಗಳಿಗಾಗಿ ತಮ್ಮ ಸಂಪೂರ್ಣ ಶ್ರಮ ಕೊಟ್ಟ ಮಹಾಬಲ ಹಂಡಾ, ಜನತಾ ಗೋಪಾಲ್, ಸದಾನಂದ ಅವರನ್ನು, ಅದರಲ್ಲೂ ಸಂಘಟನಾ ಬ್ರಹ್ಮ ಬಾಲೋಡಿ ಮಹಾಬಲ ಹಂಡಾ ಮತ್ತು ಕುಲಾಲ್ ಕುಂಬಾರ ಸಮುದಾಯದ ಸಾಮಾಜಿಕ ರಾಜಕೀಯ ಸಾಹಿತ್ಯ ಕ್ಷೇತ್ರದ ಹರಿಕಾರ, ಸ್ವಾತಂತ್ರ್ಯ ಹೋರಾಟಗಾರ ಅಮ್ಮೆoಬಲ ಬಾಳಪ್ಪ ಇವರುಗಳನ್ನ ನಾವು ಮರೆಯಲೇ ಕೂಡದು ಎಂದರು.
ಕೇವಲ ಜಾತಿ ಸಂಘದ ಒಳಗೆ ನಾಯಕರಾಗದೇ, ಎಲ್ಲಾ ಸಮಾಜದ ನಾಯಕರಾಗ ಬೇಕು, ಅದಕ್ಕೆ ಕ್ರೀಡಾ ಕೂಟ ದೊಡ್ಡ ಮೆಟ್ಟಿಲು ಎಂದು ಕ್ರೀಡಾ ಕೂಟವನ್ನ ಆಯೋಜಿಸಿದ ಸೇವಾದಳವನ್ನ ಶ್ಲ್ಯಾಘಿಸಿದರು.
.
ಇನ್ನೊಬ್ಬ ಮುಖ್ಯ ಅತಿಥಿ ಕುಲಾಲ್ ಸಮುದಾಯದ ಉದ್ಯಮಿ ಸೌಂದರ್ಯ ರಮೇಶ್ ಮಾತನಾಡಿ, ಕ್ರೀಡಾ ಕೂಟ ಮಾಡಿದ್ದಕ್ಕೆ ಯುವಕರನ್ನ ಶ್ಲಾಘಿಸಿದರು. ತನ್ನ ವೈದ್ಯ ವೃತ್ತಿ ಮತ್ತು ಬಿಡುವಿಲ್ಲದ ಸಮಾಜಮುಖೀ ಕೆಲಸಗಳ ನಡುವೆ ಕುಲಾಲ್ ಕುಂಬಾರ ಸಮುದಾಯದ ಕೆಲಸ ಮಾಡುವ ಡಾ ಅಣ್ಣಯ್ಯ ಕುಲಾಲ್ ನಮಗೆಲ್ಲಾ ಪ್ರೇರಣೆ ಎಂದರು. ನಾವು ಹೆಸರಿನ ಮುಂದೆ ಸರ್ ನೇಮ್ ಅಥವಾ ಊರಿನ ಹೆಸರು ಹಾಕಿ ಕೊಳ್ಳುವ ಮೊದಲು ಕುಲಾಲ್ ಕುಂಬಾರ ಅಥವಾ ಮೂಲ್ಯ ಅಂತ ಹಾಕಿ ಕೊಳ್ಳ ಬೇಕು ಎಂದರು.
ಕಾರ್ಯ ಕ್ರಮದಲ್ಲಿ ಹಿರಿಯ ಕ್ರೀಡಾ ತರಬೇತುದಾರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಾಗೇಶ್ ಕುಲಾಲ್ ಅತ್ತಾವರ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಕೃಷ್ಣ ಅತ್ತಾವರ್ ಅಧ್ಯಕ್ಷತೆ ವಹಿಸಿದ್ದರು. ನಾಯಕರುಗಳಾದ ಸುಜೀರ್ ಕುಡುಪು, ಸುರೇಶ ಕುಲಾಲ್, ಚಂಚಲಾಕ್ಷಿ ಕುಲಾಲ್ ಉಪಸ್ಥಿತರಿದ್ದರು. ಉಪಾಧ್ಯಕ್ಷರುಗಳಾದ ರಮೇಶ್ ಕುಲಾಲ್, ಮಮತಾ ಅಣ್ಣಯ್ಯ ಕುಲಾಲ್ ಮತ್ತಿತರ ಪದಾಧಿಕಾರಿಗಳು ಸಹಕರಿಸಿದ್ದರು. ದಳಪತಿ ಸಂದೇಶ್ ಕುಲಾಲ್ ವಂದಿಸಿದರು.