ಯಕ್ಷಗಾನ ಮೂಲಕ ಕ್ಯಾನ್ಸರ್ ಜಾಗೃತಿ – ವೈದ್ಯರ ಕಲಾ ಪ್ರತಿಭೆಗೆ ಎಲ್ಲೆಡೆ ಪ್ರಶಂಸೆ
https://www.youtube.com/watch?v=SEF3DHZxyfk
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚಾದ್ಯಾಂತ ಏನೇನೋ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಆದರೂ ಕ್ಯಾನ್ಸರನ್ನು ಪೂರ್ಣ ಪ್ರಮಾಣದಲ್ಲಿ ತಡೆಗಟ್ಟಲು ಅಸಾಧ್ಯವಾಗುತ್ತಿದೆ. ಆದ್ದರಿಂದ ಸಾರ್ವಜನಿಕರಲ್ಲಿ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸಲು ಮಂಗಳೂರಿನ ವಿವಿಧ ಆಸ್ಪತ್ರೆಗಳ ವೈದ್ಯರು ‘ಅರ್ಬುದಾಸುರ ಗರ್ವಭಂಗ’ ಎಂಬ ಯಕ್ಷಗಾನ ಪ್ರದರ್ಶಿಸಿ ನೋಡುಗರು ಹುಬ್ಬೇರುವಂತೆ ಮಾಡಿದರು. ಯಕ್ಷಗಾನ ಮೂಲಕ ಕ್ಯಾನ್ಸರ್ ಜಾಗೃತಿ ಮೂಡಿಸಿದ ವೈದ್ಯರ ಪ್ರಯತ್ನಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಹೌದು, ಯಾವಾಗಲೂ ರೋಗಿಗಳು, ಆಪರೇಷನ್, ಮೆಡಿಸಿನ್ ಎನ್ನುತ್ತಿದ್ದ ವೈದ್ಯರು ಯಕ್ಷಗಾನ ವೇಷ ಧರಿಸಿ ಮಂಗಳೂರಿನ ಜನರಿಗೆ ಅವರೇ ಮೆಚ್ಚುವ ಮಾಧ್ಯಮ ಯಕ್ಷಗಾನದ ಮೂಲಕವೇ ಕ್ಯಾನ್ಸರ್ ರೋಗದ ಜಾಗೃತಿ ಮೂಡಿಸಿದರು. ಹಿರಿಯ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಸತ್ಯಮೂರ್ತಿ ಐತಾಳ್ ಅವರ ಸಹಕಾರದಲ್ಲಿ ಕುಟುಂಬ ವೈದ್ಯ ಡಾ.ಅಣ್ಣಯ್ಯ ಕುಲಾಲ್ ‘ಅರ್ಬುದಾಸುರ ಗರ್ವಭಂಗ’ ಯಕ್ಷಗಾನದ ಕಥಾ ಹಂದರ ಮತ್ತು ಸಾಹಿತ್ಯ ಸಂಯೋಜನೆ ಮಾಡಿದ್ದು, ಹಿರಿಯ ಪ್ರಸಂಗಕರ್ತ ಪೊಳಲಿ ನಿತ್ಯಾನಂದ ಕಾರಂತ ಪದ್ಯ ರಚಿಸಿದರು. ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ವ್ಯಸನಗಳು, ರೋಗ ಪತ್ತೆ ಮಾಡುವ ಮೂಲ, ರೋಗದ ನಿಯಂತ್ರಣಕ್ಕೆ ಅನುಸರಿಸಬೇಕಾದ ಅಂಶಗಳು, ಸಾರ್ವಜನಿಕರಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಇರಬೇಕಾದ ಸಾಮಾನ್ಯ ಜ್ಞಾನದ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ವೈದ್ಯರುಗಳು ಯಕ್ಷಗಾನದ ಮೂಲಕ ಮಾಡಿದರು.
ತಜ್ಞ ವೈದ್ಯರುಗಳಾದ ಡಾ.ಸತ್ಯಮೂರ್ತಿ ಐತಾಳ್, ಡಾ.ಅಣ್ಣಯ್ಯ ಕುಲಾಲ್, ಡಾ.ಇಮ್ರಾನ್ ಪಾಷಾ, ಡಾ.ಜೆರೋಮ್ ಪಿಂಟೊ, ಡಾ.ಅನಿಮೇಶ್ ಜೈನ್, ಡಾ.ಹರೀಶ್ ಮಡಿಮಾಳ, ಡಾ.ಜೆ.ಎನ್.ಭಟ್, ಡಾ.ದಿನೇಶ್ಚಂದ್ರ ಹಂದೆ, ಡಾ.ತುಕಾರಾಮ ಶೆಟ್ಟಿ, ಡಾ.ಕೃಷ್ಣ ನಾಯಕ್, ಡಾ.ಪ್ರಭಾಕರ ಫರಂಗಿಪೇಟೆ, ಡಾ.ರಾಘವೇಂದ್ರ ಉದ್ಯಾವರ ಕಲಾವಿದರಂತೆ ಗೆಜ್ಜೆಕಟ್ಟಿ ಯಕ್ಷಗಾನದ ಮೂಲಕ ಕ್ಯಾನ್ಸರ್ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದರು.



