ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ತನ್ನವರನ್ನು ಕಳೆದುಕೊಂಡು, ಸೂರೂ ಇಲ್ಲದೆ ಅನಾಥರಾಗಿ ಕಳೆದ 6 ತಿಂಗಳಿಂದ ನಗರದ ಮಿನಿ ವಿಧಾನ ಸೌಧ ಕಟ್ಟಡದ ಗೋಡೆ ಬದಿಯಲ್ಲಿ ಆಶ್ರಯ ಪಡೆದಿದ್ದ ಸುಳ್ಯಪದವು ಗ್ರಾಮದ ಹುಕ್ರಪ್ಪ ಮೂಲ್ಯ ಅವರಿಗೆ ಆಶ್ರಯ ನೀಡಲು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು ದೈಗೋಳಿಯ ಸಾಯಿನಿಕೇತನ ಸೇವಾಶ್ರಮ ಸಂಸ್ಥೆಯವರು ಮುಂದೆ ಬಂದಿದ್ದಾರೆ.

ಪುತ್ತೂರು ನಗರದಲ್ಲಿ ಅಲೆದಾಡುತ್ತಿದ್ದ ಸುಮಾರು 70ರ ಹರೆಯದ ಹುಕ್ರಪ್ಪ ಮೂಲ್ಯರ ಅಸಹಾಯಕತೆ ಹಾಗೂ ತೊಂದರೆಯ ಕುರಿತು ಮಾಧ್ಯ ಮಗಳಲ್ಲಿ ವರದಿ ಪ್ರಕಟವಾಗಿತ್ತು. ವರದಿಗಳನ್ನು ಗಮನಿಸಿದ ಸೇವಾಶ್ರಮ ಸಂಸ್ಥೆಯವರು ಅಜ್ಜನ ಸಮಸ್ಯೆಗೆ ಸ್ಪಂದಿಸಿದ್ದಾರೆ.
ಸಾಯಿ ನಿಕೇತನ ಸೇವಾಶ್ರಮ ಸಂಸ್ಥೆಯ ಡಾ| ಶಾರದಾ ಹಾಗೂ ಡಾ| ಉದಯ ಕುಮಾರ್ ಅವರು ಪುತ್ತೂರಿಗೆ ಆಗಮಿಸಿ ಹುಕ್ರಪ್ಪ ಮೂಲ್ಯ ಅವರನ್ನು ಭೇಟಿಯಾಗಿ ಮನವೊಲಿಸಿ ಆಶ್ರಮಕ್ಕೆ ಕರೆದೊಯ್ದಿದ್ದಾರೆ. ಈ ಸಂದರ್ಭ ಸ್ಥಳೀಯ ನಗರ ಪೊಲೀಸ್ ಠಾಣೆಗೆ ಮಾಹಿತಿಯನ್ನೂ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಪ್ರಾಥಮಿಕ ಪ್ರಾಥಮಿಕ ತಪಾಸಣೆಯನ್ನು ನಡೆಸಿ, ಹುಕ್ರಪ್ಪ ಮೂಲ್ಯ ಅವರನ್ನು ಆಶ್ರಮಕ್ಕೆ ವಾಹನದಲ್ಲಿ ಕರೆದೊಯ್ದಿದ್ದಾರೆ.
ದೈಗೋಲಿಯ ಸಾಯಿ ನಿಕೇತನ ಸೇವಾಶ್ರಮದಲ್ಲಿ ಈಗಾಗಲೇ 90 ಮಂದಿ ನಿರ್ಗತಿಕರು, ಮಾನಸಿಕ ತೊಂದರೆಗೊಳಗಾದವರಿಗೆ ಆಶ್ರಯ ನೀಡಲಾಗಿದ್ದು, ಹುಕ್ರಪ್ಪ ಮೂಲ್ಯ ಅವರನ್ನೂ ಸೇರಿಸಿಕೊಳ್ಳಲಾಗದೆ. ಅವರ ಸಮಸ್ಯೆಗಳನ್ನು ಮನಗಂಡು ಧೈರ್ಯ ತುಂಬುವ, ಸೂಕ್ತ ಚಿಕಿತ್ಸೆಗಳನ್ನು ನೀಡುವ ನಿಟ್ಟಿನಲ್ಲಿ ಗಮನ ಹರಿಸಲಾಗುವುದು ಎಂದು ಆಶ್ರಮದ ಸಂಯೋಜಕರು ತಿಳಿಸಿದ್ದಾರೆ.
ಪುತ್ತೂರು ತಾಲ್ಲೂಕಿನ ಪಡುವನ್ನೂರು ಗ್ರಾಮದ ಪದಡ್ಕ ಸಮೀಪದ ಸಣ್ಣಂಗೋಳು ನಿವಾಸಿ ಹುಕ್ರಪ್ಪ ಮೂಲ್ಯ ಅವರ ವ್ಯಥೆಯ ಕಥೆ..
ಪತ್ನಿ ಮತ್ತು ಮೂವರು ಪುತ್ರರನ್ನು ಕಳೆದುಕೊಂಡಿರುವ 63ರ ಹರೆಯದ ಈ ನತದೃಷ್ಟ ಅಜ್ಜನದ್ದು ಈಗ ಏಕಾಂಕಿ ಬದುಕು. ಗ್ರಾಮೀಣ ಪ್ರದೇಶದಲ್ಲಿದ್ದ ಮನೆಮಠವನ್ನು ಬಿಟ್ಟು ಪುತ್ತೂರು ನಗರ ಸೇರಿಕೊಂಡಿದ್ದ ಇವರದ್ದು ಈಗ ಅಲೆಮಾರಿ ಜೀವನವಾಗಿತ್ತು. ಪುತ್ತೂರಿನ ಮಿನಿವಿಧಾನ ಸೌಧದ ಗೋಡೆ ಬದಿಯೇ ಇವರ ವಾಸಸ್ಥಾನವಾಗಿತ್ತು ! ಸಂಸಾರದ ಜತೆಗೆ ಎಲ್ಲವನ್ನೂ ಕಳಕೊಂಡು ತೀರಾ ಶೋಚನೀಯ ಸ್ಥಿತಿಯಲ್ಲಿ ಬದುಕು ಕಳೆಯುತ್ತಿರುವ ಹುಕ್ರಪ್ಪ ಅವರಿಗೆ ನನ್ನವರು ಎಂದು ಹೇಳಿಕೊಳ್ಳಲು ಈಗ ಯಾರೂ ಇಲ್ಲ.
ಪಡುವನ್ನೂರು ಗ್ರಾಮದ ಪದಡ್ಕ ಸಮೀಪದ ಸಣ್ಣಂಗೋಳು ಎಂಬಲ್ಲಿ ತನ್ನ ಪತ್ನಿಯ ಹೆಸರಿನಲ್ಲಿ ೫೦ ಸೆಂಟ್ಸ್ ಜಾಗ ಇದೆ. ನಮ್ಮ ಮನೆಯ ಪಕ್ಕದಲ್ಲೇ ಸಹೋದರನ ಮನೆ ಇದೆ. ನನ್ನ ಮೂವರು ಪುತ್ರರಲ್ಲಿ ಒಬ್ಬ ಎಳೆಯ ಪ್ರಾಯದಲ್ಲೇ ಅಕಾಲಿಕ ಮರಣ ಹೊಂದಿದ. ಇನ್ನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ. ಒಳ್ಳೆಯ ಉದ್ಯೋಗದಲ್ಲಿದ್ದ ಮೊತ್ತೊಬ್ಬ ಅನಾರೋಗ್ಯಕ್ಕೆ ತುತ್ತಾಗಿ ಮರಣ ಹೊಂದಿದ. ಪತ್ನಿ ನಿಧನಳಾದ ಬಳಿಕವಂತೂ ನನ್ನ ಭವಿಷ್ಯವೇ ಹೋಗಿದೆ. ಈಗ ಎಲ್ಲವನ್ನೂ ಬಿಟ್ಟು ಬಂದಿದ್ದೇನೆ. ‘ಎಂಕ್ ಏರ್ಲಾ ಇಜ್ಜೆರ್… ಎನ್ನ ಬದುಕೇ ಹಾಳಾದ್ ಪೋಂಡು’ (ನನಗೆ ಯಾರೂ ಇಲ್ಲ, ನನ್ನ ಬದುಕೇ ಹಾಳಾಗಿ ಹೋಯಿತು) ಎಂದು ಹುಕ್ರಪ್ಪ ಮೂಲ್ಯ ಅವರು ಅಳವತ್ತುಕೊಳ್ಳುತ್ತಿದ್ದಾರೆ.
ಈ ಎಲ್ಲಾ ದುರ್ಘಟನೆಗಳ ಬಳಿಕ ಯಾವುದೂ ಬೇಡ ಎಂದು ಮನೆ ಬಿಟ್ಟು ಮಡಿಕೇರಿ ಕಡೆಗೆ ತೆರಳಿದ್ದ ಹುಕ್ರಪ್ಪ ಅವರು ಮರಳಿ ಪುತ್ತೂರು ನಗರ ಸೇರಿಕೊಂಡಿದ್ದರು. ಕಳೆದ ಆರೇಳು ತಿಂಗಳಿನಿಂದ ಪುತ್ತೂರು ನಗರವೇ ಇವರಿಗೆ ಆಶ್ರಯ ತಾಣವಾಗಿತ್ತು. ಹಗಲು ವೇಳೆ ಬೀದಿ ಸುತ್ತುವ ಮೂಲಕ ಸಮಯ ಕಳೆಯುವ ಇವರು ರಾತ್ರಿ ವೇಳೆ ವಿಧಾನಸೌಧ ಕಟ್ಟಡದ ದಕ್ಷಿಣ ಭಾಗದ ಗೋಡೆಯ ಮೂಲೆಯ ನೆರಳಿನಲ್ಲಿ ಪುಟ್ಟ ದಿಂಬಿಗೆ ತಲೆ ಇಟ್ಟು, ಹಳೆಯ ಬಟ್ಟೆಯೊಂದನ್ನು ಹೊದ್ದುಕೊಂಡು ಮಲಗುತ್ತಿದ್ದರು.
ಪತ್ನಿ ನಿಧನಳಾದ ಬಳಿಕ ಮನೆಯ ಆಸೆ ಬಿಟ್ಟಿದ್ದೇನೆ.ಮನೆಯೂ ಜರಿದು ಬಿದ್ದಿದೆ. ಯಾರೂ ಇಲ್ಲದ ಮೇಲೆ ಮನೆಯಲ್ಲಿ ಏನು ಮಾಡುವುದೆಂದು ಪುತ್ತೂರು ನಗರಕ್ಕೆ ಬಂದು ಬೀದಿ ಸುತ್ತುತ್ತಿದ್ದೆ. ಮಧ್ಯಾಹ್ನ ಮಹಾಲಿಂಗೇಶ್ವರ ದೇವಳದ ಅನ್ನ ಛತ್ರಕ್ಕೆ ಹೋಗಿ ಊಟ ಮಾಡುತ್ತಿದ್ದೆ. ನನ್ನ ಕಷ್ಟ ನೋಡಿ ಯಾರಾದರೂ ನೀಡಿದ ಅಲ್ಪಸ್ವಲ್ಪ ದುಡ್ಡಿನಿಂದ ಬೆಳಿಗ್ಗೆ ಹೋಟೆಲ್ನಲ್ಲಿ ತಿಂಡಿ ತಿನ್ನುತ್ತಿದ್ದೆ. ರಾತ್ರಿ ಊಟದ ಬಗ್ಗೆ ಚಿಂತಿಸುತ್ತಿರಲಿಲ್ಲ. ನೀರು ಕುಡಿದು ಮಲಗುತ್ತಿದ್ದೆ ಎಂದು ಕಣ್ಣೀರಿಡುತ್ತಾರೆ ಹುಕ್ರಪ್ಪ.
ಪುತ್ತೂರಿನ ಮಿನಿವಿಧಾನಸೌಧದ ದಕ್ಷಿಣ ಭಾಗದಲ್ಲಿ ವೃದ್ಧ ಹುಕ್ರಪ್ಪ ಮೂಲ್ಯ ಅವರು ಕಳೆದ ಆರೇಳು ತಿಂಗಳಿನಿಂದ ಆಶ್ರಯ ಪಡೆದಿರುವ ಕುರಿತು ಅವರ ಸಂಬಂಧಿಕರಿಗೆ ಮಾಹಿತಿ ನೀಡಿ ಕರೆದುಕೊಂಡು ಹೋಗುವಂತೆ ತಿಳಿಸಿದ್ದರೂ ಯಾರೂ ಕರೆದುಕೊಂಡು ಹೋಗಿಲ್ಲ. ಜಾತಿ ಸಂಘಟನೆಯವರೂ ಅವರನ್ನು ಸಂರಕ್ಷಿಸುವ ಕೆಲಸ ಮಾಡಿಲ್ಲ.


