ಆಳಂದ: ತಾಲ್ಲೂಕಿನ ಬೆಣ್ಣೆಶಿರೂರು ಗ್ರಾಮದಲ್ಲಿ ಮೂಗಿನ ಸಹಾಯದಿಂದ ಕೊಳಲು ನುಡಿಸುವ ಅಪರೂಪದ ಕಲಾವಿದ ಸಿದ್ದಣ್ಣ ಕುಂಬಾರ. ಕಲಬುರ್ಗಿ ಮತ್ತು ನೆರೆಯ ಸೊಲ್ಲಾಪುರ ಜಿಲ್ಲೆಗಳಲ್ಲಿ ಈ ವಿಶೇಷ ಕಲೆಯಿಂದಾಗಿ ಪರಿಚಿತರಾಗಿದ್ದಾರೆ.
ಸಿದ್ದಣ್ಣಾ ಅವರಿಗೆ 64 ವರ್ಷ ವಯಸ್ಸು. ಹಳ್ಳಿಗಳಿಗೆ ಹೋಗಿ ಅಲ್ಲಿ ಜರುಗುವ ಜಾತ್ರೆ, ಸಾಹಿತ್ಯ, ಸಂಗೀತ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮೂಗಿನಲ್ಲಿ ಕೊಳಲು ನುಡಿಸುವ ಮೂಲಕ ನೆರದ ಜನರಿಗೆ ಸಂಗೀತ ಸುಧೆ ಉಣಬಡಿಸುತ್ತಾರೆ.
ಬಡ ಕುಟುಂಬದಲ್ಲಿ ಬೆಳೆದ ಸಿದ್ದಣ್ಣಾ ಶಾಲೆಗೆ ಹೋಗಿ ಶಿಕ್ಷಣ ಪಡೆದಿಲ್ಲ. ಆದರೆ, ಇಂದು ಕನ್ನಡ, ಮರಾಠಿ ಪತ್ರಿಕೆಗಳನ್ನು ಓದಲು ಕಲಿತಿದ್ದಾರೆ. ಚಿಕ್ಕಂದಿನಲ್ಲಿ ಆಕಾಶವಾಣಿಯಲ್ಲಿ ಬರುತ್ತಿದ್ದ ಸೋಬಾನೆಪದ, ದೊಡ್ಡಾಟ, ಮೊಹರಂ ಪದಗಳು, ಕೋಲಾಟದ ಹಾಡುಗಳನ್ನು ಆಲಿಸುತ್ತ ಅದೇ ರಾಗದಲ್ಲಿ ಹಾಡುವುದನ್ನು ಕಲಿತರು.
ಒಮ್ಮೆ ಕಲಬುರ್ಗಿ ಶರಣಬಸವೇಶ್ವರ ಜಾತ್ರೆಯಲ್ಲಿ ಖರೀದಿಸಿದ್ದ ಕೊಳಲನ್ನು ದನ ಕಾಯಲು ಹೋಗುತ್ತಿದ್ದಾಗ ತೆಗೆದುಕೊಂಡು ಹೋಗುತ್ತಿದ್ದರು. ಅಲ್ಲಿ ಮೂಗಿನ ಸಹಾಯದಲ್ಲಿ ಹಾಡುವುದನ್ನು ಆರಂಭಿಸಿದರು. ಗ್ರಾಮದ ಜನರು ಅವರ ಪ್ರತಿಭೆಯನ್ನು ಕಂಡು ಬೆನ್ನು ತಟ್ಟಿದರು.
‘ಬಾಯಿಯಲ್ಲಿ ಕೊಳಲು ನುಡಿಸುವರು ಬಹಳ ಜನ ಇದ್ದಾರೆ. ನನಗೆ ಮೂಗಿನಲ್ಲಿ ಕೊಳಲು ನುಡಿಸುವ ಮೂಲಕ ಸಾಧನೆ ಮಾಡಬೇಕು ಎಂಬ ಆಸೆ ಹುಟ್ಟಿತು. ಆರಂಭದಲ್ಲಿ ಕಷ್ಟವಾದರೂ ಪ್ರಯತ್ನ ಬಿಡಲಿಲ್ಲ. ಸಾವಿರಕ್ಕೂ ಹೆಚ್ಚು ಪದಗಳನ್ನು ನಾಸಿಕದ ಮೂಲಕ ನುಡಿಸುತ್ತೇನೆ’ ಎಚ್ಚುತ್ತಾರೆ ಸಿದ್ದಣ್ಣ ಕುಂಬಾರ.
ಭಜನೆ, ಜಾತ್ರೆ, ಧಾರ್ಮಿಕ ಸಭೆ ಮತ್ತು ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಉತ್ಸವಗಳಲ್ಲಿ ಕೊಳಲು ಗಾಯನಕ್ಕೆ ಅವಕಾಶ ಸಿಗುತ್ತಿತ್ತು. ಬೆಣ್ಣೆಶಿರೂರು ಗ್ರಾಮದಿಂದ ಜಿಡಗಾ ಮಠದ ಕಾರ್ಯಕ್ರಮಕ್ಕೆ ಕಾಲ್ನಡಿಗೆಯಲ್ಲಿ ಬಂದು ಕೊಳಲು ನುಡಿಸಿದ್ದು, ಮಹಾರಾಷ್ಟ್ರದ ವಳ ಸಂಗ ಬಸ್ ನಿಲ್ದಾಣದಲ್ಲಿ ರಾತ್ರಿ ಮಲಗಿ ಮರುದಿನ ಸೊಲ್ಲಾಪುರ ಕಾರ್ಯಕ್ರಮಕ್ಕೆ ಹೋಗಿದ್ದು ಎಂದೂ ಮರೆಯದ ನೆನಪು. ನನ್ನ ಕೊಳಲು ಕಿಸೆಯಲ್ಲಿ ಇದ್ದರೆ ನಾನು ಎಂದಿಗೂ ಉಪವಾಸ ಸಾಯುವುದಿಲ್ಲ ಎಂಬುದು ಸಿದ್ದಣ್ಣಾ ಕುಂಬಾರರ ಆತ್ಮವಿಶ್ವಾಸ.
ಉಪಜೀವನಕ್ಕಾಗಿ ಗ್ರಾಮದಲ್ಲಿ ರೈತರ ನೀರಿನ ಮೋಟರ್ ದುರಸ್ತಿ ಮಾಡುವ ಕಾಯಕ ಮಾಡುತ್ತಾರೆ. ಸರ್ಕಾರದಿಂದ ಮಾಸಾಶನ ಸೌಲಭ್ಯ ಸಿಗುತ್ತಿದೆ. ಆದರೆ, ನಮ್ಮಂತಹ ವಿಶೇಷ ಕಲೆಯುಳ್ಳ ಕಲಾವಿದರನ್ನು ರಾಜ್ಯೋತ್ಸವ ಸೇರಿ ಇತರ ಪ್ರಶಸ್ತಿಗೆ ಪರಿಗಣಿಸುವುದಿಲ್ಲ ಎಂಬ ಬೇಸರ ಅವರದ್ದು.
(ಕೃಪೆ: ಪ್ರಜಾವಾಣಿ)