ಬಂಟ್ವಾಳ (ಕುಲಾಲ್ ವರ್ಲ್ಡ್ ಡಾಟ್ ಕಾಮ್): ಪ್ರತಿ ಮಗುವಿನಲ್ಲೂ ವಿಶೇಷವಾದ ಪ್ರತಿಭೆಗಳಿರುತ್ತವೆ. ಅದನ್ನು ಗುರುತಿಸುವ ಕಣ್ಣುಗಳು ಇದ್ದಾಗ ಮಾತ್ರ ಗೋಚರಿಸುತ್ತದೆ. ಶಾಲಾ ಪಠ್ಯಗಳಿಗೆ ಸೀಮಿತವಾಗಿ ಮಕ್ಕಳನ್ನು ಶೈಕ್ಷಣಿಕ ಮಾನದಂಡದಲ್ಲಿ ಅಳೆಯುವುದು ಸಾಮಾನ್ಯ. ಅಂಕ ಮತ್ತು ಗ್ರೇಡುಗಳಿಗೆ ಒತ್ತುಕೊಟ್ಟು ಮಕ್ಕಳನ್ನು ಬೆಳೆಸುವ ಪರಂಪರೆಯನ್ನು ಹೆಚ್ಚಿನ ಎಲ್ಲಾ ಶಾಲೆಗಳಲ್ಲೂ ಕಾಣುತ್ತೇವೆ. ಇವೆಲ್ಲವುದರ ನಡುವೆ ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮೀಣ ಭಾಗದಲ್ಲಿ ಅಪ್ಪಟ ಚಿತ್ರಕಲಾ ಪ್ರತಿಭೆಯೊಂದು ಯಾವುದೇ ಸದ್ದಿಲ್ಲದೆ ಬೆಳೆಯುತ್ತಿದೆ. ಚಿತ್ರಕಲಾ ಗುರುಗಳನ್ನು ಹೊಂದದೆ ಶಾಲೆಯ ಆಸಕ್ತ ಶಿಕ್ಷಕರ ಪ್ರೋತ್ಸಾಹದಿಂದ ತನ್ನ ಚಿತ್ರಕಲಾ ಪ್ರತಿಭೆಯನ್ನು ಹೊರಸೂಸುತ್ತಿರುವ ಆ ಬಾಲಕನೇ ಕಿಶನ್ ಕುಲಾಲ್ ಕೈರಂಗಳ.
ಕಿಶನ್ ಹುಟ್ಟಿನಿಂದಲೇ ಪ್ರತಿಭಾವಂತ ಹುಡುಗ. ಬಣ್ಣದಲ್ಲಿ ಏನಾದರೂ ಗೀಚುತ್ತಿದ್ದ ಈತನಿಗೆ ತಂದೆ ಕಮಲಾಕ್ಷ ಎ ಮತ್ತು ತಾಯಿ ವಿಶಾಲಕ್ಷಿ ಪಿ ಇವರು ತಮ್ಮ ಕೈಲಾದ ಪ್ರೋತ್ಸಾಹ ನೀಡುತ್ತಿದ್ದರು. ವಿಶೇಷವಾದ ಸೌಲಭ್ಯಗಳಿಲ್ಲದ ಗ್ರಾಮೀಣ ಭಾಗದಲ್ಲಿ ಚಿತ್ರಕಲಾಭ್ಯಾಸಕ್ಕೆ ಅವಕಾಶಗಳ ಕೊರತೆ ಇದೆ. ಕಾರ್ಯಾಗಾರಗಳ ಅಥವಾ ಯಾವುದೇ ಚಿತ್ರಕಲಾ ತರಬೇತಿಗಳಿಲ್ಲದಿದ್ದರೂ ಪೋಷಕರು ತಮ್ಮ ಮಗನ ಚಿತ್ರಕಲಾ ಪ್ರತಿಭೆಗೆ ಯಾವುದೇ ತೊಡಕಾಗದ ರೀತಿಯಲ್ಲಿ ಸಹಕಾರ ನೀಡುತ್ತಿದ್ದರು.
ಪ್ರಸ್ತುತ ಕಿಶನ್ ಬಂಟ್ವಾಳ ತಾಲೂಕಿನ ಕೈರಂಗಳ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ. ಚಿತ್ರಕಲೆಯಲ್ಲಿ ಇವರ ವಿಶೇಷ ಆಸಕ್ತಿಯನ್ನು ಕಂಡುಕೊಂಡ ಶಾಲಾ ಶಿಕ್ಷಕ ವೃಂದದವರು ವಿಶೇಷ ಪ್ರೋತ್ಸಾಹ ನೀಡಲಾರಂಭಿಸಿದರು. ತನ್ನ ಎಂಟನೇ ತರಗತಿಯಿಂದ ವ್ಯಕ್ತಿಗಳ ಚಿತ್ರಗಳನ್ನು ಬಿಡಿಸುವುದರಲ್ಲಿ ಆಸಕ್ತಿಯನ್ನು ತಳೆದು ಅಭ್ಯಾಸವನ್ನು ಆರಂಭಿಸಿದರು. ಯೂಟ್ಯೂಬ್ ಚಾನಲ್ ಗಳಲ್ಲಿ ಚಿತ್ರಗಳನ್ನು ರಚಿಸುವ ವಿಧಾನ ಗಳನ್ನು ಸೂಕ್ಷ್ಮವಾಗಿ ನೋಡಿಕೊಂಡು ತಾಂತ್ರಿಕತೆಯನ್ನು ಕರಗತ ಮಾಡಿಕೊಂಡರು.
ಶಾರದ ವಿದ್ಯಾಗಣಪತಿಯ ಪ್ರೌಢಶಾಲೆಯ ಆಡಳಿತ ಮಂಡಳಿ ಸಂಚಾಲಕರ ಪ್ರೋತ್ಸಾಹದ ನುಡಿಗಳು ಇನ್ನಷ್ಟು ತನ್ನ ಪ್ರತಿಭೆಯನ್ನು ಬೆಳಗಿಸಲು ಕಾರಣವಾಯಿತು. ಯಾವುದೇ ಸ್ಪರ್ಧೆಯ ಹಿಂದೆ ಬೀಳದೆ ತನ್ನಷ್ಟಕ್ಕೆ ತಾನು ಚಿತ್ರಗಳನ್ನು ರಚಿಸುತ್ತಾ ಕೌಶಲ್ಯವನ್ನು ಅಭಿವೃದ್ಧಿ ಪಡಿಸಿಕೊಂಡರು. ಪೆನ್ಸಿಲ್ ಶೇಡಿಂಗ್ , ಕಲರ್ ಪೆನ್ಸಿಲ್ ಬಳಸಿಕೊಂಡು ವ್ಯಕ್ತಿಗಳ ಚಿತ್ರಣವನ್ನು ಅದ್ಭುತವಾಗಿ ನಿರ್ಮಿಸುವಲ್ಲಿ ಅಭ್ಯಾಸದ ಫಲ ಬಹಳಷ್ಟಿದೆ. ನಿರಂತರ ಅಭ್ಯಾಸ , ಏಕಾಗ್ರತೆ , ತಾಳ್ಮೆ…. ಇವೆಲ್ಲವೂ ಕಿಶನ್ ಅವರ ಕಲಾಕೃತಿಗೆ ಗುಣಮಟ್ಟವನ್ನು ತಂದುಕೊಟ್ಟಿದೆ.
ಮದರ್ ತೆರೇಸಾ , ಸಾಯಿಬಾಬಾ , ವಿರಾಟ್ ಕೊಹ್ಲಿ , ಹೀಗೆ ಹಲವು ಮಹನೀಯರ ಭಾವಚಿತ್ರಗಳನ್ನು ತನ್ನ ಕುಂಚದಲ್ಲಿ ಸೆರೆಹಿಡಿದಿರುವ ಕಲಾ ನೈಪುಣ್ಯತೆ ಎಲ್ಲರನ್ನೂ ಮಂತ್ರಮುಗ್ಧಗೊಳಿಸುತ್ತದೆ. ಛಾಯಾಚಿತ್ರಗಳನ್ನು ಹೋಲಿಕೆ ಮಾಡುವ ಇವರ ಚಿತ್ರಗಳು ಭಾವನೆಗಳನ್ನು ಹಿಡಿದಿಡುವಲ್ಲಿ ಸಫಲವಾಗಿದೆ. ಯಾವುದೇ ಗುರುಗಳ ಮಾರ್ಗದರ್ಶನವಿಲ್ಲದೆ ತನ್ನತನವನ್ನು ಬೆಳೆಸುತ್ತಾ ಚಿತ್ರಕಲಾ ಪ್ರಾವೀಣ್ಯತೆಯನ್ನು ಪಡೆದಿರುವ ಕಿಶನ್ ನ ಸಾಧನೆ ಮೆಚ್ಚುವಂತಹದ್ದು.
ಯಾವುದೇ ಸ್ಪರ್ಧೆಗಳಿಗೆ ಭಾಗವಹಿಸುವ ಗೋಜಿಗೆ ಹೋಗದೆ ತನ್ನಲ್ಲೇ ಕೌಶಲ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ವಿಶೇಷವಾದ ಪ್ರಯತ್ನವನ್ನು ಮಾಡುತ್ತಿದ್ದಾರೆ. ಸ್ಪರ್ಧೆಗಳು ಬಂದರೂ ಸ್ಪರ್ಧೆಗಳಲ್ಲಿ ವಿಶ್ವಾಸವಿಡದೆ ತನ್ನ ಕಲಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಾ ಮುಂದಡಿಯಿಡುತ್ತಿದ್ದಾರೆ. ಇತ್ತೀಚೆಗೆ ಕಲ್ಕೂರ ಪ್ರತಿಷ್ಠಾನದ ವತಿಯಿಂದ ನಡೆದ ಶಿವರಾಮ ಕಾರಂತರ ಭಾವಚಿತ್ರ ರಚನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ದೊರೆತಿರುವುದು ತನ್ನ ಸಾಮರ್ಥ್ಯವನ್ನು ಗಟ್ಟಿಗೊಳಿಸಿರುವುದರ ಸಂಕೇತವಾಗಿದೆ. ತನ್ನ ಶಾಲಾ ಚಟುವಟಿಕೆಯಲ್ಲಿ ವಿಶೇಷ ಆಸಕ್ತಿಯನ್ನು ತೋರುತ್ತಿರುವ ಕಿಶನ್ ಕಲಿಕೆಯಲ್ಲಿಯೂ ಮುಂದಿದ್ದಾರೆ. ಈ ಶೈಕ್ಷಣಿಕ ವರ್ಷದ 10ನೇ ತರಗತಿಯಲ್ಲಿ 600 ಕ್ಕಿಂತ ಮಿಕ್ಕಿ ಅಂಕ ಪಡೆದುಕೊಳ್ಳುವ ಸಂಕಲ್ಪದೊಂದಿಗೆ ಪಠ್ಯೇತರ ಚಟುವಟಿಕೆಗಳೂ ಪಠ್ಯಕ್ಕೆ ಪೂರಕವಾಗಿರುತ್ತವೆಂಬುವುದನ್ನು ಸಾಬೀತುಪಡಿಸಲು ನಿರ್ಧರಿಸಿದ್ದಾರೆ.
ಶಾಲೆಗಳಲ್ಲಿ ಅತ್ಯುತ್ತಮವಾಗಿ ಆಟವಾಡುವ, ಚಿತ್ರ ಮಾಡುವ, ಸಂಗೀತ ಹಾಡುವ , ನಾಟಕ , ನೃತ್ಯ ಮಾಡಬಲ್ಲ , ಸಾಹಿತ್ಯ ರಚನೆ ಮಾಡಬಲ್ಲ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಹಿಂಜರಿಯುವ ಅನೇಕರನ್ನು ಕಾಣುತ್ತೇವೆ. ಜೀವನಕ್ಕೆ ದಾರಿ ಆಗುವ , ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವ ಶಿಕ್ಷಣ ಪಠ್ಯದ ಜೊತೆ ಸೇರಿಕೊಂಡಾಗ…. ಪ್ರಸ್ತುತ ಶಾಲಾ ಶಿಕ್ಷಣ ಇನ್ನೂ ಪರಿಪೂರ್ಣವಾಗಬಹುದು. ಕಿಶನ್ ನಂತಹ ಅನೇಕ ಪ್ರತಿಭೆಗಳು ಪ್ರತಿ ಶಾಲೆಗಳಲ್ಲೂ ಉದಯಿಸಬಹುದು.
ಚಿತ್ರ-ಸುದ್ದಿ ಕೃಪೆ : makkalajagali.com