ಕರಾವಳಿಯ ರಂಗಕಲೆಯಿಂದ ಬೆಳಕಿಗೆ ಬಂದ ಕಲಾವಿದರಲ್ಲಿ ಬಹುಮುಖ ಪ್ರತಿಭೆಯ ಅರುಣ್ ಚಂದ್ರ ಕುಲಾಲ್ ಕೂಡ ಒಬ್ಬರು. ಬಂಟ್ವಾಳ ತಾಲೂಕಿನ ರಾಮ ಕುಲಾಲ್ ಮತ್ತು ಚಂದ್ರಿಕಾ ದಂಪತಿಯ ಪುತ್ರನಾದ ಇವರು ರಂಗಕಲೆಯಲ್ಲಿ ಪ್ರತಿಭಾವಂತರು. ಯಾವುದೇ ಪಾತ್ರಕ್ಕೂ ಸೈ ಎನಿಸುವ ಅದ್ಭುತ ನಟನಾ ಚಾತುರ್ಯ ಇವರದು.
ಬಾಲ್ಯದಲ್ಲೇ ರಂಗಭೂಮಿಯ ಬಣ್ಣದ ಪರಂಪರೆಯಲ್ಲಿ ಇವರಿಗೆ ಹೆಚ್ಚಿನ ತುಡಿತ. ಜತೆಗೆ ಹಾಡುಗಾರಿಕೆ ಇವರ ನೆಚ್ಚಿನ ಕ್ಷೇತ್ರ. ಹಾಗೆಂದು ಇವರು ಸಂಗೀತವನ್ನು ಶಾಸ್ರೀಯವಾಗಿ ಯಾವುದೇ ಗುರುಗಳ ಗರಡಿಯಲ್ಲಿ ಕಲಿತವರಲ್ಲ. ಶಾಲಾ ಕಾಲೇಜು ಸೇರಿದಂತೆ ಅನೇಕ ವೇದಿಕೆಗಳಲ್ಲಿ ಕಂಠದಾನ ಮಾಡಿರುವ ಇವರು ಸ್ವತಃ ತಾವೇ ರಚಿಸಿದ ಕೆಲವಾರು ನಾಟಕಗಳಲ್ಲಿ ಗಾನಲಹರಿ ಹರಿಸಿದ್ದಾರೆ.
ಸ್ವಂತ ಆಸಕ್ತಿಯಿಂದಲೇ ರಂಗಕಲೆಯಲ್ಲಿ ಹೆಜ್ಜೆ ಇಟ್ಟು ಮುಂದೆ ಬಂದ ಇವರಿಗೆ ಕಲಾಮಾತೆ ಸರಸ್ವತಿ 10ನೇ ವಯಸ್ಸಿನಲ್ಲೇ ಒಲಿದುಕೊಂಡಳು. ತಂದೆಯೂ ರಂಗಕಲೆಯಲ್ಲಿ ಪಳಗಿದವರಾದ್ದರಿಂದ ಅವರ ಕಲಾಭಿರುಚಿ ರಂಗಕಲೆಯ ಬೆಳವಣಿಗೆಗೆ ಸ್ಫೂತರ್ಿಯಾಯಿತು. ಮಂಗಳೂರಿನ ದೇವದಾಸ್ ಕಾಪಿಕಾಡ್ ಅವರ `ಚಾಪರ್ಕ’ ತಂಡದಲ್ಲಿ ತಂದೆ ಹಿರಿಯ ಕಲಾವಿದರಾಗಿ ನಟಿಸುತ್ತಿದ್ದರು. ಆ ಮೂಲಕ ಅರುಣ್ ಅವರಿಗೆ ನಾಟಕರಂಗದಲ್ಲಿ ಮತ್ತಷ್ಟು ಅವಕಾಶಗಳು ದೊರೆತವು.
ಹಾಸ್ಯ ಪಾತ್ರಗಳಲ್ಲಿ ಮಿಂಚಿ ಅನೇಕ ಕಲಾಭಿಮಾನಿಗಳಿಂದ ಪ್ರಶಂಸೆ ಪಡೆದಿರುವ ಇವರು ಮೊದಲು ಬಣ್ಣ ಹಚ್ಚಿದ್ದು ಕೆ ಎನ್ ಟೇಲರ್ ನಿದರ್ೇಶನದ `ಕಂಡನಿ ಬೊಡೆದಿ’ ಎಂಬ ತುಳು ನಾಟಕಕ್ಕೆ. 100ಕ್ಕೂ ಮಿಕ್ಕಿ ನಾಟಕಗಳಲ್ಲಿ ನಟಿಸಿರುವ ಇವರು `ಸುದ್ದಿ ಮಲ್ಪೊಡ್ಚಿ’ `ಅಪ್ಪು’ `ಫ್ರೆಂಡ್ಸ್’ ಸೇರಿದಂತೆ ತುಳು ಮತ್ತು ಕನ್ನಡ ಭಾಷೆಯ ಅನೇಕ ನಾಟಕಗಳಲ್ಲಿ ಮಿಂಚಿದ್ದಾರೆ. ಗುರುಗಳಾದ ದೇವದಾಸ್ ಕಾಪಿಕಾಡ್ ಅವರ ನೇತೃತ್ವದಿಂದ ರಂಗಕಲೆಯ ಸಾಧನೆಯ ಹಾದಿ ಮತ್ತಷ್ಟು ಉಜ್ವಲಗೊಂಡಿತು.
ಅರುಣ್ಚಂದ್ರ ಅವರು ನಟನೆಯ ಜೊತೆ 25ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ. `ಬಂಗಾರ್ ಬಾಬು’ `ನನ ಒಂತೆ ದಿನ’ `ಬದ್ಕೆರೆ ಕಲ್ಪಿ’ ಹೀಗೆ ಅನೇಕ ನಾಟಕಗಳು ಇವರಿಗೆ ಯಶಸ್ಸನ್ನು ತಂದುಕೊಟ್ಟಿದೆ.
ರಂಗಭೂಮಿಯ ಬೇರೆ ಬೇರೆ ಕಲಾ ಕೇಂದ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಅರುಣ್ 2 ಸಾವಿರಕ್ಕೂ ಮಿಕ್ಕಿ ಪ್ರದರ್ಶನವನ್ನು ನೀಡಿದ್ದಾರೆ. ಸ್ವದೇಶದಲ್ಲಿ ಮಾತ್ರವಲ್ಲದೇ ಕುವೈಟ್, ದುಬೈಯಲ್ಲೂ ಕಲೆಯ ಕಂಪನ್ನು ಹರಿಸಿರುವ ಇವರು ಕನರ್ಾಟಕದ ಉದ್ದಗಲಕ್ಕೂ ಸಂಚರಿಸಿ ಕಲಾಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಕಿರುತೆರೆ ಮತ್ತು ಬೆಳ್ಳಿತೆರೆಗಳಲ್ಲಿ ನಟಿಸಿರುವುದು ಇವರ ಮತ್ತೊಂದು ಹೆಗ್ಗಳಿಕೆ. `ಎಕ್ಕ ಸಕ’ `ಐಸ್ಕ್ರೀಂ’ `ಮಾರ್ನೆಮಿ’ ಮೊದಲಾದ ತುಳು ಸಿನಿಮಾಗಳಲ್ಲಿ ನಟಿಸಿದ್ದು, `ಗೊತ್ತಾನಗ ಪೊರ್ತಾ೦ಡ್’ ಮುಂತಾದ ಧಾರವಾಹಿಗಳಲ್ಲೂ ನಟಿಸಿದ್ದಾರೆ.
ರಂಗಭೂಮಿಯಲ್ಲಿ 25 ವರ್ಷಕ್ಕಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಇವರು ತುಳು ಅಕಾಡೆಮಿಯ ಉತ್ತಮ ಹಾಸ್ಯನಟ ಎಂಬ ಬಿರುದಿನ ಜೊತೆ ಅನೇಕ ಪುರಸ್ಕಾರಗಳನ್ನು ಪಡೆದಿದ್ದಾರೆ. ನಮ್ಮ ಟೀವಿಯಲ್ಲಿ ಪ್ರಸಾರವಾದ `ಬಲೇ ತೆಲಿಪಾಲೆ’ ರಿಯಾಲಿಟಿ ಶೋನಲ್ಲಿ ಫೈನಲ್ ಹಂತ ತಲುಪಿ, ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
* ಸುಪ್ರೀತಾ ಸಾಲ್ಯಾನ್, ನೀರುಮಾರ್ಗ