ಅದು 2011ನೇ ಇಸವಿ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ರಾಜ್ಯ ದೇಹದಾರ್ಢ್ಯ ಸ್ಪರ್ಧೆ ನಡೆಯುತ್ತಿತ್ತು. ಅಲ್ಲಿ ಮೋಹನ್ ಹೆಬ್ಬಳ್ಳಿ ಎಂಬ ಯುವಕ ಕಟ್ಟುಮಸ್ತಾದ ದೇಹದಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದ. ಸ್ನೇಹಿತರೊಟ್ಟಿಗೆ ಸ್ಪರ್ಧೆ ನೋಡಲು ಹೋಗಿದ್ದ ಹಮಾಲಿ ಹೈದನಿಗೂ ಹಾಗೇ ದೇಹವನ್ನು ಹುರಿಗೊಳಿಸುವ ಹಂಬಲವಾಯ್ತು… ಆ ನಿಟ್ಟಿನತ್ತ ಯುವಕ ಕಾರ್ಯೋನ್ಮುಖನಾದ…
–ಹೀಗೆ ತನ್ನ ದೇಹವನ್ನೇ ತನ್ನ ಸಾಧನೆಗೆ ಮೆಟ್ಟಿಲು ಮಾಡಿಕೊಳ್ಳಲು ಯೋಚಿಸಿದ ಯುವಕನ ಹೆಸರು ಮಂಜುನಾಥ ಚಕ್ರಸಾಲಿ. ಹೊಟ್ಟೆ ತುಂಬ ಊಟ ಸಿಗುವುದಿಲ್ಲ, ಕೂಲಿ ಕೆಲಸ ಮಾಡಿ ಕುಟುಂಬ ನಿರ್ವಹಿಸುತ್ತಿರುವ ಮಂಜುನಾಥ ತನ್ನ ಹೆಬ್ಬಾಸೆಯನ್ನು ಬಿಡದೇ ದೇಹವನ್ನು ಹುರಿಗೊಳಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ದೇಹದಾರ್ಢ್ಯ ಸ್ಪರ್ಧೆಯ ಎತ್ತರ ವಿಭಾಗದ ಗ್ರೂಪ್–1 ಮೂರನೇ ಸ್ಥಾನ ಪಡೆದಿದ್ದಾರೆ. ಅಂತೆಯೇ 55 ಕೆ.ಜಿ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಸದ್ಯ ರಾಷ್ಟ್ರಮಟ್ಟದ ಸ್ಪರ್ಧೆಗೆ ಛಲದಿಂದ ಅಣಿಯಾಗುತ್ತಿರುವ ಮಂಜುನಾಥ ಅವರಿಗೆ ‘ಮಿಸ್ಟರ್ ಇಂಡಿಯಾ’ ಆಗುವ ಕನಸು.
ಕೂಲಿಯೇ ಕೆಲಸ…
‘ಬದುಕು ನಡೆಸುವುದು ಕಷ್ಟವಾದ ಸಮಯದಲ್ಲಿ ದೊಡ್ಡ ಆಸೆ ಬೇಕೆ? ಎಂದು ಒಮ್ಮೊಮ್ಮೆ ಅನಿಸುತ್ತಿತ್ತು. ಆದರೆ, ಏನಾದರೂ ಸಾಧಿಸುವ ಛಲ ಮಾತ್ರ ನನ್ನನ್ನು ನಿದ್ರಿಸಲು ಬಿಡಲಿಲ್ಲ, ಎಷ್ಟೇ ಕಷ್ಟವಾದರೂ ಸರಿ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಲೇಬೇಕು ಎಂದು ನಿರ್ಧರಿಸಿದೆ’ ಎಂದು ಆಶಾಭಾವದಿಂದ ಹೇಳುತ್ತಾರೆ ಮಂಜುನಾಥ ಚಕ್ರಸಾಲಿ. ದಿನ ನಿತ್ಯ ಹಮಾಲಿ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಅವರಿಗೆ ಆ ಕೆಲಸದಿಂದ ಕಡಿಮೆ ಹಣ ಬರುತ್ತಿದ್ದರಿಂದ, ಮರಳು ಖಾಲಿ ಮಾಡುವ ಕೆಲಸ ಮಾಡತೊಡಗಿದರು.
ಇದರಿಂದ ದಿನ ನಿತ್ಯ ₹200 ರಿಂದ ₹300 ಸಂಪಾದನೆ ಮಾಡುತ್ತಿರುವ ಮಂಜುನಾಥ ಅವರು ಅದರಲ್ಲೇ ಅಲ್ಪ ಹಣ ಉಳಿಸಿ, ದೈಹಿಕ ಕಸರತ್ತು ನಡೆಸಲು ಬಳಸುತ್ತಿದ್ದಾರೆ. ಹಳೇ ಹುಬ್ಬಳ್ಳಿಯಲ್ಲಿರುವ ಇಂಟರ್ನ್ಯಾಷನಲ್ ಜಿಮ್ ಒಂದನ್ನು ಮೋಹನ್ ಹೆಬ್ಬಳ್ಳಿ ನಡೆಸುತ್ತಿದ್ದರು. ಮೋಹನ್ ಅವರನ್ನು ಭೇಟಿಯಾದ ಮಂಜುನಾಥ ತಮ್ಮ ಆಸೆಯನ್ನು ಹೇಳಿಕೊಂಡರು. ಮಂಜುನಾಥ ಅವರ ಆಸಕ್ತಿಯನ್ನು ಕಂಡು ಮೋಹನ್ ಅವರು ತಮ್ಮದೇ ಜಿಮ್ನಲ್ಲಿ ಅವರಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ. ಅಂದಿನಿಂದ ಮಂಜುನಾಥ ತರಬೇತಿ ಜತೆಗೆ ಮೋಹನ್ ಅವರಿಗೆ ಸಹಾಯಕರಾಗಿ ಜಿಮ್ಗೆ ಬರುವವರಿಗೆ ತರಬೇತಿ ನೀಡುತ್ತಿದ್ದಾರೆ.
55 ಕೆ.ಜಿ ವಿಭಾಗದಲ್ಲಿ ಸ್ಪರ್ಧೆ: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತಿನಂತೆ ಮಂಜುನಾಥ ಚಕ್ರಸಾಲಿ ಅವರ ದೇಹಾಕಾರ ನೋಡಿದ ಮೋಹನ್ ಅವರು 55ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸುವಂತೆ ಸಲಹೆ ನೀಡಿದರು. ಮತ್ತು ಸ್ವತಃ ಮೋಹನ್ ಅವರು 55ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಮಂಜುನಾಥ ಅವರ ಪರಿಶ್ರಮದ ಫಲವಾಗಿ 2013 ಹುಬ್ಬಳ್ಳಿಯಲ್ಲಿ ನಡೆದ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮೊಟ್ಟ ಮೊದಲ ಬಾರಿಗೆ ಭಾಗವಹಿಸಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ವಿಜಯದ ಯಾತ್ರೆ ಆರಂಭಿಸಿದರು.
ವಿಭಿನ್ನ ವರ್ಕ್ಔಟ್…
ಪ್ರತಿದಿನ ಮಂಜುನಾಥ ಅವರು ಬೆಳಿಗ್ಗೆ 5ಗಂಟೆಗೆ ಮರಳು ತುಂಬುವ ಕೆಲಸಕ್ಕೆ ಹೋಗುತ್ತಾರೆ. ಮಧ್ಯಾಹ್ನ 12 ರಿಂದ 2 ಗಂಟೆವರೆಗೆ ಜಿಮ್ನಲ್ಲಿ ವರ್ಕ್ಔಟ್ ಮಾಡುತ್ತಾರೆ. ಸಂಜೆ 6 ರಿಂದ 8 ಗಂಟೆವರೆಗೆ ಅಭ್ಯಾಸ ಮಾಡುತ್ತಾರೆ. ಅಂದರೆ ಒಂದು ದಿನಕ್ಕೆ ಕೆಲಸದ ಜತೆಗೆ 4 ಗಂಟೆಗಳ ಕಾಲ ಜಿಮ್ನಲ್ಲಿ ವರ್ಕ್ಔಟ್ ಮಾಡುತ್ತಾರೆ. ‘ಮರಳು ತುಂಬುವ ಕೆಲಸವು ಸಹ ನನ್ನ ದೇಹಕ್ಕೆ ಒಂದು ರೀತಿಯ ವ್ಯಾಯಾಮ ನೀಡುತ್ತದೆ’ ಎನ್ನುತ್ತಾರೆ ಮಂಜುನಾಥ.
ಪ್ರತಿದಿನ 40 ಮೊಟ್ಟೆ, 750 ಗ್ರಾಂ ಚಿಕನ್, 30 ಚಪಾತಿ, 5 ಗ್ಲಾಸ್ ಮೂಸಂಬಿ ಜ್ಯೂಸ್ ಬೇಕು. ಇದಕ್ಕೆ ₹400 ರಿಂದ ₹500ರವರೆಗೆ ಖರ್ಚು ಆಗುತ್ತದೆ. ಅವರ ದುಡಿಮೆಯೇ ₹300 ಇರುವಾಗ ಅವರಿಗೆ ಅಷ್ಟೊಂದು ಹಣ ಖರ್ಚು ಮಾಡುವುದು ಕಷ್ಟವಾಗಿದೆ. ಇವರ ಕಷ್ಟವನ್ನು ಅರಿತ ನಗರದ ಪ್ರವೀಣ ಪಡೇಸೂರ ಎಂಬುವವರು ಪ್ರತಿ ತಿಂಗಳೂ ಇವರಿಗೆ ಆರ್ಥಿಕವಾಗಿ ಸಹಾಯ ಮಾಡಿ ಪ್ರೋತ್ಸಾಹ ನೀಡುತ್ತಿದ್ದಾರೆ.
ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪ್ರಥಮ, ಬೆಳಗಾವಿ ಜಿಲ್ಲೆ ಸವದತ್ತಿಯಲ್ಲಿ ನಡೆದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪ್ರಥಮ, ಕಲಬುರ್ಗಿಯಲ್ಲಿ ನಡೆದ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ, ಮುಧೋಳದಲ್ಲಿ ನಡೆದ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ, ಹುಬ್ಬಳ್ಳಿಯಲ್ಲಿ ನಡೆದ ವಜ್ರದೇಹಿ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ, ದಕ್ಷಿಣ ಭಾರತ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಎರಡನೇ ಸ್ಥಾನ, ಅಂತರರಾಜ್ಯ ಕರ್ನಾಟಕ–ಗೋವಾ ರಾಜ್ಯಗಳ ದೇಹದಾರ್ಢ್ಯ ಸ್ಪರ್ಧೆ –2016ರಲ್ಲಿ ಮೂರನೇ ಸ್ಥಾನ, 2016ರ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ ಎತ್ತರ ವಿಭಾಗ ಗ್ರೂಪ್–1ರಲ್ಲಿ ಮೂರನೇ ಹಾಗೂ 55 ಕೆಜಿ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.
ಹುಬ್ಬಳ್ಳಿಯ ಅರವಿಂದ ನಗರದಲ್ಲಿ ವಾಸವಾಗಿರುವ ಬಸವರಾಜ ಹಾಗೂ ಗೃಹಿಣಿ ಲೀಲಾವತಿ ದಂಪತಿಯ ಮಗ ಮಂಜುನಾಥ ಇವರಿಗೆ ಒಬ್ಬ ತಂಗಿ ಇದ್ದಾರೆ. ಶಾಲೆಯ ಮೆಟ್ಟಿಲು ಹತ್ತಿದ ಅವರಿಗೆ ಬಡತನದಿಂದ 7ನೇ ತರಗತಿಯಲ್ಲಿರುವಾಗಲೇ ಓದಿಗೆ ತಿಲಾಂಜಲಿ ಇಡಬೇಕಾದ ಅನಿವಾರ್ಯತೆ ಬಂದಿತು. ಓದು ಅರ್ಧದಲ್ಲೇ ನಿಂತು. ದೇಹದಾರ್ಢ್ಯ ಸ್ಪರ್ಧೆಯಲ್ಲಿ ಏನಾದರೂ ಸಾಧಿಸಬೇಕು ಎಂದು ಹೊರಟಿರುವ ಮಂಜುನಾಥ ಚಕ್ರಸಾಲಿ ಅವರಿಗೆ ಹೆತ್ತವರ ಸಹಕಾರ ಜೊತೆಗಿದೆ.
‘ನಮ್ಮ ಮಗ ದೊಡ್ಡ ಸಾಧನೆ ಮಾಡಬೇಕು ಅವನು ನಮ್ಮಂತೆ ಕೂಲಿ ಕೆಲಸಕ್ಕೆ ಸೀಮಿತವಾಗಬಾರದು. ಅವನು ಏನಾದರೂ ಸಾಧನೆ ಮಾಡುತ್ತಾನೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ಮಂಜುನಾಥ ಅವರ ತಾಯಿ ಲೀಲಾವತಿ. 4 ಅಡಿ 10 ಇಂಚು ಎತ್ತರ ಇರುವ 23 ವರ್ಷದ ಮಂಜುನಾಥ ಅವರಿಗೆ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಸಾಧನೆ ಮಾಡಿ ಮಿಸ್ಟರ್ ಇಂಡಿಯಾ ಪ್ರಶಸ್ತಿಗೆ ಮುತ್ತಿಕ್ಕಬೇಕು ಎಂಬ ಕನಸಿದೆ. ಅವರ ಸಂಪರ್ಕಕ್ಕೆ: 9916934301.
ಆಹಾರ–ತರಬೇತಿ ಮುಖ್ಯ
‘ಮಂಜುನಾಥನಿಗೆ ಹೆಚ್ಚಿನ ತರಬೇತಿ ನೀಡಿದರೆ ಮಿಸ್ಟರ್ ಇಂಡಿಯಾ ಸ್ಪರ್ಧೆಯಲ್ಲಿ ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ. ಆದರೆ ಅವನಿಗೆ ಅದಕ್ಕೆ ತಕ್ಕ ಆಹಾರ ಪಡೆಯಲು ಸಾಧ್ಯವಾಗುತ್ತಿಲ್ಲ, ದೇಹದಾರ್ಢ್ಯ ಸ್ಪರ್ಧೆಗೆ ಉತ್ತಮ ತರಬೇತಿ ಜತೆಗೆ ಆಹಾರ ಕ್ರಮವೂ ಮುಖ್ಯಪಾತ್ರ ವಹಿಸುತ್ತದೆ’ ಎನ್ನುತ್ತಾರೆ ಹುಬ್ಬಳ್ಳಿಯಲ್ಲಿರುವ ಇಂಟರ್ನ್ಯಾಷನಲ್ ಜಿಮ್ನ ತರಬೇತುದಾರ ಮೋಹನ್ ಹೆಬ್ಬಳ್ಳಿ.






