ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಾನಪದದೊಂದಿಗೆ ಹಾಸು ಹೊಕ್ಕಾಗಿರುವ ಕ್ರೀಡೆ ಕಂಬಳ. ಇತ್ತೀಚಿನ ವರ್ಷಗಳಲ್ಲಿ ವಯೋಮಾನದ ಹಂಗಿಲ್ಲದೇ ಎಲ್ಲರನ್ನೂ ಆಕರ್ಷಿಸುವಲ್ಲಿ ಕಂಬಳ ಯಶಸ್ವಿಯಾಗಿದೆ. ಕಂಬಳದ ಗಂತ್, ಮಂಜೊಟ್ಟಿ ಅಲ್ಲದೆ ಕರೆಯ ವಿವಿಧ ವಿಭಾಗಗಳಲ್ಲಿ ಪರಿಚಾರಕರಾಗಿ ದುಡಿಯುತ್ತಿರುವ ನೂರಾರು ಮಂದಿ ನಮ್ಮ ನಡುವೆ ಇದ್ದಾರೆ. ಇವರಲ್ಲಿ ಹೆಚ್ಚಾಗಿ ಪ್ರಚಾರ ಪಡೆಯುವುದು ಕಂಬಳ ಕೋಣಗಳ ಯಜಮಾನರು, ಕೋಣ ಓಡಿಸುವವರು, ವೀಕ್ಷಕ ವಿವರಣೆಗಾರರು ಮಾತ್ರ. ಆದರೆ ಕೋಣಗಳನ್ನು ಪಳಗಿಸಿ ಅದು ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸುವ ಕೆಲ ವಿಭಾಗದ ವ್ಯಕ್ತಿಗಳು ಎಲೆಮರೆಯ ಕಾಯಿಯಂತೆ ಪ್ರಚಾರಕ್ಕೆ ಬರುವುದೇ ಇಲ್ಲ. ಹೀಗೆ ಕಂಬಳ ಕೋಣಗಳನ್ನು ವ್ಯವಸ್ಥಿತವಾಗಿ ಹಿಂಬಾಲಿಸಿ-ನಿಯಂತ್ರಿಸಿ ಗಂತಿನಲ್ಲಿ ನಿಲ್ಲಿಸಿ -ಬಿಡುವಲ್ಲಿ ಸಾಕಷ್ಟು ಮೆಡಲ್ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾದವರು ಮುಂಡ್ಕೂರು ರಾಘು ಕುಲಾಲ್.
ದಷ್ಟಪುಷ್ಟವಾಗಿ ಸಾಕಿ, ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿ ಕೆಸರುಗದ್ದೆಯ ಗಂತಿನಲ್ಲಿ ನಿಲ್ಲಿಸುವುದು ಸುಲಭದ ಕೆಲಸ ಅಲ್ಲ. ಸಾಕಷ್ಟು ಅನುಭವ ಮತ್ತು ತರಬೇತಿ ಜೊತೆಗೆ ಚಾಕಚಕ್ಯತೆ ಇದ್ದರೆ ಮಾತ್ರ ಈ ಕೆಲಸ ಮಾಡಲು ಸಾಧ್ಯ. ಗಂತಿನಲ್ಲಿ ಕೋಣ ತಿರುಗಿಸಿ ಬಿಡುವವರು ಸ್ವಲ್ಪವೇ ಯಾಮಾರಿದರೂ ಕೋಣಗಳು ಓಟದಲ್ಲಿ ಹಿಂದೆ ಬೀಳುವ, ಮೆಡಲ್ ಕೈ ತಪ್ಪುವ ಅಪಾಯ ಗ್ಯಾರಂಟಿ. ಆದರೆ ಇದೇ ಕೆಲಸವನ್ನು ಸುಮಾರು ನಲ್ವತ್ತು ವರ್ಷಗಳಿಗೂ ಹೆಚ್ಚು ಕಾಲ ಮಾಡಿಕೊಂಡು ಸಾಕಷ್ಟು ಜನಪ್ರಿಯತೆಯನ್ನೂ ಪಡೆದುಕೊಂಡ ವ್ಯಕ್ತಿಗಳಲ್ಲಿ ಮುಂಡ್ಕೂರು ರಾಘು ಕುಲಾಲ್ ಒಬ್ಬರು. ಇದೀಗ ಸುಮಾರು ಎಪ್ಪತ್ತೈದು ವಯಸ್ಸಿನ ರಾಘಣ್ಣ ತಮ್ಮ ಇಳಿವಯಸ್ಸಿನ ತನಕ ಈ ಸೇವೆಯನ್ನು ಬಹಳ ನಿಯತ್ತಿನಿಂದ ಮಾಡಿಕೊಂಡು ಬಂದವರು. ಆರೇಳು ವರ್ಷಗಳ ಹಿಂದಷ್ಟೇ ಇದರಿಂದ ನಿವೃತ್ತಿ ಪಡೆದ ಅವರು ಇಂದಿಗೂ ಕಂಬಳದ ಆಕರ್ಷಣೆ ಕಳೆದುಕೊಳ್ಳದೆ ಬೇರೆ ವಿಭಾಗದಲ್ಲಿ ಏನಾದರೊಂದು ಕೆಲಸ ಮಾಡುತ್ತಾ ಬಂದಿದ್ದಾರೆ.
ಕಂಬಳ ಕ್ಷೇತ್ರದಲ್ಲಿ ಹೆಸರು ಪಡೆದ ಮುಂಡ್ಕೂರಿನ ಬಾಬೋಜಿ ರಾವ್ ಅವರ ಕೋಣಗಳ ಮೂಲಕ ೪೦ ವರ್ಷಗಳ ಹಿಂದೆ ಕಂಬಳ ಗಂತಿಗೆ ಕಾಲಿಟ್ಟು ಕಂಬಳ ಕೋಣಗಳನ್ನು ತಿರುಗಿಸಿ ಬಿಡುವ (ಮಾದಾದ್ ಬುಡ್ಪಿನ)ಕೆಲಸ ಆರಂಭಿಸಿದ ರಾಘು ಕುಲಾಲ್, ಬಳಿಕ ಕಂಕನಾಡಿ ರಾಮಪ್ಪ ಪೂಜಾರಿ , ವರಬಾಡಿ ಮುಂಡ್ಕೂರು ಜಯರಾಮ ಶೆಟ್ಟಿ ಅವರ ಕೋಣಗಳನ್ನು ಗಂತಿನಲ್ಲಿ ಪಳಗಿಸಿ ಬಿಡುವ ಕೆಲಸವನ್ನು ಕೆಲಸ ಮಾಡುತ್ತಾ ಬಂದಿದ್ದಾರೆ. ಇವರು ಗಂತಿನಲ್ಲಿ ಇದ್ದರೆಂದರೆ ಕೋಣಗಳಿಗೆ ಮೆಡಲ್ ಫಿಕ್ಸ್ ಎಂಬ ಮಾತುಗಳು ಕಂಬಳ ವಲಯದಲ್ಲಿ ಕೇಳಿ ಬರುತ್ತಿತ್ತು. ಆ ಮಾತಿನಂತೆಯೇ ಇವರು ತಿರುಗಿಸಿ ಬಿಟ್ಟ ಕೋಣಗಳು ಅತೀಹೆಚ್ಚು ಪದಕಗಳನ್ನು ಪಡೆದಿರುವುದೂ ಸುಳ್ಳಲ್ಲ. ಅದೆಷ್ಟೇ ಜೋರಿನ ಕೋಣಗಳನ್ನೂ ತನ್ನ ಕೈ ಚಳಕದಿಂದ ಸಮಯಕ್ಕೆ ಸರಿಯಾಗಿ ಗಂತಿನಲ್ಲಿ ನಿಲ್ಲಿಸುವಲ್ಲಿ ಯಶಸ್ವಿಯಾದ ಹಿರಿಮೆ ರಾಘು ಕುಲಾಲರದ್ದು. ಈಗೀಗ ಗಂಟೆಗಟ್ಟಲೆ ಹೊತ್ತು ಕೋಣಗಳನ್ನು ಗಂತಿನಲ್ಲಿ ನಿಲ್ಲಿಸಲು ಪರದಾಡುವವರು ಇದ್ದಾರೆ. ಆದರೆ ಕೆಲವೇ ನಿಮಿಷಗಳಲ್ಲಿ ಕೋಣಗಳನ್ನು ನಿಲ್ಲಿಸುವಲ್ಲಿ ಇವರು ಎತ್ತಿದ ಕೈ. ಕೋಣ ನಿಲ್ಲಿಸಲು ತಾನು
ಹೆಚ್ಚೆಂದರೆ ಇಪ್ಪತ್ತು ನಿಮಿಷ ತೆಗೆದುಕೊಂಡಿದ್ದೇನೆ ಎನ್ನುತ್ತಾರೆ ರಾಘಣ್ಣ. ಕಂಬಳದಲ್ಲಿ ಸ್ಪರ್ಧೆ ಅತಿಯಾದಂತೆ ಗಂತ್ ನಲ್ಲಿ ಸಾಕಷ್ಟು ಸಮಯ ತೆಗೆದುಕೊಳ್ಳುವುದರಿಂದ ನಿಗದಿತ ಸಮಯಕ್ಕೆ ಕಂಬಳ ಮುಕ್ತಾಯವಾಗುವುದಿಲ್ಲ. ಈಗ ಕಂಬಳ ಓಟಗಾರರರಿ ಮಾತ್ರಕ್ಕಲ್ಲದೆ ಕೋಣ ನಿಲ್ಲಿಸಿ ಬಿಡುವವರಿಗೂ ಡಿಮ್ಯಾಂಡ್ ಇರುವುದರಿಂದ ಇತ್ತೀಚೆಗೆ ಒಬ್ಬರಿಗೆ ಮೂರು ಕೋಣ ಮಾತ್ರ ಅವಕಾಶ ಎನ್ನುವ ನಿಯಮ ಬಂದಿದೆ ಎನ್ನಲಾಗಿದೆ. ಏನೇ ಇರಲಿ ಕಂಬಳ ಕ್ಷೇತ್ರದಲ್ಲಿ ತನ್ನ ವಿಶಿಷ್ಟ ಸಾಧನೆ ಮಾಡಿರುವ ಕುಲಾಲ್ ಸರಳಸಜ್ಜನಿಕೆಯಿಂದ ಎಲ್ಲರೊಂದಿಗೂ ಅತ್ಮೀಯವಾಗಿ ಬೆರೆಯುವ ವ್ಯಕ್ತಿತ್ವದವರು. ಇಳಿ ವಯಸ್ಸಿನಲ್ಲೂ ಕಂಬಳಕ್ಕೆ ತೆರಳಿ ಕೋಣಗಳಿಗೆ ನೊಗ-ನೇಗಿಲು ಕಟ್ಟುತ್ತಾ ಆನಂದಪಡುವ ರಾಘು ಕುಲಾಲರಿಗೆ ಹ್ಯಾಟ್ಸಾಫ್ !
ಚಿತ್ರ ಕೃಪೆ : Voice Of Puttur