ಮೂರ್ನಾಲ್ಕು ವರ್ಷಗಳ ಕೆಳಗೆ ಒಮ್ಮೆ ನನ್ನ ಮಿತ್ರರಾದ ಪೈವಳಿಕೆ ರಾಜಕುಮಾರರ ಮನೆಗೆ ಹೋಗಿದ್ದ ಸಮಯದಲ್ಲಿ ಅವರು ಓರ್ವ ಕಲಾವಿದರ ಒಂದು ಪಾತ್ರಪ್ರಸ್ತುತಿಯ ವೀಡಿಯೋವನ್ನು ತೋರಿಸಿದ್ದರು. ಅದನ್ನು ನೋಡಿ ಬಹುವಾಗಿ ಆಕರ್ಷಣೆಗೊಳಗಾಗಿದ್ದೆ ನಾನು. ಎಂಥಾ ಒಳ್ಳೆಯ ವೇಷ, ಎಷ್ಟೊಳ್ಳೆಯ ಶುದ್ಧ ತೆಂಕುತಿಟ್ಟು ನಾಟ್ಯ ಮಾರಾಯ್ರೆ ಎನ್ನುವುದಾಗಿ ನನಗರಿವಿಲ್ಲದಂತೆ ಉದ್ಗರಿಸಿದ್ದೆ. ನಾವೀರ್ವರೂ ಕೂಡ ಆ ಯುವಕನ ಕಲಾಪ್ರಸ್ತುತಿಯ ಬಗ್ಗೆ ಮಾತನ್ನಾಡಿಕೊಂಡು ಬಹುವಾಗಿ ಕೊಂಡಾಡಿದ್ದೆವು. ಅದುತನಕ ನನಗವರ ಪರಿಚಯವೇ ಇರಲಿಲ್ಲ. ಅಲ್ಲಿಯವರೆಗೆ ಅವರ ಯಾವ ಪಾತ್ರವನ್ನೂ ನಾನು ನೋಡಿರಲೂ ಇಲ್ಲ.
ಇವತ್ತಿನ ಕಾಲದಲ್ಲಿ ಒಳ್ಳೆಯ ಶಾಸ್ತ್ರೀಯವಾದ ತೆಂಕುತಿಟ್ಟು ನಾಟ್ಯವನ್ನು ಅವರಲ್ಲಿ ನಾನು ಕಂಡೆ. ಪಾತ್ರಕ್ಕೊಪ್ಪುವ ಹಿತ-ಮಿತ ಮಾತು, ಉತ್ತಮವಾದ ಭಾವಾಭಿನಯ ಎಲ್ಲವನ್ನು ಸೂಕ್ತ ಪ್ರಮಾಣದಲ್ಲಿ ಮೇಳೈಸಿಕೊಂಡು ಪ್ರದರ್ಶನವನ್ನು ನೀಡುವ ವಿರಳ ಕಲಾವಿರಲ್ಲಿ ಒಬ್ಬರು. ಈ ಘಟನೆಯ ಬಳಿಕ ನಾನವರ ಅನೇಕ ಪಾತ್ರಪ್ರಸ್ತುತಿಯನ್ನು ಕಂಡಿದ್ದೇನೆ. ಒಂದು ದಿನವೂ ನಿರಾಶೆ ಮೂಡಿದ್ದಿಲ್ಲ. ನಿರೀಕ್ಷೆಯನ್ನೆಂದಿಗೂ ಹುಸಿಗೊಳಿಸಿದ್ದಿಲ್ಲ. ವಿಪರೀತಗಳಿಲ್ಲದೆ ಇರುವ ಚೂಕ್ಕವಾದ ಪಾತ್ರಪ್ರಸ್ತುತಿ ಇವರದ್ದು. ಅಷ್ಟೊಂದು ಮಟ್ಟದಲ್ಲಿ, ಅವರ ಪ್ರದರ್ಶನದ ಮೂಲಕ, ಅವರ ಪಾತ್ರಪ್ರಸ್ತುತಿಯ ಬಗ್ಗೆ ನನ್ನಲ್ಲಿ ಆಕರ್ಷಣೆಯನ್ನು ಮೂಡಿಸಿದವರು ಸದ್ಯ ಎಡನೀರು ಮೇಳದಲ್ಲಿ ಪ್ರಧಾನ ಪುಂಡುವೇಷಧಾರಿಯಾಗಿರುವ ಶಶಿಧರ ಕುಲಾಲ್ ಅವರು.
ಶಶಿಧರ್ ಕುಲಾಲ್ ಅವರು ನನಗೆ ಅತ್ಯಂತ ಇಷ್ಟವಾಗುವುದಕ್ಕೆ ಕಾರಣ ಅವರ ಶುದ್ಧವಾದ ತೆಂಕುತಿಟ್ಟು ನಾಟ್ಯ, ಅತಿಯಿಲ್ಲದ ಮಾತು, ವಿಪರೀತ ವರ್ಣರಂಜಿತವಲ್ಲದ ಅಥವಾ ನಾಟಕೀಯತೆಯಿರದ ಅವರ ಆಂಗಿಕ ಅಭಿನಯ. ಬಹಳ ವಿಶೇಷವೆಂದರೆ ಇವತ್ತಿನ ಕಾಲದಲ್ಲಿ ಪ್ರಸಿದ್ಧಿಗೋ, ಪ್ರಚಾರಕ್ಕೋ ಬೇಕಾಗಿ ಹೆಚ್ಚಿನವರು ಕೆಲವೊಂದು ಗಿಮಿಕ್ಕುಗಳ ಮೊರೆ ಹೋದರೆ ಶಶಿಧರ್ ಕುಲಾಲ್ ಅವರು ಇಂತಹ ಗಿಮಿಕ್ಕುಗಳಿಂದ ಮಾರು ದೂರ. ಉದಾಹರಣೆಗೆ ಒಂದೆರಡು ವರ್ಷಗಳ ಕೆಳಗೆ ಮೂರು ರಂಗಸ್ಥಳದಲ್ಲಿನ ಜೋಡಾಟ ಶ್ರೀದೇವೀ ಮಹಾತ್ಮೆ ಪ್ರದರ್ಶನದ ಸಮಯದಲ್ಲಿ ಚಂಡ-ಮುಂಡರಲ್ಲಿ ಚಂಡಾಸುರನ ಪಾತ್ರವನ್ನು ನಿರ್ವಹಿಸಿದ್ದರು. ಇನ್ನೊಂದು ರಂಗಸ್ಥಳದಲ್ಲಿ ಅರ್ಧಘಂಟೆಗೂ ಹೆಚ್ಚು ಕಾಲ ಕುಣಿತವಿದ್ದರೂ ಕೂಡ ಅಷ್ಟು ಹೊತ್ತಿನಲ್ಲಿ ಶಶಿಧರ ಕುಲಾಲ್ ಚಂಡಾಸುರನಾಗಿದ್ದ ಈ ರಂಗಸ್ಥಳದಲ್ಲಿ ಚಂಡಾಸುರ ವಧೆಯೂ ಮುಗಿದಾಗಿತ್ತು. ಅಂದರೆ ವಿನಾಕಾರಣದ ಪೈಪೋಟಿ, ತನ್ನನ್ನು ತಾನು ಕಾಣಿಸಿಕೊಳ್ಳುವ ಹಂಬಲ, ತಾನು ಮೆರೆಯಬೇಕೆನ್ನುವ ಆಶಯಗಳಿರದೆ ಪಾತ್ರ ಚೆನ್ನಾಗಿ ಆಗಬೇಕು, ಪ್ರದರ್ಶನ ಉತ್ತಮವಾಗಿ ಮೂಡಿ ಬರಬೇಕು ಎನ್ನುವ ಸದಾಶಯವನ್ನುಳ್ಳ ಅತಿವಿರಳ ಯುವಕಲಾವಿದರಲ್ಲಿ ಶಶಿಧರ ಕುಲಾಲ್ ಒಬ್ಬರು. ಯಕ್ಷಗಾನದ ಬಗ್ಗೆ, ಶಶಿಧರ ಕುಲಾಲ್ ಅವರ ಯಕ್ಷಪಯಣದ ಬಗ್ಗೆ ಅವರನ್ನು ಸಂದರ್ಶಿಸಿದಾಗ ತಿಳಿದುಕೊಂಡ ವಿಚಾರಗಳಿವು. ಯಕ್ಷಗಾನ ಕಲಾಭಿಮಾನಿಗಳಲ್ಲಿ ಈ ಸಂದರ್ಶನದ ಪೂರ್ಣ ಪಾಠವನ್ನು ಹಂಚಿಕೊಳ್ಳುತ್ತಿದ್ದೇನೆ.
ಕಟೀಲು ಸಿತ್ಲ: ನೀವು ಯಕ್ಷಗಾನ ಕ್ಷೇತ್ರಕ್ಕೆ ಬರಲು ಕಾರಣವಾದ ಅಂಶಗಳ ಬಗ್ಗೆ ಮತ್ತು ಹಿನ್ನೆಲೆಯ ಬಗ್ಗೆ ಸ್ವಲ್ಪ ಹೇಳಿ..
ಶಶಿಧರ್ ಕುಲಾಲ್ : ನನಗೆ ಯಕ್ಷಗಾನದ ಯಾವ ಹಿನ್ನೆಲೆಯೂ ಇಲ್ಲ. ನಮ್ಮ ಕುಟುಂಬದಲ್ಲಿ ಯಾರೂ ಯಕ್ಷಗಾನ ಕಲಾವಿದರಿಲ್ಲ. ನನಗೂ ಕೂಡ ಯಕ್ಷಗಾನ ಕ್ಷೇತ್ರದಲ್ಲಿ ಕಲಾವಿದನಾಗಬೇಕೆನ್ನುವ ಯಾವ ಆಶಯವೇನೂ ಇರಲಿಲ್ಲ. ಹಾಗೆಂದು ಯಕ್ಷಗಾನದ ಆಸಕ್ತಿಯಿತ್ತು. ಯಕ್ಷಗಾನವನ್ನು ನೋಡುತ್ತಿದ್ದೆನಷ್ಟೆ. ಶಿರಂಕಲ್ಲು ಶಾಲೆಯಲ್ಲಿ ಸಬ್ಬಣಕೋಡಿ ರಾಮ ಭಟ್ಟರು ಯಕ್ಷಗಾನ ತರಗತಿಗಳನ್ನು ನಡೆಸುತ್ತಿದ್ದರು. ಆಗ ನನ್ನ ಸೋದರಮಾವನವರಾದ ರಾಮಣ್ಣನವರು ಸಬ್ಬಣಕೋಡಿಯವರು ನಡೆಸುತ್ತಿದ್ದ ಯಕ್ಷಗಾನ ತರಗತಿಗೆ ಸೇರಿಸಿದರು. ವಾರ್ಷಿಕೋತ್ಸವಕ್ಕೆ ಯಕ್ಷಗಾನ ಮಾಡಿ ಪ್ರದರ್ಶಿಸುವ ಉದ್ದೇಶದಿಂದ ಯಕ್ಷಗಾನ ನಾಟ್ಯವನ್ನು ಕಲಿತೆ. ಸಂಘದಲ್ಲಿನ ವಾರ್ಷಿಕೋತ್ಸವದಲ್ಲಿ ನಾನು 7ನೆಯ ತರಗತಿಯಲ್ಲಿ ಕಲಿಯುತ್ತಿದ್ದ ಸಮಯದಲ್ಲಿ ಮೊಟ್ಟ ಮೊದಲು ಗೆಜ್ಜೆಯನ್ನು ಕಟ್ಟಿ ವೇಷವನ್ನು ಮಾಡಿದೆ. ಆ ನಂತರವೂ ಸಬ್ಬಣಕೋಡಿ ರಾಮ ಭಟ್ಟರಲ್ಲಿನ ಯಕ್ಷಗಾನ ತರಬೇತಿ ಮುಂದುವರೆಯಿತು. ನಾನು ಪ್ರಥಮವಾಗಿ ಗೆಜ್ಜೆ ಕಟ್ಟಿ ಪ್ರದರ್ಶನವನ್ನು ಕೊಟ್ಟ ಬಳಿಕ ದೇವಕಾನ ಕೃಷ್ಣ ಭಟ್ಟರ ಗಣೇಶ ಕಲಾವೃಂದದ ವತಿಯಿಂದ ಎಡನೀರು ಮಠದಲ್ಲಿ ಒಂದೆರಡು ಯಕ್ಷಗಾನ ಪ್ರದರ್ಶನಗಳಿತ್ತು. ಆಗ ನನ್ನನ್ನು ದೇವಕಾನ ಕೃಷ್ಣ ಭಟ್ಟರು ಕರೆಸಿಕೊಂಡಿದ್ದರು. ಅಲ್ಲಿ ಒಂದೆರಡು ವೇಷಗಳನ್ನು ಮಾಡಿದ್ದೇನೆ. ಮುಂದೆ ಹವ್ಯಾಸಿವಲಯದಲ್ಲಿ ನನ್ನ ಯಕ್ಷಗಾನ ಪ್ರದರ್ಶನಗಳು ನಿರಂತರವಾಗಿ ನಡೆಯುತ್ತ ಬಂತು. ಅಷ್ಟರಲ್ಲಿ ನನ್ನ SSLC ಮುಗಿದಿತ್ತು. ಆ ನಂತರ ನಾನು ಧರ್ಮಸ್ಥಳ ಲಲಿತಕಲಾಕೇಂದ್ರವನ್ನು ಯಕ್ಷಗಾನ ಕಲಿಕೆಗಾಗಿ ಸೇರಿಕೊಂಡೆ. ಮೇಳಕ್ಕೆ ಸೇರಿಕೊಂಡು ಕಲಾವಿದನಾಗಬೇಕೆನ್ನುವ ಹಂಬಲ ಆಗಲೂ ನನಗಿರಲಿಲ್ಲ. ಅಲ್ಲಿ ದಿವಾಣ ಶಿವಶಂಕರ ಭಟ್ಟರಲ್ಲಿ ಯಕ್ಷಗಾನ ನಾಟ್ಯಾಭ್ಯಾಸವನ್ನು ಮಾಡಿದೆ. ಆ ನಂತರ ಧರ್ಮಸ್ಥಳ ಕೇಂದ್ರದಲ್ಲಿ ಕಲಿತ ನನ್ನನ್ನು ಧರ್ಮಸ್ಥಳ ಮೇಳಕ್ಕೆ ಸೇರಿಸಿಕೊಂಡರು. ಅಲ್ಲಿ 7 ವರ್ಷಗಳ ಕಾಲ ಯಕ್ಷಗಾನ ಕಲಾವಿದನಾಗಿ ದುಡಿದೆ. ಅಷ್ಟರಲ್ಲಿ ಯಕ್ಷಗಾನ ಕ್ಷೇತ್ರದಲ್ಲಿರುವ ಅಗಾಧವಾದ ರಾಜಕೀಯ, ಒಳಸುಳಿಗಳಿಂದ ಬೇಸತ್ತು ಯಕ್ಷಗಾನದಲ್ಲಿ ಮೇಳತಿರುಗಾಟವೇ ಬೇಡವೆಂದು ತೀರ್ಮಾನಿಸಿ ಮೇಳವನ್ನು ಬಿಟ್ಟೆ. ಮೇಳ ಬಿಟ್ಟ ನಂತರ ಮಂಗಳೂರಿನಲ್ಲಿ ಹಿಂದೂಸ್ತಾನ್ ಲಿವರ್ ಖಾಸಗಿ ಸಂಸ್ಥೆಯಲ್ಲಿ ಮಾರ್ಕೆಟಿಂಗ್ ವಿಭಾಗಕ್ಕೆ ಸೇರಿ ಉದ್ಯೋಗವನ್ನು ಮಾಡಲು ತೊಡಗಿದೆ. ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಸಮಯದಲ್ಲಿ ಎಡನೀರು ಮೇಳದಲ್ಲಿ ಕಲಾವಿದನಾಗಿ ನಿರಂತರ ಭಾಗವಹಿಸುತ್ತಿದ್ದೆ ಎಡನೀರು ಶ್ರೀಗಳ ಆಣತಿಯಂತೆ. ಎಡನೀರು ಮೇಳದಲ್ಲಿ ಇಡಿ ರಾತ್ರಿಯ ಪ್ರದರ್ಶನವಲ್ಲ, ಕಾಲಮಿತಿ ಪ್ರದರ್ಶನವಾದ ಕಾರಣ ನನಗೂ ಮರುದಿವಸದ ಉದ್ಯೋಗಕ್ಕೆ ಅಡ್ಡಿಯಾಗುತ್ತಿರಲಿಲ್ಲ. ಹೀಗೆ ನಡೆದುಕೊಂಡು ಹೋಗುತ್ತಿತ್ತು.
ಒಮ್ಮೆ ಒಂದು ಕಡೆ ಯಕ್ಷಗಾನ ಪ್ರದರ್ಶನ ಮುಗಿಯುವಾಗಲೇ ಬಹಳ ತಡವಾಗಿತ್ತು. ನಾನು ಮರುದಿವಸ ಉದ್ಯೋಗಕ್ಕೆ ಹೋಗಿ ಮತ್ತೆ ಎಡನೀರಿನ ಆಟಕ್ಕೆಂದು ವಾಪಸ್ಸಾಗುವ ಸಮಯದಲ್ಲಿ ಒಳ್ಳೆಯ ನಿದ್ದೆ. ನಾನು ಕಾಸರಗೋಡಿನಲ್ಲಿ ಇಳಿಯಬೇಕಾದವನು ಕಾಂಇಗಾಡಿನಲ್ಲಿ ಇಳಿದುಕೊಂಡೆ. ಇಲ್ಲಿ ಎಡನೀರಿನಲ್ಲಿ ಅಭಿಮನ್ಯು ಕಾಳಗ ಪ್ರಸಂಗ. ನನ್ನದು ಮೊದಲ ಅಭಿಮನ್ಯು. ನಾನು ಮತ್ತೆ ಎಡನೀರಿಗೆ ತಲುಪುವಾಗ ತಡವಾಗಿತ್ತು. ಮೊದಲ ಅಭಿಮನ್ಯು ಲಕ್ಷ್ಮಣ ಕುಮಾರ ಮರಕಡ ಮಾಡಿದರು. ನಾನು ಸುಭದ್ರೆಯಲ್ಲಿನ ಭಾಗಕ್ಕೆ ಹೋದೆ. ಆಟ ಮುಗಿದ ಬಳಿಕ ಸ್ವಾಮೀಜಿಯವರು ನನ್ನಲ್ಲಿ ತಡವಾದದ್ದಕ್ಕೆ ಕಾರಣವನ್ನು ಕೇಳಿದರು. ನಿನ್ನೆಯ ಆಟ ಮುಗಿಯುವಾಗ ತಡವಾಗಿತ್ತು. ಇವತ್ತು ಕೆಲಸಕ್ಕೂ ಹೋಗಿದ್ದೆ, ನಿದ್ದೆ ಕಡಿಮೆಯಾದ ಕಾರಣ ಮಂಗಳೂರಿಂದ ಬರುವಾಗ ರೈಲಿನಲ್ಲಿ ನಿದ್ದೆ ಬಂದು ಇಳಿಯಬೇಕಾದ ನಿಲ್ದಾಣದಲ್ಲಿ ಎಚ್ಚರವಾಗಲಿಲ್ಲ ಎಂದೆ. ಆಗ ಮಧೂರು ರಾಧಾಕೃಷ್ಣ ನಾವಡರು ಅವನಿಗೆ ಸುಸ್ತಾಗಿ ನಿದ್ದೆ ಬಂದು ಕಾಂಯಿಗಾಡಿನಲ್ಲಿ ಇಳಿದು ಆ ಮತ್ತೆ ಮತ್ತೊಂದು ವಾಹನದಲ್ಲಿ ಇಲ್ಲಿಗೆ ಬಂದದ್ದು ಎಂದು ಹೇಳಿದರು. ಆಗ ಸ್ವಾಮೀಜಿ ಈಗ ಮಾಡುತ್ತಿರುವ ಕೆಲಸವನ್ನು ಬಿಡು, ನಿನಗೆ ಬೇರೆ ಉದ್ಯೋಗವನ್ನು ನಾನು ವ್ಯವಸ್ಥೆ ಮಾಡಿಸುತ್ತೇನೆ ಎಂದು ಹೇಳಿ ಆ ನಂತರ ಬ್ಯಾಂಕಿನಲ್ಲಿ ಉದ್ಯೋಗವನ್ನು ಕೊಡಿಸಿದರು. ಬ್ಯಾಂಕಿನ ಉದ್ಯೋಗಕ್ಕೆ ಸೇರಿಕೊಂಡ ಮೇಲೆ ನಾನು ನನ್ನ ಡಿಗ್ರಿಯನ್ನು ಮಾಡಿಕೊಳ್ಳುತ್ತಿದ್ದೇನೆ. ಮೂರನೆಯ ವರ್ಷದ ಡಿಗ್ರಿಯ ಪರೀಕ್ಷೆಯನ್ನೂ ಕಟ್ಟಿ ಪೂರೈಸಿದ್ದೇನೆ.
ಕಟೀಲು ಸಿತ್ಲ: ಒಟ್ಟು ಎಷ್ಟು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದೀರಿ?
ಶಶಿಧರ್ ಕುಲಾಲ್ : ಧರ್ಮಸ್ಥಳ ಮೇಳದಲ್ಲಿ 7 ವರ್ಷ ಮತ್ತು ಎಡನೀರು ಮೇಳದಲ್ಲಿ 10 ವರ್ಷಗಳಿಂದ ಇದ್ದೇನೆ. ಒಟ್ಟಾರೆ 17 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದೇನೆ.
ಕಟೀಲು ಸಿತ್ಲ: ಈಗ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದೀರಿ, ಡಿಗ್ರಿಯನ್ನೂ ಸಂಪೂರ್ಣಗೊಳಿಸಿಕೊಂಡಿದ್ದೀರಿ. ಇನ್ನು ಔದ್ಯೋಗಿಕ ಔನ್ನತ್ಯವನ್ನು ಸಾಧಿಸುವ ಸಮಯದಲ್ಲಿ ಯಕ್ಷಗಾನವನ್ನು ಜತೆಜತೆಯಲ್ಲಿ ಮಾಡಿಕೊಂಡು ಹೋಗುತ್ತೀರೋ ಅಥವಾ ತ್ಯಜಿಸುತ್ತೀರೋ?
ಶಶಿಧರ್ ಕುಲಾಲ್ : ಯಕ್ಷಗಾನವನ್ನು ತ್ಯಜಿಸುವ ಪ್ರಶ್ನೆಯೇ ಇಲ್ಲ. ಯಕ್ಷಗಾನದಿಂದಾಗಿ ನನಗೆ ಬಹಳಷ್ಟು ಸಿಕ್ಕಿದೆ. ಉತ್ತಮ ಹೆಸರು, ಒಳ್ಳೆಯ ಗೌರವ, ಉದ್ಯೋಗ ಎಲ್ಲವೂ ನನಗೆ ದೊರಕಿರುವುದು ಯಕ್ಷಗಾನದ ಕಾರಣದಿಂದ. ಮತ್ತು ಎಡನೀರು ಸ್ವಾಮೀಜಿಯವರು ನನ್ನ ಬದುಕಿಗೆ ಒಂದು ನೆಲೆಯನ್ನು ಉದ್ಯೋಗದ ಮೂಲಕ ಕಲ್ಪಿಸಿಕೊಟ್ಟಿದ್ದಾರೆ. ಆದ ಕಾರಣ ಸ್ವಾಮೀಜಿಯವರ ಎಡನೀರು ಮೇಳದಲ್ಲಿಯೇ ಕಲಾವಿದನಾಗಿ ಮುಂದುವರೆಯುತ್ತೇನೆ.
ಕಟೀಲು ಸಿತ್ಲ: ಯಕ್ಷಗಾನ ಕ್ಷೇತ್ರದಲ್ಲಿ ನಿಮಗೆ ಸಹಕಾರ, ಪ್ರೋತ್ಸಾಹವನ್ನು ನೀಡಿದವರ ಬಗ್ಗೆ ಹೇಳಬಹುದೇ?
ಶಶಿಧರ್ ಕುಲಾಲ್ : ಧರ್ಮಸ್ಥಳ ಮೇಳದಲ್ಲಿರುವಾಗ ಡಾ| ಪುತ್ತೂರು ಶ್ರೀಧರ ಭಂಡಾರಿಯವರು ಬಹಳ ಚೆನ್ನಾಗಿ ಪಾತ್ರದ ಬಗ್ಗೆ, ಅದರ ರಂಗನಡೆಯ ಬಗ್ಗೆ ವಿವರವಾಗಿ ಬಹಳ ಆಸಕ್ತಿಯಿಂದ ಹೇಳಿಕೊಡುತ್ತಿದ್ದರು. ವಸಂತ ಗೌಡ ಕಾಯರ್ತಡ್ಕ ಅವರೂ ಕೂಡ ಅನೇಕ ಪಾತ್ರಗಳಿಗೆ ನನಗೆ ಉತ್ತಮ ಮಾರ್ಗದರ್ಶನವನ್ನು ಮಾಡಿದ್ದಾರೆ. ಉಬ್ಬರಡ್ಕ ಉಮೇಶ ಶೆಟ್ಟಿಯವರು, ಗುರುಗಳಾದ ದಿವಾಣ ಶಿವಶಂಕರ ಭಟ್ಟರು ಎಲ್ಲ ತುಂಬ ಸಹಕಾರ ಪ್ರೋತ್ಸಾಹವನ್ನು ಕೊಟ್ಟವರು. ಭಾಗವತರಾದ ಪುತ್ತಿಗೆ ರಘುರಾಮ ಹೊಳ್ಳರು ಅನೇಕ ಪಾತ್ರಗಳನ್ನು ನೀಡಿ ನನಗೆ ಪ್ರೋತ್ಸಾಹವನ್ನು ನೀಡಿದ್ದಾರೆ. ಮಳೆಗಾಲದಲ್ಲಿ ಇತರ ತಂಡಗಳೊಂದಿಗೆ ಯಕ್ಷಗಾನ ಪ್ರದರ್ಶನವನ್ನು ನೀಡಲು ಹೋಗುತ್ತಿದ್ದೆ. ಆಗ ಪೆರ್ಮುದೆ ಜಯಪ್ರಕಾಶ ಶೆಟ್ಟಿಯವರು ಕೆಲವೆಡೆ ಸಿಕ್ಕಿದಲ್ಲಿ ಪೌರಾಣಿಕ ಪಾತ್ರಗಳ ಅರ್ಥಗಳನ್ನು ಹೇಳಿಕೊಟ್ಟಿದ್ದಾರೆ. ಈಗ ಎಡನೀರು ಮೇಳದಲ್ಲಿ ಶಂಬಯ್ಯ ಭಟ್ಟ ಕಂಜರ್ಪಣೆ, ಲಕ್ಷ್ಮಣ ಕುಮಾರ ಮರಕಡ ಇವರೆಲ್ಲರೂ ಒಳ್ಳೆಯ ಸಹಕಾರ ಪ್ರೋತ್ಸಾಹವನ್ನು ಕೊಟ್ಟಿದ್ದಾರೆ ಮತ್ತು ಕೊಡುತ್ತಲೂ ಇದ್ದಾರೆ. ನಾನು ಯಾರೊಂದಿಗೆಲ್ಲ ಪ್ರದರ್ಶನವನ್ನು ಕೊಡುತ್ತೇನೆಯೋ ಅವರೆಲ್ಲವರೂ ಕೂಡ ಒಳ್ಳೆಯ ಪ್ರ್ರೋತ್ಸಾಹ, ಸಹಕಾರವನ್ನು ನೀಡಿದವರೇ ಆಗಿದ್ದಾರೆ.
ಕಟೀಲು ಸಿತ್ಲ: ಯಕ್ಷಗಾನ ಕ್ಷೇತ್ರದಲ್ಲಿ ತಾವು ಪ್ರಸಿದ್ಧಿಯ, ಪ್ರಚಾರದ ಹಿಂದೆ ಹೋಗದೇ ಅಚ್ಚುಕಟ್ಟಿನ ತೆಂಕುತಿಟ್ಟು ಸಂಪ್ರದಾಯದ ಪ್ರದರ್ಶನವನ್ನು ಕೊಡುತ್ತಿದ್ದೀರಿ. ಯಾವುದೇ ಗಿಮಿಕ್ಕುಗಳನ್ನು ಮಾಡದೇ ಇದ್ದು, ಸಾಂಪ್ರದಾಯಿಕವಾದಂತಹ ಪ್ರದರ್ಶನವನ್ನು ಮಾತ್ರವೇ ನೀಡಲು ನಿಮಗೆ ಪ್ರೇರಕವಾದ ಅಂಶಗಳೇನು?
ಶಶಿಧರ್ ಕುಲಾಲ್ : ಪ್ರತಿಯೊಂದು ಕ್ಷೇತ್ರಕ್ಕೂ ಅದರದ್ದೇ ಆಗಿರುವ ಒಂದು ನೀತಿ ನಿಯಮ, ಚೌಕಟ್ಟು ಎನ್ನುವುದು ಇದ್ದೇ ಇರುತ್ತದೆ. ಇರಲೇಬೇಕು ಕೂಡ. ಚೌಕಟ್ಟು, ನೀತಿ ನಿಯಮಾವಳಿಗಳಿರದಿದ್ದರೆ ಅದಕ್ಕೆ ಅರ್ಥವೇ ಇಲ್ಲ. ಒಂದೊಂದು ಕ್ಷೇತ್ರದ ವಿಶಿಷ್ಟವಾದಂತಹ ಈ ಚೌಕಟ್ಟು ಮತ್ತು ನೀತಿ ನಿಯಮಾವಳಿಗಳ ಕಾರಣದಿಂದಲೇ ಅವುಗಳೆಲ್ಲವೂ ಪ್ರತ್ಯೇಕವಾಗಿ ಕಾಣುವುದು. ಈ ಮೂಲ ನಿಯಮಾವಳಿಗಳು ಮತ್ತು ಚೌಕಟ್ಟನ್ನು ಮೀರಿದರೆ ಪ್ರತ್ಯೇಕತೆ ಕಳೆದುಹೋಗುತ್ತದೆ. ಒಂದಕ್ಕೊಂದು ವ್ಯತ್ಯಾಸವೇ ಇರದೇ ಎಲ್ಲವೂ ಒಂದೇ ರೀತಿಯಾಗಿ ಗೋಚರಿಸುತ್ತದೆ. ಆದುದರಿಂದ ಆಯಾಯ ಕಲೆಗಳ ಚೌಕಟ್ಟನ್ನು ಮೀರಿ ಹೋಗಬಾರದು ಎನ್ನುವುದು ನನ್ನ ಅಭಿಪ್ರಾಯ. ಹಾಗೆಂದು ಈಗಿನ ಪ್ರೇಕ್ಷಕರಿಗೆ ಸಾಂಪ್ರದಾಯಿಕ ಚೌಕಟ್ಟುಳ್ಳ ಪ್ರದರ್ಶನದ ಮೇಲೆ ಆಸಕ್ತಿ ಕಡಿಮೆ. ಆದುದರಿಂದ ಗಿಮಿಕ್ಕುಗಳು, ಹೊಸತನಗಳು ಅಗತ್ಯ ಬೀಳುತ್ತದೆ. ನಾನೂ ಕೂಡ ಇದಕ್ಕೆ ಹೊರತಲ್ಲ. ಕೆಲವೊಂದು ಕಡೆ ನಾನೂ ಹೊಸತನವನ್ನು ಅಳವಡಿಸಿಕೊಂಡಿರುವವನೇ. ಆದರೆ ಮಿತಿಮೀರಿ ಹೊಸತನವನ್ನು ಅಳವಡಿಸಿಕೊಳ್ಳಲು ಮನಸ್ಸು ಬರುವುದಿಲ್ಲ. ಅತಿಯಾಗಿ ನಾನು ಏನನ್ನೂ ಮಾಡಲು ನನ್ನ ಮನಸ್ಸು ಒಪ್ಪುವುದಿಲ್ಲ. ಯಕ್ಷಗಾನದ ಮೂಲ ಚೌಕಟ್ಟಿನಿಂದ ತೀರ ದೂರವಾಗಿ ಹೊಸತನಗಳನ್ನು ಅಳವಡಿಸಿಕೊಂಡರೆ ಮತ್ತಷ್ಟು ಹೆಚ್ಚಿನ ಪ್ರಸಿದ್ಧಿ, ಪ್ರಚಾರ ಬರಬಹುದು. ಆದರೆ ಆ ರೀತಿಯ ಪ್ರಸಿದ್ಧಿ, ಪ್ರಚಾರ ನನಗೆ ಬೇಡವೆಂದು ಅನ್ನಿಸುತ್ತದೆ. ಎಲ್ಲರನ್ನೂ ತಲುಪಲು ಸಾಧ್ಯವಿಲ್ಲ. ಕೆಲವರನ್ನು ತಲುಪಿ ಅವರಿಗೆ ನನ್ನ ಪ್ರದರ್ಶನ ಇಷ್ಟವಾದರೆ ಅಷ್ಟು ಸಾಕು ಎನ್ನುವ ಮನೋಭಾವ ನನ್ನದು. ನನ್ನ ಅಭಿಪ್ರಾಯದಲ್ಲಿ ಯಕ್ಷಗಾನ ಕಲೆಯ ಮೂಲ ಸೊಗಸು, ಸೊಗಡು ಇರುವುದೇ ಪರಂಪರೆಯ ಪ್ರದರ್ಶನದಲ್ಲಿ. ಈ ಹೊಸತನಗಳು ಸುಧೀರ್ಘ ಕಾಲ ಬಾಳುವುದಿಲ್ಲ. ಇವೆಲ್ಲ ಹೆಚ್ಚೆಂದರೆ ಒಂದು ಹತ್ತು ವರ್ಷಗಳಷ್ಟೇ. ನಿರಂತರ ಬದಲಾಗುವ ಪ್ರಪಂಚವಿದು. ಆದುದರಿಂದ ಯಕ್ಷಗಾನದ ಪಾರಂಪರಿಕವಾದ ಪ್ರದರ್ಶನಕ್ಕೆ ಬೆಲೆ ಯಾವತ್ತಿಗೂ ಇದ್ದೇ ಇರುತ್ತದೆ.
ಕಟೀಲು ಸಿತ್ಲ: ನೀವು ಒಟ್ಟು 17 ವರ್ಷಗಳ ಯಕ್ಷಗಾನ ಅನುಭವವನ್ನು ಹೊಂದಿರುವವರು. ನೀವು ಗುರುವಾಗಿ ಯಾರಿಗಾದರೂ ಯಕ್ಷಗಾನವನ್ನು ಕಲಿಸಿಕೊಡುತ್ತಿದ್ದೀರಾ?
ಶಶಿಧರ್ ಕುಲಾಲ್ : ಸದ್ಯ ನಾನು ಯಾರಿಗೂ ಕಲಿಸಿಕೊಡುತ್ತಿಲ್ಲ. ಕೆಲವೊಂದು ಎಳೆಯ ಕಲಾವಿದರುಗಳು ಅವರಾಗಿ ಕೇಳಿದರೆ ನಾನು ಹೇಳಿಕೊಟ್ಟದ್ದುಂಟು. ಅವರು ಹೇಳಿಕೊಟ್ಟಿರುವುದನ್ನು ಅಳವಡಿಸಿಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದ್ದರೆ ಮಾತ್ರ ನನಗೆ ತಿಳಿದಿದ್ದನ್ನು ಹೇಳುತ್ತೇನೆ. ನಾನಾಗಿ ನಾನು ಹೀಗೆ ಮಾಡಿದರೆ ಒಳ್ಳೆಯದು ಎನ್ನುವ ಹಾಗೆ ಸಲಹೆಯನ್ನು ಕೊಡುವುದಕ್ಕೆ ಹೋಗುವುದಿಲ್ಲ.
ಕಟೀಲು ಸಿತ್ಲ: ಈಗಿನ ಯಕ್ಷಗಾನ ಪ್ರದರ್ಶನಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಶಶಿಧರ್ ಕುಲಾಲ್ : ಆಡಂಬರದ ಪ್ರದರ್ಶನಗಳು ಇತ್ತೀಚೆಗೆ ಹೆಚ್ಚು. ಆಡಂಬರ ಅವರವರ ಮನಸ್ಥಿತಿ. ಆದರೆ ಯಕ್ಷಗಾನ ಪ್ರದರ್ಶನವನ್ನು ನೀಡುವ ಕಲಾವಿದನಿಗೆ ಈ ಆಡಂಬರಗಳಿಂದ ತೊಂದರೆಯೇ. ನಾವು ಕೊಡುವ ಪ್ರದರ್ಶನದ ಮೇಲೆ ಪ್ರೇಕ್ಷಕರಿಗೂ ಗಮನವಿರುವುದಿಲ್ಲ. ಕಲಾವಿದರಾದ ನಮಗಾದರೂ ಪಾತ್ರದೊಂದಿಗೆ ಲೀನವಾಗುವುದಕ್ಕೆ ಕಷ್ಟವಾಗುತ್ತದೆ. ಆಗಾಗ ನಮ್ಮ ಏಕಾಗ್ರತೆಗೆ ಭಂಗ ಬರುತ್ತಿದ್ದರೆ ಪ್ರದರ್ಶನದ ಗುಣಮಟ್ಟವೂ ಕುಸಿಯುತ್ತದೆ. ಉದಾಹರಣೆಗೆ ಶ್ರೀದೇವಿ ಮಹಾತ್ಮೆ ಪ್ರಸಂಗದಲ್ಲಿ ಮಾಲಿನಿದೂತ ಮಾಲಿನಿಯಲ್ಲಿಗೆ ಬರುವ ಸನ್ನಿವೇಶದಲ್ಲಿ ಅದನ್ನು ನೋಡುವ ಬದಲು ಮಹಿಷಾಸುರನ ಪ್ರವೇಶಕ್ಕೆ ತಯಾರಿಗಳು ತೊಡಗುತ್ತವೆ. ಅದೆಷ್ಟೋ ಪ್ರೇಕ್ಷಕರು ಅತ್ತ ಕಡೆ ಧಾವಿಸುತ್ತಾರೆ. ಎಲ್ಲರ ಗಮನ ಅಲ್ಲಿಯೇ ಇರುತ್ತದೆ. ರಂಗಸ್ಥಳದಲ್ಲಿ ಮಾಲಿನಿದೂತ ಮತ್ತು ಮಾಲಿನಿಯ ಸಂವಾದ ಯಾಂತ್ರಿಕವಾಗಿ ನಡೆದು ಮುಗಿಯುತ್ತದೆ. ಹೀಗೆ ಪ್ರತಿಯೊಂದು ದೊಡ್ಡ ಪಾತ್ರಗಳಿಗೆ ನಡೆದರೆ ಅದರ ಹಿಂದಿನ ಅನೇಕ ಸನ್ನಿವೇಶಗಳು ಪೇಲವಗೊಳ್ಳುತ್ತದೆ.
ಕಟೀಲು ಸಿತ್ಲ: ಸಂಗೀತದ ಉದ್ದ ಉದ್ದ ಆಲಾಪನೆ ಮತ್ತು ಪದಗಳು ಮುಮ್ಮೇಳದಲ್ಲಿರುವ ಕಲಾವಿದನಿಗೆ ಉಪಯೋಗಕಾರಿಯೇ ಅಥವಾ ಉಪದ್ರವಕಾರಿಯೇ?
ಶಶಿಧರ್ ಕುಲಾಲ್ : ಅದನ್ನು ನೇರವಾಗಿ ಉಪದ್ರವಕಾರಿ ಅಥವಾ ಉಪಯೋಗಕಾರಿ ಎನ್ನಲು ಬರುವುದಿಲ್ಲ. ಕೆಲ ಭಾವಪೂರ್ಣ ಸನ್ನಿವೇಶಗಳಿಗೆ ಒಳ್ಳೆಯ ರಾಗವನ್ನು ಬಳಸಿ ಹಾಡುವಾಗ ಆ ಭಾವನೆಗಳು ನಮ್ಮಲ್ಲೂ ತುಂಬಿ ಬರುತ್ತದೆ. ಆದರೆ ಆಲಾಪನೆಯಾಗಲೀ, ಪದವಾಗಲೀ ತೀರಾ ಉದ್ದವಾದರೆ ಕಷ್ಟವೇ. ರಂಗದಲ್ಲಿ ಕಸುಬನ್ನು ಪರಿಪೂರ್ಣವಾಗಿ ನೀಡಲು ಬರುವುದಿಲ್ಲ. ಹಾಗೆಂದು ಮಿತಿಯಲ್ಲಿದ್ದಾಗ ಅದು ಒಳ್ಳೆಯ ಉತ್ಸಾಹವನ್ನೂ ಕೊಡಬಲ್ಲುದು.
ಕಟೀಲು ಸಿತ್ಲ: ಯಕ್ಷಗಾನದಲ್ಲಿ ಯಾವೆಲ್ಲ ಮಾದರಿಯ ವೇಷಗಳನ್ನು ನೀವು ಮಾಡಿದ್ದೀರಿ?
ಶಶಿಧರ್ ಕುಲಾಲ್ : ನಾನು ಮುಖ್ಯವಾಗಿ ಪುಂಡುವೇಷಗಳನ್ನು ಮಾಡಿಕೊಂಡು ಬಂದಿದ್ದೇನೆ. ಅವಕಾಶಗಳು ದೊರಕಿದಾಗ ಕಿರೀಟವೇಷಗಳನ್ನೂ ಮಾಡುತ್ತೇನೆ. ಧರ್ಮಸ್ಥಳ ಮೇಳದಲ್ಲಿದ್ದಾಗ ಸ್ತ್ರೀವೇಷಗಳನ್ನೂ ಮಾಡುತ್ತಿದ್ದೆ. ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ನೇತ್ರಾವತಿ ಮತ್ತು ಒಂದು ಬ್ರಾಹ್ಮಣತಿಯ ಸ್ತ್ರೀವೇಷಗಳನ್ನು ಮಾಡುತ್ತಿದ್ದೆ. ಒಮ್ಮೆ ತಲಪಾಡಿಯ ಯಕ್ಷೋತ್ಸವದಲ್ಲಿ ಶಶಿಪ್ರಭೆಯ ಪಾತ್ರವನ್ನು ಮಾಡಿದ್ದೇನೆ.
ಕಟೀಲು ಸಿತ್ಲ: ಯಕ್ಷಗಾನದಲ್ಲಿ ಕೆಲವೊಬ್ಬರು ಅನುಕರಣೆಯನ್ನು ಮಾಡುತ್ತಾರೆ. ನಿಮ್ಮ ಅನುಕರಣೆ ಮಾಡುವವರೂ ಇರಬಹುದು. ಈ ಬಗ್ಗೆ ನೀವೇನೆನ್ನುತ್ತೀರಿ? ಅದು ನಿಮಗೆ ಖುಷಿಯನ್ನು ಕೊಡುತ್ತದೆಯೇ?
ಶಶಿಧರ್ ಕುಲಾಲ್ : ಅನುಕರಣೆಗಿಂತ ಅನುಸರಣೆ ಮಾಡುವುದು ಒಳ್ಳೆಯದು. ಒಂದು ರೀತಿಯಲ್ಲಿ ಅನುಕರಣೆಯನ್ನು ಮಾಡುವುದು ತಪ್ಪು. ಅನುಕರಣೆಯನ್ನೇ ಮಾಡಿದರೆ ಆಗ ಸ್ವಂತಿಕೆಯಿರುವುದಿಲ್ಲ. ಹಾಗೆಂದು ಅನುಕರಣೆ ಪೂರ್ಣ ತಪ್ಪು ಅಂತಲೂ ಹೇಳುವುದಕ್ಕಾಗದು. ಚಾಚೂ ತಪ್ಪದೇ, ಎಳೆ ಎಳೆಯನ್ನೂ ಅನುಕರಣೆ ಮಾಡುವ ಬದಲು ಅಂದರೆ ನಿಲ್ಲುವ ರೀತಿ, ನೋಡುವ ರೀತಿ, ಮಾತನ್ನಾಡುವ ರೀತಿ ಎಲ್ಲವನ್ನೂ ಅನುಕರಿಸುವ ಬದಲು ಕೇವಲ ಶೈಲಿಯನ್ನು ಮಾತ್ರವೇ ಅನುಕರಣೆ ಮಾಡಿ ಅದರಲ್ಲಿ ಸ್ವಂತಿಕೆಯನ್ನು ಮೂಡಿಸುವ ಪ್ರಯತ್ನ ಮಾಡಿದರೆ ಬಹಳ ಒಳ್ಳೆಯದು.